UK Suddi
The news is by your side.

ಹಳ್ಳಿ ಫೈಟ್: ಮೊದಲ ಹಂತದಲ್ಲಿ ಶೇ.80 ಮತದಾನ

ಬೆಂಗಳೂರು: ರಾಜ್ಯದ 15 ಜಿಲ್ಲೆಗಳಲ್ಲಿ ಶುಕ್ರವಾರ ನಡೆದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣಾ ಮತದಾನ ಕೆಲ ಗೊಂದಲಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿದ್ದು ಶೇ.80 ಮತ ಚಲಾವಣೆಯಾಗಿದೆ.

3,272 ಗ್ರಾಪಂಗಳ 48,621 ಸ್ಥಾನಗಳಿಗೆ 1,20,663 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದರು.

ಕೆಲ ಜಿಲ್ಲೆಗಳಲ್ಲಿ ಮತದಾರರ ಪಟ್ಟಿಯಲ್ಲಿನ ದೋಷ, ಮತಗಟ್ಟೆ ಸ್ಥಾಪನೆ, ಬ್ಯಾಲೆಟ್ ಪೇಪರ್​ಗಳಲ್ಲಿ ಚಿಹ್ನೆ ವ್ಯತ್ಯಾಸ ಸೇರಿ ಹಲವು ಸಣ್ಣಪುಟ್ಟ ಅಡಚಣೆಗಳಿಂದ ಗೊಂದಲಕಾರಿ ವಾತಾವರಣ ನಿರ್ವಣವಾಗಿತ್ತು. ಇನ್ನೂ ಕೆಲ ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಚುನಾವಣೆ ಬಹಿಷ್ಕರಿಸಲಾಯಿತು.

ಕೆಲವೆಡೆ ಮಳೆ, ಇನ್ನೂ ಹಲವೆಡೆ ಭಾರಿ ಬಿಸಿಲಿನ ಕಾರಣ ನಿರೀಕ್ಷಿತ ಮತದಾನವಾಗಿಲ್ಲ ಎಂದು ಹೇಳಲಾಗಿದೆ. ಮಂಗಳೂರು, ಉಡುಪಿ, ಚಿಕ್ಕಮಗಳೂರು ಮತ್ತಿತರ ಕಡೆ ಸಂಜೆ ಬಿದ್ದ ಮಳೆ ಜನರನ್ನು ಮತದಾನದಿಂದ ದೂರವಿರುವಂತೆ ಮಾಡಿದರೆ, ಬೀದರ್, ಬಳ್ಳಾರಿ, ಕಲಬುರಗಿ ಭಾಗಗಳಲ್ಲಿ ಬಿಸಿಲಿನ ತಾಪದಿಂದ ಕೆಲವು ಜನ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳಲಾಗಿದೆ.

ಮತದಾನ ಬಹಿಷ್ಕಾರ: ಮತಗಟ್ಟೆ ಸ್ಥಾಪನೆ, ಮೀಸಲಾತಿ ಗೊಂದಲದಿಂದ ಬೇಸತ್ತ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಪಂ ವ್ಯಾಪ್ತಿಯ ಕರೀಹುಚ್ಚನ ಕೊಪ್ಪಲು, ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗ್ರಾಪಂ ವ್ಯಾಪ್ತಿಯ ಬ್ರಹ್ಮಪುರ ಗ್ರಾಮದ ಜನರು ಮತದಾನ ಬಹಿಷ್ಕರಿಸಿದರು.

ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯತೋರಿದ ಅಧಿಕಾರಿಗಳ, ಜನಪ್ರತಿನಿಧಿಗಳ ಧೋರಣೆ ಖಂಡಿಸಿ ಗುಂಡ್ಲುಪೇಟೆ ತಾಲೂಕು ಬಾಚಹಳ್ಳಿ ಗ್ರಾಪಂಗೆ ಸೇರಿದ ಮಾಲಾಪುರ ಗ್ರಾಮಸ್ಥರು ಮತ ಚಲಾಯಿಸಲಿಲ್ಲ.

