UK Suddi
The news is by your side.

ನಿಮ್ಮ ದೇಹದ ಮೇಲೆ ನಿಮಗೆಷ್ಟು ಪ್ರೀತಿಯಿದೆ

ಮನುಷ್ಯನ ದೇಹ ಎಷ್ಟು ಸಂಕೀರ್ಣವಾಗಿದೆಯೋ ಅಷ್ಟೇ ಸುಂದರವಾದ ಬಳುವಳಿ ಕೂಡ. ಕೆಲವರಿಗೆ ತಮ್ಮ ದೇಹದ ಬೆಲೆಯೇ ಗೊತ್ತಿರುವುದಿಲ್ಲ. ಅವರು ದೇಹದ ಬಗ್ಗೆ ಸ್ವಲ್ಪವೂ ಕೇರ್‌ ಮಾಡದೆ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಗಂಡಾಗಿರಲಿ ಹೆಣ್ಣಾಗಿರಲಿ, ಬೇರೆಯವರ ದೇಹಕ್ಕಿಂತ ತಮ್ಮ ದೇಹವನ್ನು ಮೊದಲು ಪ್ರೀತಿಸಬೇಕು, ಅದನ್ನು ಗೌರವಿಸಬೇಕು ಮತ್ತು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಇದೇನೂ ಆತ್ಮರತಿಯಲ್ಲ. ಎಲ್ಲರೂ ತಮ್ಮ ದೇಹಕ್ಕೆ ನೀಡಲೇಬೇಕಾದ ಅತ್ಯಗತ್ಯ ಕಾಳಜಿ. ಸಾಮಾನ್ಯವಾಗಿ ಜನರು ಬೇರೆಯವರ ಸುಂದರವಾದ ದೇಹವನ್ನು ನೋಡಿದಾಗ ಅದನ್ನು ಹೊಗಳುತ್ತಾರೆ. ಇನ್ನು ಕೆಲವರು ಅದನ್ನು ಆಸೆ ಪಡುತ್ತಾರೆ, ಮತ್ತೆ ಕೆಲವರು ಮೋಹಿಸುತ್ತಾರೆ. ಆದರೆ, ತಮ್ಮ ದೇಹವನ್ನು ಪ್ರೀತಿಸುವುದನ್ನೇ ಮರೆತುಬಿಟ್ಟಿರುತ್ತಾರೆ. ಕೆಲವರಿಗೆ ತಮ್ಮ ದೇಹದ ಬಗ್ಗೆ ಕೀಳರಿಮೆ ಕೂಡ ಇರುತ್ತದೆ. ದೇವರು ನಮಗೆ ಕೊಟ್ಟಿರುವ ದೇಹ ಬೇರೆಯವರಿಗಿಂತ ಅಮೂಲ್ಯವಾದದ್ದು ಅನ್ನುವುದನ್ನು ಬಹಳ ಜನ ಯೋಚಿಸಿರುವುದಿಲ್ಲ.

ಯಾರು ತನ್ನ ದೇಹವನ್ನು ಗೌರವಿಸುತ್ತಾನೋ ಅವನು ಬೇರೆಯವರನ್ನೂ ಗೌರವಿಸುತ್ತಾನೆ. ಯಾರು ತನ್ನನ್ನು ತಾನು ಪ್ರೀತಿಸುತ್ತಾನೋ ಅವನು ಮಾನವ ಕುಲವನ್ನೇ ಪ್ರೀತಿಸುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ, ಯಾರು ತಮ್ಮ ದೇಹಕ್ಕೆ ಬೆಲೆ ಕೊಡುವುದಿಲ್ಲವೋ ಅಂತಹವರು ಬೇರೆಯವರ ದೇಹದ ಬಗ್ಗೆ ಕಾಮೆಂಟ್‌ ಮಾಡುತ್ತಾರೆ ಅಥವಾ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.

