UK Suddi
The news is by your side.

ಅವಳಿ ಜಿಲ್ಲೆಯಲ್ಲಿ ಮತ್ತೆ 11 ಸಕ್ಕರೆ ಕಾರ್ಖಾನೆ

ವಿಜಯಪುರ ಮತ್ತು ಬಾಗಲಕೋಟೆ : ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಅವಳಿ ಜಿಲ್ಲೆಯಲ್ಲಿ ಕ್ರಮೇಣ ನೀರಾವರಿ ಕ್ಷೇತ್ರ ಹೆಚ್ಚಾಗುತ್ತಿದೆ. ಹೀಗಾಗಿ ಕಬ್ಬು ಬೆಳೆಯುವ ಕ್ಷೇತ್ರವೂ ಹೆಚ್ಚಾಗುತ್ತಿದೆ. ಇದರಿಂದ ಸಕ್ಕರೆ ಕಾರ್ಖಾನೆಗಳ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ.

ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಕಾರ ಕಬ್ಬು ಮತ್ತು ಭತ್ತ ಈ ಭಾಗದಲ್ಲಿ ನಿಷೇಧಿತ ಬೆಳೆಗಳು. ಈ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಪಡೆಯುವುದರಿಂದ ಕಬ್ಬು- ಭತ್ತ ನೀರಾವರಿ
ಪ್ರದೇಶದಲ್ಲಿ ಬೆಳೆಯುವಂತಿಲ್ಲ. ಆದರೆ ಅವಳಿ ಜಿಲ್ಲೆಯ ನೀರಾವರಿ ಭೂಮಿಯಲ್ಲಿ ಕಬ್ಬನ್ನೇ ಅತಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ
ಮತ್ತೆ 11 ಹೊಸ ಕಾರ್ಖಾನೆ ಆರಂಭಕ್ಕೆ ತುದಿಗಾಲ ಮೇಲೆ ನಿಂತಿವೆ. ಬಹುತೇಕ ರಾಜಕೀಯ ನಾಯಕರೇ ಸ್ಥಾಪಿಸುತ್ತಿರುವ ಈ ಕಾರ್ಖಾನೆಗಳಿಗೆ ಈಗಾಗಲೇ ಕೇಂದ್ರದ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇನಾಲಯ ಅನುಮತಿಯೂ ಕೊಟ್ಟಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಇನ್ನೊಂದು ವರ್ಷದಲ್ಲಿ ಅವಳಿ ಜಿಲ್ಲೆಯಲ್ಲಿ ಮತ್ತೆ 11 ಹೊಸ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಆರಂಭಿಸಲಿವೆ.

ಎಲ್ಲೆಲ್ಲೆ ಸ್ಥಾಪನೆ?: ವಿಜಯಪುರ ತಾಲೂಕಿನ ಕಾರಜೋಳದಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮತ್ತು ಇತರ ಇಬ್ಬರು ಒಳಗೊಂಡ ಬಸವೇಶ್ವರ ಶುಗರ್, ಸಂಗಾಪುರದಲ್ಲಿ ಸೋಮೇಶ್ವರ ಶುಗರ್, ಹೊನವಾಡದಲ್ಲಿ ಬೆಳಗಾಂ ಶುಗರ್, ಇಂಡಿ ತಾಲೂಕಿನ ನಿಂಬಾಳದಲ್ಲಿ ಎಂ.ಎಸ್‌. ಪಾಟೀಲ ಶುಗರ್, ಬಸವನಬಾಗೇವಾಡಿ ತಾಲೂಕಿನ ಕೊಡಗಾನೂರಿನಲ್ಲಿ ಶಾರದಾ ಶುಗರ್, ಸಿಂದಗಿ ತಾಲೂಕಿನ ಚಟ್ಟರಕಿಯಲ್ಲಿ ಸಾರ್ವಭೌಮ ಶುಗರ್, ಮುದ್ದೇಬಿಹಾಳ ತಾಲೂಕಿನ ಯರಗಲ್ಲದಲ್ಲಿ ಬಾಲಾಜಿ ಶುಗರ್ ಆ್ಯಂಡ್‌ ಕೆಮಿಕಲ್ಸ್‌
ಎಂಬ ಕಾರ್ಖಾನೆಗಳು ಕಾರ್ಯಾರಂಭ ಮಾಡಲು ಅನುಮತಿ ಪಡೆದಿವೆ.

ಇನ್ನು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೇರದಾಳದಲ್ಲಿ ಸಾವರಿನ್‌ ಡಿಸ್ಟೀಲರೀಸ್‌, ಹಿಪ್ಪರಗಿ-ಮೈಗೂರದಲ್ಲಿ ಸಾಯಿಪ್ರಿಯಾ ಶುಗರ್, ಬಾದಾಮಿ ತಾಲೂಕಿನ ಕಲ್ಲಾಪುರ ಎಸ್‌ಕೆ-ಚಿರಲಕೊಪ್ಪದಲ್ಲಿ ಎಂಆರ್‌ಎನ್‌ ಕೇನ್‌ ಪವರ್‌, ಹುನಗುಂದ ತಾಲೂಕಿನ ರಾಮತಾಳದಲ್ಲಿ ಯರಗಟ್ಟಿ ಶುಗರ್ ಸ್ಥಾಪನೆಯಾಗಲಿವೆ. ಅಲ್ಲದೇ ಹುನಗುಂದ ತಾಲೂಕಿನ
ಹಾವರಗಿ ಬಳಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಎಸ್‌ ಆರ್‌ಕೆ ಹೆಸರಿನಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಅನುಮತಿ ಕೇಳಿದ್ದಾರೆ.

11 ಕಾರ್ಖಾನೆಗೆ ಅನುಮತಿ: ಕೇಂದ್ರ ಸರ್ಕಾರದ ಕಬ್ಬು (ನಿಯಂತ್ರಣ) (ತಿದ್ದುಪಡಿ) ಆದೇಶದಡಿ ಅಂತರ ದೃಢೀಕರಣ ಪಡೆದ ನಂತರ ಕೇಂದ್ರ ಸರ್ಕಾರಕ್ಕೆ 1 ಕೋಟಿ ರೂ. ಬ್ಯಾಂಕ್‌ ಖಾತರಿಯನ್ನು ಒಂದು ತಿಂಗಳ ಅವಧಿಯೊಳಗೆ ಪಾವತಿಸಿದ ನಂತರ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಕೇಂದ್ರ ಸರ್ಕಾರದಿಂದ ಐಇಎಂ ಹಾಗೂ “ಹೊಸ ಸಕ್ಕರೆ ಕಾರ್ಖಾನೆ’ ಎಂದು ಅಂಗೀಕರಿಸಿದ ನಂತರವೇ ಕಾರ್ಖಾನೆ ಸ್ಥಾಪನೆ ಮಾಡಲು ಅನುಮತಿ
ದೊರೆಯುತ್ತದೆ. ಈ ನಿಟ್ಟಿನಲ್ಲಿ ಅವಳಿ ಜಿಲ್ಲೆಯ 11 ಹೊಸ ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರದಿಂದ ಐಎಎಂ ಪಡೆದು ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಎಲ್ಲ ಪ್ರಕ್ರಿಯೆ ಮುಗಿಸಿವೆ ಎಂದು ಬೆಂಗಳೂರಿನ ಸಕ್ಕರೆ ಆಯುಕ್ತಾಲಯದ ಮೂಲಗಳು ತಿಳಿಸಿವೆ.

ಕೃಪೆ: ಉದಯವಾಣಿ 

For North Karnataka News visit www.uksuddi.in

Comments