ಮತದಾನ ಮುಂದೂಡಿಕೆ: ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ಅಭ್ಯರ್ಥಿಯ ಚಿಹ್ನೆ ವ್ಯತ್ಯಾಸವಾದ್ದರಿಂದ, ಆ ಸ್ಥಾನಕ್ಕೆ ಮತದಾನ ಮುಂದೂಡಲಾಯಿತು. 2ನೇ ಬ್ಲಾಕ್​ಗೆ ಸ್ಪರ್ಧಿಸಿದ್ದ ರಂಗನಾಯಕ ಎಂಬುವರಿಗೆ ಟೆಲಿವಿಷನ್ ಚಿಹ್ನೆ ನೀಡಲಾಗಿತ್ತು. ಆದರೆ ಬ್ಯಾಲೆಟ್ ಪೇಪರ್​ನಲ್ಲಿ ಇವರ ಹೆಸರಿನ ಎದುರು ಟೆಲಿಪೋನ್ ಚಿಹ್ನೆ ಇದ್ದುದ್ದರಿಂದ ಗೊಂದಲ ಉಂಟಾಯಿತು. ತಹಸೀಲ್ದಾರ್ ಸ್ಥಳಕ್ಕಾಗಮಿಸಿ ಮತದಾನ ಸ್ಥಗಿತಗೊಳಿಸಿದರು.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಛಬ್ಬಿ ಗ್ರಾಪಂನ ಶಿವಾಜಿನಗರ 2ನೇ ವಾರ್ಡ್​ಗೆ ಎಸ್​ಸಿ ಮಹಿಳಾ ಮೀಸಲು ಅಭ್ಯರ್ಥಿಯಾಗಿದ್ದ ದೇವಕ್ಕ ಶಂಕ್ರಪ್ಪ ಲಮಾಣಿ ಅವರ ಮತಪತ್ರದ ಗುರುತಿನ ಚಿಹ್ನೆ ಬದಲಾದ ಕಾರಣ ಆ ವಾರ್ಡ್ ಚುನಾವಣೆಯನ್ನು ಮೇ 31ಕ್ಕೆ ಮುಂದೂಡಲಾಯಿತು.

ಬ್ಯಾಲೆಟ್ ಪೇಪರ್​ನ ಹಿಂಬದಿಯಲ್ಲಿ ಹಾಕಿದ್ದ ಮತಗಟ್ಟೆ ಗುರುತಿನ ಮೊಹರು ಅಭ್ಯರ್ಥಿಯ ಚಿಹ್ನೆ ಮೇಲೆ ನಮೂದಾದ ಕಾರಣ ತರೀಕೆರೆ ತಾಲೂಕಿನ ಬೇಲೇನಹಳ್ಳಿ್ಳಗ್ರಾಪಂನ ಜೋಡಿಕೋಡಿಹಳ್ಳಿ ಕ್ಷೇತ್ರದಲ್ಲಿ ಮತದಾನವನ್ನು ಮೇ 31ಕ್ಕೆ ಮುಂದೂಡಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪಡುಪೆರಾರ ಮತ್ತು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯಿತಿಗಳ ಒಟ್ಟು 2 ವಾರ್ಡಗಳಲ್ಲಿ ಬ್ಯಾಲೆಟ್ ಪೇಪರ್ ಗೊಂದಲದಿಂದ ಮತದಾನ ಸ್ಥಗಿತಗೊಂಡಿದೆ. ಅಲ್ಲಿ ಮೇ 31ರಂದು ಮರು ಮತದಾನ ನಡೆಯಲಿದೆ.

ಬೆಳಗಾವಿ ತಾಲೂಕು ಸುಳೇಬಾವಿ ಗ್ರಾಮದ ಖನಗಾಂವ ಬಿಕೆ ವಾರ್ಡ್ 10, ಹುದಲಿಯ ವಾರ್ಡ್ 2 ಮತ್ತು ರಾಮದುರ್ಗ ತಾಲೂಕಿನ ಹಳೇ ತೋರಗಲ್ಲದ ವಾರ್ಡ್ 2ರಲ್ಲಿ ತಾಂತ್ರಿಕ ಸಮಸ್ಯೆ ಕಾರಣದಿಂದ ಮತದಾನ ಮುಂದೂಡಲಾಗಿದೆ.

