UK Suddi
The news is by your side.

ಮಹಾಲಿಂಗಪುರ ಜಾತ್ರಾ ಸಂಭ್ರಮ

ಮಹಾಲಿಂಗಪುರ: ಬೆಲ್ಲದ ನಾಡಿನ ಆರಾಧ್ಯ ದೈವ ಮಹಾಲಿಂಗೇಶ್ವರ ಜಾತ್ರೆಯ ನಿಮಿತ್ತ ಕಳೆದ ಎರಡು ದಿನಗಳಿಂದ ಪಟ್ಟಣದಲ್ಲಿ ಜನಜಾತ್ರೆಯ ಸಂಭ್ರಮ ಜೋರಾಗಿದೆ. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ, ಬರಗಾಲದ
ಛಾಯೆಯಿದ್ದರೂ ಪವಾಡ ಮಹಾಲಿಂಗೇಶ್ವರ ಜಾತ್ರೆಯ ವೈಭವ ಮತ್ತು ಜನಸಾಗರದ ಆಗಮನಕ್ಕೆ ಪರಿಣಾಮ ಬೀರಿಲ್ಲ.

ಅಬ್ಬರದ ಬ್ಯಾನರ್‌: ಮಹಾಲಿಂಗೇಶ್ವರ ಜಾತ್ರೆಗೆ ಬರುವ ಭಕ್ತಾಧಿದಿಗಳಿಗೆ ಸ್ವಾಗತ ಕೋರುವ ಬ್ಯಾನರ್‌ಗಳ ಅಬ್ಬರ ಪ್ರತಿವರ್ಷಕ್ಕಿಂತ ಜೋರಾಗಿದೆ. ಮಹಾಲಿಂಗೇಶ್ವರ ದೇವಸ್ಥಾನ, ಚನ್ನಗಿರೇಶ್ವರ ದೇವಸ್ಥಾನ, ಕುಸ್ತಿ ಮೈದಾನ,
ಚನ್ನಮ್ಮ, ಬಸವ, ಅಂಬೇಡ್ಕರ, ಗಾಂಧಿಧಿ ಸೇರಿದಂತೆ ಪಟ್ಟಣದ ಪ್ರತಿ ವೃತ್ತ ಮತ್ತು ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ಆಳೆತ್ತರದ ಬ್ಯಾನರ್‌ ಮತ್ತು ಕಟೌಟ್‌ಗಳು ಭಕ್ತರನ್ನು ಸ್ವಾಗತಿಸುತ್ತಿವೆ.

ಭಾವೈಕ್ಯತೆ ದೀಡ್‌ ನಮಸ್ಕಾರ: ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ರವಿವಾರ ಸಂಜೆಯಿಂದ ಮಂಗಳವಾರ ಸಂಜೆವರೆಗೂ ಮಹಿಳೆಯರು, ವಯಸ್ಕರು ಸೇರಿದಂತೆ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಪವಿತ್ರ ಬಸವ ತೀರ್ಥ (ಅಪ್ಪನಾರ ಬಾವಿ)ದಲ್ಲಿ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಶ್ರೀಮಠದವರೆಗೆ ದೀಡ್‌ನ‌ಮಸ್ಕಾರ ಹಾಕಿ ತಮ್ಮ ಹರಕೆ ಸಲ್ಲಿಸಿದರು .ಮುಸ್ಲಿಂ ಸಮುದಾಯದ ಸದ್ಭಕ್ತರು ಮಹಾಲಿಂಗೇಶ್ವರರಿಗೆ ದೀಡ ನಮಸ್ಕಾರ ಹಾಕುವುದರೊಂದಿಗೆ ಪಟ್ಟಣದಲ್ಲಿ ಭಾವೈಕ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದರು.

