UK Suddi
The news is by your side.

ಕ್ರಾಂತಿಯ ಕಿಡಿ ಹೋಯಿತೆಲ್ಲಿ?

ತಾತ್ಯಾ ಟೋಪೆ 

-ರಾಜೇಶ್ ರಾವ್ 

ಜೂನ್ 29, 1863. ಮೇಜರ್ ಜನರಲ್ ಜಿ.ಎಸ್.ಪಿ. ಲಾರೆನ್ಸ್ ಭಾರತದಲ್ಲಿನ ಬ್ರಿಟಿಷ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಒಂದು ಪತ್ರ ಬರೆದ. “ತಾತ್ಯಾಟೋಪೆ ಬಿಕಾನೇರಿನಲ್ಲಿದ್ದಾನೆ. ಬಿಕಾನೇರಿನ ರಾಜ ತಾತ್ಯಾಟೋಪೆಗೆ ಧನಸಹಾಯ ಮಾಡಿದ್ದಾನೆ. ತಾತ್ಯಾನೊಂದಿಗೆ 5000 ಬಂಗಾಳದ ಮಾಜಿ ಸೈನಿಕರು ಸಾಲಂಬೂರು ಅರಣ್ಯದಲ್ಲಿದ್ದಾರೆ. ಅವರನ್ನೆದುರಿಸಲು 40000 ಸೈನಿಕರನ್ನು ಸಜ್ಜಾಗಿರಿಸಿದ್ದೇನೆ.” ಎನ್ನುವುದು ಆ ಪತ್ರದ ಸಾರಾಂಶ. ಅರೆ, ತಾತ್ಯಾಟೋಪೆಯನ್ನು ನೇಣಿಗೇರಿಸಿದ ನಾಲ್ಕು ವರ್ಷಗಳ ಬಳಿಕ ಮತ್ತೆ ತಾತ್ಯಾಟೋಪೆಯಿಂದ ಆಕ್ರಮಣ! ಹಾಗಾದರೆ ಏಪ್ರಿಲ್ 18, 1859ರಂದು ತಾತ್ಯಾಟೋಪೆ ಎಂದು ಹೇಳಿ ಬ್ರಿಟಿಷರು ನೇಣಿಗೇರಿಸಿದ್ದು ಯಾರನ್ನು? ತಾತ್ಯಾಟೋಪೆಯನ್ನೇ ಆಗಿದ್ದರೆ ನಾಲ್ಕು ವರ್ಷಗಳ ಬಳಿಕ ಬರೆದ ಪತ್ರದಲ್ಲಿ ತಾತ್ಯಾಟೋಪೆಯನ್ನು ಉಲ್ಲೇಖಿಸಿದ್ದೇಕೆ? ಬ್ರಿಟಿಷ್ ಅಧಿಕಾರಿಗಳು ಜನರನ್ನು ಹೆದರಿಸಲು ಅಥವಾ ತಾತ್ಯಾನನ್ನು ಸೆರೆ ಹಿಡಿಯಲು ವಿಫಲರಾಗಿ ಬೇಸತ್ತು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಲು ತಾತ್ಯಾ ಹೆಸರಲ್ಲಿ ಅನ್ಯ ವ್ಯಕ್ತಿಯನ್ನು ನೇಣಿಗೇರಿಸಿದರೆ? ಈ ಪತ್ರದಲ್ಲಿದ್ದ ವರದಿ ಸತ್ಯವಾಗಿರಲಿ ಅಥವಾ ಸುಳ್ಳೇ ಆಗಿರಲಿ, “ತಾತ್ಯಾ” ಎನ್ನುವ ಹೆಸರು ಬ್ರಿಟಿಷರನ್ನು ಯಾವ ಪರಿ ನಿದ್ದೆಗೆಡಿಸಿತ್ತು ನೋಡಿ!
