UK Suddi
The news is by your side.

ಬಾಗಲಕೋಟ ಜಿಲ್ಲೆ ಇತಿಹಾಸ

ಹಿಂದೆ ಶಾಸನಗಳಲ್ಲಿ “ಬಾಗಡೆ ದೇಶ” ಅಥವಾ “ಬಾಗಡಗೆ ನಾಡು” ಎಂದು ಕರೆಸಿಕೊಂಡಿದ್ದ ಇಂದಿನ ಬಾಗಲಕೋಟೆ ಜಿಲ್ಲೆಯು ಹಲವಾರು  ವೈಶಿಷ್ಠ್ಯತೆಗಳ ಆಗರವಾಗಿದೆ. ಬಾದಾಮಿ ಚಾಲುಕ್ಯರ ರಾಜ ಮನೆತನದ ತವರು ಈ ಜಿಲ್ಲೆ. ಭಾರತೀಯ ವಾಸ್ತುಶಿಲ್ಪದ ತೊಟ್ಟಿಲು ಎಂಬ ಹೆಗ್ಗಳಿಕೆಯ ಐಹೊಳೆ, ವಿಶ್ವಪರಂಪರೆ ಯೋಜನೆಗೆ ಒಳಪಟ್ಟಿರುವ ಪಟ್ಟದಕಲ್ಲು, ಸುಂದರ ಗುಹಾಲಯಗಳಿರುವ ಬಾದಾಮಿ ಮೊದಲಾದ ತಾಣಗಳು ಬಾಗಲಕೋಟೆ ಜಿಲ್ಲೆಯನ್ನು ದೇಶ ವಿದೇಶಗಳಲ್ಲೂ ಪರಿಚಯಿಸಿವೆ. ಮಹಾಕೂಟ, ಬನಶಂಕರಿ, ಶಿವಯೋಗ ಮಂದಿರ ಹಾಗೂ ಕೂಡಲಸಂಗಮಗಳಂಥ ಪವಿತ್ರ ಕ್ಷೇತ್ರಗಳು ಈ ಜಿಲ್ಲೆಯ ಕೀರ್ತಿ ಹೆಚ್ಚಿಸಿವೆ.
ಸುಮಾರು ೫ ಲಕ್ಷ ವರ್ಷದ ಹಿಂದಿನ ಆದಿ ಹಳೆ ಶಿಲಾಯುಗದ ಮಾನವನಿಂದ ಹಿಡಿದು ಏಕೀಕೃತ ಕರ್ನಾಟಕ (೧೯೫೬) ರೂಪುಗೊಳ್ಳುವವರೆಗೆ ಜಿಲ್ಲೆಯ ಇತಿಹಾಸ ರೋಚಕವಾಗಿದೆ. ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಕಳಚೂರಿಗಳು, ಹೊಯ್ಸಳರು, ವಿಜಯನಗರ ಅರಸರು, ಬಹಮನಿಗಳು, ಆದಿಲ್‌ಶಾಹಿಗಳು, ಮರಾಠಾ ಪೇಶ್ವೆಗಳು, ಹೈದರ್, ಟಿಪ್ಪು ಹಾಗೂ ಬ್ರಿಟಿಷರು ಈ ಜಿಲ್ಲೆಯನ್ನು ಆಳಿದ್ದಾರೆ.
ಜಿಲ್ಲೆಯ ಪ್ರಮುಖ ನದಿ “ಕೃಷ್ಣಾ” ಇದನ್ನು “ಪೆರ್ದೊರೆ” “ಹಿರಿಹೊಳೆ” ಎಂದೂ ಕರೆಯುವರು. ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಮಹಾಬಲೇಶ್ವರಲ್ಲಿ ಉದಯವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶಗಳ ಮೂಲಕ ಸುಮಾರು ೧೪೦೦ ಕ.ಮೀ. ಹರಿಯುವ ಈ ನದಿ ಜಿಲ್ಲೆಯ ಜೀವನಾಡಿಯೂ ಹೌದು. ಆಲಮಟ್ಟಿ ಆಣೆಕಟ್ಟೆಯ ಹಿನ್ನೀರಿನಲ್ಲಿ ಹಲವಾರು ಹಳ್ಳಿಗಳನ್ನು ಶಾಶ್ವತವಾಗಿ ತನ್ನೊಡಲಲ್ಲಿ ಮುಳುಗಿಸಿಕೊಂಡ ನದಿಯೂ ಹೌದು. ಏಷ್ಯಾದಲ್ಲಿಯೇ ನೀರಾವರಿಗಾಗಿ ಮುಳಗಡೆಯಾಗುತ್ತಿರುವ ದೊಡ್ಡ ನಗರ ಎಂಬ ಖ್ಯಾತಿಯನ್ನು ಬಾಗಲಕೋಟ ಜಿಲ್ಲೆ ಕೇಂದ್ರ ಹೊಂದಿದೆ. ಪ್ರಪಂಚದಲ್ಲಿಯೇ ಅತಿ ದೊಡ್ಡ ಪುನರ್ವಸತಿ ವ್ಯವಸ್ಥೆ ಹೊಂದಿದ ಹೆಗ್ಗಳಿಕೆ ಕೃಷ್ಣೆಯ ಯೋಜನೆಗಿದೆ. ಘಟಪ್ರಭಾ ಹಾಗೂ ಮಲಪ್ರಭಾ ನದಿಗಳೂ ಕೂಡ ಜಿಲ್ಲೆಗೆ ಜೀವ ತುಂಬಿದೆ.
