UK Suddi
The news is by your side.

ಸೌಂದರ್ಯ ವರ್ಧಕ ಪಾಲಕ್ ಸೊಪ್ಪು

ಪಾಲಕ್ ಸೊಪ್ಪಿನಲ್ಲಿ ಹೇರಳವಾದ ಪೌಷ್ಟಿಕಾಂಶಗಳಿವೆ. ಮುಖ್ಯವಾಗಿ ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಹಾಗಾಗಿ ವಾರಕ್ಕೆ 3 ದಿನವಾದರೂ ಪಾಲಕ್ ಸೊಪ್ಪು ಸೇವಿಸಿದಲ್ಲಿ ಆರೋಗ್ಯಕ್ಕೆ ಒಳ್ಳೆಯದು. ಹೇಗೆ ಇದು ದೇಹದೊಳಗಿನ ಆರೋಗ್ಯಕ್ಕೆ ಉತ್ತಮವೋ ಹಾಗೆ ಇದು ಚರ್ಮಕ್ಕೆ ಕೂಡ ಒಳ್ಳೆಯದು. ಈ ಸೊಪ್ಪಿನಲ್ಲಿರುವ ಪೋಷಕಾಂಶಗಳಿಂದ ಚರ್ಮವ್ಯಾಧಿಗಳಾದ ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುತ್ತದೆ. ಹಾಗಾಗಿ ಪಾಲಕ್ ಸೊಪ್ಪಿನ ನಿಯಮಿತ ಸೇವನೆಯಿಂದ ಚರ್ಮಕ್ಕೆ ಆಗುವ ಲಾಭಗಳನ್ನು ಇಲ್ಲಿ ನೀಡಲಾಗಿದೆ.
* ಇದು ಕೂದಲ ಬೆಳವಣಿಗೆಗೆ ಒಳ್ಳೆಯದು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ, ಸಿ. ಇ, ಪೊಟ್ಯಾಷಿಯಂ, ಕ್ಯಾಲ್ಷಿಯಂ, ಮೆಗ್ನಿಷಿಯಂ ಕಬ್ಬಿಣ ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳಿದ್ದು, ಇವು ಕೂದಲ ಬೆಳವಣಿಗೆಗೆ ಪೂರಕವಾಗಿದೆ. ಅದರಲ್ಲೂ ಪಾಲಕ್​ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ಕೆಂಪು ರಕ್ತಕಣಗಳನ್ನು ಬಲಪಡಿಸಿ ಆಮ್ಲಜನಕವನ್ನು ಪ್ರತಿಕೂದಲ ಬುಡಕ್ಕೆ ತಲುಪಿಸಲು ನೆರವಾಗುತ್ತದೆ. ಇದು ದೃಢ ಹಾಗೂ ಆರೋಗ್ಯಕರವಾದ ಕೂದಲು ಬೆಳೆಯಲು ನೆರವಾಗುತ್ತದೆ.
* ಇದರ ನಿಯಮಿತ ಸೇವನೆಯಿಂದ ಕೂದಲು ಉದುರುವುದನ್ನು ತಡೆಯಲು ಸಾಧ್ಯ. ಕೂದಲ ಬುಡ ಸಡಿಲವಾಗಲು ಕಬ್ಬಿಣದ ಕೊರತೆ ಪ್ರಮುಖ ಕಾರಣವಾಗಿದೆ. ಪಾಲಕ್ ಮತ್ತು ಬಸಳೆ ಸೊಪ್ಪುಗಳಲ್ಲಿರುವ ಕಬ್ಬಿಣದ ಅಂಶ ಇದನ್ನು ಪೂರೈಸುವ ಕಾರಣ ಕೂದಲ ಉದುರುವಿಕೆಯನ್ನು ಸಮರ್ಥವಾಗಿ ತಡೆಯಬಹುದು. ಒಂದರ್ಥದಲ್ಲಿ ಕೂದಲ ಉದುರುವಿಕೆಗೆ ಇವು ಅತ್ಯುತ್ತಮ ಆಹಾರಗಳಾಗಿವೆ. ಕೂದಲು ಬಹಳವಾಗಿ ಉದುರುವ ಸಮಸ್ಯೆ ಇರುವವರು ದಿನಕ್ಕೊಂದು ಲೋಟ ಪಾಲಕ್ ಸೊಪ್ಪಿನ ಜ್ಯೂಸ್ ಕುಡಿದರೆ ಉತ್ತಮ ಪರಿಣಾಮವನ್ನು ಕೆಲವೇ ದಿನಗಳಲ್ಲಿ ಕಾಣಬಹುದು. ಈ ಜ್ಯೂಸ್ ನಿಮ್ಮ ಬೆಳಗ್ಗಿನ ಪ್ರಥಮ ಆಹಾರವಾಗಿದ್ದರೆ ಉತ್ತಮ.
* ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಪಾಲಕ್​ನಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ವಿಟಮಿನ್ ಎ ಚರ್ಮದ ಸೆಳೆತ ಮತ್ತು ಕಾಂತಿ ಹೆಚ್ಚಲು ನೆರವಾದರೆ ವಿಟಮಿನ್ ಸಿ ಹೊಸ ಜೀವಕೋಶಗಳ ಹುಟ್ಟಿಗೆ ನೆರವಾಗುತ್ತದೆ. ಅಲ್ಲದೆ ವಿವಿಧ ಕಾರಣಗಳಿಂದ ಘಾಸಿಗೊಂಡಿದ್ದ ಚರ್ಮದ ಜೀವಕೋಶಗಳು ಉದ್ದೀಪನಗೊಳ್ಳುವ ಮೂಲಕ ಚರ್ಮ ತನ್ನ ಸಹಜ ರೂಪ ಪಡೆಯಲು ನೆರವಾಗುತ್ತದೆ. ಅಲ್ಲದೆ ಹಳೆಯ ಕಲೆಗಳಿಂದ ದಟ್ಟವಾಗಿದ್ದ ಭಾಗವು ತಿಳಿಯಾಗತೊಡಗುತ್ತದೆ.
* ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ. ಬಿಸಿಲು ಮತ್ತಿತರ ಕಾರಣಗಳಿಂದ ದಟ್ಟವಾಗಿದ್ದ ಚರ್ಮ ತನ್ನ ಸಹಜವರ್ಣವನ್ನು ಪಡೆಯಲು ಪಾಲಕ್ ಸೊಪ್ಪು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಕೆ ಇದ್ದು, ಚರ್ಮ ಹಿಂದಿನ ಹೊಳಪನ್ನು ಮತ್ತು ಬಣ್ಣವನ್ನು ಪಡೆಯಲು ನೆರವಾಗುತ್ತದೆ. ವಿಶೇಷವಾಗಿ ಕಣ್ಣುಗಳ ಕೆಳಭಾಗ ಮತ್ತು ಸುತ್ತಲಿನ ಭಾಗ ಕಪ್ಪಗಾಗಿದ್ದನ್ನು ತಿಳಿಗೊಳಿಸುತ್ತದೆ.
* ವೃದ್ಧಾಪ್ಯವನ್ನು ದೂರಗೊಳಿಸುತ್ತದೆ. ಚರ್ಮದ ಸೂಕ್ಷ್ಮ ಹೊರಪದರದ ಸೆಳೆತವನ್ನು ಕಡಿಮೆಗೊಳಿಸಿ ನೆರಿಗೆ ಮೂಡದಂತೆ ಮಾಡುತ್ತದೆ. ಪಾಲಕ್​ನಲ್ಲಿ ಈ ಕಣಗಳನ್ನು ಹೊಡೆದೋಡಿಸುವ ಆಂಟಿಆಕ್ಸಿಡೆಂಟ್​ಗಳು ಹೇರಳವಾಗಿದ್ದು ಚರ್ಮ ಬೇಗನೆ ನೆರಿಗೆಗೆ ಒಳಗಾಗದಂತೆ ತಡೆದು ವೃದ್ಧಾಪ್ಯವನ್ನು ದೂರಾಗಿಸುತ್ತದೆ. ಕಣ್ಣುಗಳ ಕೆಳಗಿನ ಭಾಗದಲ್ಲಿ ಊದಿಕೊಂಡು ಚಿಕ್ಕ ಚೀಲದಂತಾಗುವ ಸ್ಥಿತಿಯನ್ನು ನಿವಾರಿಸುತ್ತದೆ.
* ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಪಾಲಕ್​ನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಿರುವ ಹಾನಿಕಾರಕ ಅತಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಿಸುತ್ತದೆ. ಈ ಕಿರಣಗಳು ಚರ್ಮವನ್ನು ಸುಟ್ಟಂತೆ ಮಾಡುವ ಕ್ಯಾನ್ಸರ್ ಮತ್ತು ವೃದ್ಧಾಪ್ಯದ ಕುರುಹುಗಳು ಬೇಗನೆ ಬರುವಂತೆ ಮಾಡುತ್ತವೆ. ಆದರೆ ಪಾಲಕ್​ನಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಈ ಕಿರಣಗಳಿಗೆ ನೈಸರ್ಗಿಕವಾಗಿ ಪದರದಂತೆ ವರ್ತಿಸಿ ಇದರ ಪರಿಣಾಮಗಳಿಂದ ಚರ್ಮ ಮತ್ತು ಆರೋಗ್ಯವನ್ನು ರಕ್ಷಿಸುತ್ತದೆ.
* ಮೊಡವೆಗಳಿಂದ ಮುಕ್ತಿ ನೀಡುತ್ತದೆ. ಹದಿಹರೆಯದವರಿಗೆ ನಿತ್ಯವೂ ಕಾಡುವ ಮೊಡವೆಗಳಿಗೂ ಪಾಲಕ್​ನ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರವಿದೆ. ಚರ್ಮವನ್ನು ಸರಿದೂಗಿಸುವ ಗುಣ ಮೊಡವೆಗಳನ್ನು ಗುಣಪಡಿಸಲು ಸಕ್ಷಮವಾಗಿದೆ. ವಿಷಕಾರಿ ವಸ್ತುಗಳು ಚರ್ಮದ ಕೆಳಭಾಗದಲ್ಲಿ ಸಂಗ್ರಹಗೊಂಡು ಮೊಡವೆಗೆ ಕಾರಣವಾಗುತ್ತವೆ. ಈ ವಿಷಕಾರಿ ವಸ್ತುಗಳನ್ನು ಒಳಗಿನಿಂದಲೇ ರಕ್ತದ ಮೂಲಕ ನಿವಾರಿಸಲು ಪಾಲಕ್​ನಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಪರಿಣಾಮವಾಗಿ ಹೊರಚರ್ಮಕ್ಕೆ ಘಾಸಿ ನೀಡದೆ ಮೊಡವೆಗಳು ಒಳಗಿನಿಂದಲೇ ಒತ್ತಿ ಹೋಗುತ್ತವೆ. ಪರಿಣಾಮವಾಗಿ ಈ ಮೂಲಕ ಮೂಡಬಹುದಾಗಿದ್ದ ಕಪ್ಪು ಕಲೆ ಇಲ್ಲವಾಗುತ್ತದೆ.
– ಟಿ.ಯು. ವಿನುತಾ, ಸೌಂದರ್ಯ ತಜ್ಞೆ
For North Karnataka News visit www.uksuddi.in

Comments