1814ರಲ್ಲಿ ಶಿರ್ಡಿಯಿಂದ 35ಕಿಮೀ ದೂರದಲ್ಲಿರುವ ಪತೋಡಾ ಜಿಲ್ಲೆಯ ಯೆವೋಲಾ ಎನ್ನುವ ಊರಿನಲ್ಲಿ ಜನ್ಮ ತಳೆದ ರಾಮಚಂದ್ರ ಪಾಂಡುರಂಗ ಯೆವೋಲೇಕರ್ ಎಂಬ ಕಿಡಿ ತಾತ್ಯಾ ಎನ್ನುವ ಹೆಸರಿನ ಅಗ್ನಿಜ್ವಾಲೆಯಾಗಿ ದೇಶದಾದ್ಯಂತ ಪಸರಿಸಿತು. ಎರಡನೆಯ ಬಾಜೀರಾಯ ಬ್ರಿಟಿಷರಿಗೆ ಸೋತಾಗ ಆತನೊಂದಿಗೆ ಅರಮನೆಯಲ್ಲಿ ಪುರೋಹಿತರಾಗಿದ್ದ ತಾತ್ಯಾನ ತಂದೆ ಕಾನ್ಪುರದ ಬಿಠೂರಿಗೆ ತೆರಳಬೇಕಾಯಿತು. ಹೀಗೆ ತಾತ್ಯಾನ ಸಾಹಸಯಾತ್ರೆಗೆ ಶ್ರೀಗಣೇಶ ಹಾಡಿದ ಕಾನ್ಪುರಕ್ಕೆ ತೆರಳುವಾಗ ತಾತ್ಯಾ ನಾಲ್ಕು ವರ್ಷದ ಮಗು. ತಾತ್ಯಾನ ಇನ್ನೂರನೇ ಜನ್ಮವರ್ಷಾಚರಣೆಗೆ ಯುವಬ್ರಿಗೇಡ್ ಸಜ್ಜಾಗುತ್ತಿದೆ. ಬ್ರಿಟಿಷರನ್ನು ನಿದ್ದೆಯಲ್ಲೂ ಬೆಚ್ಚಿಬೀಳಿಸುತ್ತಿದ್ದ ಪದ ತಾತ್ಯಾ. ಅಂತಹ ತಾತ್ಯಾ ಭಾರತದ ಬಾನಂಗಳದಿಂದ ಹೇಗೆ ಮರೆಯಾದ ಎನ್ನುವುದು ಇತಿಹಾಸದಲ್ಲಿ ಕಗ್ಗಂಟಾಗುಳಿದಿರುವ ಪ್ರಶ್ನೆ. ಕೆಲವೇ ಕೆಲವು ಇತಿಹಾಸಕಾರರನ್ನು ಬಿಟ್ಟು ಉಳಿದವರೆಲ್ಲಾ ಬ್ರಿಟಿಷ್ ಕಂಗಳಲ್ಲೇ ಭಾರತದ ಇತಿಹಾಸವನ್ನು ಕಂಡುದುದರ ಫಲವಾಗಿ ಭಾರತದ ಚರಿತ್ರೆ ಕಲಸು ಮೇಲೋರಗವೇ ಆಗಿ ಬಿಟ್ಟಿದೆ. ಅಷ್ಟಕ್ಕೂ ಸ್ವಾತಂತ್ರ್ಯ ಸಂಗ್ರಾಮವನ್ನೇ ದಂಗೆಯೆಂದು ಕರೆದ ಇಲ್ಲಿನ ಇತಿಹಾಸಕಾರರು ತಾತ್ಯಾನ ಬಗ್ಗೆ ಸಂಶೋಧನೆಗಿಳಿದಾರೆ?