ಶಾಸನ ಕವಿ ರವಿಕೀರ್ತಿಯಿಂದ ಆರಂಭವಾಗುವ ಜಿಲ್ಲೆಯ ಸಾಹಿತ್ಯವು ಕನ್ನಡ ನಾಡಿಗೆ ಮಹತ್ತರವಾದ ಕೊಡುಗೆ ನೀಡಿದೆ. “ಕವಿ ಚಕ್ರವರ್ತಿ ರನ್ನ” ನಮ್ಮ ಜಿಲ್ಲೆಯವ, ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯ ನೀಡಿದ ಸಮಾನತೆಯ ಹರಿಕಾರ ಬಸವಣ್ಣ ಅಧ್ಯಯನ ಮಾಡಿದ, ಕೊನೆಯಲ್ಲಿ ಐಕ್ಯ ಹೊಂದಿದ ಕೂಡಲಸಂಗಮ ನಮ್ಮ ಜಿಲ್ಲೆಯಲ್ಲಿದೆ. ಪ್ರಸನ್ನ ವೆಂಕಟದಾಸರು ಈ ಜಿಲ್ಲೆಯ ದಾಸ ಸಾಹಿತ್ಯದ ಅಪೂರ್ವ ಕೊಡುಗೆ, ಕಂದಗಲ್ಲ ಹನಮಂತರಾಯ, ಪಿ. ಬಿ. ಧುತ್ತರಗಿ ಮೊದಲಾದ ಮೇರು ನಾಟಕಗಾರರು ಬಾಗಲಕೋಟ ಜಿಲ್ಲೆಯವರು.
ಭಾರತ ಸ್ವಾತಂತ್ಯ್ರದ ೫೦ನೇ ಸುವರ್ಣ ವರ್ಷಾಚರಣೆಯ ಸವಿನೆನಪಿಗಾಗಿ ಹೊಸ ಬಾಗಲಕೋಟ ಜಿಲ್ಲೆಯು ೧೫-೦೮-೧೯೯೭ ರಂದು ಅಸ್ತಿತ್ವಕ್ಕೆ ಬಂದಿದೆ. ಜಿಲ್ಲೆಯ ಒಟ್ಟು ವಿಸ್ತೀರ್ಣ ೬,೫೭೫ ಚದರ ಕಿ.ಮೀಟರ್. ಬಾಗಲಕೋಟ ಜಿಲ್ಲೆಯ ಉತ್ತರಕ್ಕೆ ಬಿಜಾಪೂರ, ದಕ್ಷಿಣಕ್ಕೆ ಗದಗ, ಪೂರ್ವಕ್ಕೆ ರಾಯಚೂರು ಹಾಗೂ ಕೊಪ್ಪಳ ಪಶ್ಚಿಮಕ್ಕೆ ಬೆಳಗಾವಿ ಜಿಲ್ಲೆಗಳು ಹರಡಿವೆ. ೨೦೦೧ ರ ಜನಗಣತಿ ಪ್ರಕಾರ ಜಿಲ್ಲೆ ಜನಸಂಖ್ಯೆ ೧೬,೫೧,೮೯೨. ಇದರಲ್ಲಿ ೮,೩೪,೨೪೭ ಪುರುಷರು ಹಾಗೂ ೮,೧೭,೬೪೫ ಮಹಿಳೆಯರು. ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ. ೬೬.೬ ಇದರಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಶೇ. ೭೬.೧ ಹಾಗೂ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. ೫೬.೯ ಜಿಲ್ಲೆಯು ಒಟ್ಟು ೬೨೭ ಹಳ್ಳಿಗಳನ್ನು ಹಾಗೂ ೧೨ ಪಟ್ಟಣಗಳನ್ನು ಹೊಂದಿದೆ.
ಬಾದಾಮಿ
ಇದು ರಾಜ್ಯದಲ್ಲಿಯೇ ಅತ್ಯಂತ ಪ್ರಾಚೀನ ಸ್ಥಳಗಳಲ್ಲೊಂದಾಗಿದೆ. ಬಾದಾಮಿಯು ಎರಡು ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟು ನೈಸರ್ಗಿಕ ಸಂರಕ್ಷಣೆಗೆ ಒಳಗಾಗಿದ್ದರಿಂದಲೇ ಇಲ್ಲಿ ಚಾಲುಕ್ಯರ ಸಾಮ್ರಾಜ್ಯ ಸ್ಥಾಪನೆಯಾಗಿದೆ. “ವಾತಾಪಿ” “ರಾಜಧಾನಿ ವಾತಾಪಿ” ಬಾದಾಮಿ, ಬಾದಾವಿ ಎಂದು ಇದರ ಸ್ಥಳನಾಮಗಳಿವೆ. ಬಾದಾಮಿಯು ೭, ೮ ನೇ ಶತಮಾನದಲ್ಲಿ ಒಂದು ದೊಟ್ಟ ಪಟ್ಟಣವಾಗಿದ್ದು, ೧೪ ವಿದ್ಯೆಗಳಲ್ಲಿ ಪಾರಂಗತರಾದ ಸಾವಿರಾರು ಬ್ರಾಹ್ಮಣರಿಂದ ಕೂಡಿದ ಧಾರ್ಮಿಕ ಕೇಂದ್ರವೂ ಆಗಿತ್ತೆಂದು ಶಾಸನದಿಂದ ತಿಳಿಯುವುದು. ಚಾಲುಕ್ಯರ ರಾಜ ಲಾಂಛನ “ವರಾಹ” ಬಾದಾಮಿಯಲ್ಲಿ ಬೆಟ್ಟ ಕೊರೆದು ಮಾಡಿದ ನಾಲ್ಕು ಗುಹಾದೇವಾಲಯಗಳೊಂದಿಗೆ ಇತರ ಬಿಡಿ ದೇವಾಲಯಗಳೂ, ಮ್ಯೂಜಿಯಂ ಕೂಡ ಪ್ರೇಕ್ಷಣೀಯವಾಗಿದೆ. ಅದರಲ್ಲೂ ಗುಹಾದೇವಾಲಯಗಳು ವಿಶ್ವಮಾನ್ಯತೆ ಪಡೆದಿದ್ದು ಅತ್ಯುತ್ತಮ ತಾಂತ್ರಿಕ ಜ್ಞಾನದ ಪ್ರತೀಕಗಳಾಗಿರುವುದರಿಂದ ವಿದೇಶಿಯರನ್ನೂ ಆಕರ್ಷಿಸುತ್ತಿವೆ.
