UK Suddi
The news is by your side.

ರೈತ ವಾಹಿನಿ ‘ಡಿಡಿ ಕಿಸಾನ್’ ಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರಸಾರ ಭಾರತಿ ರೈತರಿಗೋಸ್ಕರ ‘ಡಿಡಿ ಕಿಸಾನ್’ ಎಂಬ ವಾಹಿನಿಯನ್ನು ಲೋಕಾರ್ಪಣೆ ಮಾಡಿದೆ.

ರೈತ ಮತ್ತು ಕೃಷಿ ಸಂಬಂಧಿತ ಕಾರ್ಯಕ್ರಮಗಳಿಗಾಗಿಯೇ ಕೇಂದ್ರ ಸರ್ಕಾರ ನೂತನ ಪ್ರತ್ಯೇಕ ವಾಹಿನಿಯೊಂದನ್ನು ಹುಟ್ಟುಹಾಕಿದ್ದು,  ಡಿಡಿ ಕಿಸಾನ್ ಎಂದು ನಾಮಕರಣಗೊಳಿಸಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಸಾರಭಾರತಿ ಕೇಂದ್ರದಿಂದ ಈ ನೂತನ ಡಿಡಿ ಕಿಸಾನ್ ವಾಹಿನಿಗೆ ಚಾಲನೆ ನೀಡುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ.
ವಾಹಿನಿಯ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದ ಪ್ರಸಾರ ಭಾರತಿ ಚೇರ್ ಮೆನ್ ಡಾ. ಸೂರ್ಯ ಪ್ರಕಾಶ್ ಅವರು, ನಾವು ಈ ವಾಹಿನಿಯನ್ನು ದೇಶದ ಎಲ್ಲ ರೈತರ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲೂ ವಾಹಿನಿಯ ಬಗ್ಗೆ ಪ್ರಚಾರ ನೀಡಲಾಗಿದ್ದು, ಕೃಷಿ ಪೂರಕ ಕಾರ್ಯಕ್ರಮಗಳು ಇಂದಿನಿಂದಲೇ ಆರಂಭವಾಗಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಾಹಿನಿಗೆ ಮಂಗಳವಾರ ಸಂಜೆ ಅಧಿಕೃತ ಚಾಲನೆ ನೀಡಿದರು. ಕೇಬಲ್ ಮತ್ತು ಡಿಟಿಎಚ್ ನಿರ್ವಾಹಕರು ತಮ್ಮ ಗ್ರಾಹಕರಿಗೆ ಈ ವಾಹಿನಿಯನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಸರ್ಕಾರ ತಿಳಿಸಿದೆ.

ವಾಹಿನಿಯ ವಿಶೇಷಗಳು
ಇದು 24×7 ಮಾದರಿಯ ವಾಹಿನಿಯಾಗಿದ್ದು, ದಿನದ 24 ಗಂಟೆಯೂ ಕೇವಲ ರೈತರಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಮಾತ್ರ ಪ್ರಸಾರವಾಗುತ್ತಿರುತ್ತದೆ. ರೈತರ ದೃಷ್ಟಿಕೋನದಲ್ಲಿ ಮತ್ತು ಅವರಿಗೆ ಅರ್ಥವಾಗುವಂತೆ ಹವಾಮಾನ ವಿವರ ಮತ್ತು ವಿಶ್ಲೇಷಣೆ ಮಾಡಲಾಗುತ್ತದೆ. ದೇಶದ ಎಲ್ಲ ಭಾಗದ ಹವಾಗುಣ ಆಧರಿಸಿ ಮಾಹಿತಿ ವಿಶ್ಲೇಷಣೆ ಮಾಡಲಾಗುತ್ತದೆ. ವೈಜ್ಞಾನಿಕ ವಿಧಾನದ ಮೂಲಕ ಬೆಳೆಗೆ ಸಂಬಂಧಿಸಿದ ವಿವರ, ಮಣ್ಣು ಪರೀಕ್ಷೆಯಂತಹ ಪ್ರಮುಖ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ ಕೂಡ ಇದೇ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇನ್ನು ಡಿಡಿಕಿಸಾನ್ ವಾಹಿನಿಯ ಅಂಬಾಸಿಡರ್ ಆಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಆಯ್ಕೆ ಮಾಡಲಾಗಿದೆ

For North Karnataka News visit www.uksuddi.in

Comments