ಇರಲಿ,1859ರಲ್ಲಿ ಬ್ರಿಟಿಷರು ಸೆರೆಹಿಡಿದು ಗಲ್ಲಿಗೇರಿಸಿದ್ದು ತಾತ್ಯಾನನ್ನಲ್ಲ ಎನ್ನುವುದಕ್ಕೆ ಹಲವಾರು ಆಧಾರಗಳಿವೆ. ತಾತ್ಯಾನ ಪರಿವಾರದ ಹೇಳಿಕೆಯಂತೆ ತನ್ನ ಬಾಲ್ಯದ ಯೆವೋಲಾದಲ್ಲಿನ ಮನೆಗೆ 1859-62ರ ಮಧ್ಯೆ ಹಲವು ಬಾರಿ ಬಂದಿದ್ದ. ಆತನನ್ನು ಗಲ್ಲಿಗೇರಿಸಿದ್ದೇವೆಂದು ಬ್ರಿಟಿಷರು ಹೇಳಿದ ಕೆಲವು ತಿಂಗಳುಗಳ ಬಳಿಕ ಯೆವೋಲಾಕ್ಕೆ ಸಾಧುವಿನ ವೇಷದಲ್ಲಿ ಬಂದಿದ್ದ ತಾತ್ಯಾ ಎರಡು ದಿನ ಅಲ್ಲಿ ತಂಗಿದ್ದ. ಅಲ್ಲಿಂದ ಕೋಪರ್ಗಾಂವಿಗೆ ತೆರಳಿ ಏನಾದರೂ ಸಹಾಯ ಸಿಗುವುದೇ ಎಂದು ನೋಡುವುದಾಗಿ ತ್ರ್ಯಂಬಕ್ ಸದಾಶಿವ ಟೋಪೆಯ ಬಳಿ ಹೇಳಿದ್ದ. ಇದೇ ರೀತಿ ಅನೇಕ ಬಾರಿ ತನ್ನ ಹೆತ್ತವರು ತೀರಿಕೊಳ್ಳುವವರೆಗೂ(1962) ತನ್ನ ಹುಟ್ಟೂರಿಗೆ ಬಂದಿದ್ದ ತಾತ್ಯಾ ತನ್ನಿಂದಾದ ಧನ ಸಹಾಯ ಮಾಡಿ ಹೋಗುತ್ತಿದ್ದ. ಇದು ಸುಳ್ಳು ಎಂದು ಭಾವಿಸುವುದಾದರೆ ತಾತ್ಯಾನ ಪರಿವಾರಕ್ಕೆ ಆ ರೀತಿಯ ಸುಳ್ಳು ಹೇಳಿ ಸಾಧಿಸುವುದಾದರೂ ಏನಿತ್ತು? ತಾತ್ಯಾನನ್ನು ಸೆರೆ ಹಿಡಿದ ಸಂದರ್ಭದಲ್ಲಿ ತಾತ್ಯಾನ ಚಿತ್ರ ಬಿಡಿಸಿದವನು ಮೇಜರ್ ಮೇಡ್ ನ ಸೈನ್ಯದಲ್ಲಿದ್ದ ಲೆಫ್ಟಿನೆಂಟ್ ಬಾಗ್. ಆದರೆ ಈ ಚಿತ್ರ ತಾತ್ಯಾನ ಉಳಿದ ಚಿತ್ರಗಳಿಗೆ ಹೋಲಿಕೆಯಾಗುತ್ತಿಲ್ಲ. ಮಾತ್ರವಲ್ಲ ತಾತ್ಯಾನನ್ನು ಬಿಠೂರಿನಲ್ಲಿ ನೋಡಿದ್ದ ಜನರಲ್ ಲ್ಯಾಂಗನ ವರ್ಣನೆಗೂ ಈ ಚಿತ್ರಕ್ಕೂ ಅಗಾಧ ವ್ಯತ್ಯಾಸಗಳಿವೆ. ತಾತ್ಯಾ ಸೆರೆ ಸಿಕ್ಕರೆ ಕಾನ್ಪುರ ಯುದ್ಧದ ಸಮಗ್ರ ವಿಚಾರಣೆಯನ್ನು ನಡೆಸಿ ವರದಿ ಸಲ್ಲಿಸಬೇಕೆಂದು ಸರ್ಕಾರ ಆದೇಶಿಸಿತ್ತು. ಆದರೆ ಗಮನಾರ್ಹ ವಿಚಾರಣೆಯನ್ನೇ ನಡೆಸದೆ ತುರಾತುರಿಯಲ್ಲಿ ತಾತ್ಯಾನನ್ನು ಗಲ್ಲಿಗೇರಿಸಿತೇಕೆ?
ನವೆಂಬರ್ 14, 1862ರಲ್ಲಿ ಅಸಿಸ್ಟೆಂಟ್ ರೆಸಿಡೆಂಟ್ ಬಾಂಬೆ ಸರಕಾರದ ರಾಜಕೀಯ ವಿಭಾಗದ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಾತ್ಯಾನ ಸಂಬಂಧಿ ರಾಮಕೃಷ್ಣ ಟೋಪೆ ಬಿಠೂರನ್ನು ಬಿಟ್ಟು ಉದ್ಯೋಗವನ್ನರಸುತ್ತಾ ಬರೋಡಾಗೆ ಬಂದಿರುವುದಾಗಿಯೂ ತಾನು ಆತನನ್ನು “ತಾತ್ಯಾ ಎಲ್ಲಿದ್ದಾನೆ” ಎಂದು ವಿಚಾರಿಸಿದಾಗ, ಆತ ನಮ್ಮನ್ನು ಬಿಟ್ಟು ಹೋದ ನಂತರ ತಾತ್ಯಾನ ಮಾಹಿತಿಯೇ ನಮಗಿಲ್ಲ ಎಂದುತ್ತರಿಸಿದಾಗಿಯೂ ಉಲ್ಲೇಖಗಳಿವೆ. ಒಂದು ವೇಳೆ ತಾತ್ಯಾನನ್ನೇ ಗಲ್ಲಿಗೇರಿಸಿದ್ದು ಹೌದಾಗಿದ್ದರೆ ಬ್ರಿಟಿಷ್ ಸರಕಾರದ ಅಧಿಕಾರಿಯೊಬ್ಬನಿಗೆ ಈ ಪರಿಯ ವಿಚಾರಣೆಯ ಅಗತ್ಯವೇನಿತ್ತು? ಈ ಪತ್ರವನ್ನು ಮೇಜರ್ ಮೇಡ್ ಗೆ ರವಾನಿಸಿ ರಾಮಕೃಷ್ಣ ಟೋಪೆಯ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ಕೇಳಿದಾಗ ಆತನಿಂದ ಅದು ನಿಜವೆಂಬ ಉತ್ತರ ಲಭ್ಯವಾಗಿತ್ತು. ಜನರಲ್ ಮೇಡ್ ಈ ಸಂದರ್ಭದಲ್ಲಿ ತಾತ್ಯಾನನ್ನು ತಾನು ಸೆರೆ ಹಿಡಿದು ಗಲ್ಲಿಗೇರಿಸಿದ್ದೇನೆ, ಇನ್ನು ವಿಚಾರಣೆಯ ಅವಶ್ಯಕತೆ ಇಲ್ಲ ಎಂದೇಕೆ ಉತ್ತರಿಸಲಿಲ್ಲ? ತಾತ್ಯಾನನ್ನು ಗಲ್ಲಿಗೇರಿಸಿದ ಬಳಿಕವೂ ಇಬ್ಬರು ವ್ಯಕ್ತಿಗಳನ್ನು ತಾತ್ಯಾ ಎಂದು ಹೇಳಿ ಬ್ರಿಟಿಷರು ಗಲ್ಲಿಗೇರಿಸಿದ್ದರು. ಅಂದರೆ ಇದೆಲ್ಲವೂ ಬ್ರಿಟಿಷರಾಡಿದ ನಾಟಕ ಎಂದೇ ಭಾಸವಾಗುವುದಿಲ್ಲವೇ?