ಮೊದಲ ಗುಹೆ (ಶೈವ ಗುಹೆಕ್ರಿ.೬೨೦
ಇದರ ಹೊರಭಾಗದಲ್ಲಿರುವ ನಟರಾಜನ ಸುಂದರ ವಿಗ್ರಹವು ಇಡೀ ದಕ್ಷಿಣ ಭಾರತದಲ್ಲಿಯೇ ಅಪರೂಪದ ಕಲಾಕೃತಿಯಾಗಿದೆ.

ಬಾಗಲಕೋಟ ಜಿಲ್ಲೆ ಇತಿಹಾಸ
ಒಂದೇ ಶಿಲ್ಪದಲ್ಲಿ ನಾಟ್ಯದ ಸಕಲ ಮುದ್ರೆ (ಸುಮಾರು ೮೧ ಮುದ್ರೆ)ಗಳನ್ನು ಬಿಡಿಸಿರುವ ಶಿಲ್ಪಿಯ ಶಿಲ್ಪಕಲಾ ನೈಪುಣ್ಯತೆಗೆ ಎಲ್ಲರೂ ಬೆರಗಾಗಲೇಬೇಕು. ನಟರಾಜನ ಬಲಗಡೆ ಇರುವ ಸಣ್ಣ ಕೊಠಡಿಯಲ್ಲಿ ಚಾಲುಕ್ಯರ ಕಾಲದ ಉತ್ತಮ ಕಲಾ ಪ್ರತೀಕವಾದ ಮಹಿಷಾಸುರ ಮರ್ಧಿನಿಯ ಉಬ್ಬು ಶಿಲ್ಪವಿದೆ.
ಇದೇ ಪಶ್ಚಿಮ ಗೋಡೆಯಂಚಿಗೆ ಸಾಗಿದರೆ ಮೊಗಸಾಲೆಯಲ್ಲಿ ಸುಮಾರು ೨.೩ ಮೀ. ಎತ್ತರವಾದ ಅರ್ಧನಾರೀಶ್ವರನ ಶಿಲಾಕೃತಿ ಆಕರ್ಷಕವಾಗಿದೆ. ವಿಗ್ರಹದ ಬಲಭಾಗದಲ್ಲಿನ ಶಿವನ ಚಿಹ್ನೆಗಳಾದ ಜಟಾ, ಚಂದ್ರ, ೩ನೇ ಕಣ್ಣುಗಳಿದ್ದರೆ, ಎಡಭಾಗದಲ್ಲಿ ತುರುಬು, ಕಿವಿಯ ದುಂಡಾದ ಆಭರಣ, ಸೀರೆ ಬಳೆ ಮೊದಲಾದ ಪಾರ್ವತಿಯ ಚಿಹ್ನೆಗಳಿವೆ
ಈ ವಿಗ್ರಹದ ಎದುರಿಗೆ ಪೂರ್ವಕ್ಕೆ ಹರಿಹರನ ಮೂರ್ತಿ ಇದೆ. ಇದರ ಬಲಭಾಗದಲ್ಲಿ ಶಿವನಿದ್ದು ಜಟಾ. ತಲೆಬುರುಡೆ, ನಾಗಕುಂಡಲ, ಖಂಟಾಂಜನ, ಚರ್ಮಾಂಬರಗಳಿವೆ. ಎಡಭಾಗದಲ್ಲಿ ಹರಿಯ ಸಂಕೇತಗಳಿವೆ. ಹರಿಹರನ ಬಲಕ್ಕೆ ಹೊರಭಾಗದ ಪ್ರವೇಶ ದ್ವಾರದಲ್ಲಿ ತ್ರಿಶೂಲಧಾರಿ ದ್ವಾರಪಾಲಕನ ಆಕರ್ಷಕ ವಿಗ್ರಹವಿದೆ. ಇದರ ಮೇಲ್ಭಾಗದಲ್ಲಿ ನಂದಿಯ ಮೇಲೆ ಕುಳಿತ ಶಿವಪಾರ್ವತಿಯ ಚಿತ್ರ ಆಧುನಿಕ ಕಾಲದ ಗಂಡ ಹೆಂಡತಿಯರು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವದನ್ನು ನೆನಪಿಸುವುದು.
ಈ ಗುಹೆಯು ಶೈವ ಗುಹೆಯಾಗಿದ್ದು ಇದರ ಛಾವಣಿಯ ಮೇಲೆ ಕ್ರಿ.ಶ. ೬-೭ ನೇ ಶತಮಾನದಲ್ಲಿನ ಕೆಲ ಶಾಸನಗಳಿವೆ. ಈ ಶಾಸನಗಳಲ್ಲಿ ಕೆಲವು ಶಿಲ್ಪಿಗಳ ಹೆಸರುಗಳಾದ ಸಿವಪೂತ, ಯಸದೇವ, ದೇವದಾಸ, ಶ್ರೀ ಗಂಗೋಸ್ವಾಮಿ, ಮಹಾರಟೆ ಎಂದು ಉಲ್ಲೇಖಿಸಿದೆ. ಬದಾಮಿಯಲ್ಲಿ ರಚಿತಗೊಂಡ ಗುಹೆಗಳಲ್ಲಿ ಇದು ಮೂರನೇಯದಾಗಿದೆ. ಇದರ ಕಾಲ ಕ್ರಿ.ಶ. ೬೨೦.
