UK Suddi
The news is by your side.

ಕಾಸು ತರುವ ಕಲಮಿ ಬದನೆ


ಕಲಮಿ ಬದನೆ ಬೆಳೆದ ನಿರ್ವಾಣಿ ಸತ್ಯಪ್ಪ ನಾಗಣ್ಣನವರ

ಕಬ್ಬನ್ನು ಪ್ರಮುಖವಾಗಿ ಬೆಳೆಯುವ ಜಿಲ್ಲೆಗಳಲ್ಲಿ ಬೆಳಗಾವಿಯೂ ಮುಂಚೂಣಿಯಲ್ಲಿದೆ. ಗೊಬ್ಬರದ ಬೆಲೆ  ಗಗನಕ್ಕೇರಲಿ, ಕಬ್ಬಿನ ಬಾಕಿ ಬಿಲ್ ಪಾವತಿಸದೇ ಇರಲಿ. ಇಲ್ಲವೇ ದರ ಪಾತಾಳಕ್ಕೆ ಕುಸಿಯಲಿ… ದೂರುತ್ತಲೇ ಮತ್ತೆ ಕಬ್ಬು ನಾಟಿಗೆ ಮುಂದಾಗುವ ಮನಸ್ಥಿತಿ ಈ ಭಾಗದ ರೈತರಲ್ಲಿದೆ ಅಂದ್ರೆ ನೀವು ನಂಬಲೇಬೇಕು! ಆದರೆ, ಕಬ್ಬಿಗೆ ಪರ್ಯಾಯ ಎಂಬಂತೆ ಈ ಭಾಗದ ರೈತರೊಬ್ಬರು ಬದನೆ ಬೆಳೆದು ಲಾಭ ಪಡೆಯುತ್ತಿದ್ದಾರೆ. ಅದು ಸಾಮಾನ್ಯ ಬದನೆಯಲ್ಲ; ಕಲಮಿ ಬದನೆ!

ಗುಂಟೆಗಳ ಲೆಕ್ಕದ ನೆಲದಲ್ಲಿ ‘ಕಲಮಿ ಬದನೆ’ ಬೆಳೆದು ಲಕ್ಷ–ಲಕ್ಷ ಲಾಭ ಗಳಿಸುತ್ತಿದ್ದಾರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗಡಿಯಂಚಿನ ನೊಗಣಿಹಾಳ ಗ್ರಾಮದ ರೈತ ನಿರ್ವಾಣಿ ಸತ್ಯಪ್ಪ ನಾಗಣ್ಣನವರ. ಆಳೆತ್ತರ ಬೆಳೆದು ಅಚ್ಚಹಸುರಿನಿಂದ ನಳನಳಿಸಿ ಬೀಗುತ್ತಿರುವ ಬದನೆ ಗಿಡಗಳು ನಿರ್ವಾಣಿ ಅವರ ಮಾತಿಗೆ ನಿದರ್ಶನದಂತಿವೆ.

‘ಇದು ಯಾವುದೋ ತಳಿಯ ಹೆಸರಲ್ಲ. ಬದಲಿಗೆ ಸಾಮಾನ್ಯ ಬದನೆಯನ್ನೇ ಕಸಿ ಮಾಡಿದ್ದೇನೆ ಅಷ್ಟೇ. ನಾನು ಕಾಡು ಬದನೆಯ ಕಾಂಡಕ್ಕೆ ಸಾಮಾನ್ಯ ಬದನೆಯ ಕೊಂಬೆ ಕಸಿಮಾಡಿ ‘ಕಲಮಿ ಬದನೆ’ಯನ್ನು ಬೆಳೆಸುತ್ತಿದ್ದೇನೆ. ಮೊದಲ ಯತ್ನವಾಗಿ 12 ಗಂಟೆ ಜಮೀನಿನಲ್ಲಿ ಬೆಳೆದಿದ್ದೆ. ₹2 ಲಕ್ಷ ಖರ್ಚು ಕಳೆದು ₹ಲಕ್ಷ ಲಾಭ ಸಿಕ್ಕಿತ್ತು’ ಎಂದು ಕಲಮಿ ಬದನೆಯ  ಆರಂಭಿಕ ಅನುಭವ ಬಿಚ್ಚಿಡುತ್ತಾರೆ ಅವರು.