ಬಟ್ಟೆಗಳ ರಾಶಿ: ವಾಡಿಕೆಯಂತೆ ಭಕ್ತರು ಒದ್ದೆ ಬಟ್ಟೆಗಳಲ್ಲಿ ದೀಡ ನಮಸ್ಕಾರ ಹಾಕಿ, ಮೊದಲು ಧರಿಸಿದ ಬಟ್ಟೆಯನ್ನು
ಅಲ್ಲಿಯೇ ಬಿಟ್ಟು ಹೊಸ ಬಟ್ಟೆ ಧರಿಸುತ್ತಾರೆ. ಇದರಿಂದಾಗಿ ಸಾವಿರಾರು ಭಕ್ತರು ಬಟ್ಟೆಗಳನ್ನು ಬಿಟ್ಟುಹೋಗಿದ್ದರಿಂದ
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಟ್ಟೆಗಳ ರಾಶಿಯೇ ಬಿದ್ದಿತ್ತು.

ಮರುತೇರು: ಮಂಗಳವಾರ ರಾತ್ರಿ 7ಕ್ಕೆ ಚನ್ನಗಿರೇಶ್ವರ ದೇವಸ್ಥಾನದಿಂದ ಮರುತೇರು ಉತ್ಸವ ಪ್ರಾರಂಭವಾಗಿ, ಕರಡಿಮಜಲು, ಉಚ್ಚಾಯಿ, ನಂದಿಕೋಲು, ಕಂಡ್ಯಾಳ ಬಾಸಿಂಗಗಳೊಂದಿಗೆ ರಾತ್ರಿಯಿಡಿ ರಥೋತ್ಸವ
ಸಾಗಿ ಬುಧವಾರ ಬೆಳಗ್ಗೆ 6ಕ್ಕೆ ಮರಳಿ ಮಹಾಲಿಂಗೇಶ್ವರ ದೇವಸ್ಥಾನ ತಲುಪಿತು. ಮರುತೇರು ನಿಮಿತ್ತ ಪರಸ್ಥಳದಿಂದ ಆಗಮಿಸಿದ ಭಕ್ತರಿಗಾಗಿ ಚನ್ನಗಿರೇಶ್ವರ ದೇವಸ್ಥಾನದಲ್ಲಿ ಅನ್ನಪ್ರಸಾದ ಜರುಗಿತು.

ಜನ ಜಂಗುಳಿ: ಸೋಮವಾರ ರಾತ್ರಿ ಜರುಗಿದ ತುಂಬಿದ ತೇರಿಗಿಂತ ಮಂಗಳವಾರ ರಾತ್ರಿ ಜರುಗಿದ ಮರುತೇರು ಉತ್ಸವಕ್ಕೆ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಜಾತ್ರೆಯ ನಿಮಿತ್ತ ಪಟ್ಟಣದ ಜವಳಿ ಬಜಾರ, ಡಬಲ್‌ ರಸ್ತೆ, ನಡಚೌಕಿ,
ಗಾಂಧಿಧಿ ವೃತ್ತ ಸೇರಿದಂತೆ ಪಟ್ಟಣದ ಬಹುತೇಕ ರಸ್ತೆ ಮತ್ತು ಪ್ರದೇಶಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು.

ಭಕ್ತರಿಗೆ ನಿರಾಸೆ: ಪ್ರತಿವರ್ಷ ಮಹಾಲಿಂಗೇಶ್ವರ ಜಾತ್ರೆಗೆ ಮಳೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಲವು ವರ್ಷಗಳ ಜಾತ್ರೆಯಲ್ಲಿ ಮಳೆಯಾಗಿ ಭಕ್ತರ ನಂಬಿಕೆ ದೃಢವಾಗಿದೆ. ಈ ವರ್ಷ ಮಳೆಯಾಗದೇ ಇರುವುದರಿಂದ ಕನಿಷ್ಟ ಮಹಾಲಿಂಗೇಶ್ವರ ಜಾತ್ರೆಯ ಸಮಯದಲ್ಲಾದರೂ ಮಳೆರಾಯ ಕೃಪೆ ತೋರಿಸುತ್ತಾನೆ ಎಂದು ನಂಬಿದ್ದ
ಜನರಿಗೆ, ಜಾತ್ರೆಯ ವಾಡಿಕೆಯಂತೆ ಈ ವರ್ಷ ಮಳೆಯಾಗದೇ ಭಕ್ತರಲ್ಲಿ ನಿರಾಶೆಯುಂಟಾಯಿತು.

For North Karnataka News visit www.uksuddi.in

Comments