೨ನೇ ಗುಹೆ (ವೈಷ್ಣವ ಗುಹೆಕ್ರಿ.೬೦೦
ಇದರ ಕಟ್ಟೆಯ ಮೇಲಿರುವ ಕುಬ್ಜಗಣಗಳು ಹಾಸ್ಯವನ್ನು ಹರಿಸುತ್ತವೆ. ತಲೆಗೂದಲು ಕೆದರಿಕೊಂಡು ಲಂಗೋಟಿ ಇಳಿಬಿಟ್ಟು ಓಡಿ ಹೋಗುವ ಬಲಗೈಯಲ್ಲಿ ತಂಬಿಗೆಯನ್ನು ಹಿಡಿದುಕೊಂಡು ನೃತ್ಯ ಮಾಡುವ, ಕೊಂಬು ಊದುವ ಗಣಂಗಳಿವೆ. ಗುಹೆಯ ಪ್ರವೇಶ ದ್ವಾರದ ಎರಡೂ ಬದಿಗೆ ಎರಡು ದೊಡ್ಡ ಆಕರ್ಷಕ ದ್ವಾರಪಾಲಕ ಮೂರ್ತಿಗಳಿವೆ. ಪ್ರವೇಶದ್ವಾರದಲ್ಲಿರುವ ನಾಲ್ಕು ಚೌಕಾಕಾರದ ಕಂಭಗಳ ಮೇಲ್ಭಾಗದಲ್ಲಿ ಸೂಕ್ಷ್ಮವಾಗಿ ಕೆತ್ತಿದ ಅಲಂಕಾರಿಕ ಸರಗಳಿವೆ. ಮೊಗಸಾಲೆಯ ಪೂರ್ವದ ಗೋಡೆಗೆ ವರಾಹ ಮೂರ್ತಿ ಇದೆ. ಇದರ ಎದುರಿನ ಪಶ್ಚಿಮ ಗೋಡೆಗೆ ವಿಷ್ಣುವಿನ ತ್ರಿವಿಕ್ರಮ (ವಾಮನ) ಅವತಾರವಿದೆ. ಈ ಮೂರ್ತಿಯ ಎಡಕ್ಕೆ ವಾಮನನು ಬಲಚಕ್ರವರ್ತಿಯು ದಾನ ಕೊಡಲು ಬಿಡುತ್ತಿರುವ ನೀರನ್ನು ಸ್ವೀಕರಿಸುತ್ತಿದ್ದಾನೆ. ಬಲಿಯ ಪತ್ನಿ ವಿಂಧ್ಯಾಳಿಯೂ ಇವರ ಹಿಂದೆ ಇದ್ದಾಳೆ. ದೈತ್ಯನಾದ ನಮುಚಿಯು ತ್ರಿವಿಕ್ರಮನ ಕಾಲನ್ನು ಬಲಗಡೆಗೆ ಕುಳಿತು ಎಳೆಯುತ್ತಿರುವನು. ಎಡಭಾಗದಲ್ಲಿ ತ್ರಿಶಂಕುವು ಅಸ್ತವ್ಯಸ್ತನಾಗಿ ಮೇಲಿನಿಂದ ಕೆಳಕ್ಕೆ ಬೀಳುತ್ತಿರುವಂತೆ ಕೆತ್ತಲಾಗಿದೆ. ಈ ಗುಹೆಯ ಗರ್ಭಗೃಹದಲ್ಲಿ ಯಾವುದೇ ಮೂರ್ತಿಗಳಿಲ್ಲ.
ಬೌದ್ಧ ಧರ್ಮದ ಗುಹೆ
೨ನೇ ಗುಹೆಯಿಂದ ಪೂರ್ವಕ್ಕರ ೮-೯ ಮೀಟರ್ ದೂರದಲ್ಲಿ ಒಂದು ಸ್ವಾಭಾವಿಕ ಗುಹೆ ಇದೆ. ಇದರ ಪೂರ್ವ ದಿಕ್ಕಿನ ಗೋಡೆಯ ಮೇಲೆ ಪದ್ಮ ಪಾಣಿಯಾದ ಮೂರ್ತಿಯನ್ನು ಕಡೆದಿದ್ದಾರೆ. ಇದು ಬುದ್ಧನ ಶಿಲಾಮೂರ್ತಿಯಾಗಿದೆ. ಇದರ ತಲೆಯ ಮೇಲೆ ಕಿರೀಟ ಮತ್ತು ಕೆಳಗೆ ಪಾದದವರೆಗೆ ವಸ್ತವಿದೆ.