‘ಕಳೆದ ಏಳೆಂಟು ವರ್ಷಗಳಿಂದ ಹೀಗೆ ಕಸಿ ಮಾಡಿ ಬೆಳೆಸುತ್ತಿದ್ದೇನೆ. ಸದ್ಯ ಎರಡು ತರಹದ ಬದನೆಗಳು ನನ್ನ ಹೊಲದಲ್ಲಿವೆ.12 ಗುಂಟೆಯಲ್ಲಿ ಹಸಿರು ಬದನೆ, 15 ಗುಂಟೆ ನೆಲದಲ್ಲಿ ಕಪ್ಪು ಬದನೆ(ನೇರಳೆ ಬಣ್ಣದ) ಇದೆ. ಮೊದಲಿಗೆ  ಹಸಿರು ಬದನೆಗೆ ಕಲಮಿ ಕಟ್ಟಿ ಪ್ರಯತ್ನಿಸಿದ್ದೆ. ಬಳಿಕ ಕಪ್ಪು ಬದನೆಗೂ ಅದನ್ನು ಪ್ರಯೋಗಿಸಿದೆ. ಹಸಿರು ಬದನೆಗಿಂತಲೂ ಕಪ್ಪು ಬದನೆಯ ಇಳುವರಿ ಹೆಚ್ಚು. ಆದರೆ, ಹಸಿರು ಬದನೆಗೆ  ಬೆಲೆ ಜಾಸ್ತಿ’ ಎನ್ನುತ್ತಾರೆ ನಿರ್ವಾಣಿ.

ಸಾಮಾನ್ಯ ಬದನೆ ಗಿಡಗಳು ಮೂರು–ಮೂರೂವರೆ ಅಡಿಗಳಷ್ಟು ಎತ್ತರ ಬೆಳೆಯುತ್ತವೆ. ಆದರೆ, ಇವು ಐದರಿಂದ ಏಳು– ಏಳೂವರೆ ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ. ಜತೆಗೆ ‘ನಿರ್ವಹಣೆ’ಯನ್ನು  ಅವಲಂಬಿಸಿ  ಎರಡು ವರ್ಷಗಳ ತನಕವೂ ಕಾಯಿ ದೊರೆಯುತ್ತದೆ. ಸಾಮಾನ್ಯ ಗಿಡಗಳ ಕಾಂಡ ಬೇಗನೆ ಕೊಳೆಯುತ್ತದೆ. ಆದರೆ, ಕಾಡು ಬದನೆಯ ಕಾಂಡ ಗಟ್ಟಿಯಾಗಿರುತ್ತದೆ. ದೀರ್ಘಕಾಲ ಬಾಳಿಕೆ ಬರುತ್ತದೆ. ಇದುವೇ ಇದರ ವಿಶೇಷತೆ ಎನ್ನುತ್ತಾರೆ. ಟೊಮೆಟೊಗೂ ‘ಕಲಮಿ ಕಟ್ಟುವ’ ಯತ್ನವನ್ನೂ ನಡೆಸಿದ್ದಾರಂತೆ.

ಕಸಿ ಮಾಡುವ ಕಲೆ…
ಇನ್ನು, ನಿರ್ವಾಣಿ ಅವರು  ಕಸಿ ವಿದ್ಯೆ ಕಲಿತಿದ್ದರ ಹಿಂದೊಂದು ಪುಟ್ಟ ಕಥೆಯಿದೆ.

‘ಒಂದು ಕಾಲದಲ್ಲಿ ನಾನು ಮತ್ತೊಬ್ಬರ ಮನೆಯಲ್ಲಿ 8 ವರ್ಷಗಳ ಕಾಲ ಜೀತಕ್ಕಿದ್ದೆ. ಅಲ್ಲಿಂದ ಹೊರಟ ಬಳಿಕ ಸ್ವತಂತ್ರವಾಗಿ ದುಡಿಯುವ ಆಸೆ ಮೂಡಿತು. ಅಲ್ಲಿಂದ ಹೊರಟು, ಏನಾದರೂ ಕಲಿಯಲು ಮುಂದಾದೆ. ಆಗ ಹಿಡಕಲ್ ಡ್ಯಾಂನಲ್ಲಿರುವ ನರ್ಸರಿ ಫಾರ್ಮ್‌ನಲ್ಲಿ ಹಾಗೂ ಹೀಗೂ ಕೆಲಸಗಿಟ್ಟಿಸಿದೆ. ಅಲ್ಲಿ ಮಾವು, ಸೀಬೆ, ಸಪೋಟಾ ಸಸಿಗಳ ಕಸಿಗಳ ಕಲಿತೆ’.

