UK Suddi
The news is by your side.

ಬಂಡೆಮ್ಮನಗರ ಅನಕ್ಷರಸ್ಥ ರೈತನ ಅದ್ವಿತೀಯ ಸಾಧನೆ


ಗದಗ: ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿ ಸರ್ಕಾರಕ್ಕೆ ಸವಾಲಾಗಿರುವ ಸನ್ನಿವೇಶದಲ್ಲಿ ನೈಸರ್ಗಿಕವಾಗಿ ದೊರೆಯುವ ಗಾಳಿಯನ್ನೇ ಉಪಯೋಗಿಸಿಕೊಂಡು ಅನಕ್ಷರಸ್ಥ ರೈತನೊಬ್ಬ ತಮಗೆ ಬೇಕಾದಷ್ಟು ವಿದ್ಯುತ್ ಉತ್ಪಾದಿಸಿ ಮನೆಗೆ ಬೆಳಕು ತಂದುಕೊಂಡಿದ್ದಾನೆ. ಎರಡು ದಶಕಗಳ ಕಾಲ ಸಾಗಿಸಿದ ಕತ್ತಲ ಬದುಕು ಕೊನೆಗಾಣಿಸಿ ಸಂಭ್ರಮ ಪಡುತ್ತಿದ್ದಾನೆ.
ನರಗುಂದ ಪಟ್ಟಣದಿಂದ ಕೇವಲ 6 ಕಿ.ಮೀ. ದೂರದಲ್ಲಿ ಹುಬ್ಬಳ್ಳಿ-ವಿಜಯಪುರ ಹೆದ್ದಾರಿಗೆ ಅಂಟಿಕೊಂಡಂತೆ ಬಂಡೆಮ್ಮನಗರ ಇದೆ. ಈ ಫಲಕ ಹೊತ್ತ ಸರ್ಕಾರಿ ಪ್ರಾಥಮಿಕ ಶಾಲೆ ಕಾಂಪೌಂಡಿಗೆ ಹೊಂದಿಕೊಂಡಿರುವ ಕಾಲುದಾರಿಯಲ್ಲಿ ಅರ್ಧ, ಮುಕ್ಕಾಲು ಕಿ.ಮೀ. ಪಯಣಿಸಿದ ನಂತರ ಕಾಣುವುದೇ ಗಾಳಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ರೈತ ಸಿದ್ದಪ್ಪ ಹುಲಜೋಗಿ ಅವರ ತಗಡಿನ ಮನೆ.
ಕಳೆದ 20 ವರ್ಷಗಳಿಂದ ಈ ತಗಡಿನ ಮನೆಯೇ ಆತನ ಕರ್ಮಭೂಮಿ. ಕತ್ತಲಲ್ಲೇ ಜೀವನ ಮಾಡಬೇಕಾದ ಅನಿವಾರ್ಯತೆ. ಪತ್ನಿ ಭೀಮವ್ವ ಹಾಗೂ ಮೂವರು ಮಕ್ಕಳ ಸಂಸಾರ ಅವರದ್ದಾಗಿದೆ. ಇಬ್ಬರು ಮಕ್ಕಳ ಪೈಕಿ ಮೊದಲನೇ ಪುತ್ರ ಕೃಷಿಯಲ್ಲಿ ತೊಡಗಿಕೊಂಡಿದ್ದಾನೆ. ಮತ್ತೊಬ್ಬ ಪುತ್ರ ಧಾರವಾಡದಲ್ಲಿ ಪಿಯುಸಿ ಅಭ್ಯಾಸ ಮಾಡುತ್ತಿದ್ದು, ಮಗಳಿಗೆ ಮದುವೆ ಮಾಡಿದ್ದಾನೆ. ಇವರಿಗೆ ಒಟ್ಟು 18 ಎಕರೆ ಜಮೀನು ಇದೆ.
