UK Suddi
The news is by your side.

ತಂಡಕ್ಕೆ ಒಳಿತಾಗುವುದಾದರೆ ರಾಜೀನಾಮೆಗೆ ಸಿದ್ಧ: ದೋನಿ

ಮೀರ್‌ಪುರ (ಪಿಟಿಐ): ನಾಯಕತ್ವ ಬದಲಾವಣೆಯಾದರೆ ಭಾರತ ಕ್ರಿಕೆಟ್ ತಂಡಕ್ಕೆ ಅನುಕೂಲ ಆಗುವುದಾದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಹೇಳಿದ್ದಾರೆ.

ಭಾನುವಾರ ನಡೆದ ಬಾಂಗ್ಲಾ ವಿರುದ್ಧದ ಏಕ ದಿನ ಸರಣಿಯಲ್ಲಿ ಸೋಲನುಭವಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತೀಯ ಕ್ರಿಕೆಟ್ ತಂಡದಲ್ಲಿ ನಡೆಯುವ ಅಹಿತಕರ ಬೆಳವಣಿಗೆಗಳಿಗೆ ನಾನೇ ಹೊಣೆ. ಈ ಎಲ್ಲಾ ತಪ್ಪುಗಳಿಗೂ ನಾನೊಬ್ಬನೇ ಕಾರಣ. ಬೇರಾರೂ ಅಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ನಾನು ಕ್ರಿಕೆಟ್ ನಿಂದ ಸಂತೋಷ ಗಳಿಸಿದ್ದೇನೆ. ಆದರೆ, ಇದೀಗ ಇದ್ದಕ್ಕಿದ್ದಂತೆ ನಾಯಕತ್ವದ ಪ್ರಶ್ನೆ ಎದ್ದಿದೆ. ನಾಯಕ ಸ್ಥಾನಕ್ಕೆ ನನ್ನ ರಾಜೀನಾಮೆಯಿಂದ ಭಾರತ ಕ್ರಿಕೆಟ್ ತಂಡಕ್ಕೆ ಒಳಿತಾಗುವುದಾದರೆ ಮತ್ತು ಎಲ್ಲ ಅಹಿತಕರ ಬೆಳವಣಿಗೆಗಳಿಗೆ ನಾನೇ ಕಾರಣ ಎನ್ನುವುದಾದರೆ ರಾಜೀನಾಮೆ ನೀಡಲೂ ಸಿದ್ಧನಿದ್ದೇನೆ. ತಂಡದ ಒಬ್ಬ ಸಾಮಾನ್ಯ ಆಟಗಾರನಾಗಿ ಮುಂದುವರಿಯುತ್ತೇನೆ ಎಂದಿದ್ದಾರೆ.

ತಂಡಕ್ಕೆ ನಾಯಕ ಯಾರಾಗುತ್ತಾರೆ ಎಂಬ ಕುರಿತು ನಾನು ತಲೆಕೆಡಿಸಿಕೊಂಡವನಲ್ಲ. ತಂಡಕ್ಕೆ ನಾಯಕನಾಗಬೇಕು ಎಂದು ನಾನು ಬಯಸಿದವನೂ ಅಲ್ಲ. ತಂಡದ ನಾಯಕತ್ವ ಎಂಬುದು ನನಗೆ ಒಂದು ಉದ್ಯೋಗ ಅಥವಾ ಜವಾಬ್ದಾರಿ ಆಗಿತ್ತಷ್ಟೆ. ನಾಯಕತ್ವದ ಜವಾಬ್ದಾರಿಯನ್ನು ನನ್ನಿಂದ ಕಿತ್ತುಕೊಳ್ಳಲು ಇಚ್ಚಿಸಿದ್ದೇ ಆದರೆ ನನ್ನದೇನೂ ಅಭ್ಯಂತರವಿಲ್ಲ ಎಂದು ಅವರು ಹೇಳಿದ್ದಾರೆ
Courtesy: Prajawani

For North Karnataka News visit www.uksuddi.in

Comments