೩ನೇ ಗುಹೆ ಕ್ರಿ.೫೭೮:
ಬಾದಾಮಿಯಲ್ಲಿರುವ ಎಲ್ಲ ಗುಹೆಗಳಿಗಿಂತ ಅತ್ಯುತ್ತಮವಾದ ಅಗ್ರಸ್ಥಾನ ಪಡೆದ ಗುಹೆ ಇದಾಗಿದೆ. ಚಾಲುಕ್ಯ ದೊರೆ ೧ನೇ ಕೀರ್ತಿವರ್ಮನ ೧೨ನೇ ವರ್ಷದ ಆಳ್ವಿಕೆಯಲ್ಲಿ ಅವನ ತಮ್ಮನಾದ ಮಂಗಲೇಶನು ಈ ಗುಹೆಯನ್ನು ಕೊರೆಸಿ ಇಲ್ಲಿ ವಿಷ್ಣು ಪ್ರತಿಮೆ ಪ್ರತಿಷ್ಠಾಪಿಸಿದ ವಿಷಯ ಇದೇ ಗುಹೆಯ ಶಾಸನದಲ್ಲಿದೆ. ಈ ಗುಹೆಯ ಮೊಗಸಾಲೆಯ ಹೊರಗೆ ಮತ್ತು ಕಟ್ಟೆಯ ಮೇಲ್ಭಾಗದಲ್ಲಿ ಪಶ್ಚಿಮ ಗೋಡೆಯ ಮೇಲೆ ತ್ರಿವಿಕ್ರಮನ ಬೃಹದಾಕಾರದ ಶಿಲ್ಪವಿದೆ. ಈ ಶಿಲ್ಪವು ೨ನೇ ಗುಹೆಯಲ್ಲಿರುವ ಶಿಲಾಮೂರ್ತಿಯನ್ನೇ ಹೋಲುವುದಾದರೂ ಇದಕ್ಕಿಂತ ಭವ್ಯವಾಗಿದೆ. ಇದರ ಕಿರೀಟದ ಕೆತ್ತನೆ ಅತ್ಯಂತ ಅಲಂಕೃತವಾಗಿದೆ.
 ಈ ಗುಹೆಯ ಒಳ ಭಾಗದ ಗೋಡೆಯ ಮೇಲೆ ಕ್ರಿ.ಶ. ೬ನೇ ಶತಮಾನದ ಕೆಲವು ವರ್ಣಚಿತ್ರಗಳು ನಯನ ಮನೋಹರವಾಗಿವೆ. ಇಲ್ಲಿ ಉತ್ತಮವಾದ ಬಣ್ಣಗಳ ಜೋಡಣೆ, ಬಣ್ಣಗಳ ಸ್ವಾರಸ್ಯಕರ ಸಮ್ಮಿಳನ, ನಿಪುಣ ಕೈಗಳ ಕುಂಚದ ಎಳೆತಗಳಿಂದಾಗಿ ಇಲ್ಲಿನ ವರ್ಣ ಚಿತ್ರಗಳು ಯೂರೋಪಿನ ಉತ್ತಮೋತ್ತಮ ಚಿತ್ರಗಳಿಗೆ ಸಮನಾಗಿವೆ. ಗುಹೆಯ ಒಳಗಿನ ಶಿಲ್ಪಗಳಿಗೂ ಬಣ್ಣ ಲೇಪಿಸುತ್ತಿದ್ದರೆಂಬುದಕ್ಕೆ ಈಗಲೂ ವಿಗ್ರಹಗಳ ಮೇಲೆ ಅಲ್ಲಲ್ಲಿ ಉಳಿದಿರುವ ಕೆಂಪು ಬಣ್ಣಗಳೇ ಸಾಕ್ಷಿಯಾಗಿವೆ.
ಮೊಗಸಾಲೆಯಲ್ಲಿ ಚೌಕಾಕಾರವಾದ ೬ ಕಂಭಗಳಿವೆ. ಅವುಗಳ ಮೇಲೆ ನಾನಾ ರೀತಿಯಲ್ಲಿ ನಿಂತಿರುವ ಸುಮಾರು ೧ ಮೀಟರ್ ಎತ್ತರದ ಸುಂದರ ಮದನಿಕಾ ವಿಗ್ರಹಗಳನ್ನು ಕೆತ್ತಲಾಗಿದೆ. ಒಂದನೇ ಕಂಭದ ಮೇಲೆ ಗಿಡದ ನೆರಳಲ್ಲಿ ನಿಂತ ದಂಪತಿಯರ ಜೋಡು ಶಿಲ್ಪ, ನಾಗದಂಪತಿಗಳು, ದರ್ಪಣವನ್ನು ನೋಡಿ ತಲೆಗೂದಲನ್ನು ಸರಿಪಡಿಸಿಕೊಳ್ಳುತ್ತಿರುವ ಸ್ತ್ರೀ, ಶಿವನು ಸೋಮಪಾನ ಮಾಡಿದ ಪಾರ್ವತಿಯನ್ನು ಎತ್ತಿ ಹಿಡಿದದ್ದು, ಚೆಲ್ಲಿದ ಸೋಮರಸವನ್ನು ನೆಕ್ಕುತ್ತಿರುವ ನಾಯಿ, ಮತ್ತಿನಿಂದ ಒಂದು ಪಾದ ಸೊಟ್ಟಾಗಿ ನಿಂತ ಪಾರ್ವತಿ, ಮೊದಲಾದ ಶಿಲ್ಪಗಳು ಆಕರ್ಷಣೀಯವಾಗಿವೆ. ಎರಡನೇ ಕಂಭದಲ್ಲಿ ಗಿಡದ ಕೆಳಗೆ ಅರ್ಧನಾರೀಶ್ವರನು ತ್ರೀಭಂಗಿಯಲ್ಲಿ ನಿಂತಿರುವ ಮತ್ತೊಂದು ಮಗ್ಗುಲಲ್ಲಿ ಮಾವಿನ ಗಿಡದ ಮೇಲೆ ಮಂಗಗಳು ಕುಳಿತಿವೆ. ಗಿಡದ ಬುಡದಲ್ಲಿ ಒಬ್ಬ ಸ್ತ್ರೀ ನಿಂತಿದ್ದು ಅವಳ ಪಕ್ಕದಲ್ಲಿ ಕುಬ್ಜವಾದ ಮೂರ್ತಿ ಮೊದಲಾದ ಶಿಲ್ಪಗಳಿವೆ. ಮೂರನೇ ಕಂಭದಲ್ಲಿ ಗಿಡದ ಕೆಳಗೆ ನಿಂತಿರುವ ಮತ್ತೊಂದು ದಂಪತಿಯ ಶಿಲ್ಪವಿದೆ. ಇನ್ನೊಂದು ಮಗ್ಗುಲಲ್ಲಿ ಪ್ರೇಮಿಗಳು ಮಾವಿನ ಮರದ ಕೆಳಗೆ ನಿಂತಿದ್ದಾರೆ. ನಾಲ್ಕನೇ ಕಂಭದಲ್ಲಿ ಬಿಲ್ಲನ್ನು ಹಿಡಿದ ಕಾಮನು ಒಂದು ಗಿಡದ ಕೆಳಗೆ ನಿಂತಿರುವನು. ಇವನ ಕೈಯಲ್ಲಿ ಬಾಣವಿದ್ದು ಹಿಂದೆ ಮಕರ ಧ್ವಜಗಳಿವೆ. ರತಿಯ ತುರುಬು ಬೆನ್ನಿನ ಮೇಲೆ ಜೋತು ಬಿದ್ದಿದೆ. ಮತ್ತೊಂದು ಮಗ್ಗುಲಲ್ಲಿ ಒಬ್ಬ ಸ್ತ್ರೀ ಗಿಡದ ಟೊಂಗೆಯನ್ನು ಹಿಡಿದು ನಿಂತಿರುವಳು. ಪಶ್ಚಿಮ ಗೋಡೆಯ ಅರ್ಧ ಕಂಭದ ಮೇಲೆ ನಿಂತ ದಂಪತಿಗಳ ಮಿಥುನ ಶಿಲ್ಪವಿದೆ. ಸ್ತ್ರೀಯ ಕೇಶವು ಸುಧೀರ್ಘವಾಗಿದೆ.
