UK Suddi
The news is by your side.

ಧಾರವಾಡಕ್ಕೆ ಐಐಟಿ ಖಚಿತ

ದೇಶದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಪ್‌ ಟೆಕ್ನಾಲಜಿ (ಐಐಟಿ)ಯನ್ನು ಉತ್ತರ ಕರ್ನಾಟಕ ಪ್ರಮುಖ ಶೈಕ್ಷಣಿಕ ನಗರ ಧಾರವಾಡದಲ್ಲಿ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದಾಗಿ ಐಐಟಿಗಾಗಿ ಹೋರಾಟ ನಡೆಸುತ್ತಿರುವ ರಾಯಚೂರಿನ ಜನತೆಗೆ ತೀವ್ರ ನಿರಾಸೆಯಾದಂತಾಗಿದೆ.

ದೆಹಲಿಯಲ್ಲಿ ಬುಧವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಧಾರವಾಡದಲ್ಲಿ ಐಐಟಿ ಸ್ಥಾಪಿಸಲು ಅನುಮತಿ ನೀಡಲಾಯಿತು. ರಾಜ್ಯದ ಧಾರವಾಡ ಸೇರಿದಂತೆ 6 ರಾಜ್ಯಗಳಲ್ಲಿ ಐಐಟಿ ಸ್ಥಾಪಿಸಲು ಅನುಮತಿ ನೀಡಲಾಯಿತು. ರಾಜ್ಯದ ಜತೆ ಆಂಧ್ರಪ್ರದೇಶ, ಛತ್ತೀಸ್‌ಗಢ, ಗೋವಾ, ಜಮ್ಮು ಮತ್ತು ಕೇರಳದಲ್ಲೂ ಐಐಟಿ ಸ್ಥಾಪನೆಯಾಗಲಿದೆ.

ಮುಂದಿನ ಹಂತದಲ್ಲಿ ಈ ಐಐಟಿಗಳಿಗೆ ಕಾನೂನಿನ ಮಾನ್ಯತೆ ನೀಡಲು ಸೊಸೈಟಿ ರಿಜಿಸ್ಟ್ರೇಶನ್‌ ಕಾಯ್ದೆಯಡಿ ನೋಂದಣಿ ಆರಂಭವಾಗಲಿದೆ. ಬಳಿಕ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಕಾಯ್ದೆಗೆ ತಿದ್ದುಪಡಿ ತಂದು ನೂತನ ಐಐಟಿಗಳನ್ನು ಅದಕ್ಕೆ ಸೇರ್ಪಡೆ ಮಾಡಲಾಗುವುದು.

ಧಾರವಾಡದಲ್ಲಿ ಮೊದಲ ಶೈಕ್ಷಣಿಕ ವರ್ಷದಲ್ಲಿ ತಾತ್ಕಾಲಿಕ ವ್ಯವಸ್ಥೆಯಡಿ 180 ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಎರಡನೇ ವರ್ಷದಲ್ಲಿ 450 ವಿದ್ಯಾರ್ಥಿಗಳು ಮತ್ತು ಮೂರನೇ ವರ್ಷದಲ್ಲಿ 928 ವಿದ್ಯಾರ್ಥಿಗಳು ಸೇರ್ಪಡೆಯಾಗಲಿದ್ದಾರೆ. ಈ ನೂತನ ಐಐಟಿಗಳ ಕಾರ್ಯ ನಿರ್ವಹಣೆಗೆ 2015ರಿಂದ 2018ರವರೆಗೆ 1,411 ಕೋಟಿ ರೂ. ನೀಡಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಆರಂಭದ ಮೂರು ವರ್ಷ ತಾತ್ಕಾಲಿಕ ಸ್ಥಳದಲ್ಲಿ ಐಐಟಿ ಕೆಲಸ ಮಾಡಲಿದ್ದು, ನಾಲ್ಕನೇ ವರ್ಷದಲ್ಲಿ ಶಾಶ್ವತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಐಐಟಿಯಲ್ಲಿ ಹತ್ತು ವಿದ್ಯಾರ್ಥಿಗಳಿಗೆ ಒಬ್ಬ ಪ್ರಾಧ್ಯಾಪಕ ಇರಲಿದ್ದಾರೆ.

ಉದಯವಾಣಿ

For North Karnataka News visit www.uksuddi.in

Comments