ತಾತ್ಯಾನನ್ನು ಸೆರೆಹಿಡಿಯಲು ಸಹಾಯ ಮಾಡಿದ ಎನ್ನಲಾದ ಮಾನ್ ಸಿಂಗ್ ಓರ್ವ ರಜಪೂತ. ತಮ್ಮ ಪ್ರಾಣ ಹೋದರೂ ಕೊಟ್ಟ ಮಾತಿಗೆ ತಪ್ಪುವವರಲ್ಲ ರಜಪೂತರು. ಹಾಗಾಗಿ ಆತ ತನ್ನ ಆಶ್ರಯದಲ್ಲಿದ್ದ ತಾತ್ಯಾನನ್ನು ಬ್ರಿಟಿಷರಿಗೊಪ್ಪಿಸಿದ ಎಂದು ಒಪ್ಪಲು ಕಷ್ಟವಾಗುತ್ತದೆ. ಕೆಲವು ಇತಿಹಾಸಕಾರರು ಮಾನ್ ಸಿಂಗ್ ತಾತ್ಯಾನ ಯೋಜನೆಯಂತೆ ತಾತ್ಯಾನ ಜಾಗದಲ್ಲಿ ಇನ್ನೊಬ್ಬನನ್ನು ಒಪ್ಪಿಸಿರಬಹುದೆಂದು ಅನುಮಾನಪಡುತ್ತಾರೆ. ಅಲ್ಲದೆ ಬ್ರಿಟಿಷರ ವಶದಲ್ಲಿದ್ದ ತನ್ನ ರಾಣಿ ಹಾಗೂ ಸಂಬಂಧಿಗಳನ್ನು ಬಿಡಿಸಿಕೊಳ್ಳಲು ಮಾನಸಿಂಗನೇ ತಾತ್ಯಾನನ್ನೊಪ್ಪಿಸುವ ನಾಟಕವನ್ನಾಡಿರಬಹುದೆಂಬ ಊಹೆಗಳೂ ಇವೆ. ಹಾಗೆಯೇ ಚಾಣಾಕ್ಷ ತಾತ್ಯಾ ಅನುಮಾನಗೊಂಡು ತಪ್ಪಿಸಿಕೊಂಡಾಗ ತನ್ನ ತಲೆ ಉಳಿಸಿಕೊಳ್ಳಲು ಬೇರೊಬ್ಬನನ್ನು ತಾತ್ಯಾ ಎಂದು ಬಿಂಬಿಸಿ ಬ್ರಿಟಿಷರಿಗೊಪ್ಪಿಸಿರಬಹುದೆಂಬ ಅನುಮಾನಗಳೂ ಇವೆ. ಈ ಎಲ್ಲಾ ಅಂಶಗಳನ್ನು ಖಚಿತ ಎಂದು ಒಪ್ಪಲಿಕ್ಕಾಗದೇ ಇದ್ದರು ಬ್ರಿಟಿಷರ ವರದಿಯೊಂದು ಇಂತಹ ಸಂಭವನೀಯತೆಯೊಂದನ್ನು ತೆರೆದಿಟ್ಟಿದೆ. ಆ ವರದಿಯಂತೆ ಮಾನ್ ಸಿಂಗನ ಆಶ್ರಯದಲ್ಲಿದ್ದ ತಾತ್ಯಾನನ್ನು ಸೆರೆ ಹಿಡಿಯುವಾಗ ತಾತ್ಯಾನ ಅಡುಗೆ ಭಟ್ಟರಿಬ್ಬರು ತಪ್ಪಿಸಿಕೊಂಡರು ಎಂದಿದೆ. ಅಡುಗೆಭಟ್ಟರೇ ತಪ್ಪಿಸಿಕೊಂಡಾಗ ಬ್ರಿಟಿಷರಿಂದಲೇ “ಅಪ್ರತಿಮ ಗೆರಿಲ್ಲಾ ನಾಯಕ” “ಕಣ್ಣೆದುರಿನಿಂದಲೇ ತಪ್ಪಿಸಿಕೊಳ್ಳುವುದರಲ್ಲಿ ಚಾಣಾಕ್ಷ”(genius of flight) ಎಂದೆಲ್ಲಾ ಹೊಗಳಿಸಿಕೊಂಡ ತಾತ್ಯಾ ಮಾತ್ರ ಸೆರೆ ಸಿಕ್ಕಿದನೆಂದರೆ ಅದು ಆಶ್ಚರ್ಯವಲ್ಲದೆ ಮತ್ತೇನು? ಅಲ್ಲದೆ ತಾತ್ಯಾನನ್ನು ಹಿಡಿದುಕೊಟ್ಟರೆ ಜಾಗೀರು ಕೊಡುತ್ತೇವೆಂದು ಮಾತುಕೊಟ್ಟ ಬ್ರಿಟಿಷರು ತಾತ್ಯಾ ತಮ್ಮ ಕೈಸೆರೆಯಾದ ಮೇಲೆ ಮಾನ್ ಸಿಂಗನಿಗೆ ಚಿಕ್ಕಾಸನ್ನೂ ಕೊಡಲಿಲ್ಲ. ಅಂದರೆ ಬ್ರಿಟಿಷರಿಗೆ ತಾವು ಸೆರೆ ಹಿಡಿದದ್ದು ತಾತ್ಯಾನನ್ನೇ ಎನ್ನುವ ವಿಶ್ವಾಸವಿರಲಿಲ್ಲ ಎನ್ನುವ ಗುಮಾನಿ ಏಳುವುದಿಲ್ಲವೇ?
ಗುಜರಾತ್ ವಿವಿಯ ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಆರ್.ಕೆ. ಧಾರಯ್ಯ ಬ್ರಿಟಿಷರು 1859ರ ನಂತರವೂ ಬದುಕಿದ್ದ ಅನ್ನುವುದಕ್ಕೆ ಹಲವು ಆಧಾರಗಳನ್ನು ಕೊಡುತ್ತಾರೆ. 1862ರಲ್ಲಿ ತನ್ನ ಹೆತ್ತವರು ತೀರಿಕೊಂಡ ಬಳಿಕ ಗುಜರಾತಿನ ನವಸಾರಿಗೆ ತಹಲ್ದಾಸ್ ಎನ್ನುವ ಸಾಧುವಿನ ವೇಶದಲ್ಲಿ ಬಂದು ನೆಲೆ ನಿಂತ ತಾತ್ಯಾ. ಅಲ್ಲಿನ ಬಾವಾಜಿ ಪರ್ವತದಲ್ಲಿ ನೆಲೆಸಿದ್ದ ಸಾಧು ತಹಲ್ದಾಸ್ ತಾತ್ಯಾನೇ ಎನ್ನುವುದಕ್ಕೆ ಧಾರಯ್ಯ ಕೊಡುವ ಇವು. ೧) ತಹಲ್ದಾಸ್ ತಾನು ದೇಶಸ್ಥ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತಿದ್ದರು. ತಾತ್ಯಾ ಕೂಡಾ ದೇಶಸ್ಥ ಬ್ರಾಹ್ಮಣ! ೨) ತಾತ್ಯಾ ಹಿಂದೊಮ್ಮೆ ಬ್ರಿಟಿಷ್ ಸೈನಿಕರಿಂದ ತಪ್ಪಿಸಿಕೊಂಡಿದ್ದ ಬಾಣಸ್ವರ ಅರಣ್ಯದಲ್ಲಿದ್ದ ಗಂಗ್ರೋಲ್ ಎಂಬ ಹಳ್ಳಿಗೆ ತಹಲ್ದಾಸ್ ಆಗಾಗ ಹೋಗಿ ಬರುತ್ತಿದ್ದರು. ೩)ತಾತ್ಯಾನ ಜೊತೆಗಾರ ರಾಮಚಂದ್ರ(ರಾಮಭಾವೂ) ತಹಲ್ದಾಸ್ ಜೊತೆಗಿದ್ದ ೪) ತಹಲ್ದಾಸ್ ತಾತ್ಯಾನಂತೆ ನಿರರ್ಗಳವಾಗಿ ಮರಾಠಿ,ಹಿಂದಿ,ಗುಜರಾತಿಗಳಲ್ಲಿ ಮಾತನಾಡುತ್ತಿದ್ದರು ೫) ತಹಲ್ದಾಸರಿಗೆ ಯುದ್ಧ ಹಾಗೂ ಶಸ್ತ್ರಾಸ್ತ್ರಗಳ ಬಗೆಗೆ ಅಗಾಧ ಜ್ಞಾನವಿತ್ತು ೬) ಜನರಲ್ ಲ್ಯಾಂಗ್ ವರ್ಣಿಸಿದ ತಾತ್ಯಾನಂತೆಯೇ ತಹಲ್ದಾಸ್ ಚರ್ಯೆ ಇದ್ದುದು ೭) ಸಂವತ್ 1871(AD 1814) ತಹಲ್ದಾಸ್ ಜನ್ಮವರ್ಷವಾಗಿತ್ತು. ತಾತ್ಯಾನ ಜನ್ಮವರ್ಷವೂ ಅದೇ!
ತಾತ್ಯಾ ಐದು ವಾರಗಳ ಕಾಲ ಮಾನ್ ಸಿಂಗನ ಆಶ್ರಯದಲ್ಲಿ ವಿಶ್ರಾಂತಿ ಪಡೆದು ಸರೊಂಜೀ ಕಾಡಿನಲ್ಲಿದ್ದ ತನ್ನ ಹೊಸ ಅನುಯಾಯಿಗಳ ನಾಯಕತ್ವ ವಹಿಸಿ ಹೋರಾಡುವ ರೂಪುರೇಷೆಯನ್ನು ನಿರ್ಧರಿಸಿದ್ದ. ಇದನ್ನೆಲ್ಲಾ ತಿಳಿದ ಮಾನ್ ಸಿಂಗ್ ಬ್ರಿಟಿಷರ ಕ್ಯಾಂಪಿಗೆ ದಿನನಿತ್ಯ ಹೋಗಿಬರುತ್ತಿದ್ದ ವಿಚಾರ ತಾತ್ಯಾನಂತಹ ಮೇಧಾವಿಗೆ ತಿಳಿಯಲಿಲ್ಲ ಎಂದು ನಂಬುವುದು ಕಷ್ಟವಾಗುತ್ತದೆ. ಎಷ್ಟೇ ಸುಸ್ತಾಗಿದ್ದರೂ ಶತ್ರು ಸೇನೆಯ ಸೆರೆಗೆ ಸಿಕ್ಕಿಹಾಕಿಕೊಳ್ಳುವಂತಹ ಮೂರ್ಖತನವನ್ನು ತಾತ್ಯಾ ಖಂಡಿತಾ ಮಾಡುವವನಲ್ಲ. ಅಲ್ಲದೆ ಐದುವಾರಗಳ ಕಾಲ ನಿದ್ದೆ ಮಾಡುವ ಪ್ರವೃತ್ತಿಯೂ ತಾತ್ಯಾನದ್ದಲ್ಲ. ಮೇಲಾಧಿಕಾರಿಗಳಿಗೆ ತಮ್ಮ ಕರ್ತವ್ಯ ನಿಷ್ಠೆಯನ್ನು ಸಾದರಪಡಿಸುವ ಸಲುವಾಗಿಯೋ, ರಾಣಿಯಿಂದ ಪ್ರಶಂಸೆ-ಜಾಗೀರು ಪಡೆದುಕೊಳ್ಳುವ ಆಶೆಯಿಂದಲೋ, ತಾತ್ಯಾನನ್ನು ಸೆರೆ ಹಿಡಿದೆವು-ಸಂಗ್ರಾಮ ಮುಗಿಯಿತು-ಇನ್ನು ಬಾಲಬಿಚ್ಚಬೇಡಿ ಎಂದು ಭಾರತೀಯರನ್ನು ಬೆದರಿಸುವ ಉದ್ದೇಶದಿಂದ ಯಾರೋ ಒಬ್ಬಾತನನ್ನು ಗಲ್ಲಿಗೇರಿಸಿ ಆತನೇ ತಾತ್ಯಾ ಎಂದು ಬ್ರಿಟಿಷರು ಬಿಂಬಿಸಿರಬಹುದು.
