UK Suddi
The news is by your side.

ಕರ್ನಾಟಕದಲ್ಲೊಂದು ಶನಿ ಶಿಂಗಣಾಪುರ!

* ಮಾವ-ಅಳಿಯ ಎಳ್ಳೆಣ್ಣೆ ಎರೆದರೆ ಸರ್ವದೋಷ ಪರಿಹಾರ

– ಪ್ರಶಾಂತ ರಿಪ್ಪನ್​ಪೇಟೆ

ಮನುಷ್ಯನ ಗ್ರಹಗತಿ ಕೆಟ್ಟರೆ ಆತ ಅಡಿ ಇಟ್ಟಲ್ಲೆಲ್ಲ ಸೋಲು ಎಂಬ ಮಾತನ್ನು ಕೇಳುತ್ತಲೇ ಇರುತ್ತೇವೆ. ಗ್ರಹಗತಿ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಶನಿಗ್ರಹ. ಶನೈಶ್ಚರನ ಬಗ್ಗೆ ಭಕ್ತಿಗಿಂತ ಹೆಚ್ಚಾಗಿ ಭಯವಿರುತ್ತದೆ. ಆದರೆ ಶನೈಶ್ಚರ ಕೇವಲ ಕಷ್ಟಗಳನ್ನು ಕೊಡುವವನಲ್ಲ. ಭಕ್ತಿಯಿಂದ ಬೇಡಿದರೆ ಎಲ್ಲವನ್ನೂ ಕರುಣಿಸುವ ಕರುಣಾಳು. ಅಂಥ ಶನೈಶ್ಚರನ ದಿವ್ಯಕ್ಷೇತ್ರವೊಂದು ಕರ್ನಾಟಕದಲ್ಲಿದೆ.

ಶನೈಶ್ಚರಕ್ಷೇತ್ರಗಳು ದೇಶಾದ್ಯಂತ ಇವೆ. ಆದರೆ ಎಲ್ಲ ಕ್ಷೇತ್ರಗಳಿಗಿಂತ ಭಿನ್ನವಾದ, ದೇಶದಲ್ಲೇ ಪ್ರಸಿದ್ಧ ಶನೈಶ್ಚರ ಕ್ಷೇತ್ರವೆಂದರೆ ಮಹಾರಾಷ್ಟ್ರದಲ್ಲಿರುವ ಶನಿ ಶಿಂಗಣಾಪುರ. ಅದೇ ರೀತಿ ಕರ್ನಾಟಕದ ಹಾವೇರಿ ಜಿಲ್ಲೆ ರಾಣೆಬೆಬೆನ್ನೂರು ಪಟ್ಟಣದ ಹೊರಭಾಗದಲ್ಲೊಂದು ಶನಿಕ್ಷೇತ್ರವಿದೆ! ಇಲ್ಲಿರುವ ಶನೈಶ್ಚರಮೂರ್ತಿಗೆ ಭವ್ಯ ಗರ್ಭಗುಡಿಯಿಲ್ಲ, ಸುಂದರ ಕಟ್ಟಡವಿಲ್ಲ. ವಿಶೇಷ ಪ್ರಭಾವಳಿ, ಆಭರಣಗಳಿಲ್ಲ. ‘ಬಯಲು ಆಲಯದೊಳಗೊ, ಆಲಯ ಬಯಲೊಳಗೊ’ ಎಂಬ ವಚನದಂತೆ, ಬಯಲು ಗದ್ದುಗೆಯ ಮೇಲೆ ಶಿಂಗಣಾಪುರದಲ್ಲಿರುವಂತೆಯೇ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ಹೀಗೆ ಪ್ರತಿಷ್ಠಾಪಿಸಲಾಗಿರುವ ಶನೈಶ್ಚರನ ಸನ್ನಿಧಾನದಲ್ಲಿ ಹಲವು ಅಚ್ಚರಿಗಳು ನಡೆಯುತ್ತಿವೆ. ಅದರಲ್ಲೂ ಇಲ್ಲಿರುವ ಶನೈಶ್ಚರಸ್ವಾಮಿ ಸಾನ್ನಿಧ್ಯದಲ್ಲಿ ವಿಶೇಷ ಆಚರಣೆಯೊಂದಿದೆ. ಶನಿಗೆ ಎಳ್ಳೆಣ್ಣೆ ಎಂದರೆ ಇನ್ನಿಲ್ಲದ ಪ್ರೀತಿಯಷ್ಟೆ. ಇಲ್ಲಿ ಸೋದರಮಾವ ಮತ್ತು ಸೋದರಳಿಯ ಒಟ್ಟಾಗಿ ಸ್ವಾಮಿಗೆ ಎಳ್ಳೆಣ್ಣೆಯ ತೈಲಾಭಿಷೇಕ ಮಾಡಿದರೆ ಸರ್ವದೋಷಗಳು ನಿವಾರಣೆಯಾಗುತ್ತವೆ, ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಇಲ್ಲಿನ ಪ್ರತೀತಿ. ಈ ಮಾತಿಗೆ ಪುಷ್ಟಿ ಎಂಬಂತೆ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆಯ ಸಂದರ್ಭದಲ್ಲೇ ಸಾಕ್ಷಿ ದೊರೆತಿದೆ. ನೂರು ಜನರು ಸೇರಿದರೂ ಎತ್ತುವುದಕ್ಕೆ ಅಸಾಧ್ಯವಾಗಿದ್ದ ವಿಗ್ರಹವು ಕೇವಲ ಎಂಟು ಜೋಡಿ ಸೋದರಳಿಯ-ಮಾವ ಒಟ್ಟಾಗಿ ಕೈಜೋಡಿಸುತ್ತಿದ್ದಂತೆ ಸರಾಗವಾಗಿ ಎತ್ತಲು ಸಾಧ್ಯವಾಯಿತು. ಈ ಸ್ವಾಮಿ ಮಾವ-ಅಳಿಯನ ಸೇವೆಗೆ ತೃಪ್ತಿಯಾಗುತ್ತಾನೆ ಎಂಬುದಕ್ಕೊಂದು ನಿದರ್ಶನವಾಗಿದೆ.

