UK Suddi
The news is by your side.

ಅಷ್ಟೆಲ್ಲ ಸಹಿಸಿಕೊಂಡರೂ ನಮ್ಮದು ಅಸಹಿಷ್ಣು ದೇಶವಾ?

-ವಿಶ್ವೇಶ್ವರ ಭಟ್
ಇತ್ತೀಚೆಗೆ ಇಸ್ರೇಲ್ ರಾಜತಾಂತ್ರಿಕ ಇಲಾಖೆ ಏರ್ಪಡಿಸಿದ್ದ ಪಾರ್ಟಿಯಲ್ಲಿ ಆ ದೇಶದ ಹಿರಿಯ ಪ್ರಜೆಯೊಬ್ಬರು ಸಿಕ್ಕಿದ್ದರು. ನಾನು ಈಗಾಗಲೇ ಆ ದೇಶಕ್ಕೆ ಮೂರು ಬಾರಿ ಹೋಗಿ ಬಂದಿರುವುದು ಅವರಿಗೆ ಗೊತ್ತಾಗಿ ನನ್ನಲ್ಲಿ ಆಸಕ್ತಿ ಮೂಡಿತ್ತು. ಹೀಗಾಗಿ ನಾವಿಬ್ಬರು ಭೇಟಿಯಾದಾಗ ಎರಡೂ ದೇಶಗಳ ಬಗ್ಗೆ ಗಾಢವಾಗಿ ಚರ್ಚಿಸುತ್ತೇವೆ. ಭಾರತದ ಬೇರೆ ಬೇರೆ ನಗರಗಳಲ್ಲಿ ