UK Suddi
The news is by your side.

ಕುಡಚಿ– ಬಾಗಲಕೋಟೆ ರೈಲು ಮಾರ್ಗ; ಶೀಘ್ರ ಕಾಮಗಾರಿಗೆ ಒತ್ತಾಯ

ಬನಹಟ್ಟಿ: ಕುಡಚಿ- ಬಾಗಲಕೋಟೆ ರೈಲು ಮಾರ್ಗವನ್ನು ರಾಯಚೂರುವರೆಗೆ ವಿಸ್ತರಿಸುವ ಜೊತೆಗೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಸರ್ಕಾರವನ್ನು ಈ ಭಾಗದ ಜನಪ್ರತಿನಿಧಿಗಳು ಒತ್ತಾಯಿಸಬೇಕು ಎಂದು ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ ಖಾಜಿ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1909ರಲ್ಲಿ ಜಮಖಂಡಿ ಸಂಸ್ಥಾನಿಕರು ಬಾಗಲಕೋಟೆ– ಕುಡಚಿ ರೈಲು ಮಾರ್ಗವನ್ನು ನಿರ್ಮಾಣ ಮಾಡಬೇಕು ಎಂದು ಬ್ರಿಟಿಷ್‌ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ನಂತರ 1911ರಲ್ಲಿ ಸರ್ಕಾರ ಪರಿಶೀಲನೆ ನಡೆಸಿತು. ನಂತರ 1920ರಲ್ಲಿ ದ್ವಿತೀಯ ಬಾರಿಗೆ ನಿರ್ಮಾಣ ಮಾಡಲ ತೀರ್ಮಾನಿಸಿತ್ತು. ಸುಮಾರು ಒಂದು ಶತಮಾನಗಳಿಗಿಂತ ಹೆಚ್ಚು ಕಾಲ ಹೋರಾಟ ನಡೆದರೂ ರೈಲು ಕಾಮಗಾರಿ ಮಾತ್ರ ವಿಳಂಬವಾಗುತ್ತಿದೆ ಎಂದು ವಿವರಿಸಿದರು.
ಇದರಿಂದ ಈ ಭಾಗದ ಉದ್ಯೋಗಪತಿಗಳಿಗೆ, ರೈತರಿಗೆ ಮತ್ತು ಅನೇಕರಿಗೆ ಲಾಭವಾಗುತ್ತದೆ. ಈ ಯೋಜನೆ ಜಾರಿಗಾಗಿ ಹೋರಾಟ ನಡೆಸಿದ್ದವರು ಈಗ ಆಡಳಿತ ಪಕ್ಷದಲ್ಲಿದ್ದಾರೆ. ಅವರು ಸರ್ಕಾರದ ಮೇಲೆ ಪ್ರಭಾವ ಬೀರಿ ರೈಲು ಮಾರ್ಗವನ್ನು ಆದಷ್ಟು ಬೇಗನೆ ಕೈಗೊಳ್ಳುವಂತೆ ಆಗ್ರಹಿಸಿಬೇಕು ಎಂದು ಖಾಜಿ ಒತ್ತಾಯಿಸಿದರು.
ಒಟ್ಟು 141 ಕಿ.ಮೀ, ಉದ್ದದ ಕಾಮಗಾರಿಯನ್ನು ₨ 816 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕೇವಲ 14 ಕಿ.ಮೀ ಮಾತ್ರ ರೈಲು ಹಳಿಗಳನ್ನು ಹಾಕಲಾಗಿದೆ. ಲೋಕಾಪುರದವರೆಗೆ ಭೂಸ್ವಾಧೀನ ಪ್ರಕ್ರಿಯೆ ಆಗಿದೆ. ಆದರೆ ಮುಧೋಳ, ಜಮಖಂಡಿಯಿಂದ ಮುಂದೆ ಯಾವುದೆ ರೀತಿಯ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ ಎಂದು ಅವರು ಮಾಹಿತಿ ನೀಡಿದರು.
2002ರಲ್ಲಿ ಆಗ ಒಪ್ಪಂದದ ಅನ್ವಯ ಈ ಯೋಜನೆಯ ರಾಜ್ಯದ ಪಾಲು ₨408 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ತಿಳಿಸಿದ್ದರು. ಈ ಹಣ ಏನಾಯಿತು ಎಂಬುದು ಇದುವರೆಗೆ ತಿಳಿದು ಬಂದಿಲ್ಲ ಎಂದು ಖಾಜಿ ತಿಳಿಸಿದರು.
ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆ ಅಧ್ಯಕ್ಷ ಕಣೆಪ್ಪ ಹಾರೂಗೇರಿ, ಸುರೇಶ ಚಿಂಡಕ, ಮುರಳಿ ಕಾಬರಾ, ಶ್ರೀಕಾಂತ ವಾಗ್ಮೋರೆ, ನಿಂಗಪ್ಪ ಯಾದವಾಡ, ಬಸವರಾಜ ಶಿರೋಳ, ಯಲ್ಲಪ್ಪ ಕಟಗಿ, ಶಿವಯ್ಯ ಹಿರೇಮಠ, ಮುತ್ತುರಾಜ ದೊಡ್ಡಮನಿ, ಹನಮಂತ ಭಜಂತ್ರಿ ಉಪಸ್ಥಿತರಿದ್ದರು.
ಬರುವ ದಿನಗಳಲ್ಲಿ ಕುಡಚಿ– ಬಾಗಲಕೋಟೆ ಮತ್ತು ರಾಯಚೂರು ರೈಲು ಮಾರ್ಗ ನಿರ್ಮಾಣಕ್ಕೆ ಹೋರಾಟಕ್ಕಾಗಿ ರೂಪು ರೇಷೆ ಮಾಡಲಾಗುವುದು
– ಕುತುಬುದ್ದೀನ ಖಾಜಿ,
For North Karnataka News visit www.uksuddi.in

Comments