UK Suddi
The news is by your side.

ಮಳೆ ಜೋರು: ತುಂಬಿದ ನದಿಗಳು..

ಬೆಂಗಳೂರು: ಕೊಡಗು, ಚಿಕ್ಕಮಗಳೂರು,ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗಳವಾರವೂ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ.

ಪಶ್ಚಿಮಘಟ್ಟದ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು ಪ್ರವಾಹ ತಲೆದೋರಿದೆ. ರಾಜ್ಯದ ಎಲ್ಲ ಜಲಾಶಯಗಳಲ್ಲಿ ಒಳಹರಿವು ಹೆಚ್ಚಿದ್ದು, ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟದಲ್ಲಿ ಸತತ ಎರಡನೇ ದಿನವೂ ಐದು ಅಡಿಯಷ್ಟು ಹೆಚ್ಚಳವಾಗಿದೆ. ಸೋಮವಾರ ಸಂಜೆ 82 ಅಡಿ ಇದ್ದ ನೀರಿನ ಮಟ್ಟವು ಮಂಗಳವಾರ ಸಂಜೆಯ ವೇಳೆಗೆ 87 ಅಡಿ ದಾಟಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ಮಂಗಳವಾರ ಜಲಾಶಯಕ್ಕೆ 23,228 ಕ್ಯೂಸೆಕ್‌ ನೀರು ಹರಿದುಬಂದಿದೆ. ಹಾಸನ ಜಿಲ್ಲೆಯ ಯಗಚಿ ಜಲಾಶಯ, ಎಚ್‌.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ, ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್‌ಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಹಾಸನ ಜಿಲ್ಲೆಯ ವಿಷ್ಣುಸಮುದ್ರ ಕೆರೆ ಭರ್ತಿಯಾಗಿ ಕೋಡಿಬಿದ್ದಿದೆ.

ರಜೆ: ಭಾರಿ ಮಳೆಯ ಹಿನ್ನೆಲೆಯಲ್ಲಿ ಸಂಪೂರ್ಣ ಕೊಡಗು ಜಿಲ್ಲೆ, ಮೂಡಿಗೆರೆ ಮತ್ತು ಹೊಸನಗರಗಳಲ್ಲಿ ಬುಧವಾರ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಜಲಾಶಯಗಳ ಮಟ್ಟ ಏರಿಕೆ
ಹಾಸನ ಜಿಲ್ಲೆಯ ಯಗಚಿ ಜಲಾಶಯದ ಒಳಹರಿವಿನಲ್ಲಿ ಭಾರಿ ಏರಿಕೆಯಾಗಿದೆ. ಅಣೆಕಟ್ಟೆಯ ಎತ್ತರ 964.603 ಮೀಟರ್‌ ಆಗಿದ್ದು, ನೀರಿನ ಮಟ್ಟ 962.35 ಮೀ. ಆಗಿದೆ. ಅಣೆಕಟ್ಟೆಯ ಒಟ್ಟು ಸಾಮರ್ಥ್ಯ 3.60 ಟಿಎಂಸಿ ಆಗಿದ್ದು, ಸದ್ಯ 2.47 ಟಿಎಂಸಿ ನೀರು ಸಂಗ್ರಹಗೊಂಡಿದೆ.

ಕಬಿನಿ: ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ ಒಂದು ದಿನದ ಅಂತರದಲ್ಲೆ 4 ಅಡಿ ನೀರು ಸಂಗ್ರಹಗೊಂಡಿದ್ದು ಜಲಾಶಯ ಭರ್ತಿಯಾಗಲು ಕೇವಲ 10 ಅಡಿ ನೀರು ಬಾಕಿಯಿದೆ.

ಒಳ ಹರಿವು ಪ್ರಮಾಣ 19 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದ್ದು, ಸಂಗ್ರಹಣ ಮಟ್ಟದಲ್ಲಿ ಭಾರಿ ಏರಿಕೆ ಕಂಡು ಬಂದಿದೆ.
ಮಳೆ ಪ್ರಾರಂಭಕ್ಕೆ ಮುನ್ನ ಜಲಾಶಯದಲ್ಲಿ 2262 ಅಡಿ ನೀರಿದ್ದು, ಈಗ ಅದು 2273.5 ಅಡಿಗೆ ಏರಿದೆ. ಜಲಾಶಯದ ಒಳ ಹರಿವು 19 ಸಾವಿರ ಕ್ಯೂಸೆಕ್ ಇದ್ದು ಹೊರ ಹರಿವು 1ಸಾವಿರ ಕ್ಯೂಸೆಕ್ಸ್‌ ಆಗಿದೆ.

ಕೃಷ್ಣೆಗೆ ಹೆಚ್ಚಿದ ಒಳ ಹರಿವು: ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಸಮೀಪದ ಹಿಪ್ಪರಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದ್ದು ಮಂಗಳವಾರ 55 ಸಾವಿರ ಕ್ಯೂಸೆಕ್‌ ಒಳ ಹರಿವು ಇದ್ದು ಜಲಾಶಯದಿಂದ 70 ಸಾವಿರ ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ.
Courtesy: Prajawani

For North Karnataka News visit www.uksuddi.in

Comments