UK Suddi
The news is by your side.

ಭೂಮಿಗೆ ಅಪ್ಪಳಿಸಿದೆ ಭಾರಿ ಸೌರ ಬಿರುಗಾಳಿ

ಸೂರ್ಯನಿಂದ ಹೊರಟಿರುವ ಭಾರಿ ಸೌರ ಬಿರುಗಾಳಿ ಭೂಮಿಯನ್ನು ಅಪ್ಪಳಿಸಿದೆ. ಸೋಮವಾರ ಮಧ್ಯಾಹ್ನ ಸೂರ್ಯ ಮಧ್ಯಮ ಗಾತ್ರದ ಆಯಸ್ಕಾಂತೀಯ ಪ್ಲಾಸ್ಮಾವನ್ನು ಉಗುಳಿದ್ದು, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಭೂವಾತಾವರಣದ ಮೇಲ್ಪದರಕ್ಕೆ ಅಪ್ಪಳಿಸುತ್ತಿದೆ. ಇದರಿಂದಾಗಿ ಜಿಪಿಎಸ್, ವಿದ್ಯುತ್ ಸರಬರಾಜು ಸೇರಿದಂತೆ ನಾನಾ ಸೌಲಭ್ಯಗಳು ಅಡಚಣೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುವುದಾಗಿ ಅಮೆರಿಕದ ರಾಷ್ಟ್ರೀಯ ಕೊಲ್ಲಿ ಮತ್ತು ಭೂವಾತಾವರಣ ನಿರ್ವಹಣೆ ಸಂಸ್ಥೆ (ಎನ್​ಒಎಎ) ತಿಳಿಸಿದೆ.

2005ರ ಸೆಪ್ಟೆಂಬರ್​ನಂತರದಲ್ಲಿ ಎದ್ದಿರುವ ಸೌರ ಬಿರುಗಾಳಿ ಇದೆಂದು ಎನ್​ಒಎಎ ಹೇಳಿದೆ. ಸೋಮವಾರ ಎದ್ದಿರುವ ಈ ಬಿರುಗಾಳಿ ಬುಧವಾರ ಬೆಳಗಿನವರೆಗೆ ಮುಂದುವರಿಯುವ ಸಾಧ್ಯತೆ ಇರುವುದಾಗಿ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಸೌರ ಬಿರುಗಾಳಿಯಿಂದಾಗಿ ಭೂವಾತಾವರಣದ ಮೇಲ್ಪದರದಲ್ಲಿ ವಿಶೇಷವಾದ ಪ್ರಭೆ ಮೂಡುತ್ತದೆ. ಇದು ಕೆಂಪು ಬಣ್ಣದಲ್ಲಿದ್ದು ಸೌರ ಚಟುವಟಿಕೆ ತೀವ್ರಗೊಂಡಂತೆ ಪ್ರಭೆಯ ಬಣ್ಣ ಗಾಢವಾಗುತ್ತಾ ಹೋಗುತ್ತದೆ ಎಂದು ತಿಳಿಸಿದೆ.

ಸೌರ ಬಿರುಗಾಳಿಯ ವಿದ್ಯುದಾವೇಗ ಹೆಚ್ಚಾದಂತೆ ಭೂಮಿ ಮೇಲಿನ ದಿಕ್ಸೂಚಿ ವ್ಯವಸ್ಥೆ, ವಿದ್ಯುತ್ ಸರಬರಾಜು ವ್ಯವಸ್ಥೆ, ರೇಡಿಯಾ ಸಂವಹನವನ್ನು ಆಧರಿಸಿದ ನಾನಾ ಬಗೆಯ ಸೇವೆಗಳು ಅಡಚಣೆಗೆ ಒಳಗಾಗಲಿವೆ.

ಏನಿದು ಸೌರ ಬಿರುಗಾಳಿ: ಸೂರ್ಯ ಉಗುಳುವ ದೊಡ್ಡ ಪ್ರಮಾಣದ ಅನಿಲ ಮತ್ತು ಆಯಸ್ಕಾಂತೀಯ ಕ್ಷೇತ್ರಗಳು ಭಾರಿ ವೇಗವಾಗಿ ಸೌರ ಮಂಡಲವನ್ನು ಹಾದು ಭೂವಾತಾವರಣದ ಮೇಲ್ಪದರಕ್ಕೆ ಅಪ್ಪಳಿಸುತ್ತವೆ. ಇದನ್ನು ಸೌರ ಬಿರುಗಾಳಿ ಎಂದು ಕರೆಯಲಾಗುತ್ತದೆ.

Vijayavani

For North Karnataka News visit www.uksuddi.in

Comments