ಸವಾಲಾಗಿ ಸ್ವೀಕಾರ:
ಸಿದ್ದಪ್ಪನದು ಮಳೆಯಾಶ್ರಿತ ಭೂಮಿ. ನೀರಾವರಿ ಮಾಡುವ ಉದ್ದೇಶದಿಂದ ತನ್ನ ಹೊಲದವರೆಗೆ ವಿದ್ಯುತ್ ಕಂಬಗಳನ್ನು ಹಾಕಬೇಕು ಎಂದು ಸಿದ್ದಪ್ಪ ಕೆಪಿಟಿಸಿಎಲ್​ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಳ್ಳುತ್ತಾನೆ. ಹೊಲದಲ್ಲಿ ಬೋರ್ ಅಥವಾ ಬಾವಿ ಇಲ್ಲದಿದ್ದರೆ ಕಂಬ ಹಾಕಲು ಬರುವುದಿಲ್ಲ ಎಂದು ಹೇಳಿ ಅಧಿಕಾರಿಗಳು ಸಾಗಹಾಕುತ್ತಾರೆ. ಅದನ್ನೇ ಸವಾಲಾಗಿ ಸ್ವೀಕರಿಸಿದ ಸಿದ್ದಪ್ಪ ತನ್ನ ಹೊಲದಲ್ಲಿ ಬಾವಿ ತೋಡಲು ಮುಂದಾಗುತ್ತಾನೆ. ಗಂಡ ಹೆಂಡತಿ ಸೇರಿ 6 ತಿಂಗಳು ಶ್ರಮ ವಹಿಸಿ 60 ಅಡಿ ಆಳ ಬಾವಿ ತೋಡುತ್ತಾರೆ. ನೀರು ಬೀಳುವ ಸೂಚನೆ ಸಿಗಲಿಲ್ಲ. ನಿರಾಶನಾಗದೇ ತನ್ನ ಹೊಲದ ಎತ್ತರ ಪ್ರದೇಶದಲ್ಲಿ ರಭಸವಾಗಿ ಬೀಸುತ್ತಿರುವ ಗಾಳಿಯನ್ನು ಗಮನಿಸಿ ತಾನೂ ಏಕೆ ವಿದ್ಯುತ್ ಉತ್ಪಾದಿಸಬಾರದು? ಎಂದು ಯೋಚಿಸಿದ. ನರಗುಂದದ ಗುಡ್ಡದ ಮೇಲಿರುವ ಪವನ ವಿದ್ಯುತ್ ಯಂತ್ರ ಪ್ರೇರಣೆಯಾಯಿತು. ಕನಸು ಬೆನ್ನತ್ತಿ ಕಾರ್ಯಪ್ರವೃತ್ತನಾದ ಸಿದ್ದಪ್ಪ ಯಶಸ್ವಿಯಾದ. ಕಳೆದ ಎಂಟು ವರ್ಷಗಳ ಹಿಂದೆಯೇ ಅವರು ಈ ಸಾಧನೆ ಮಾಡಿದ್ದಾರೆ.
ದೇಶಿ ಉಪಕರಣಗಳು:
ತಗಡುಗಳು, ನಿರುಪಯುಕ್ತವಾದ ಕೃಷಿ ಹಾಗೂ ಇತರೆ ವಸ್ತುಗಳನ್ನು ಬಳಸಿ ಸಿದ್ದಪ್ಪ ಗಾಳಿ ವಿದ್ಯುತ್ ಉತ್ಪಾದನೆ ಕೆಲಸ ಆರಂಭಿಸಿದ. 5 ರಿಂದ 6 ದೊಡ್ಡ ಕಟ್ಟಿಗೆಯ ಕಂಬಗಳನ್ನು ನೆಲದಲ್ಲಿ ಹುಗಿದು ಅದರ ಮೇಲೆ ನಿಚ್ಚಣಿಕೆ ನಿರ್ವಿುಸಿದ್ದಾನೆ. ಗಾಳಿ ಬೀಸುವತ್ತ ಎರಡು ಕಂಬಗಳನ್ನು ನೆಟ್ಟು, ಅದರಲ್ಲಿ ಟ್ರ್ಯಾಕ್ಟರ್​ನಲ್ಲಿರುವ ಎರಡು ಎಕ್ಸಲ್​ಗಳನ್ನು ನಟ್ ಬೋಲ್ಟ್​ಗಳಿಂದ ಬಂಧಿಸಲಾಗಿದೆ. ಅದರ ಒಂದು ತುದಿಗೆ ವೃತ್ತಾಕಾರದ ಕಬ್ಬಿಣದ ರಿಂಗ್ ಜೋಡಿಸಿ ಆ ರಿಂಗ್​ಗೆ ಫ್ಯಾನ್​ಗಳ ಬದಲಾಗಿ ಮನೆ ಮುಂದಿದ್ದ ತಗಡುಗಳನ್ನೇ ಅಚ್ಚುಕಟ್ಟಾಗಿ ಕತ್ತರಿಸಿ ನಾಲ್ಕು ರೆಕ್ಕೆಗಳನ್ನಾಗಿ ಪರಿವರ್ತಿಸಿ ಜೋಡಿಸಿದ್ದಾನೆ. ಗಾಳಿ ಬೀಸುತ್ತಿದ್ದಂತೆಯೇ ತಗಡಿನ ರೆಕ್ಕೆಗಳು ತಿರುಗಲು ಆರಂಭಿಸುತ್ತವೆ. ಅದರೊಂದಿಗೆ ಅದಕ್ಕೆ ಬೆಲ್ಟ್​ನಿಂದ ಜೋಡಿಸಲಾಗಿರುವ ಎರಡು ಚಕ್ರಗಳು ತಿರುಗತೊಡಗುತ್ತವೆ. ಚಕ್ರಗಳಿಗೆ ಸಂಪರ್ಕ ಹೊಂದಿರುವ ಡೈನಮೋದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ.
