ರಾಜ್ಯಕ್ಕೆ ಮತ್ತೆ ವರುಣನ ಆಗಮನ
ಮಹಾರಾಷ್ಟ್ರದಿಂದ ಲಕ್ಷದ್ವೀಪ ಪ್ರದೇಶದವರೆಗೆ ವಾಯುಭಾರ ಕುಸಿತದಿಂದ ಶನಿವಾರದಿಂದಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆರಂಭವಾಗಿದೆ. ಬೆಂಗಳೂರಿ ನಲ್ಲೂ ಮಂಗಳವಾರ ಹಾಗೂ ಬುಧವಾರ ಮಳೆಯ ಸಾಧ್ಯತೆಯಿದೆ. ಕರಾವಳಿ ಪ್ರದೇಶದಲ್ಲಿ ವಾರದವರೆಗೂ ಮಳೆ ಸುರಿಯಲಿದ್ದು, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಎರಡು ದಿನಗಳ ಬಳಿಕ ಅಲ್ಲಲ್ಲಿ ಮಳೆಯಾಗಲಿದೆ. ಅಲ್ಲದೆ, ರಾಜ್ಯ ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಇರುವುದರಿಂದಲೂ ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಇನ್ನೂ ಕೆಲ ದಿನ ಹೀಗೇ ಮುಂದುವರಿಯಲಿದೆ.
ಜೂನ್ನಿಂದ ಈವರೆಗೆ ಶೇ.26ರಷ್ಟು ಮಳೆ ಕೊರತೆ ಉಂಟಾಗಿದೆ. ಆದರೆ, ಸೆಪ್ಟೆಂಬರ್ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಹಾಗೂ ವಿದ್ಯುತ್ ಅಭಾವ ಕಡಿಮೆಯಾಗುವ ಭರವಸೆ ಮೂಡಿದೆ.