14 ಶಂಕಿತರು ಎನ್ಐಎ ವಶ
ರಾಷ್ಟ್ರೀಯತನಿಖಾ ದಳ (ಎನ್ಐಎ) ಶುಕ್ರವಾರ ಬೆಂಗಳೂರು ಸೇರಿದಂತೆ ರಾಜ್ಯದ ಮೂರು ನಗರಗಳು ಹಾಗೂ ದೇಶದ ವಿವಿಧೆಡೆ ದಾಳಿ ನಡೆಸಿ ಐವರನ್ನು ಬಂಧಿಸಿದೆ ಮತ್ತು 9 ಜನರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದೆ. ಇವರಲ್ಲಿ ಮೂವರು ಬೆಂಗಳೂರಿನವರು ಮತ್ತು ತಲಾ ಒಬ್ಬರು ತುಮಕೂರು ಹಾಗೂ ಮಂಗಳೂರಿನವರು.
‘ಬೆಂಗಳೂರಿನ ಹೆಗಡೆನಗರದ ಮಹಮದ್ ಅಫ್ಜಲ್ ಅಲಿಯಾಸ್ ಅಬು ಮರಿಯಮ್ (35) ಹಾಗೂ ಮಂಗಳೂರು ಭಟ್ಟರಕೇರಿಯ ನಜ್ಮುಲ್ ಹುದಾ ಅಲಿಯಾಸ್ ಮಜ್ನು (25) ಎಂಬುವರನ್ನು ಅಧಿಕೃತವಾಗಿ ಬಂಧಿಸಲಾಗಿದೆ. ಬೆಂಗಳೂರಿನ ಕಾಟನ್ಪೇಟೆಯ ಸೋಹೆಲ್ ಅಹಮದ್ (30) ಮತ್ತು ಬ್ಯಾಟರಾಯನಪುರದ ಆಸಿಫ್ ಅಲಿ, ತುಮಕೂರಿನ ಹಣ್ಣಿನ ವ್ಯಾಪಾರಿ ಸೈಯದ್ ಮುಜಾಹಿದ್ ಹುಸೇನ್ (34) ಎಂಬುವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ. ಆದರೆ, ತಮ್ಮ ವಶದಲ್ಲಿರುವ ಬೆಂಗಳೂರಿನ ಮತ್ತೊಬ್ಬ ಶಂಕಿತನ ಹೆಸರನ್ನು ಅವರು ಬಹಿರಂಗಪಡಿಸಿಲ್ಲ.