ಮೊಗಸಾಲೆಯ ಗೋಡೆಯಲ್ಲಿ ಸುಮಾರು ೩.೪ ಮೀಟರ್ ಎತ್ತರವಿರುವ ನರಸಿಂಹನ ಉಬ್ಬು ಶಿಲ್ಪವಿದೆ. ನರಸಿಂಹನು ನಿಂತ ಭಂಗಿ ಮತ್ತು ಅವನ ತೆರೆದ ಕಣ್ಣುಗಳು ಅವನ ಉಗ್ರರೂಪ ಹಾಗೂ ಗಾಂಭೀರ್ಯವನ್ನು ಸೂಚಿಸುತ್ತವೆ. ಈ ಶಿಲಾಮೂರ್ತಿಯಿರುವ ಬಲಭಾಗದ ಗೋಡೆಯ ಮೇಲೆ ಸುಮಾರು ಅಷ್ಟೇ ಆಕಾರದ ಹರಿಹರ ಮೂರ್ತಿಯಿದೆ. ಇದರ ಬಲಭಾಗ ಶಿವನದು ಹಾಗೂ ಎಡಭಾಗ ವಿಷ್ಣುವಿನದು ಇದೇ ಮೊಗಸಾಲೆಯ ಬಲಭಾಗದ ದಕ್ಷಿಣ ಗೋಡೆಯ ಮೇಲೆ ವರಾಹ ಮೂರ್ತಿಯ ಪೃಥ್ವಿಯನ್ನು ಎಡಗೈಯಲ್ಲಿ ಎತ್ತಿಕೊಂಡು ನಿಂತಿದ್ದಾನೆ. ವರಾಹನ ತಲೆಯ ಮೇಲೆ ಕಿರೀಟವಿದೆ. ತನ್ನ ಎಡಗಾಲನ್ನು ಒಬ್ಬ ನಾಗನ ಮೇಲಿಟ್ಟು ನಿಂತಿದ್ದಾನೆ ವರಾಹ ಮೂರ್ತಿಯ ಹತ್ತಿರದ ಗೋಡೆಯ ಮೇಲೆ ಐದು ಹೆಡೆಯ ಶೇಷನ ಮೇಲೆ ಕುಳಿತಿರುವ ವಿಷ್ಣು/ ಪರವಾಸುದೇವನ ಶಿಲ್ಪವಿದೆ.
ಈ ಗುಹೆಯ ಮೊಗಸಾಲೆಯ ಮೇಲ್ಭಾಗದಲ್ಲಿದ್ದ ತೊಲೆಗಳ ಮೇಲೆ ಸಮುದ್ರ ಮಥನ, ಶೇಷಶಾಯಿ (ವಿಷ್ಣು) ಕೃಷ್ಣಲೀಲೆ ಮುಂತಾದ ದೃಶ್ಯಗಳಿವೆ. ಮೊಗಸಾಲೆ ಮತ್ತು ನವರಂಗ ಭಾಗವು ಸುಮಾರು ೨೦೦ ಜನ ಕೂಡಬಹುದಾದಷ್ಟು ವಿಶಾಲವಾಗಿದೆ.