‘ಬಳಿಕ ಕೃಷಿ ಕಾರ್ಯಾಗಾರವೊಂದಕ್ಕೆ ಹೋಗಿದ್ದೆ. ಅಲ್ಲಿ ತಜ್ಞರೊಬ್ಬರು ಬದನೆ ಕಸಿ ಬಗ್ಗೆ ಹೇಳುತ್ತಿದ್ದರು. ಅದನ್ನು ನೋಡಿ ಬಂದು ಮನೆಯಲ್ಲಿ ಪ್ರಯತ್ನಿಸಿದೆ. ಹಲವು ವರ್ಷ ಮನೆಎದುರೇ ನೆಟ್ಟು ಬೆಳೆಸಿದೆ. ಅಂತಿಮವಾಗಿ ಅದನ್ನು ಹೊಲದಲ್ಲಿ ಬೆಳೆಸಲು ಪ್ರಾರಂಭಿಸಿದೆ. ಮೊದಲೇ ಕಸಿ ಬಗ್ಗೆ ಅರಿವಿತ್ತಾದ್ದರಿಂದ ಸುಲಭವಾಯ್ತು’ ಎಂದು ಅವರು ವಿವರಿಸಿದರು. ಸಾಲಿನಿಂದ ಸಾಲಿಗೆ 8 ಅಡಿ, ಗಿಡದಿಂದ ಗಿಡಕ್ಕೆ 6 ಅಡಿ ಅಂತರದ ಲೆಕ್ಕಾಚಾರದಲ್ಲಿ ಒಂದು ಎಕರೆ ಪ್ರದೇಶದ ನಾಟಿಗೆ 1100 ಸಸಿಗಳು ಬೇಕು. ಸಾಲುಗಳ ಅಂತರ 6 ಅಡಿ ಹಾಗೂ ಸಸಿಗಳ ಅಂತರ 5 ಅಡಿಗೆ ತಗ್ಗಿಸಿದರೆ 1200 ಸಸಿಗಳು ಬೇಕು.

ನಾಟಿ ಸಮಯದಲ್ಲಿ ಎಕರೆಗೆ ಕನಿಷ್ಠ 20 ಟನ್‌ ಸೆಗಣಿ ಗೊಬ್ಬರ ಬೇಕು. ಅದರೊಟ್ಟಿಗೆ 2 ಚೀಲ ಡಿಎಪಿ ಬೇಕು. 2 ಚೀಲ ಬೇವಿನ ಹಿಂಡಿ ಕಡ್ಡಾಯ. ಬೆಳೆದಂತೆ ಒಂದಿಷ್ಟು ಯೂರಿಯಾ… ನಂತರದಲ್ಲಿ ಕಾಲಕ್ಕನುಗುಣವಾಗಿ ನೀರು ಕೊಟ್ಟು, ಔಷಧ ಸಿಂಪಡಿಸಬೇಕಾಗುತ್ತದೆ. ಜನವರಿ ಬಳಿಕ ನಾಟಿಗೆ ಸೂಕ್ತ ಸಮಯ. ಬಿಸಿಲು ಚುರುಕು ಪಡೆಯುವುದರಿಂದ ಕೀಟ ಬಾಧೆ ಇಲ್ಲ. ನೆಲದ ತಾಕ್ಕತ್ತು, ನೀರು, ಗೊಬ್ಬರಕ್ಕೆ ತಕ್ಕಂತೆ ಗಿಡಗಳ ಬೆಳವಣಿಗೆ ಆಗುತ್ತದೆ. ಬೆಳೆದಂತೆಲ್ಲ ಗಿಡ ಅಗಲವಾಗುತ್ತ ಹೋಗುತ್ತದೆ. ಅವನ್ನು ಟೊಮೆಟೊ ಗಿಡ ಕಟ್ಟಿದಂತೆ ತಂತಿ ಬಿಗಿದು ಕಟ್ಟಬೇಕಾಗುತ್ತದೆ ಎನ್ನುತ್ತಾರೆ ಅವರು.