ನಿಮ್ಮ ದೇಹ ನಿಮ್ಮ ಐಡೆಂಟಿಟಿ
ನಾವು ಯಾರು ಅಂತ ನಮ್ಮನ್ನು ನಾವು ತೋರ್ಪಡಿಸಿಕೊಳ್ಳುವುದೇ ನಮ್ಮ ದೇಹವೆಂಬ ಐಡೆಂಟಿಟಿಯ ಮೂಲಕ. ನಮ್ಮ ದೇಹದಲ್ಲೇ ನಮ್ಮ ಅಸ್ತಿತ್ವ. ನಮ್ಮ ವ್ಯಕ್ತಿತ್ವ, ನಮ್ಮ ತನ, ನಮ್ಮ ಬುದ್ಧಿ, ನಮ್ಮ ಪಂಚೇದ್ರಿಯಗಳು, ನಮ್ಮ ಅರಿಷಡ್ವರ್ಗಗಳು, ಜ್ಞಾನ, ಮನಸ್ಸು, ಆಸೆ, ದುಃಖ, ವ್ಯಾಮೋಹ ಎಲ್ಲವೂ ನಮ್ಮ ದೇಹದಲ್ಲೇ ವಾಸವಾಗಿರುತ್ತವೆ. ನಾವು ಬೇರೇನೇ ಆಸ್ತಿ ಅಂತಸ್ತು ಮಾಡಿಕೊಂಡರೂ ನಮ್ಮ ದೇಹ ಆರಾಮಾಗಿ ಇರಬೇಕು ಎಂಬ ಧ್ಯೇಯವೇ ಎಲ್ಲಕ್ಕಿಂತ ಮುಖ್ಯವಾಗುತ್ತದೆ. ಇವನ್ನೆಲ್ಲ ಮೀರಿ, ನಮ್ಮ ದೇಹದ ಸೃಷ್ಟಿಕರ್ತ ಪರಮಾತ್ಮ ನಮ್ಮ ದೇಹದಲ್ಲೇ ವಾಸವಾಗಿದ್ದಾನೆ ಎಂಬ ಅರಿವು ನಮಗಿದ್ದರೂ ಸಹ ನಾವು ನಮ್ಮ ದೇಹವನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಕೆಲವರಿಗಂತೂ ದೇಹದ ದೈವಿಕತ್ವವೇ ತಿಳಿದಿರುವುದಿಲ್ಲ. ಯಾರ್ಯಾರ ಜೊತೆಗೋ ಹೋಗುತ್ತಾರೆ. ಯಾರೋ ಬಂದು ನಮ್ಮ ದೇಹವನ್ನು ಹೊಗಳಿದ ಮಾತ್ರಕ್ಕೆ ಅದನ್ನು ಅವರಿಗೆ ಒಪ್ಪಿಸುವಷ್ಟು ಮೂರ್ಖರು ನಾವಾಗಬಾರದು.

ನನ್ನ ದೇಹ ಏನನ್ನು ಇಷ್ಟ ಪಡುತ್ತದೆಯೋ ಅದನ್ನು ಮಾಡುತ್ತೇನೆ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು, ಓ ನನ್ನ ದೇಹದ ಬಗ್ಗೆ ನಾನು ಯೋಚಿಸೇ ಇಲ್ಲ ಎನ್ನುತ್ತಾರೆ. ಆದರೆ ಬೇರೆಯವರ ದೇಹ ಅವರನ್ನು ಆಕರ್ಷಿಸಿರುತ್ತದೆ. ತನಗೆ ಇಷ್ಟವಾದ್ದನ್ನೆಲ್ಲ ಬಯಸುವುದು ತಪ್ಪು ಎಂದು ಇವರಿಗೆ ಅನ್ನಿಸುವುದಿಲ್ಲ. ಒಂದಿರಬಹುದು, ಎರಡಿರಬಹುದು, ಹತ್ತಿರಬಹುದು… ನನಗೆ ಅದು ಬೇಕು ಅಂದ ಮೇಲೆ ಬೇಕು ಅಷ್ಟೆ ಎನ್ನುತ್ತಾರೆ. ಮತ್ತೆ ಕೆಲವರು ತಾತ್ವಿಕವಾಗಿ ಮಾತನಾಡುತ್ತಾರೆ. ನಮ್ಮ ದೇಹದ ಇರುವಿಕೆ, ಇದರ ಅಗಾಧವಾದ ಮೌಲ್ಯವನ್ನು ಅರಿತುಕೊಳ್ಳುವಷ್ಟರಲ್ಲಿ ನಾವು ಅನೇಕ ತಪ್ಪುಗಳನ್ನು ಮಾಡಿಬಿಟ್ಟಿರುತ್ತೇವೆ. ಆಮೇಲೆ ಯೋಚಿಸಿದರೆ ಕೆಲವು ಸಂದರ್ಭಗಳಲ್ಲಿ ನಾವು ನಮ್ಮ ದೇಹವನ್ನು ಎಷ್ಟು ಚೀಪಾಗಿ ಉಪಯೋಗಿಸಿಕೊಂಡಿದ್ದೇವೆಂಬುದು ಮನಸ್ಸಿಗೆ ತುಂಬಾ ಚುಚ್ಚುತ್ತದೆ. ಇಲ್ಲಿ ತಪ್ಪು-ಸರಿ ಅನ್ನೋದು ಮುಖ್ಯ ಅಲ್ಲ, ನಾವು ನಮ್ಮ ದೇಹವನ್ನು ಆಂತರಿಕವಾಗಿ -ಬಹಿರಂಗವಾಗಿ ಉನ್ನತ ಸ್ಥಾನದಲ್ಲಿ ನಿಲ್ಲಿಸಿಕೊಂಡಿದ್ದೇವಾ ಎಂಬುದು ಮುಖ್ಯ ಎನ್ನುತ್ತಾರೆ.