ನಾಲ್ಕನೇ ಗುಹೆ (ಜೈನ ಗುಹೆಕ್ರಿ.೮ನೇ ಶತಮಾನ
 ಇದು ಒಂದು ಜಿನಾಲಯ. ಇದು ಇಲ್ಲಿಯ ಎಲ್ಲ ಗುಹೆಗಳಿಗಿಂತ ಮೇಲ್ಭಾಗದಲ್ಲಿದೆ. ಆದುದರಿಂದ ಇದಕ್ಕೆ ಮೇಗಣ ಬಸದಿ ಎಂದು ಕರೆಯುತ್ತಿದ್ದು ಕಾಲಕ್ರಮೇಣ “ಮೇಣಬಸದಿ” ಎಂದು ಹೆಸರು ರೂಢಿಗಿಳಿದಿದೆ. ಈ ಗುಹೆಯ ಹೊರಭಾಗಕ್ಕೆ “ಶ್ರೀ ಪ್ರಸನ್ನ ಬುದ್ಧಿ” ಮುಂತಾದ ೭-೮ನೇ ಶತಮಾನದ ೧ ಸಾಲಿನ ಶಾಸನವಿದೆ. ಈ ಗುಹೆಯು ಮೊದಲು ಅಪೂರ್ಣವಾಗಿದ್ದು, ಅದರಲ್ಲಿಯ ಅನೇಕ ಮೂರ್ತಿಗಳು ಕ್ರಿ.ಶ. ೧೨ನೇ ಶತಮಾನದಲ್ಲಿ ರಚಿತವಾಗಿದೆಯೆಂದು ವಿದ್ವಾಂಸರ ಅಭಿಪ್ರಯ. ಇದು ಉತ್ತರಕ್ಕೆ ಮುಖ ಮಾಡಿದೆ. ನವರಂಗದ ಪಶ್ಚಿಮ ಗೋಡೆಯ ಮೇಲೆ ಪಾರ್ಶ್ವನಾಥನ ನಿಂತಿರುವ ದೊಡ್ಡ ದಿಗಂಬರ ಮೂರ್ತಿಯಿದೆ. ಇದರ ಬಳಿಯೇ ೨೪ ಜಿನಬಿಂಬಗಳಿವೆ. ಮಂಟಪದ ಬಲಭಾಗದಲ್ಲಿ ಸುಮಾರು ೨.೧ ಮೀಟರ್ ಎತ್ತರವಾದ ಮಹಾವೀರ ತೀರ್ಥಂಕರನ ನಿಂತ ಮೂರ್ತಿಯಿದೆ. ಗರ್ಭಗುಡಿಯ ಬಲಭಾಗದಲ್ಲಿ ಪದ್ಮಾವತಿಯ ಆಸೀನ ಮೂರ್ತಿಯಿದೆ.
ಈ ಗುಹೆಯಿಂದ ನಿಸರ್ಗವನ್ನು ವೀಕ್ಷಿಸಿದರೆ ಕೆಳಗಿರುವ ವಿಶಾಲವಾದ ಸರೋವರ, ಭೂತನಾಥ ಗುಡಿಗಳ ಗುಂಪು, ಮಾಲಗಿತ್ತಿ ಶಿವಾಲಯ, ಉತ್ತರ ದಿಕ್ಕನ ಗುಡ್ಡದಲ್ಲಿರುವ ಮೇಗಣ ಮತ್ತು ಕೆಳಗಣ ಶಿವಾಲಯ ಮುಂತಾದವನ್ನು ನೋಡಬಹುದು.
ಮಾಲಗಿತ್ತಿ ಶಿವಾಲಯ
ಬಾದಾಮಿಯಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯ ಇದು. ಒಂದು ದೊಡ್ಡ ಬಂಡೆಗಲ್ಲಿನ ಮೇಲೆ ಬಾದಾಮಿ ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಿದ್ದು ಪೂರ್ವಕ್ಕೆ ಮುಖ ಮಾಡಿದೆ. ಮುಖಮಂಟಪಕ್ಕೆ ಹೋಗುವ ಬಾಗಿಲ ಬಲಗಡೆಯಲ್ಲಿರುವ ಶಾಸನದಲ್ಲಿ ಆರ್ಯಮಿಂಚಿ ಉಪಾಧ್ಯಾಯನೆಂಬ ಅಧಿಕಾರಿಯು ಈ ದೇವಾಲಯ ನಿರ್ಮಿಸಿದನೆಂದು ಉಲ್ಲೇಖಿಸಿದೆ. ಹೊರಗೋಡೆಗಳ ಮೇಲೆ ಶಿವ, ವಿಷ್ಣುವಿನ ಮೂರ್ತಿಗಳಿವೆ. ಗರ್ಭಗೃಹದ ವಾಣಿಪೀಠದ ಮೇಲೆ ಬಾಣಲಿಂಗವಿದೆ. ಮೇಲ್ಭಾಗದಲ್ಲಿ ದ್ರಾವಿಡ ಶೈಲಿಯ ಅಷ್ಟಕೋನಾಕಾರದ ಶಿಖರವಿದೆ.
ಎಡಭಾಗದ ಎತ್ತರವಾದ ಕಿರು ಬೆಟ್ಟದ ಭಾಗದಲ್ಲಿ ಚಾಲುಕ್ಯ ಕಾಲದ ಕೆಳಗಣ ಶಿವಾಲಯವಿದೆ. ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ಟಿಪ್ಪು ಸುಲ್ತಾನನ ಕಾಲದ ಫಿರಂಗಿ ಹಾಗೂ ಕಾವಲು ಗೋಪುರಗಳಿವೆ. ಇದರ ಎದುರು ಬೆಟ್ಟದಲ್ಲಿ ಬಾದಾಮಿ ಕಾಲದ ಅರಮನೆಯಿದ್ದು ನೆಲಗಟ್ಟುಗಳು ಹಾಗೂ ವಸತಿಗೃಹಗಳ ನೆಲೆಗಟ್ಟುಗಳು ಕಂಡು ಬರುತ್ತವೆ.
