UK Suddi
The news is by your side.

ರಬಕವಿ: ಜವಳಿ ಉದ್ಯಮಿಯ ಜರ್ಬೆರಾ ಬೇಸಾಯ

 
– ಬಸಯ್ಯ ವಸ್ತ್ರದ
 
     ಒಂದು ಬಾರಿ ಬಂಡವಾಳ ಹೂಡಿದರೆ ಸಾಕು, ಅತಿ ಕಡಿಮೆ ಜಮೀನಿನಲ್ಲಿ ಹೂ ಬೆಳೆದು 6 ವರ್ಷ ನಿರಂತರ ಆದಾಯ ಗಳಿಸಲು ಸಾಧ್ಯ ಎಂಬುದನ್ನು ಜಮಖಂಡಿ ತಾಲೂಕಿನ ರಬಕವಿಯ ಜವಳಿ ಉದ್ಯಮಿಯೊಬ್ಬರು ತೋರಿಸಿಕೊಟ್ಟಿದ್ದಾರೆ.
ವಿವಿಧ ಮಾದರಿಯ ಕಾಟನ್ ಸೀರೆಗಳನ್ನು ಉತ್ಪಾದಿಸಿ ಜವಳಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣಪತರಾವ್ ಹಜಾರೆ, ಈಗ ಕೃಷಿಯತ್ತ ಒಲವು ತೋರಿ ಜರ್ಬೆರಾ ಹೂ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ರಬಕವಿ ಸಮೀಪದ ಚಿಮ್ಮಡ ಗ್ರಾಮದ ಬಳಿ 10 ಎಕರೆ ಜಮೀನಿನಲ್ಲಿ ಕಬ್ಬು, ಬಾಳೆ ಹಾಗೂ ದೊಡ್ಡ ಮೆಣಸಿನಕಾಯಿ ಜೊತೆ ಒಂದು ಎಕರೆ ಜಮೀನಿನಲ್ಲಿ ಹಸಿರು ಮನೆ (ಗ್ರೀನ್ ಹೌಸ್) ನಿರ್ವಿುಸಿ 10 ಬಣ್ಣಗಳಲ್ಲಿ ಅರಳುವ ಜರ್ಬೆರಾ ಹೂಗಳನ್ನು ಬೆಳೆದಿದ್ದಾರೆ.
60 ಲಕ್ಷ ರೂ. ವೆಚ್ಚ
ಒಂದು ಎಕರೆ ಜಮೀನಿನಲ್ಲಿ ಬೃಹತ್ ಹಸಿರು ಮನೆ ನಿರ್ವಿುಸಿರುವ ಅವರು, ವಿವಿಧ ಬಣ್ಣಗಳಲ್ಲಿ ಅರಳುವ ಜರ್ಬೆರಾ ಸಸಿಗಳನ್ನು ಮಹಾರಾಷ್ಟ್ರದಿಂದ ತರಿಸಿದ್ದಾರೆ. ಒಂದು ಸಸಿಗೆ 100 ರೂ. ನೀಡಿದ್ದಾರೆ. ಎರಡು ಸಸಿಗಳ ಮಧ್ಯೆ ಒಂದು ಅಡಿ ಅಂತರ ಕಾಯ್ದುಕೊಂಡು ನಾಟಿ ಮಾಡಿದ್ದಾರೆ. ಸಮರ್ಪಕವಾಗಿ ನೀರು ಪೂರೈಸಲು ಸಂಪೂರ್ಣ ಹನಿ ನೀರಾವರಿ ಅಳವಡಿಸಿದ್ದಾರೆ. ಇದಕ್ಕೆಲ್ಲ ಅವರು ಒಟ್ಟು 60 ಲಕ್ಷ ರೂ. ವೆಚ್ಚ ಮಾಡಿದ್ದಾರೆ.
ಬೆಳೆ ನಿರ್ವಹಣೆ
ಅತಿಯಾದ ಬಿಸಿಲಿಗೆ ಹಸಿರು ಮನೆ ಬಿಸಿಯಾಗುತ್ತದೆ. ಅದನ್ನು ತಂಪಾಗಿಸಲು 6 ಅಡಿ ಎತ್ತರದಲ್ಲಿ ಸ್ಪಿಂಕ್ಲರ್ಗಳನ್ನು ಅಳವಡಿಸಿ ತುಂತುರು ನೀರು ಬೀಳುವಂತೆ ಮಾಡಲಾಗಿದೆ. ಸಸಿ ನಾಟಿ ಮಾಡಿದ ಒಂದು ವಾರದಲ್ಲೇ ಅವುಗಳಿಗೆ ರೋಗ ತಗಲುವುದು ಸಾಮಾನ್ಯ. ಅಲ್ಲದೆ ಹಸಿರು ಮನೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ. ಕೃಷಿ ತಜ್ಞರ ಸಲಹೆಯಂತೆ ಔಷಧೋಪಚಾರ ಮಾಡಿ ರೋಗಬಾರದಂತೆ ನೋಡಿಕೊಳ್ಳಲಾಗಿದೆ. ನಾಟಿ ಮಾಡಿದ 80 ದಿನಗಳಲ್ಲಿ ಸಸಿಗಳು ಹೂ ಬಿಡಲು ಪ್ರಾರಂಭಿಸುತ್ತವೆ. ನಾಟಿ ಮಾಡಿದ 90 ದಿನದಲ್ಲಿ ಮೊದಲ ಹಂತದ ಕಟಾವು ಪ್ರಾರಂಭಿಸಲಾಗುತ್ತದೆ. ಒಮ್ಮೆ ನಾಟಿ ಮಾಡಿದ ಸಸಿಗಳು 6 ವರ್ಷ ನಿರಂತರ ಫಸಲು ನೀಡುತ್ತವೆ.
ಪ್ರತಿದಿನ 70 ಸಾವಿರ ರೂ.
ಒಂದು ಎಕರೆ ಜಮೀನಿನಲ್ಲಿ ನಾಟಿ ಮಾಡಿದ ಸಸಿಗಳಿಂದ ಪ್ರತಿ ದಿನ 7ಸಾವಿರ ಹೂಗಳನ್ನು ಸಂಗ್ರಹಿಸಲಾಗುತ್ತಿದೆ. ಒಂದು ಹೂವನ್ನು 10 ರೂ.ಗಳಂತೆ ಸಗಟು ದರದಲ್ಲಿ ಮಾರಾಟ ಮಾಡಿದರೂ ಪ್ರತಿ ದಿನ 70 ಸಾವಿರ ರೂ. ಆದಾಯ ಬರುತ್ತದೆ.
 