ಶನೈಶ್ಚರ ನೆಲೆ ನಿಂತ ಇತಿಹಾಸ

ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಉಜ್ಜಯಿನಿ ಲಿಂಗೈಕ್ಯ ಜಗದ್ಗುರು ಸಿದ್ಧಲಿಂಗ ಭಗವತ್ಪಾದರ ಆರಾಧಕರು. ರಾಣೆಬೆನ್ನೂರು ಗಂಗಾಪುರ ರಸ್ತೆಯಲ್ಲಿರುವ ಈ ಪ್ರದೇಶದಲ್ಲಿ ಸಿದ್ಧಲಿಂಗ ಜಗದ್ಗುರುಗಳ ಗದ್ದುಗೆಯನ್ನು ಕಟ್ಟಿಸಬೇಕೆಂಬ ಸಂಕಲ್ಪದೊಂದಿಗೆ ಸ್ಥಳವನ್ನು ಖರೀದಿಸಿದ್ದರು. ಅಷ್ಟರಲ್ಲಿ ಭಕ್ತರ ಕನಸಿನಲ್ಲಿ ಬಂದ ಶನೈಶ್ಚರಸ್ವಾಮಿಯು ತಾನು ಇಲ್ಲಿ ನೆಲೆ ನಿಲ್ಲುವುದಾಗಿ ಹೇಳುತ್ತಾನೆ. ಆಗ ಸ್ವಾಮೀಜಿಸಹಿತ ಒಂದು ಭಕ್ತರ ತಂಡ ಶನಿಶಿಂಗಣಾಪುರಕ್ಕೆ ಹೋಗಿ ಪ್ರಸಾದವನ್ನು ಕೇಳಲಾಗಿ ಪ್ರತಿಷ್ಠಾಪಿಸುವಂತೆ ಸ್ವಾಮಿಯ ಪ್ರಸಾದವಾಗುತ್ತದೆ. ನಂತರ ವಾಸ್ತುಪ್ರಕಾರವಾಗಿ ಸ್ಥಳವನ್ನು ಗುರುತಿಸಿ 20 ಅಡಿ ಆಳವನ್ನು ತೆಗೆದು ಬನ್ನಿಪತ್ರೆ, ಎಳ್ಳು, ಎಳ್ಳೆಣ್ಣೆ, ಎಳ್ಳು ಹೋಳಿಗೆಗಳಿಂದ ಅಡಿಪಾಯವನ್ನು ಕಟ್ಟಿ. ಅದರ ಮೇಲೆ ಸ್ವಾಮಿಯ ವಿಗ್ರಹವನ್ನು ಕಾಶಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಶಾಸ್ತ್ರಸಮ್ಮತವಾಗಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಶನೈಶ್ಚರನ ಪ್ರತಿಷ್ಠಾಪನೆ ಆದಾಗಿನಿಂದಲೇ ಹಲವು ಪವಾಡಗಳು ನಡೆಯಲಾರಂಭಿಸಿವೆ.

