UK Suddi
The news is by your side.

ಮುಂದಿನ ವರ್ಷವೇ ಧಾರವಾಡದಲ್ಲಿ ಐಐಟಿ ತರಗತಿ ಆರಂಭ

ದೇಶದ 20ನೇ ಮತ್ತು ರಾಜ್ಯದ ಮೊಟ್ಟ ಮೊದಲ ಐಐಟಿ ಹೊಂದುವ ಸೌಭಾಗ್ಯ ಧಾರವಾಡಕ್ಕೆ ಲಭ್ಯವಾಗಿದ್ದು, 2016-17ನೇ ಶೈಕ್ಷಣಿಕ ಸಾಲಿನಲ್ಲಿಯೇ ತರಗತಿಗಳು ಆರಂಭವಾಗಲಿವೆ.
ತಾತ್ಕಾಲಿಕವಾಗಿ ಐಐಟಿ ಆರಂಭಿಸಲು ಧಾರವಾಡ ಹೈಕೋರ್ಟ್ ಪಕ್ಕದ ವಾಲ್ಮಿ(ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ), ಕೃಷಿ ವಿಶ್ವವಿದ್ಯಾಲಯದ ಸಾವಯವ ಕೃಷಿ ಕೇಂದ್ರ ಹಾಗೂ ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ ಕಟ್ಟಡ ಮೀಸಲಿಡಲಾಗಿದೆ. ಈ ಪೈಕಿ ಒಂದು ಅಥವಾ ಎರಡರಲ್ಲೂ ತರಗತಿ ಶುರುವಾಗಲಿದೆ. ತಾತ್ಕಾಲಿಕ ಕಟ್ಟಡಗಳನ್ನು ರಾಜ್ಯ ಸರ್ಕಾರವೇ ನವೀಕರಣಗೊಳಿಸಿ ಒದಗಿಸಲಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಹೋರಾಟದ ಫಲವಾಗಿ ರಾಜ್ಯದ ಪ್ರಥಮ ಐಐಟಿ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಸ್ಥಾಪನೆಯಾಗಲಿದೆ. ಮುಮ್ಮಿಗಟ್ಟಿ ಹಾಗೂ ಕೆಲಗೇರಿಯವರೆಗೆ 900ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಐಐಟಿಗೆ ಮೀಸಲಿರಿಸಲಾಗಿತ್ತು. ಪರಿಶೀಲನೆಗೆ ಬಂದಿದ್ದ ಸಮಿತಿ ಶಿಫಾರಸಿನಂತೆ ಮುಮ್ಮಿಗಟ್ಟಿ, ಕೆಲಗೇರಿಯ 507 ಎಕರೆ ಪ್ರದೇಶದಲ್ಲಿ ಐಐಟಿ ಆವರಣ ನಿರ್ವಣವಾಗಲಿದೆ. ಹೈಕೋರ್ಟ್ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಜಾಗವಿರುವುದು ಐಐಟಿಗೆ ಮತ್ತಷ್ಟು ಅನುಕೂಲವಾದಂತಾಗಿದೆ.
ಆದೇಶಪತ್ರ ಗಮನಿಸಿ ಐಐಟಿ ಸ್ಥಾಪನೆಗೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತದ ಅಧಿಕಾರಿಗಳು ‘ವಿಜಯವಾಣಿ’ ಗೆ ತಿಳಿಸಿದ್ದಾರೆ.
ಐಐಟಿ ಲಾಭ?: ಐಐಟಿಯಿಂದ ಧಾರವಾಡವು ರಾಷ್ಟ್ರಮಟ್ಟದಲ್ಲಿ ಮಿಂಚಲಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಐಐಟಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ದೊರೆಯಲಿದೆ. ನವದೆಹಲಿ, ಮುಂಬೈ, ಅಹಮದಾಬಾದ್ ಸೇರಿ ದೇಶದ ಇತರ ನಗರಗಳಲ್ಲಿರುವ ಐಐಟಿ ಜತೆ ಇನ್ನು ಮುಂದೆ ಧಾರವಾಡವೂ ಸ್ಪರ್ಧೆಗಿಳಿಯಲಿದೆ.
For North Karnataka News visit www.uksuddi.in

Comments