ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ದಾವಣಗೆರೆ, ಬೆಳಗಾವಿ
ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿರುವ 20 ‘ಸ್ಮಾರ್ಟ್ ಸಿಟಿ’ಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಬೆಳಗಾವಿ, ದಾವಣಗೆರೆ ಮಾತ್ರ ಸ್ಥಾನ ಪಡೆದಿವೆ.
ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ಉಳಿದ ನಾಲ್ಕು ನಗರಗಳು ಆಯ್ಕೆ ಪೈಪೋಟಿಯಲ್ಲಿ ಹಿಂದುಳಿದಿವೆ.
ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ, ತುಮಕೂರು ಹಾಗೂ ಮಂಗಳೂರು ನಗರಗಳ ಹೆಸರನ್ನೂ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯ ಸರ್ಕಾರ ಕಳುಹಿಸಿತ್ತು.
ಸ್ಥಳೀಯ ಸಂಸ್ಥೆಗಳ ಆದ್ಯತೆಗಳು, ಸದರಿ ಯೋಜನೆಗೆ ಖಾಸಗಿ ವಲಯದಿಂದ ಸಂಗ್ರಹಿಸುವ ಸಂಪನ್ಮೂಲ, ಈ ಸಂಸ್ಥೆಗಳ ಆರ್ಥಿಕ ಶಕ್ತಿ ಹಾಗೂ ಯೋಜನೆ ಕಾರ್ಯಸಾಧ್ಯತೆ ಮೊದಲಾದ ಮಾನದಂಡಗಳನ್ನು ಆಧರಿಸಿ ‘ಸ್ಮಾರ್ಟ್ ಸಿಟಿ’ಗೆ ಆರಿಸಲಾಗಿದೆ. ಪ್ರಧಾನಿ ಅವರ ಕ್ಷೇತ್ರ ವಾರಾಣಸಿ ಪಟ್ಟಿಯಲ್ಲಿ ಸೇರಿಲ್ಲ.
ಈ ಉದ್ದೇಶಕ್ಕಾಗಿ ರಚಿಸಲಾಗಿದ್ದ ತಜ್ಞರ ಸಮಿತಿಗಳು, ವಿವಿಧ ನಗರಗಳು ಕಳುಹಿಸಿದ್ದ ಯೋಜನಾ ವರದಿಗಳನ್ನು ಅಧ್ಯಯನ ಮಾಡಿದ ಬಳಿಕ ನಗರಾಭಿವೃದ್ಧಿ ಸಚಿವಾಲಯಕ್ಕೆ ಶಿಫಾರಸು ಕಳುಹಿಸಿದ್ದವು.