ಒಂದು ಎಕರೆ ನೆಲದಲ್ಲಿ ಕಲಮಿ ಬದನೆ ಬೆಳೆದು, 10 ಕೆ.ಜಿ ಬದನೆಗೆ ಕನಿಷ್ಠ ಸರಾಸರಿ ₹ 200 ದರ ಸಿಕ್ಕರೂ ₹8 ಲಕ್ಷ ಆದಾಯ ಖಚಿತ ಎಂದು ನಿರ್ಧಾರದ ದನಿಯಲ್ಲಿ ಹೇಳುವ ನಿರ್ವಾಣಿ, ‘ಈ ಬೆಳೆ ಕೂಡ ಬಹುತೇಕ 2 ವರ್ಷದ ತನಕ ಬರುತ್ತದೆ. ಖರ್ಚು ಕಳೆದರೂ, ಕಬ್ಬಿಗಿಂತಲೂ ಜಾಸ್ತಿ ಲಾಭ ಸಿಗುತ್ತೆ’ ಎನ್ನುತ್ತಾರೆ. ನಾಟಿ ಸಮಯದಲ್ಲಿ ಕೊಟ್ಟಿಗೆಗೊಬ್ಬರ ನೀಡಿದ್ದು ಬಿಟ್ಟರೆ ಇನ್ನುಳಿದಿದ್ದೆಲ್ಲವೂ ರಾಸಾಯನಿಕವೇ ಆಯ್ತು. ಸಾವಯವದತ್ತ ಮನಸು ಮಾಡಬಹುದಲ್ಲ ಅಂದ್ರೆ, ‘ಸಾವಯವ ಮಾಡಬೇಕು. ಅದಕ್ಕೆ  ಒಳ್ಳೇ ಬೆಲೆ ಸಿಗುತ್ತದೆ.

ಆದ್ರೆ, ಇಳುವರಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹಂಗಾಗಿ ನಷ್ಟದ ಸಂಭವ ಜಾಸ್ತಿ’ ಎನ್ನುತ್ತಾರೆ. ಹನಿ ನೀರಾವರಿ ಬಗ್ಗೆ ಪ್ರಸ್ತಾಪಿಸಿದರೆ, ‘ಇವು ಸಾಮಾನ್ಯ ಬದನೆ ಗಿಡಗಳಂತೆ ಇರಲ್ಲ. ಈ ಗಿಡಗಳ ಬೇರುಗಳು 5–6 ಅಡಿ ದೂರದವರೆಗೂ ಹರಡಿಕೊಂಡಿರುತ್ತವೆ. ಇದಕ್ಕೆ ಹನಿ ನೀರಾವರಿ ಸೂಕ್ತ ಆಗಲ್ಲ’ ಎಂಬ ವಿವರಣೆ ಅವರದು. ನಿರ್ವಾಣಿ ಅವರು ಇತ್ತೀಚಿಗೆ ಆಗ್ರಹಪೂರ್ವಕ ಒತ್ತಾಯಕ್ಕೆ ಮಣಿದು ಸಸಿಗಳನ್ನು ತಯಾರಿಸಿ ಮಾರುತ್ತಿದ್ದಾರೆ. ‘ನಾಟಿಗೂ ಮೂರು ತಿಂಗಳು ಮೊದಲೇ ಹೇಳಿದರೆ, ಸಸಿಗಳನ್ನು ಕಲಮಿ ಮಾಡಿಕೊಡುತ್ತೇವೆ. ಒಂದು ಸಸಿಗೆ 30 ರೂಪಾಯಿ’ ಎನ್ನುತ್ತಾರೆ ಅವರು.

ನಿರ್ವಾಣಿ ಅವರ ಸಂಪರ್ಕಕ್ಕೆ: 9845171374

For North Karnataka News visit www.uksuddi.in

Comments