ನಾವು ಏನು ಮಾಡುತ್ತೇವೆ ಅಂತ ನಮ್ಮನ್ನು ಯಾರೂ ಕೇಳದೆ ಇರಬಹುದು. ಅಥವಾ ಯಾರಿಗೂ ಗೊತ್ತಾಗದ ಹಾಗೆ ಕದ್ದುಮುಚ್ಚಿ ನಮಗೆ ಇಷ್ಟ ಬಂದಿದ್ದನ್ನೆಲ್ಲ ಮಾಡಬಹುದು. ಆದರೆ ಕೊನೆಗೆ ನಮ್ಮ ದೃಷ್ಟಿಯಲ್ಲೇ ನಾವು ಚೀಪ್‌ ಆಗುತ್ತೇವೆ. ಬುದ್ಧಿ ಚಂಚಲ. ಅದು ಏನೇನನ್ನೋ ಆಸೆ ಪಡುತ್ತದೆ. ಆದರೆ ನಮ್ಮ ದೇಹವನ್ನು ನಾವೇ ಅಗೌರವಿಸಿ ಸನ್ನಿವೇಶಕ್ಕೆ ತಕ್ಕಂತೆ ಜಾರಿಕೊಳ್ಳೋದು ನಮ್ಮ ಹೇಡಿತನವೆನಿಸಿಕೊಳ್ಳುತ್ತದೆ.

ಪಾಪಕ್ಕೂ, ಪುಣ್ಯಕ್ಕೂ ಏಕೈಕ ಸಾಧನ
ತುಂಬಾ ಜನ ದೈಹಿಕ ಹಿಂಸೆಗೊಳಗಾಗುತ್ತಾರೆ. ಇನ್ನು ಕೆಲವರು ಹಣಕ್ಕಾಗಿ ತಮ್ಮ ದೇಹವನ್ನೇ ಮಾರಿಕೊಳ್ಳುತ್ತಾರೆ. ಮತ್ತೆ ಕೆಲವರು ಬೇರೆ ಬೇರೆ ಕಾರಣಗಳಿಗಾಗಿ ತಮಗೆ ಭಾವನಾತ್ಮಕವಾಗಿ ಸಂಬಂಧವೇ ಇಲ್ಲದವರ ಜೊತೆ ದೇಹ ಹಂಚಿಕೊಳ್ಳುತ್ತಾರೆ. ಇದರಲ್ಲಿ ಕ್ಷಣಿಕ ಸುಖವೂ ಸೇರಿರಬಹುದು. ಆದರೆ, ಇವೆಲ್ಲವೂ ನಮಗೆ ಸಿಕ್ಕಿರುವ ಅಮೂಲ್ಯ ದೇಹದ ದುರ್ಬಳಕೆ ಎಂಬುದು ನಮಗೆ ಅರ್ಥವಾದರೆ ಈ ತಪ್ಪು ಮಾಡುವ ಹಂತಕ್ಕೆ ನಾವು ಹೋಗುವುದಿಲ್ಲ.

ನಮ್ಮ ದೇಹದಲ್ಲಿರುವ ಜೀವಾತ್ಮಕ್ಕೆ ಮೋಕ್ಷ ಸಿಗಬೇಕಾದರೂ ಅದು ಧಾರಣೆ ಮಾಡಿರುವ ದೇಹದ ಮೂಲಕವೇ ಪುಣ್ಯ ಸಂಚಯವಾಗಬೇಕು. ಪಾಪ ಮಾಡುವುದು ಈ ದೇಹವೇ ಆದ್ದರಿಂದ ಕೊನೆಗೆ ನಿರ್ವಾಣ ಸ್ಥಿತಿ ತಲುಪುವಲ್ಲಿ ದೇಹವೇ ನಿರ್ಣಾಯಕವಾಗುತ್ತದೆ. ಪಾಪಕ್ಕೂ, ಪುಣ್ಯಕ್ಕೂ ಸಪೋರ್ಟ್‌ ಮಾಡಬೇಕಿರುವುದು ನಮ್ಮ ದೇಹವೇ. ಹಾಗಾಗಿ ಎಲ್ಲ ಅಂತಿಮ ಗುರಿಗೂ ಸಾಧನ ಇದೇ.