ಭೂತನಾಥ ಗುಡಿಗಳ ಗುಂಪು
 ಪುಷ್ಕರಣಿಯ ಪಕ್ಕದಲ್ಲಿ ನಡೆದು ಹೋದರೆ ಭೂತನಾಥ ಗುಡಿಗಳ ಗುಂಪು ಇದೆ. ಈ ಗುಂಪುಗಳಲ್ಲಿ ಭೂತನಾಥ ಗುಡಿಯೇ ದೊಡ್ಡ ದೇವಾಲಯವಾಗಿದೆ. ಗರ್ಭಗುಡಿಯ ಬಾಗಿಲವಾಡದ ಒಂದು ಪಕ್ಕದಲ್ಲಿ ಗಂಗಾ-ಯಮುನೆಯರ ಆಕರ್ಷಕ ಶಿಲ್ಪಗಳಿವೆ. ಗರ್ಭಗೃಹದ ಮೇಲೆ ದ್ರಾವಿಡ ಶಿಖರವಿದೆ. ಈ ಗುಡಿಯ ಪಕ್ಕದಲ್ಲಿ ೧೦-೧೧ನೇ ಶತಮಾನದ ಒಂದು ದೇವಾಲಯವಿದೆ. ಇದರ ಮಂಟಪವು ನಾಲ್ಕು ದಂಡನೆಯ ಕಂಭಗಳ ಮೇಲೆ ನಿಂತಿದೆ. ಇದರ ಗರ್ಭಗುಡಿಯಲ್ಲಿ ಬೆತ್ತಲೆಯಾದ ಭಗ್ನವಾದ ಲಾಕುಳೀಶನ ಕುಳಿತ ಮೂರ್ತಿಯನ್ನಿಟ್ಟಿದೆ. ಈ ಗುಡಿಯ ಹತ್ತಿರವೇ ಆಗ್ನೇಯಕ್ಕೆ ಒಂದು ದೊಡ್ಡ ಬಂಡೆಕಲ್ಲಿನ ಮೇಲೆ ಲಿಂಗಗಳು, ವಿಷ್ಣು ನರಸಿಂಹ, ಮಹಿಷಾಸುರ ಮರ್ಧಿನಿ ಮೊದಲಾದ ಆಕರ್ಷಕ ಶಿಲ್ಪಗಳಿವೆ. ಇದರ ಸಮೀಪದಲ್ಲೇ ಒಂದು ಸ್ವಾಭಾವಿಕ ಗುಹೆ ಇದೆ. ಇದರಲ್ಲಿ ಸಿಂಹಾಸನದ ಮೇಲೆ ಕುಳಿತ ಶಿಲಾಮೂರ್ತಿ ಇದೆ. ಇದನ್ನು ಕೋಷ್ಠರಾಯನ ಮೂರ್ತಿ ಎನ್ನುವರಾದರೂ ಇದು ತೀರ್ಥಂಕರನ ಮೂರ್ತಿಯಂತಿದೆ.
ಎರಡನೇ ಗುಂಪಿನ ಭೂತನಾಥ ದೇವಾಲಯಗಳು ಸಾಮಾನ್ಯವಾಗಿ ದಕ್ಷಿಣಕ್ಕೆ ಮುಖ ಮಾಡಿವೆ. ಇವುಗಳಲ್ಲಿ ಬೃಹತ್ ಕಟ್ಟಡ ಹೊಂದಿದ ಶೈವ ದೇವಾಲಯವು ದ್ರಾವಿಡ ವಾಸ್ತು ಶೈಲಿಯಲ್ಲಿದ್ದು, ನೆಲದಿಂದ ಸುಮಾರು ೩ ಮೀಟರ್ ಎತ್ತರವಿರುವ ಜಗತಿಯ ಮೇಲೆ ಕಟ್ಟಲಾಗಿದೆ.
ಪ್ರಾಚ್ಯವಸ್ತು ಸಂಗ್ರಹಾಲಯ

ಕುಬ್ಜಗಣಗಳು, ಬಾದಾಮಿ
ಭಾರತದ ಪ್ರಾಚೀನ ವಸ್ತು ಸರ್ವೇಕ್ಷಣ ಇಲಾಖೆಯವರು ಈ ವಸ್ತು ಸಂಗ್ರಹಾಲಯವನ್ನು ಬಾದಾಮಿಯಲ್ಲಿ ಸ್ಥಾಪಿಸಿದ್ದಾರೆ. ಇಲ್ಲಿರುವ ಸುಂದರ ಸರೋವರದ ಉತ್ತರ ದಿಕ್ಕಿಗೆ ಈ ವಸ್ತು ಸಂಗ್ರಹಾಲಯವಿದೆ. ಬಾದಾಮಿ, ಸಿದ್ದನಕೊಳ್ಳ, ಪಟ್ಟದಕಲ್ಲು, ಮುಂತಾದ ಸ್ಥಳಗಳಿಂದ ತಂದ ಸುಮಾರು ೪೫ ಪ್ರಾಚ್ಯ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
ಬಾದಾಮಿಯಲ್ಲಿ ಸುಮಾರು ೨೫೦ ಶಾಸನಗಳಿವೆ. ಇವು ಕ್ರಿ.ಶ. ೫೪೩ ರಿಂದ ೧೬-೧೭ ನೇ ಶತಮಾನದವರೆಗಿನ ಶಾಸನಗಳಾಗಿವೆ. ಕ್ರಿ.ಶ. ೭೦೦ ರಲ್ಲಿ ರಚಿತವಾದ ಕಪ್ಪೆ ಅರಭಟನ ಶಾಸನ ಅತ್ಯಂತ ಪ್ರಮುಖ ಶಾಸನವಾಗಿದೆ. ಕನ್ನಡದ ಮೊದಲ ತ್ರಿಪದಿ ಇದಾಗಿದ್ದು, ಉತ್ತಮ ಭಾಷಾ ಸೌಂದರ್ಯಕ್ಕೆ, ಕನ್ನಡಿಗರ ಸ್ವಾಭಿಮಾನಕ್ಕೆ ಉತ್ತಮ ನಿದರ್ಶನವಾಗಿದೆ.
ಪುಸ್ತಕ: ಚಿಣ್ಣರ ಜಿಲ್ಲಾ ದರ್ಶನ – ಬಾಗಲಕೋಟೆ
ಪ್ರಕಾಶಕರು: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ
For North Karnataka News visit www.uksuddi.in

Comments