UK Suddi
The news is by your side.

ಹಂಪಿಯಲ್ಲಿ ಅಪರೂಪದ ಶಿಲ್ಪಕಲಾಕೃತಿ ಪತ್ತೆ

ಬಳ್ಳಾರಿ: ಸಸ್ಯ- ತರಗೆಲೆ ರಾಶಿಯ ಅಡಿಯಲ್ಲಿ ಹೂತುಹೋಗಿದ್ದ ಗುಹಾಲಯ, ಅದರಲ್ಲಿ ಅಪರೂಪದ ಶಿಲ್ಪ ಕಲಾಕೃತಿ. ಬಂಡೆಯೊಂದರಲ್ಲಿ ಧನ್ವಂತರಿ ರೂಪದ ವಿಷ್ಣು, ರಾಜ ಉಡುಪಿನಲ್ಲಿ ಬಾಣ ಬಿಡುತ್ತಿರುವ ರಾಮ, ಪಕ್ಕದಲ್ಲೇ ಲಕ್ಷ್ಮಣ, ಹಿನ್ನೆಲೆಯಲ್ಲಿ ಹನುಮಂತ.

ಹಂಪಿಯ ಗಂಧಮಾದನ ಬೆಟ್ಟದಲ್ಲಿ ಈ ಅಪರೂಪದ ಶಿಲ್ಪ ಕಲಾಕೃತಿಗಳು, ಕಲ್ಲಿನ ಗುಹಾಲಯ ಪತ್ತೆಯಾಗಿದೆ. ಭಾರತದ ಪ್ರಾಕ್ತನ ಸಮೀಕ್ಷೆಯ (ಎಎಸ್​ಐ) ಮಾಜಿ ಅಧಿಕಾರಿ ಟಿ.ಎಂ. ಕೇಶವ ಮತ್ತು ಅವರ ತಂಡ ಇತ್ತೀಚೆಗೆ ಇವುಗಳನ್ನು ಪತ್ತೆ ಹಚ್ಚಿದೆ.

ವಿಷ್ಣು, ರಾಮ ಲಕ್ಷ್ಮಣರ ಶಿಲ್ಪ ಕಲಾಕೃತಿಗಳ ಬಳಿಯಲ್ಲೇ ಶಿಲಾ ಗುಹಾಲಯ. ಅದರ ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ಸರ್ಪ, ಇಕ್ಕೆಲಗಳಲ್ಲಿ ಸೂರ್ಯ ಮತ್ತು ಚಂದ್ರರ ಲಾಂಛನಗಳನ್ನು ತಂಡ ಪತ್ತೆ ಮಾಡಿದೆ.

‘ಈ ಶಿಲ್ಪ ಕಲಾಕೃತಿಗಳು ಸಸ್ಯಗಳ ಮಧ್ಯೆ ದಪ್ಪನೆಯ ತರಗೆಲೆ ಪದರದ ಅಡಿಯಲ್ಲಿ ಹೂತುಹೋಗಿದ್ದವು. ಇವು ಬಹುಶಃ ವಿಜಯ ನಗರ ಕಾಲದಷ್ಟು ಹಳೆಯವಾಗಿರಬಹುದು’ ಎಂದು ಹಂಪಿಯಲ್ಲಿ ಹಲವಾರು ಶೋಧಗಳನ್ನು ನಡೆಸಿರುವ ಕೇಶವ ಹೇಳಿದ್ದಾರೆ.

‘ವಿಷ್ಣು ಶಿಲ್ಪದ ಮುಖ ಮತ್ತು ಕಿರೀಟವು ‘ಅಮೃತ ಕಲಶ’ದಂತೆ ಕಾಣಿಸುತ್ತದೆ. ಉಭಯ ಕಡೆಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರ ಜೊತೆಗೆ ಕೈಗಳಲ್ಲಿ ‘ಶಂಖ’ ಮತ್ತು ‘ಚಕ್ರ’ಗಳನ್ನು ಹಿಡಿದುಕೊಂಡ ಧನ್ವಂತರಿ ವಿಷ್ಣು ಇರುವ ಶಿಲ್ಪ ಕಲಾಕೃತಿ ಅತ್ಯಂತ ಅಪರೂಪದ್ದು. ಇಂತಹ ಶಿಲ್ಪ ಕಲಾಕೃತಿಗಳು ಲಭಿಸಿದ್ದು ಬಹುಶಃ ಇದೇ ಮೊದಲು’ ಎಂದು ಕೇಶವ ನುಡಿದರು.

ಗುಹೆಯ ದಕ್ಷಿಣದಲ್ಲಿ ಬಂಡೆಯೊಂದರಲ್ಲಿ ಪೂರ್ವಕ್ಕೆ ಮುಖ ಮಾಡಿದ ನಂದಿಯ ಶಿಲ್ಪವನ್ನು ಕಾಣಬಹುದು.

ಮಹಾಮಂಟಪದ ಒಳಭಾಗವು ಮರಳು ಮತ್ತು ಅವಶೇಷಗಳಿಂದ ಮುಚ್ಚಲ್ಪಟ್ಟಿದೆ. ಇಲ್ಲಿಗೆ ಹೋಗಬೇಕಾದರೆ ತೆವಳಿಕೊಂಡು ಹೋಗಬೇಕಾಗುತ್ತದೆ. ಕಲ್ಲಿನಿಂದಲೇ ನಿರ್ಮಿಸಲಾದ ಶಿವ ದೇವಾಲಯದ ಮುಂಭಾಗದಲ್ಲಿ ‘ಗರುಡ’ ಕಂಭದ ಅವಶೇಷಗಳು ಕಾಣುತ್ತವೆ. ‘ಇಡೀ ನಿರ್ಮಾಣವೇ ವಿಜಯನಗರ ಕಾಲದ ಮಹತ್ವದ ಸಮುಚ್ಚಯದಂತೆ ಕಾಣುತ್ತದೆ. ಇನ್ನಷ್ಟು ಸಂಶೋಧನೆಯಿಂದ ವಿಜಯನಗರದ ಶಿಲ್ಪಕಲಾ ಇತಿಹಾಸದ ಹೊಸ ವಿಷಯಗಳು ಹೊರಬರಬಹುದು’ ಎಂದು ಕೇಶವ ಹೇಳಿದರು.

Vijayavani

For North Karnataka News visit www.uksuddi.in

Comments