ತಿರುಮಲ ದೇವಸ್ಥಾನ ದರ್ಶನಕ್ಕೆ ರಾಜ್ಯದ ಎಲ್ಲ ಪ್ರಧಾನ ಅಂಚೆ ಕಚೇರಿಗಳಲ್ಲಿ ಟಿಕೆಟ್
ಬಾಗಲಕೋಟೆ: ತಿಮ್ಮಪ್ಪನ ದರ್ಶನ ಭಾಗ್ಯ ಸಿಗುತ್ತೋ ಇಲ್ಲವೋ ಎನ್ನುವ ಆತಂಕ ಬೇಕಿಲ್ಲ. ಇನ್ಮುಂದೆ ತಿರುಪತಿಗೆ ಹೊರಡುವ ಮೊದಲೇ ರಾಜ್ಯದ ಪ್ರಮುಖ ಅಂಚೆ ಕಚೇರಿಗಳಲ್ಲಿ ವಿಶೇಷ ದರ್ಶನದ ಟಿಕೆಟ್ ಪಡೆಯಬಹುದು.
ತಿರುಪತಿ-ತಿರುಮಲ ದೇವಸ್ಥಾನದಲ್ಲಿ ವಿಶೇಷ ದರ್ಶನಕ್ಕೆ ರಾಜ್ಯದ ಎಲ್ಲ ಪ್ರಧಾನ ಅಂಚೆ ಕಚೇರಿಗಳಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭಿಸುವ ಮೂಲಕ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಸುಲಭವಾಗಿಸಿದೆ. ಹಲವು ಸಂದರ್ಭದಲ್ಲಿ ತಿರುಮಲದಲ್ಲಿ ಸರದಿಯಲ್ಲಿ ನಿಂತರೂ ಟಿಕೆಟ್ ಸಿಗದೆ ದಿನಗಟ್ಟಲೆ ಕಾಯುವ ಪರಿಸ್ಥಿತಿಯಿದೆ. ಆನ್ಲೈನ್ ಮೂಲಕವೂ ದೇವರ ವಿವಿಧ ಸೇವೆಗಳ ಟಿಕೆಟ್ಗಳನ್ನು ಮಾಡಲು ಟಿಟಿಡಿ ವ್ಯವಸ್ಥೆ ಮಾಡಿದೆ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಂಚೆ ಕಚೇರಿಯಲ್ಲೂ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಅವಕಾಶ ಆರಂಭಿಸಿರುವುದು ಎಲ್ಲರಿಗೂ ಅನುಕೂಲವಾಗಲಿದೆ. ವಿಶೇಷ ದರ್ಶನಕ್ಕಾಗಿ ಟಿಕೆಟ್ ಕಾಯ್ದಿರಿಸಲು 300 ರೂ. ಹಾಗೂ ಸೇವಾ ತೆರಿಗೆ ನಿಗದಿ ಮಾಡಲಾಗಿದೆ. ಅಗತ್ಯ ಗುರುತಿನಪತ್ರ ಹಾಗೂ ಭಾವಚಿತ್ರ ಒದಗಿಸಿ ಟಿಕೆಟ್ ಪಡೆದುಕೊಳ್ಳಬಹುದು. ಒಮ್ಮೆಗೆ ಗರಿಷ್ಠ 6 ಜನರಿಗೆ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಿದೆ. ತಾವಿರುವ ಸ್ಥಳದಿಂದಲೇ ಮುಂಚಿತವಾಗಿಯೇ ವಿಶೇಷ ದರ್ಶನದ ಟಿಕೆಟ್ ಕಾಯ್ದಿರಿಸಿ, ತಾವಂದುಕೊಂಡ ದಿನವೇ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದುಕೊಳ್ಳಬಹುದಾಗಿದೆ. ಇದರೊಟ್ಟಿಗೆ ಎಷ್ಟು ಗಂಟೆಗೆ ದರ್ಶನಕ್ಕೆ ಅವಕಾಶ ದೊರೆತಿದೆ ಎನ್ನುವ ಮಾಹಿತಿಯೂ ಲಭ್ಯವಾಗುತ್ತದೆ.
ಆಂಧ್ರಪ್ರದೇಶದ ಅಂಚೆ ಕಚೇರಿಗಳಲ್ಲಿ ಮಾತ್ರ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಅಳವಡಿಸಲಾಗಿತ್ತು. ಇದೀಗ ರಾಜ್ಯದ 70ಕ್ಕೂ ಹೆಚ್ಚು ಪ್ರಧಾನ ಅಂಚೆ ಕಚೇರಿಗಳಲ್ಲಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಳೆದ ವಾರದಿಂದ ಬಾಗಲಕೋಟೆ ಕಚೇರಿಯಲ್ಲಿ ಸೇವೆ ಆರಂಭಿಸಲಾಗಿದೆ.
– ಎಚ್.ಬಿ. ಹಸಬಿ ಎಎಸ್ಪಿ, ಪ್ರಧಾನ ಅಂಚೆ ಕಚೇರಿ, ಬಾಗಲಕೋಟೆ
– ಅಶೋಕ ಶೆಟ್ಟರ