UK Suddi
The news is by your side.

ಮೋದಿ ಗೆಲುವು; ಬುದ್ಧಿಜೀವಿಗಳಿಗೆ ದಿಗಿಲು!

ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದರಿಂದ ಬುದ್ಧಿಜೀವಿಗಳು ದಿಗಿಲುಗೊಂಡಿದ್ದಾರೆ. ತಾವು ಬೆಂಬಲಿಸಿದ್ದ ಪಕ್ಷದ ಚುನಾವಣಾ ವೈಫಲ್ಯಕ್ಕೆ ಅನ್ಯಮಾರ್ಗದ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿರುವ ಚಿಂತಕರ ಸಮೂಹ, ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದೆ.

ಸರಸ್ವತಿ ಸಮ್ಮಾನ್ ಪುರಸ್ಕೃತ ಕನ್ನಡ ಸಾಹಿತಿ ಎಸ್.ಎಲ್.ಭೈರಪ್ಪ, ಸಾಂಸ್ಕೃತಿಕ ಬಾಂಧವ್ಯಗಳ ಭಾರತೀಯ ಮಂಡಳಿ ಅಧ್ಯಕ್ಷ ಲೋಕೇಶಚಂದ್ರ, ಜೆಎನ್​ಯುು ವಿವಿಯ ಮಾಜಿ ಉಪಕುಲಪತಿ ಕಪಿಲ್ ಕಪೂರ್, ಕೇಂಬ್ರಿಜ್ ಎಮಿರಿಟಸ್ ವಿವಿಯ ಪ್ರೊ. ದಿಲೀಪ್.ಕೆ.ಚಕ್ರವರ್ತಿ, ಐಐಎಸ್ಸಿಯ ಕೆ.ಗೋಪಿನಾಥ್, ಕೇರಳ ಸಾಹಿತಿ ಅಕ್ಕಿಥಂ ಅಚ್ಯುತನ್, ಕವಿ ಸುಮತೀಂದ್ರ ನಾಡಿಗ್ ಸೇರಿ 36 ಮಂದಿ ಬಿಜೆಪಿ ಸರ್ಕಾರಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಹೇಳಿಕೆಯಲ್ಲೇನಿದೆ?: ಕಳೆದ ಕೆಲವು ವಾರಗಳಿಂದ ಸಾರ್ವಜನಿಕವಾಗಿ ಗಮನಸೆಳೆಯುವ ಬಹಳಷ್ಟು ಘಟನೆಗಳು ನಡೆದಿವೆ. ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವ ಕೆಲವರು ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಆಕ್ರೋಶವನ್ನು ಹೊರಹಾಕಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಶವದ ಪೆಟ್ಟಿಗೆ ಸೇರಿರುವ ಮಾರ್ಕಿಸ್ಟ್, ಲೆನಿನ್, ಮಾವೋವಾದಿ ಹಾಗೂ ಕಾಂಗ್ರೆಸ್ ಚಿಂತನೆಯನ್ನು ಹೊಂದಿದವರಾಗಿದ್ದಾರೆ. ದಾದ್ರಿ ಪ್ರಕರಣಕ್ಕೆ ಕೇಂದ್ರ ಸರ್ಕಾರವನ್ನು ದೂರಲಾಗದು. ವಿಚಾರವಾದಿ ಎನ್.ದಾಬೋಲ್ಕರ್, ಕನ್ನಡದ ಸಾಹಿತಿ ಎಂ.ಎಂ. ಕಲಬುರ್ಗಿ ಹತ್ಯೆ ನಡೆದಿರುವುದು ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳಲ್ಲಿ. ಈ ಸತ್ಯವನ್ನು ವಿರೋಧ ಮಾಡುತ್ತಿರುವವರು ಅರಿತುಕೊಳ್ಳಬೇಕು.

ಮೋದಿ ಸರ್ಕಾರದ ವಿರುದ್ಧ ಇಷ್ಟೆಲ್ಲ ಹುಯಿಲೆಬ್ಬಿಸುತ್ತಿರುವ ಮಂದಿ, 1984ರ ಸಿಖ್ ವಿರೋಧಿ ದಂಗೆ ಸಂದರ್ಭ, 2007ರ ನಂದಿಗ್ರಾಮದ ರೈತರ ಕಗ್ಗೊಲೆ ಮತ್ತಿತರ ಘಟನೆಗಳನ್ನು ನೆನಪಿಸಿಕೊಳ್ಳಲೂ ಇಷ್ಟಪಡುವುದಿಲ್ಲ. ಏಕೆಂದರೆ ಆ ಘಟನೆಗಳು ಕಾಂಗ್ರೆಸ್ ಹಾಗೂ ಎಡರಂಗದ ಆಡಳಿತದಲ್ಲಿ ನಡೆದಿದ್ದವು. ಒಟ್ಟಿನಲ್ಲಿ ಮಹತ್ವ ಕಳೆದುಕೊಳ್ಳುತ್ತಿರುವ ಮಂದಿ ಈ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂಥವರ ಪೊಳ್ಳು ಹೇಳಿಕೆಗಳ ಬಗ್ಗೆ ಭಾರತೀಯರು ಗಮನ ನೀಡದೆ ದೇಶದ ಒಗ್ಗಟ್ಟು ಮತ್ತು ಪ್ರಗತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗಮನಹರಿಸುವಂತೆ ಕೇಳಿಕೊಳ್ಳುತ್ತೇವೆ.

Vijayavani
For North Karnataka News visit www.uksuddi.in

Comments