***

ತಡ ರಾತ್ರಿವರೆಗೆ ಡಿಮಸ್ಟರಿಂಗ್

ಆಯಾ ತಾಲೂಕು ಕೇಂದ್ರಗಳಿಗೆ ಮತದಾನ ಸಿಬ್ಬಂದಿ ತಡ ರಾತ್ರಿವರೆಗೆ, ಇನ್ನೂ ಕೆಲವೆಡೆ ಬೆಳಗಿನ ಜಾವದ ವರೆಗೆ ಚುನಾವಣೆ ಸಾಮಗ್ರಿಗಳನ್ನು ಹಿಂದಿರುಗಿಸಿದರು.

***

ಕುಸಿದು ಬಿದ್ದು ಮರಣ

ದಕ್ಷಿಣ ಕನ್ನಡ ಜಿಲ್ಲೆ ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ ಪಕ್ರು ಬ್ಯಾರಿ ಅವರ ಪುತ್ರ ಅಬ್ದುಲ್ಲ(50) ಎಂಬುವರು ಮತ ಚಲಾಯಿಸಿ ಹೊರ ಬರುತ್ತಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟರು. ಅವರು ಕನ್ಯಾನ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತದಾನ ಕೇಂದ್ರ ಸಂಖ್ಯೆ 5ರಲ್ಲಿ ಮತದಾನ ಮಾಡಲೆಂದು ಬಂದಿದ್ದರು.

***

ಲಘು ಲಾಠಿ ಪ್ರಹಾರ

ಮಂಗಳೂರು ತಾಲೂಕಿನ ಪಡುಪಣಂಬೂರು ಗ್ರಾಪಂ ಮತ ಕೇಂದ್ರದ ಹೊರಭಾಗ, ಕಾಪು, ಪಡುಬಿದ್ರಿ ಆಸುಪಾಸು ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

***

ನಿಯಮ ಉಲ್ಲಂಘಿಸಿದ ಸಿಎಂ

ಮೈಸೂರು: ಗ್ರಾಪಂ ಚುನಾವಣೆ ವೇಳೆ ಸಿಎಂ ಸಿದ್ದರಾಮಯ್ಯ ಚುನಾವಣಾ ಆಯೋಗದ ನಿಯಮವನ್ನೇ ಉಲ್ಲಂಘಿಸಿ ಮತ ಚಲಾಯಿಸಿದರು. ಆಯೋಗ ನಿಗದಿಪಡಿಸಿರುವ 21 ಗುರುತಿನ ಪತ್ರಗಳಲ್ಲಿ ಯಾವುದಾದರೂ ಒಂದನ್ನು ಚುನಾವಣೆ ಸಮಯದಲ್ಲಿ ಹಾಜರುಪಡಿಸಬೇಕು. ಆದರೆ ಮತದಾನ ಮಾಡುವ ವೇಳೆ ಸಿದ್ದರಾಮಯ್ಯ ಆಯೋಗ ನಿಗದಿಪಡಿಸಿರುವ ಯಾವುದೇ ಗುರುತಿನ ಪತ್ರವನ್ನು ಹಾಜರುಪಡಿಸಲಿಲ್ಲ. ಮತಗಟ್ಟೆ ಅಧಿಕಾರಿ ನಿಯಮದಂತೆ ಗುರುತಿನ ಪತ್ರ ನೀಡುವಂತೆ ಕೇಳಿದಾಗ, ‘ಇಲ್ಲ’ ಎನ್ನುವಂತೆ ಕೈ ಸನ್ನೆ ಮಾಡಿದರು. ಮಾಧ್ಯಮದವರು ಇದ್ದುದರಿಂದ ಮುಗುಳ್ನಗುತ್ತ, ಮತಪತ್ರ ನೀಡಿ ಸಹಿ ಪಡೆದರು.