ಡೈನಮೋದಲ್ಲಿ ಉತ್ಪಾದಿಸುವ ವಿದ್ಯುತ್ ಅಟ್ಟದ ಕೆಳಗಿರುವ ಟ್ರ್ಯಾಕ್ಟರ್ ಬ್ಯಾಟರಿಯಲ್ಲಿ ಸಂಗ್ರಹವಾಗುತ್ತದೆ. ಸಂಗ್ರಹಗೊಂಡ ವಿದ್ಯುತ್ ್ತ್ನು ಪಕ್ಕದಲ್ಲಿರುವ 600 ವ್ಯಾಟ್ ಸಾಮರ್ಥ್ಯದ ಇರ್ನÌರ್​ಗೆ ಸಾಗಿಸಿ ಡಿಸಿ ವಿದ್ಯುತ್​ನ್ನು ಎಸಿ ವಿದ್ಯುತ್​ನ್ನಾಗಿ ಪರಿವರ್ತಿಸಿ ತಮ್ಮ ಮನೆಗೆ ವೈರ್ ಮೂಲಕ ಸಂಪರ್ಕ ಕೊಟ್ಟಿದ್ದಾರೆ. ಸದ್ಯ ಇದರಿಂದ 300 ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.
ಅನೇಕ ಅಡೆತಡೆಗಳು:
ಸಿದ್ದಪ್ಪನ ಸಾಧನೆ ಒಂದೇ ಸಲಕ್ಕೆ ಸಿಕ್ಕ ಯಶಸ್ಸು ಅಲ್ಲ. ಗಾಳಿ ವಿದ್ಯುತ್​ಗಾಗಿ ನಿರ್ವಿುಸಿದ ಅಟ್ಟಣಿಗೆ ಮೊದಲ ಬಾರಿಗೆ ಗಾಳಿ ರಭಸಕ್ಕೆ ಬಿದ್ದು ಹೋಯಿತು. ಅಟ್ಟಣಿಗೆ ಬೀಳಲು ಕಾರಣವನ್ನು ಯೋಚಿಸಿ ಅದಕ್ಕೆ ಮತ್ತೊಂದು ತಂತ್ರಜ್ಞಾನವನ್ನು ಹುಡುಕಿ ಗಟ್ಟಿಗೊಳಿಸಿದ್ದಾನೆ. ಸತತ ಪ್ರಯತ್ನದಿಂದ ಸಿದ್ದಪ್ಪ ಚಕ್ರ ತಿರುಗುವಿಕೆಯ ಮೇಲೆ ಎಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಕರಾರುವಾಕ್ಕಾಗಿ ಹೇಳುತ್ತಾನೆ.