ಕೆಲವೇ ವರ್ಷಗಳಲ್ಲಿ ಇದೊಂದು ಅಪರೂಪದ ಜಾಗೃತ ಕ್ಷೇತ್ರವಾಗಿ ಬೆಳೆಯುತ್ತಿದೆ. ಪ್ರತಿ ಕಾರ್ತಿಕ ಮಾಸದ ಕೊನೆಯ ಶನಿವಾರ ಶನೈಶ್ಚರ ಸ್ವಾಮಿಗೆ ತಿಲ ಲಕ್ಷ ದೀಪೋತ್ಸವ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಎರಡು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುತ್ತಾರೆ. ಇದೇ ಡಿ. 5ಕ್ಕೆ ದೀಪೋತ್ಸವ ನಡೆಯಲಿದೆ.

ವಿಶೇಷ ಮಂಗಳಾರತಿ

ಹಿಂದುಗಳ ಪವಿತ್ರಕ್ಷೇತ್ರ ಕಾಶಿಯ ಗಂಗಾತೀರದಲ್ಲಿ ನಡೆಯುವ ಆಕರ್ಷಕ ಗಂಗಾರತಿಯ ಮಾದರಿಯಲ್ಲಿಯೇ ಇಲ್ಲಿನ ಶನೈಶ್ಚರಸ್ವಾಮಿಗೆ ವಿಶೇಷ ಮಂಗಳಾರತಿ ನಡೆಯುತ್ತದೆ. ಪ್ರತಿ ಶನಿವಾರ ಬೆಳಗ್ಗೆ ಮತ್ತು ಸಂಜೆ ವಿಶೇಷ ಅಭಿಷೇಕ ಪೂಜಾದಿಗಳು ನಡೆಯುತ್ತವೆ. ಸೂರ್ಯಾಸ್ತದ ಬಳಿಕ ಅಭಿಷೇಕ ಪೂಜಾದಿಗಳು ನಡೆದ ಜರುಗುವ ಮಹಾಮಂಗಳಾರತಿಯು ಕಾಶಿಯಲ್ಲಿನ ಗಂಗಾರತಿಯನ್ನೇ ನೆನಪಿಸುತ್ತದೆ. ಏಕಾರತಿ, ತೇರಾರತಿ, ಸುದರ್ಶನ ಚಕ್ರಾರತಿಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಗ್ರಹದೋಷ ನಿವಾರಣೆ, ಸಂತಾನಭಾಗ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಭಕ್ತರು ಇಲ್ಲಿ ಹರಕೆ ಹೊತ್ತು ಫಲ ಪಡೆಯುತ್ತಿದ್ದಾರೆ.

ಹೋಗುವ ಮಾರ್ಗ

ಬೆಂಗಳೂರಿನಿಂದ 300 ಕಿ.ಮೀ. ದೂರವಿದ್ದು, ರಾ.ಹೆ. 4ರ ಮೂಲಕ ನೇರ ಬಸ್ ಸೌಕರ್ಯ ಹಾಗೂ ರೈಲಿನ ಸೌಕರ್ಯವಿದೆ.

by ವಿಜಯವಾಣಿ ನ್ಯೂಸ್

For North Karnataka News visit www.uksuddi.in

Comments