ಹಾಗಾದರೆ ತಾತ್ಯಾ ಏನಾದ? ಸನ್ಯಾಸಿಯಾಗಿಯೇ ಜೀವನ ಕಳೆದನೇ? ಅಥವಾ ಅಲ್ಲಲ್ಲಿ ಹೊಸ ಹೊಸ ಪಡೆಗಳನ್ನು ಕಟ್ಟಿ ಬೇರೆ ಬೇರೆ ಹೆಸರಲ್ಲಿ ಹೋರಾಡಿ ಮುಂದಿನ ಕ್ರಾಂತಿ ಪ್ರವಕ್ತಕರಿಗೆ ಪ್ರೇರಣೆ ನಿಡಿದನೇ? ಅಥವಾ ಮುಂದೆ ಭಾರತೀಯರ ನೆರವು ಸಿಗದೆ ಒದ್ದಾಡಿದನೇ? ಟಿಪ್ಪುವಿನಂಥ ಮತಾಂಧ, ಹೇಡಿಯನ್ನು ದೇಶಪ್ರೇಮಿ ಎನ್ನುವ ಈಗಿನ ದೇಶದ್ರೋಹಿಗಳಂತೆ ಆಗಲೂ ಬ್ರಿಟಿಷರ ಪರವಾಗಿದ್ದ ದೇಶದ್ರೋಹಿಗಳೇ ಅಧಿಕವಾಗಿದ್ದು ಸಹಕಾರಿಗಳೇ ಸಿಗದೇ ನಿರಾಶನಾಗಿ ಹೋದನೇ? ಇದಕ್ಕೆಲ್ಲಾ ಉತ್ತರ ಸಿಗಬೇಕಾದರೆ ನೈಜ ಇತಿಹಾಸಕಾರರೇ ಇತಿಹಾಸವನ್ನು ಬರೆಯಬೇಕಾಗಿದೆ. ಏನೇ ಇರಲಿ, ಶಿವಾಜಿಯ ಸಕಲ ಗುಣಗಳನ್ನು ಮೇಳೈಸಿಕೊಂಡಿದ್ದ ತಾತ್ಯಾ ಎನ್ನುವ ಕ್ರಾಂತಿ ಸೂರ್ಯ ಭವ್ಯ ಭಾರತದ ಸ್ಪೂರ್ತಿದಾಯಕ ಇತಿಹಾಸವೊಂದನ್ನು ರಚಿಸಿ ಮುಂದಿನ ತಾತ್ಯಾ(ವೀರ ಸಾವರ್ಕರ್)ನಿಗೆ ಪ್ರೇರಣೆಯಾಗಿ ಭಾರತೀಯರ ಮನದಲ್ಲಿ ಚಿರಸ್ಥಾಯಿಯಾಗುಳಿದ.

For North Karnataka News visit www.uksuddi.in

Comments