ಕೂದಲಿನ ಸಮೃದ್ಧ ಪೋಷಣೆಗೆ-ಬಿಸಿ ಎಣ್ಣೆಯ ಚಿಕಿತ್ಸೆ
ಉದ್ದವಾದ, ದಟ್ಟವಾದ, ಕಪ್ಪನೆಯ ಕೂದಲಿಗೆ ಎಣ್ಣೆಯ ಪೋಷಣೆ ಎಷ್ಟು ಅಗತ್ಯ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಎಣ್ಣೆ ಕೊಂಚ ಬಿಸಿಯಾಗಿದ್ದರೆ ಇನ್ನೂ ಹೆಚ್ಚಿನ ಪೋಷಣೆ ನೀಡುತ್ತದೆಂದು ಗೊತ್ತಿತ್ತೇ? ಬಿಸಿ ಎಣ್ಣೆಯ ನಯವಾದ ಮಸಾಜ್ ತಲೆಹೊಟ್ಟನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುವ ಜೊತೆಗೇ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡಿ ದಟ್ಟವಾಗಿ ಮತ್ತು ಆರೋಗ್ಯಕರವಾಗಲು ನೆರವಾಗುತ್ತದೆ.
ಬಿಸಿ ಎಣ್ಣೆಯ ಪೋಷಣೆಗೆ ಕೊಂಚ ಸಮಯದ ಅಗತ್ಯವಿರುವುದರಿಂದ ಬಿಡುವಿನ ವೇಳೆಯಲ್ಲಿ ಮನೆಯಲ್ಲಿಯೇ ಅಥವಾ ವೃತ್ತಿಪರ ಮಳಿಗೆಯಲ್ಲಿಯೂ ಮಾಡಿಸಿಕೊಳ್ಳಬಹುದು. ಯಾವುದೇ ವಿಧಾನ ಅನುಸರಿಸಿದರೂ ಬಿಸಿ ಎಣ್ಣೆಯಲ್ಲಿನ ಕಾವು ತಲೆಯ ಚರ್ಮದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುವ ಮೂಲಕ ಕೂದಲ ಆರೋಗ್ಯಕರ ಬೆಳವಣಿಗೆಗೆ ಪ್ರಚೋದನೆ ನೀಡುತ್ತದೆ. ಈ ಎಣ್ಣೆ ಕುದಿಯುವಷ್ಟು ಬಿಸಿಯಾಗಿರಬಾರದು! ಇಲ್ಲವೇ ಇಲ್ಲವೆನ್ನುವಷ್ಟೂ ಬಿಸಿಯಾಗಿರಬಾರದು. ನಯವಾದ ಹದವೆಂದರೆ ಅಂಗೈಯಲ್ಲಿ ಹಾಕಿಕೊಂಡಾಗ ಬಿಸಿ ತಾಳುವಷ್ಟಿರಬೇಕು.
ತಲೆಗೆ ಹಾಕಿಕೊಳ್ಳುವ ಎಣ್ಣೆ ತಣ್ಣನೆಯ ವಿಧಾನದಲ್ಲಿ (cold process) ಹಿಂಡಿ ತೆಗೆದದ್ದಾದರೆ ಪರಿಣಾಮ ಅತ್ಯುತ್ತಮವಾಗಿರುತ್ತದೆ. ಈ ಎಣ್ಣೆಯನ್ನು ನೇರವಾಗಿ ಪಾತ್ರೆಯಲ್ಲಿ ಬಿಸಿಮಾಡಬೇಡಿ, ಬದಲಿಗೆ ಮೊದಲು ಅಗಲವಾದ ಪಾತ್ರೆಯಲ್ಲಿ ಕೊಂಚ ನೀರು ಕುದಿಸಿ, ಒಲೆಯಿಂದ ಕೆಳಗಿಡಿ. ಈ ನೀರು ಕೊಂಚ ಆರಿದ ಬಳಿಕ ಈ ನೀರಿನ ಮೇಲೆ ಚಿಕ್ಕ ಸ್ಟೀಲಿನ ಬಟ್ಟಲನ್ನು ತೇಲಿಸಿ ಆ ಬಟ್ಟಲಿನಲ್ಲಿ ತಲೆಯ ಮಸಾಜ್ಗೆ ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ ಎರಡರಿಂದ ಮೂರು ನಿಮಿಷಗಳವರೆಗೆ ಬಿಸಿಯಾಗಲು ಬಿಡಿ. ಬಿಸಿ ಹೆಚ್ಚೆನಿಸಿದರೆ ಒಂದೆರಡು ನಿಮಿಷ ಬಿಟ್ಟು ಹಚ್ಚಲು ತೊಡಗಿ.