ರಾಷ್ಟ್ರ ಕೂಟರ ಕಾಲದ ಕನ್ನಡ ಶಾಸನ ಪತ್ತೆ
ಕುಂಕೂರ (ತಾ.ಕುಂದಗೋಳ): ರಾಷ್ಟ್ರಕೂಟರ ಆಡಳಿತದಲ್ಲಿ ಧಾರವಾಡಜಿಲ್ಲೆಗೂ ವಿಶೇಷ ಸ್ಥಾನಮಾನ ಇತ್ತು ಎಂಬುದನ್ನು ಗುರುತಿಸುವಲ್ಲಿ ಮಹತ್ವದ ಆಕರವೆಂದೇ ಪರಿಗಣಿಸಲಾದ ಶಾಸನವೊಂದು ಕುಂಕೂರ ಗ್ರಾಮದಲ್ಲಿ ದೊರೆತಿದ್ದು, ಇದು 9ನೇ ಶತಮಾನದ್ದು ಎಂದು ಪ್ರಾಚ್ಯಶಾಸ್ತ್ರಜ್ಞರು ಗುರುತಿಸಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಧಾರವಾಡ ವೃತ್ತದ ಅಧಿಕಾರಿ ಡಾ.ಎ.ಆರ್.ದೇಸಾಯಿ ಈ ಶಾಸನ ಪತ್ತೆ ಹಚ್ಚಿದ್ದಾರೆ. ಗ್ರಾಮದ ಕೆರೆಯ ಪಕ್ಕದಲ್ಲಿ ನಿಲ್ಲಿಸಲಾದ ಬಾದುಬ್ಬೆ (ಗಜಲಕ್ಷ್ಮಿ)ಯ ಮೂರ್ತಿಯ ಕೆಳಭಾಗದಲ್ಲಿ 168 ಸೆಂ.ಮೀ. ಉದ್ದ, 30 ಸೆಂ.ಮೀ. ಅಗಲ ಮತ್ತು 10 ಸೆಂ.ಮೀ. ದಪ್ಪ ಇರುವ ಕಲ್ಲಿನ ಮೇಲೆ ಹಳೆಗನ್ನಡದ ಎರಡು ಸಾಲುಗಳನ್ನು ಬರೆಯಲಾಗಿದೆ.
ರಾಷ್ಟ್ರಕೂಟ ಸಾಮ್ರಾಜ್ಯದ ಪ್ರಸಿದ್ಧ ದೊರೆ 3ನೇ ಕೃಷ್ಣನು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ‘ಬನವಾಸಿ 12000’ ನಾಡಿನಲ್ಲಿ ಬರುವ ‘ಕುಂತುರಳಿ 30’ರ ಅಧಿಕಾರಿಯಾಗಿದ್ದ ತಾಯಿಗ ನಾಗಮುಂಡ ಈ ಪ್ರತಿಮೆಯನ್ನು ಮಾಡಿಸಿ ನಿಲ್ಲಿಸಿದನೆಂದು ಹೇಳಲಾಗಿದೆ. ಇಲ್ಲಿ ಉಲ್ಲೇಖವಾದ ‘ಕುಂತುರುಳಿ’ಯೇ ಇಂದಿನ ಕುಂಕೂರ ಆಗಿದೆ. ಇದು 30 ಹಳ್ಳಿಗಳನ್ನು ಒಳಗೊಂಡಂತಹ ಚಿಕ್ಕ ಆಡಳಿತ ವಿಭಾಗವಾಗಿತ್ತು ಎಂದು ತಿಳಿದು ಬರುತ್ತದೆ. ಬಾಗುಬ್ಬೆ ವಿಗ್ರಹವು ಸಾಮಾನ್ಯವಾಗಿ ಗಜಲಕ್ಷ್ಮಿಯ ಶಿಲ್ಪವನ್ನು ಹೊಂದಿರುತ್ತದೆ. ಇಂತಹ ಶಿಲ್ಪವನ್ನು ಆ ಕಾಲಘಟ್ಟದಲ್ಲಿ ಸಾಮಾನ್ಯವಾಗಿ ಕೆರೆಯ ಪ್ರವೇಶದಲ್ಲಿ ಅಥವಾ ತುಂಬಿನ ಬದಿಯಲ್ಲಿ ನಿಲ್ಲಿಸುವ ಪದ್ಧತಿ ರೂಢಿಯಲ್ಲಿತ್ತು. ಈ ಶಾಸನ ಸಿಕ್ಕ ಸ್ಥಳದಲ್ಲಿ ನೀರಿನ ಹೊಂಡ ಮತ್ತು ಭತ್ತದ ಗದ್ದೆಗಳಿವೆ.