ಮತ ಚಲಾಯಿಸದ ಪತ್ನಿ, ಮಗ: ಪಂಚಾಯಿತಿ ವ್ಯವಸ್ಥೆಯಲ್ಲಿ ಕಡ್ಡಾಯ ಮತದಾನ ಜಾರಿ ಮಾಡಿದ ಬಳಿಕ ಮತ ಚಲಾಯಿಸುವ ಸಲುವಾಗಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ನಗರಕ್ಕೆ ಆಗಮಿಸಿದ ಸಿಎಂ, ಬಳಿಕ ಕಾರಿನಲ್ಲಿ ಸಿದ್ದರಾಮನಹುಂಡಿಗೆ ತೆರಳಿ ಮತ ಚಲಾಯಿಸಿದರು. ಆದರೆ ಅವರ ಪತ್ನಿ ಪಾರ್ವತಿ, ಪುತ್ರ ರಾಕೇಶ್ ಮತದಾನ ಮಾಡಲಿಲ್ಲ.

***

ಕೈಕೊಟ್ಟ ಠಸ್ಸೆ!

ಮತ ಚಲಾವಣೆ ವೇಳೆ ಸಿದ್ದರಾಮಯ್ಯಗೆ ಸ್ವಸ್ತಿಕ್ ಚಿಹ್ನೆಯ ಠಸ್ಸೆ ಕೈ ಕೊಟ್ಟಿತು. ಮತಪತ್ರ ಪಡೆದು ಅದಕ್ಕೆ ಠಸ್ಸೆ ಒತ್ತುವಾಗ ಅದು ಸರಿಯಾಗಿ ಕಾಣಿಸಲಿಲ್ಲ. ಪ್ಯಾಡ್​ನಲ್ಲಿ ಇಂಕ್ ಇಲ್ಲದಿದ್ದನ್ನು ಗಮನಿಸಿದ ಅವರು, ಮತಗಟ್ಟೆ ಅಧಿಕಾರಿಯನ್ನು ‘ಏನ್ರಿ ಸರಿಯಾಗಿ ಇಂಕ್ ಹಾಕೋದಲ್ಲವಾ, ಹೊಸ ಪ್ಯಾಡ್ ಇಟ್ಟುಕೊಂಡಿರಬೇಕು. ಸರಿಯಾಗಿ ಕಾಣಿಸುತ್ತಿಲ್ಲ’ ಎಂದು ಹೇಳಿ ಹೊಸ ಪ್ಯಾಡ್ ಪಡೆದ ಬಳಿಕ ಮತ್ತೆ ಠಸ್ಸೆ ಒತ್ತಿದರು.

***

ಆಂಬುಲೆನ್ಸ್​ನಲ್ಲಿ ತೆರಳಿ ಹಕ್ಕು ಚಲಾವಣೆ

ಬಸರಾಳು: ಮತದಾನ ಮಾಡಲು ಬರುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಗಾಯಗೊಂಡ ಬಳಿಕ ತುರ್ತ ಚಿಕಿತ್ಸಾ ವಾಹನದಲ್ಲಿಯೇ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಗ್ರಾಮದ ಯೋಗೇಶ್ (28) ಕಾರ್ಯ ನಿಮಿತ್ತ ಮಂಡ್ಯಕ್ಕೆ ಬಂದು ಬಸರಾಳು ಗ್ರಾಮದಲ್ಲಿನ ಮತಗಟ್ಟೆಗೆ ತೆರಳುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಕಾಲು ಮತ್ತು ಕೈಗೆ ಪೆಟ್ಟು ಬಿದ್ದಿತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು. ಆದರೆ ಅವರನ್ನು ತುರ್ತ ಚಿಕಿತ್ಸಾ ವಾಹನದಲ್ಲಿಯೇ ಮತಗಟ್ಟೆಗೆ ಕರೆದೊಯ್ದು ಮತದಾನ ಮಾಡಿಸಿದ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

For North Karnataka News visit www.uksuddi.in

Comments