ದೈಹಿಕ ತಾರತಮ್ಯ ಅರ್ಥಹೀನ
ದೇಹದಲ್ಲಿ ನ್ಯೂನತೆ ಇಲ್ಲದಿರುವ ಕೆಲವರು ದುರಹಂಕಾರದಿಂದ ಮೆರೆಯುತ್ತಾರೆ. ಅಂಗವಿಕಲರಿಗೆ ಮಾತ್ರವೇ ಮನುಷ್ಯನ ದೇಹದ ಒಂದೇ ಒಂದು ಅಂಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ಅದರ ಕಷ್ಟವೇನು ಎಂಬುದು ತಿಳಿಯುತ್ತದೆ. ಅವರು ಅಂಗವೈಕಲ್ಯತೆಯನ್ನು ಜೊತೆಗಿರಿಸಿಕೊಂಡು ಸಾಮಾನ್ಯ ಜೀವನ ನಡೆಸುವುದಕ್ಕೂ ಎಷ್ಟು ಕಷ್ಟ ಪಡಬೇಕು, ಎಷ್ಟು ಅವಮಾನಗಳನ್ನು ಅನುಭವಿಸಬೇಕು, ಎಷ್ಟೆಲ್ಲಾ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಬೇಕು. ಯಾರಾದರೂ ತಮ್ಮನ್ನು ಪ್ರೀತಿಸಲಿ ಎಂದು ಅಂಗವಿಕಲ ದೇಹ ಹಾತೊರೆಯುತ್ತದೆ. ದೇಹ ಸರಿಯಾಗಿಲ್ಲ ಅಂದರೆ ಬದುಕಿದ್ದೂ ಪ್ರಯೋಜನವಿಲ್ಲ ಅಂತ ಬಹಳಷ್ಟು ಅಂಗವಿಕಲರು ಒಳಗೊಳಗೇ ದುಃಖಪಡುತ್ತಾರೆ. ಎಲ್ಲ ಅಂಗಗಳೂ ಸುಸ್ಥಿತಿಯಲ್ಲಿರುವವರಿಗೆ ತಮ್ಮ ದೇಹದ ಮಹತ್ವ ತಿಳಿಯಬೇಕು ಅಂತಾದರೆ ಅವರು ಅಂಗವಿಕಲರನ್ನು ನೋಡಬೇಕು.

ಮನುಷ್ಯ ದೇಹದ ಬಣ್ಣಕ್ಕೆ ಬಿಳಿ-ಕಪ್ಪು ಎಂದು ತಾರತಮ್ಯ ಮಾಡುತ್ತಾನೆ. ಎತ್ತರ, ಕುಳ್ಳ, ದಪ್ಪ, ಸಣ್ಣ ಎಂದು ಆಡಿಕೊಳ್ಳುತ್ತಾನೆ. ಆದರೆ ಇದು ಪ್ರತಿಯೊಬ್ಬರ ದೇಹದ ಅನುಪಮ ಲಕ್ಷಣ. ಏಕೆಂದರೆ ಒಬ್ಬರಂತೆ ಇನ್ನೊಬ್ಬರು ಇರುವುದಿಲ್ಲ. ಪ್ರತಿಯೊಬ್ಬರ ದೇಹವೂ ಒಂದೊಂದು ಅನನ್ಯ ರೀತಿಯಲ್ಲಿ ಸೃಷ್ಟಿಯಾಗಿದೆ. ಅದಕ್ಕೆ ಅದರದೇ ಆದ ಮಹತ್ವವಿದೆ. ಕಾಲ ಕಳೆದಂತೆ ಅದು ಸಾಕಷ್ಟು ಬದಲಾವಣೆ ಹೊಂದುತ್ತ ಹೋಗುತ್ತದೆ. ನಮ್ಮ ದೇಹ ಹೇಗೆ ಇರಲೀ, ಯಾವುದೇ ಬಣ್ಣದ್ದಾಗಿರಲಿ, ಅದಕ್ಕೆ ಏನೇ ಕಾಯಿಲೆ ಇರಲಿ, ಅಂಗವಿಕಲತೆಯೇ ಇರಲಿ… ಅದು ನಮ್ಮ ದೇಹ. ಅದು ನಮ್ಮ ಅನನ್ಯ ಸಂಪತ್ತು. ಜನ ನಮ್ಮನ್ನು ಗುರುತಿಸುವುದು ಈ ದೇಹದಿಂದಲೇ. ಅದನ್ನು ಶುದ್ಧವಾಗಿ ನೋಡಿಕೊಳ್ಳುವುದು ನಮ್ಮ ಧರ್ಮ.