ಮಾರುಕಟ್ಟೆ ಸಮಸ್ಯೆ ಇಲ್ಲ
ರಬಕವಿ-ಬನಹಟ್ಟಿ ಹಾಗೂ ಮಹಾಲಿಂಗಪುರದಿಂದ ನೇರವಾಗಿ ಬೆಂಗಳೂರಿನ ಮಾರುಕಟ್ಟೆಗೆ ಹೋಗಲು ಖಾಸಗಿ ಬಸ್ ಸೇವೆ ಇರುವುದರಿಂದ ಸಂಜೆವರೆಗೆ ಕಟಾವು ಮಾಡಿದ ಹೂವುಗಳು ಬೆಳಗ್ಗೆ 6ಕ್ಕೆ ಬೆಂಗಳೂರು ತಲುಪುತ್ತವೆ. ಹೀಗಾಗಿ ಮಾರುಕಟ್ಟೆ ತೊಂದರೆ ಉಂಟಾಗಿಲ್ಲ. ಹೈದರಾಬಾದ್, ಸಿಕಂದರಾಬಾದ್, ಮಹಾರಾಷ್ಟ್ರದ ಮುಂಬೈ, ಪುಣೆ, ಸತಾರ ಹಾಗೂ ಗೋವಾ ರಾಜ್ಯಕ್ಕೂ ಹೂವನ್ನು ಸಾಗಿಸುತ್ತೇವೆ ಎನ್ನುತ್ತಾರೆ ಗಣಪತರಾವ್ ಹಜಾರೆ. ಕಟಾವು ಮಾಡಿದ ಬಳಿಕ ವೈಜ್ಞಾನಿಕ ವಿಧಾನ ಅನುಸರಿಸಿ ಹೂವುಗಳಿಗೆ ರಕ್ಷಣೆ ನೀಡಿದರೆ ಒಂದು ತಿಂಗಳು ಬಾಡುವುದಿಲ್ಲ ಎನ್ನುವ ಗಣಪತರಾವ್, ‘ಕಟಾವು ಪ್ರಾರಂಭವಾದ ಮೂರು ತಿಂಗಳಲ್ಲಿ ನಾವು ಹೂಡಿಕೆ ಮಾಡಿದ ಬಂಡವಾಳ ಕೈ ಸೇರುತ್ತದೆ. ಮುಂದೆ 5 ವರ್ಷ 9 ತಿಂಗಳವರೆಗೆ ಬರುವ ಹಣ ಲಾಭದ ಗಂಟಾಗುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ. ಹಜಾರೆ ಸಂಪರ್ಕ ಸಂಖ್ಯೆ: 998081100.
 (ಈ ಸುದ್ದಿಯನ್ನು ವಿಜಯವಾಣಿ ಪತ್ರಿಕಯಿಂದ ತೆಗೆದುಕೊಳ್ಳಲಾಗಿದೆ .)
For North Karnataka News visit www.uksuddi.in

Comments