ಗದಗ್ನಲ್ಲೊಂದು ಕೂಡು ಕುಟುಂಬ: ಒಂದೇ ಸೂರಿನಡಿ 91 ಜನರ ವಾಸ
ಈ ಕುಟುಂಬದಲ್ಲಿ ಬರೋಬ್ಬರಿ 91 ಜನರಿದ್ದಾರೆ. ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಮನೆಗೆಲಸ, ಕೃಷಿ ಕೆಲಸ ಅಂತೆಲ್ಲ ಎಲ್ಲರೂ ಒಂದಾಗಿ ಬದುಕಿನ ಬಂಡಿ ಸಾಗಿಸ್ತಿದ್ದಾರೆ.
ಇದು ಗದಗ ಜಿಲ್ಲೆಯ ರೋಣ ತಾಲೂಕಿನ ಮೆಗೂರ ಗ್ರಾಮದ ಗಡ್ಡಿ ಎಂಬುವರ ಮನೆ. ಗಡ್ಡಿ ಕುಟುಂಬದಲ್ಲಿ ಮೂಲವಾಗಿ ಇಬ್ಬರು ಸಹೋದರರು. ಒಬ್ಬನಿಗೆ ಐದು ಜನ ಮಕ್ಕಳು. ಮತ್ತೊಬ್ಬರಿಗೆ ಒಬ್ಬರು. ಇವರಿಗೆ ಒಟ್ಟು 13 ಜನ ಮಕ್ಕಳು. ಈಗ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಸೇರಿ 91 ಜನರು ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಈ ಕುಟುಂಬಕ್ಕೆ 160 ಎಕರೆ ಜಮೀನು ಇದೆ. ಅಣ್ಣ ತಮ್ಮಂದಿರು ಹಾಗೂ ಮನೆಯ ಮಹಿಳೆಯರು ಸಹ ಎಲ್ಲರೂ ಕೃಷಿ, ಮನೆಗೆಲಸ ಮಾಡುತ್ತಿದ್ದಾರೆ.
‘ಎಲ್ಲರು ಒಂದೇ ಸೂರಿನಡಿ ಬೇಧ ಭಾವವಿಲ್ಲದೆ ಒಂದಾಗಿ ಬದುಕಿನ ಬಂಡಿ ಸಾಗಿಸುತ್ತೇವೆ. ಮನೆಯಲ್ಲಿ ಎಲ್ಲರು ಹಿರಿಯರ ಮಾತು ಮೀರದಂತೆ ಮಾತಿಗೆ ಬೆಲೆ ಕೊಟ್ಟು ಹೇಳಿದ ಹಾಗೆ ಕೇಳುತ್ತಾರೆ’ ಎನ್ನುತ್ತಾರೆ ಮನೆಯ ಯಜಮಾನ ಹುಚ್ಚಪ್ಪ ಗಡ್ಡಿ.
ಈ ಕುಟುಂಬದಲ್ಲಿ 5 ಜನ ಚಿಕ್ಕಮ್ಮಂದಿರು, 13 ಜನ ಸೊಸೆಯಂದಿರು ಇದ್ದಾರೆ. ಪ್ರತಿನಿತ್ಯವೂ ಮನೆಯಲ್ಲಿ 500 ರಿಂದ 600 ರೊಟ್ಟಿ, 25 ಕೆಜಿ ಅನ್ನ ತಯಾರಾಗುತ್ತೆ. ಎಲ್ಲವನ್ನೂ ಮನೆಯ ಜನರೇ ಮಾಡ್ತಾರೆ. ಮನೆಯಲ್ಲಿ ಎಲ್ಲರೂ ಒಂದಾಗಿ ಊಟ ಮಾಡುತ್ತಾರೆ. ಚಿಕ್ಕ ಸಂಸಾರದಿಂದ ಬಂದ ಸೊಸೆಯರು ಸಹ ಇಲ್ಲಿ ಖುಷಿಯಾಗಿದ್ದಾರೆ.
ಮೊದಲು ನಮ್ಮನ್ನು ಈ ಅವಿಭಕ್ತ ಕುಟುಂಬಕ್ಕೆ ಮದುವೆ ಮಾಡಿ ಕೊಡುತ್ತಾರೆ ಎಂದಾಗ ನನಗೆ ಭಯವಾಗಿತ್ತು. ಅಲ್ಲಿ ಎಲ್ಲರೊಂದಿಗೆ ಹೇಗೆ ಇರಬೇಕು ಎಂದು ಅಂದುಕೊಂಡಿದ್ದೆವು. ಆದರೆ ಇಲ್ಲಿ ಬಂದ ಮೇಲೆ ನನಗೆ ನಮ್ಮ ಮನೆಯಲ್ಲಿಯೇ ಇದ್ದಂತೆ ಅತ್ತೆ ಮಾವಂದಿರು ಪ್ರೀತಿಯಿಂದ ಕಾಣುತ್ತಾರೆ. ಈ ಮನೆಯಲ್ಲಿ ಎಲ್ಲರು ಸಂತೋಷದಿಂದ ಇದ್ದೇವೆ ಎನ್ನುತ್ತಾರೆ ಮನೆಯ ಸೊಸೆಯಂದಿರು.
ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಅನ್ನೋದು ತೀರಾ ವಿರಳವಾಗುತ್ತಿವೆ. ಹುಟ್ಟುತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಹಾಗೆ ಅಣ್ಣತಮ್ಮಂದಿರೆಲ್ಲ ಬೇರೆಬೇರೆ ಆಗಿ ಬದುಕು ಸಾಗಿಸ್ತಿದ್ದಾರೆ. ಆದ್ರೆ ಮೆಗೂರ ಗ್ರಾಮದಲ್ಲಿರೋ ಗಡ್ಡಿ ಕುಟುಂಬ. ಒಂದೇ ಸೂರಿನಡಿ 91 ಜನರು ವಾಸವಾಗಿದ್ರೂ ಕಿಂಚಿತ್ತೂ ಜಗಳ, ಗಲಾಟೆ ಇಲ್ಲದೆ ಬದುಕಿನ ಬಂಡಿ ಸಾಗಿಸ್ತಿದು ನಿಜಕ್ಕೂ ಮಾದರಿ ಕುಟುಂಬವಾಗಿದೆ.
Courtesy: Eenadu