ಸತತ ವೀಕ್ಷಣೆಯಿಂದಲೇ ಇಲೆಕ್ಟ್ರಿಕಲ್ ಜ್ಞಾನದ ಪರಿಣತಿ ಪಡೆದಿದ್ದಾನೆ. ಗಂಟೆಗೆ 30 ಕಿ.ಮೀ. ವೇಗದಲ್ಲಿ ಗಾಳಿ ಬೀಸಿ ಐದಾರು ಗಂಟೆ ಚಕ್ರ ತಿರುಗಿದರೆ ಮನೆಯ ಬಳಕೆಗೆ ನಿರಂತರ ವಿದ್ಯುತ್ ಸಿಗುತ್ತದೆ ಎನ್ನುತ್ತಾನೆ. ಅಗತ್ಯವಿದ್ದಾಗ ಚಕ್ರ ತಿರುಗಿಸಿ ವಿದ್ಯುತ್ ಸಂಗ್ರಹವಾದ ನಂತರ ಅದನ್ನು ನಿಲ್ಲಿಸುವ ಸರಳ ಲಾಕ್ ವ್ಯವಸ್ಥೆಯನ್ನು ಕಂಡುಕೊಂಡಿದ್ದಾನೆ. ಇದಕ್ಕೆ ಮನೆಯಲ್ಲಿದ್ದ ಬ್ಯಾಟರಿ, ಬೆಲ್ಟ್, ವೈರ್, ಮೋಟಾರ್, ಡೈನಮೋ, ನಟ್​ಬೋಲ್ಟ್ ಹೀಗೆ ದೇಶಿ ಉಪಕರಣಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಈ ಯೋಜನೆಗೆ ಕೇವಲ 2-3 ಸಾವಿರ ರೂ. ಮೌಲ್ಯದ ಇರ್ನÌರ್ ಮಾತ್ರ ಖರೀದಿಸಿದ್ದಾನೆ. ಒಟ್ಟಾರೆ ಇದರ ಖರ್ಚು 5 ರಿಂದ 6 ಸಾವಿರ ರೂ. ಮಾತ್ರ. 20 ವರ್ಷಗಳ ಕಾಲ ಬೆಳಕಿಲ್ಲದೇ ಕತ್ತಲಲ್ಲಿ ಜೀವನ ಸಾಗಿಸುತ್ತಿದ್ದ ಸಿದ್ದಪ್ಪನ ಮನೆಯಲ್ಲಿ ಈಗ ಬೆಳಕಿನ ಸಂಭ್ರಮ. ಜತೆಗೆ ಮನೆ ಮಂದಿಗೆಲ್ಲ ಮನರಂಜನೆಗಾಗಿ 21 ಇಂಚಿನ ಕಲರ್ ಟಿವಿ, ಸಿಡಿ ಪ್ಲೇಯರ್, 2 ಸಿಎಫ್​ಎಲ್ ಬಲ್ಬ್, ಮಿಕ್ಸರ್ ಗ್ರೖೆಂಡರ್​ಗಳಿಗೆ ವಿದ್ಯುತ್ ಬಳಕೆ ಮಾಡಿಕೊಳ್ಳಲಾಗುತ್ತದೆ. ಆರಂಭದಲ್ಲಿ ಹುಚ್ಚು ಸಾಹಸ ಎಂದು ನಕ್ಕವರೆ ಇಂದು ನಮ್ಮ ಕರೆಂಟ್ ಸಿದ್ದಪ್ಪ ಎನ್ನುವಷ್ಟು ಮನೆ ಮಾತಾಗಿದ್ದಾನೆ.
ಕಳೆದ ಎಂಟು ವರ್ಷಗಳ ಹಿಂದೆಯೇ ಸ್ವಂತ ವಿದ್ಯುತ್ ಉತ್ಪಾದನೆ ಮಾಡಿಕೊಂಡು ಮನೆಗೆ ಬೆಳಕು ತಂದುಕೊಂಡಿದ್ದೇನೆ. ಇದು ನಾಲ್ಕು ಮಂದಿಗೆ ಬಳಕೆಯಾಗಬೇಕು. ಹೀಗಾಗಿ ಸರ್ಕಾರ ಸಹಾಯ ಮಾಡಿದರೆ ಇನ್ನಷ್ಟು ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಬಹುದು. ವಿದ್ಯುತ್ ಅಭಾವ ಇರುವ ಸಂಕಷ್ಟದ ಕಾಲದಲ್ಲಿ ಹನಿ ಹನಿ ಕೂಡ ಮಹತ್ವದ್ದಾಗಿದೆ. ಸುತ್ತಮುತ್ತಲಿನ ಜನರಿಗೆ ವಿದ್ಯುತ್ ಪೂರೈಕೆ ಮಾಡಬೇಕೆಂಬ ಆಸೆ ಇದೆ. ಆದರೆ, ಅದಕ್ಕೆ ಬೇಕಾಗಿರುವ ಬಂಡವಾಳ ಹೂಡುವಷ್ಟು ಶಕ್ತಿ ನನ್ನಲ್ಲಿಲ್ಲ.
ರೈತ ಸಿದ್ದಪ್ಪ ಹುಲಜೋಗಿ
For North Karnataka News visit www.uksuddi.in

Comments