UK Suddi
The news is by your side.

ಮತದಾರರ ಕೈಗೆ ಶಾಯಿ ಹಚ್ಚುವುದಕ್ಕೆ ಪ್ಲಾಸ್ಟಿಕ್ ಕಡ್ಡಿಗಳ ಬದಲಿಗೆ ಬ್ರಷ್

ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರ ಕೈಗೆ ಶಾಯಿ ಹಚ್ಚುವುದಕ್ಕೆ ಪ್ಲಾಸ್ಟಿಕ್ ಕಡ್ಡಿಗಳ ಬದಲಿಗೆ ಬ್ರಷ್ ನೀಡಲು ನಿರ್ಧರಿಸಲಾಗಿದೆ. ಪ್ಲಾಸ್ಟಿಕ್ ಕಡ್ಡಿಯಿಂದ ಶಾಯಿ ಬೆರಳುಗಳ ಮೇಲೆ ಸರಿಯಾಗಿ ಅಂಟುತ್ತಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಬೇಕಾಬಿಟ್ಟಿ ಹರಡಿಕೊಳ್ಳುತ್ತಿತ್ತು. ಹಾಗಾಗಿ ಇದೇ ಮೊದಲ ಬಾರಿ ಮತದಾರರಿಗೆ ಬ್ರಷ್ ಮೂಲಕ ಶಾಯಿ ಹಾಕಲಾಗುತ್ತದೆ. ಈ ಶಾಯಿ ಗುರುತು ಸ್ಪಷ್ಟವಾಗಿರಲಿದ್ದು, ಕನಿಷ್ಠ 4-6 ತಿಂಗಳವರೆಗೂ ಇರುತ್ತದೆ. ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬ್ರಷ್​ಬಳಸಲಾಗಿತ್ತು. ಸೆಪ್ಟೆಂಬರ್​ನಲ್ಲಿ ಬಿಹಾರ ಚುನಾವಣೆ ನಡೆಯಲಿದ್ದು, ಅಲ್ಲಿಗೂ

ಬ್ರಷ್​ಗಳನ್ನು ಸರಬರಾಜು ಮಾಡಲಾಗುತ್ತದೆ ಎನ್ನಲಾಗಿದೆ.

ಶಾಯಿಗೆ 1 ಕೋಟಿ ರೂ.: ಅಕ್ರಮ ಮತದಾನ ತಡೆಯಲು ಮತದಾರರ ಬೆರಳಿಗೆ ಹಾಕುವ ಅಳಿಸಲಾಗದ ಶಾಯಿಗೆ ರಾಜ್ಯ ಚುನಾವಣೆ ಆಯೋಗ ಸುಮಾರು 1 ಕೋಟಿ ರೂ. ಖರ್ಚು ಮಾಡಲಿದೆ! ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯಿಂದ ಶಾಯಿಯನ್ನು ಖರೀದಿಸಲಾಗಿದ್ದು, ಒಂದೊಂದು ಬಾಟಲ್​ನಲ್ಲಿ 5 ಮಿಲಿ ಲೀಟರ್ ಅಳಿಸಲಾಗದ ಶಾಯಿ ಇರುತ್ತದೆ. ಇಂತಹ 88 ಸಾವಿರ ಬಾಟಲ್​ಗಳನ್ನು ಚುನಾವಣೆ ಆಯೋಗ ಖರೀದಿ ಮಾಡಿದೆ.

ಒಂದು ಬಾಟಲಿ ಶಾಯಿಗೆ (ತೆರಿಗೆ ಸೇರಿ) ಸುಮಾರು 110 ರಿಂದ 112 ರೂ. ವೆಚ್ಚ ತಗುಲಲಿದೆ. ಈ ಒಂದು ಬಾಟಲಿಯಿಂದ 300 ರಿಂದ 400 ಮತದಾರರ ಬೆರಳಿಗೆ ಗುರುತು ಹಾಕಬಹುದು. ಸಾಮಾನ್ಯವಾಗಿ ಒಂದು ಮತಗಟ್ಟೆಗೆ ಒಂದು ಬಾಟಲ್ ಪೂರೈಕೆ ಮಾಡಲಾಗುತ್ತದೆ. ಆದರೆ ತುರ್ತ ಸನ್ನಿವೇಶದಲ್ಲಿ ಬಳಕೆಗೆ ಅಗತ್ಯವಿರುವ ದೃಷ್ಟಿಯಿಂದ ಒಂದು ಮತಗಟ್ಟೆಗೆ 2 ಬಾಟಲ್ ಶಾಯಿಯನ್ನು ಒದಗಿಸಲಾಗುತ್ತದೆ ಎಂದು ರಾಜ್ಯ ಚುನಾವಣೆ ಆಯೋಗದ ಕಾರ್ಯದರ್ಶಿ ಹೊನ್ನಾಂಬ ಹೇಳಿದ್ದಾರೆ.

1962ರಿಂದಲೇ ಮತದಾನದಲ್ಲಿ ಶಾಯಿ ಬಳಕೆ ಆರಂಭವಾಗಿದೆ. ಅಂದಿನಿಂದ ಇಂದಿನವರೆಗೂ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯೇ ಶಾಯಿ ತಯಾರಿಸಿ ಪೂರೈಸುತ್ತಿದೆ. ಈ ಕಾರ್ಖಾನೆಯನ್ನು ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ 1937ರಲ್ಲಿ ಆರಂಭಿಸಿದ್ದರು. ಸ್ವಾತಂತ್ರ್ಯಾ ನಂತರ ಈ ಕಾರ್ಖಾನೆ ಸರ್ಕಾರದ ಸುಪರ್ದಿಯಲ್ಲಿದೆ.

ಎಡಗೈ ಹೆಬ್ಬೆರಳಿಗೆ ಶಾಯಿ ಗುರುತು

ರಾಜ್ಯದಲ್ಲಿ ಇತ್ತೀಚೆಗೆ ಸಹಕಾರ ಸಂಘಗಳಿಗೆ ಚುನಾವಣೆ ನಡೆದಿದ್ದು ಮತಚಲಾಯಿಸಿದ ಮತದಾರರ ಬೇರೆ ಬೇರೆ ಬೆರಳುಗಳಿಗೆ ಶಾಯಿಯಿಂದ ಗುರುತು ಹಾಕಲಾಗಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರ ಎಡಗೈ ಹೆಬ್ಬೆರಳಿಗೆ ಶಾಯಿ ಹಾಕಲು ಚುನಾವಣೆ ಆಯೋಗ ನಿರ್ಧರಿಸಿದೆ.

For North Karnataka News visit www.uksuddi.in

Comments