ನಿಮ್ಮ ದೇಹದ ಹಕ್ಕು ನಿಮ್ಮದೇ
ನಿಮಗೆ ನಿಮ್ಮ ದೇಹದ ಬಗ್ಗೆ ಕೀಳರಿಮೆ ಅಥವಾ ಮೇಲರಿಮೆ ಇದ್ದರೆ ಮೊದಲು ಅದನ್ನು ಮನಸ್ಸಿನಿಂದ ತೆಗೆದು ಹಾಕಿಬಿಡಿ. ಏಕೆಂದರೆ ದೇಹದ ಬಗ್ಗೆ ನಾವಿರಿಸಿಕೊಳ್ಳುವ ಕೀಳರಿಮೆ ಅಥವಾ ಮೇಲರಿಮೆಯೇ ನಮ್ಮ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗಬಲ್ಲುದು. ದೇಹದ ಬಗ್ಗೆ ಕೀಳರಿಮೆ ಇರಿಸಿಕೊಂಡವರು ನಾಲ್ಕು ಜನರೆದುರು ಬರಲು ಹಿಂಜರಿಯುತ್ತ ಒಳಗೊಳಗೇ ಮುದುಡಿ ಕುಳಿತಿರುತ್ತಾರೆ. ಮೇಲರಿಮೆ ಇರುವವರು ನನ್ನ ದೇಹದಿಂದಲೇ ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಅಹಂಕಾರದಲ್ಲಿ ಮೆರೆಯುತ್ತಿರುತ್ತಾರೆ. ಇವೆರಡೂ ತಪ್ಪು. ದೇಹ ಹೇಗೆ ಸರ್ವಸ್ವವೋ ಹಾಗೆಯೇ ಅದೊಂದು ಸಾಧನ ಮಾತ್ರ. ನಿಜಕ್ಕೂ ನಮ್ಮನ್ನು ಮೇಲೆ ತರುವ ಶಕ್ತಿಯಿರುವುದು ನಮ್ಮ ಮನಸ್ಸಿಗೆ. ಆದ್ದರಿಂದ ಯಾರು ನಮ್ಮ ದೇಹವನ್ನು ಹೊಗಳಿದರೂ, ತೆಗಳಿದರೂ ಅದನ್ನು ತಲೆಗೆ ಹಾಕಿಕೊಳ್ಳದೆ ಇರುವುದು ಉತ್ತಮ. ದೇವರು ನೆಲೆಸಿರುವ ನಮ್ಮ ದೇಹವನ್ನು ಬೇರೆಯವರು ಹಗುರವಾಗಿ ಕಾಣಲು, ತುತ್ಛವಾಗಿ ಮಾತನಾಡಲು, ಬೇರೆಯವರಿಗೆ ಬೇಕಾದಂತೆ ಉಪಯೋಗಿಸಿಕೊಳ್ಳಲು ಯಾವತ್ತೂ ಅವಕಾಶ ಮಾಡಿಕೊಡಬಾರದು. ಅದು ಯಾರೇ ಆಗಿರಬಹುದು, ನಿಮಗೆ ತುಂಬಾ ಬೇಕಾಗಿರುವ ವ್ಯಕ್ತಿಯೇ ಆಗಿರಬಹುದು ಅಥವಾ ನಿಮ್ಮ ಜೀವನ ಸಂಗಾತಿಯಾಗಿದ್ದರೂ ನಿಮ್ಮ ದೇಹವನ್ನು ಹಿಂಸಿಸುವ ಹಕ್ಕನ್ನು ಅವರಿಗೆ ನೀಡಬಾರದು.

– ರೂಪಾ ಅಯ್ಯರ್‌
roopaiyer.ica@gmail.com

For North Karnataka News visit www.uksuddi.in

Comments