ಗಮನಿಸಬೇಕಾದ ಸಂಗತಿಯೆಂದರೆ, ಊರಿನ ಪೂರ್ವದ ಅಂಚಿನಲ್ಲಿ ಸುಮಾರು 1500 ವರ್ಷದ ಹಿಂದಿನ ಜನವಸತಿಯ ಪುರಾವೆಗಳು ಪತ್ತೆಯಾಗಿವೆ. 11–12ನೇ ಶತಮಾನದ ಕೆಲವು ಶಿಲ್ಪಗಳೂ ದೊರೆತಿವೆ. ಅವುಗಳಲ್ಲಿ ಪ್ರತ್ಯೇಕ ಸಪ್ತಮಾತೃಕೆಯರ ಶಿಲ್ಪಗಳನ್ನು ನಿಲ್ಲಿಸಿರುವುದು ವಿಶೇಷ. ಮಣ್ಣಿ ನ ಹೆಂಚಿನ ತುಂಡುಗಳು ಮತ್ತು ಕೆಲವೇ ಪ್ರಮಾಣದ ಕೆಂಪು ಮತ್ತು ಕಪ್ಪು ಗಡಿಗೆ ಮಡಿಕೆಯ ತುಂಡುಗಳೂ ಲಭ್ಯವಾಗಿವೆ.
ಈ ಶಾಸನದಲ್ಲಿ ಕಾಲವನ್ನು ಸಂವತ್ಸರ ಶಕ 865ನೇ ವರ್ಷದ ಫಾಲ್ಗುಣ ಶುದ್ಧ ಪಂಚಮಿಯ ಗ್ರಹಣ ಸೋಮವಾರವೆಂದು ಉಲ್ಲೇಖವಾಗಿದೆ. ಬನವಾಸಿ 12000 ನಾಡನ್ನು ಲಿಂಗಪ್ಪಯ್ಯ ಎಂಬುವವ ಆಳುತ್ತಿದ್ದನೆಂದು ಕಾಣುತ್ತದೆ. ಇದರ ಉಪಭಾಗವಾದ ಕುಂತುರುಳಿ 30ನ್ನು ತಾಯಿಗ ನಾಗಮುಂಡ ನೋಡಿಕೊಳ್ಳುತ್ತಿದ್ದನೆಂದು ಶಾಸನದಿಂದ ತಿಳಿದು ಬರುತ್ತದೆ.
ಈ ಗ್ರಾಮದಲ್ಲಿ ಅನಂತಶಯನ ದೇವಾಲಯವು ಚಾರಿತ್ರಿಕ ದೃಷ್ಟಿಯಿಂದ ವಿಶೇಷ ಮಾಹಿತಿಯನ್ನು ಒದಗಿಸುತ್ತದೆ. ಈ ಊರು ಮೊದಲು ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಕಾರಡಗಿ ದೇಸಗತಿಯ ಅಧೀನದಲ್ಲಿತ್ತೆಂದು, ಇಲ್ಲಿನ ನಾಡಗೌಡರಾಗಿದ್ದ ದೇಶಪಾಂಡೆಯವರು ದೇವಾಲಯವನ್ನು ಸುಮಾರು 250 ವರ್ಷಗಳ ಹಿಂದೆ ಕಟ್ಟಿಸಿದರೆಂದೂ ಅವರ ಕುಟುಂಬಸ್ಥರು ಹೇಳಿದರು.
ಗಟಾರ ದಾಟಲು ಶಾಸನ ಬಳಕೆ ! ಶಾಸನದ ಮಹತ್ವ ಗೊತ್ತಿಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಕುಂಕೂರ ಗ್ರಾಮದಲ್ಲಿನ ರಾಷ್ಟ್ರಕೂಟರ ಶಾಸನವೇ ಸಾಕ್ಷಿ. ಊರಿನ ಪ್ರಮುಖ ರಸ್ತೆಯ ಪಕ್ಕದಲ್ಲಿ ಇರುವ ಗಟಾರವನ್ನು ದಾಟಲು ಇದೇ ಶಾಸನವನ್ನು ಅಡ್ಡಲಾಗಿ ಇಡಲಾಗಿದೆ!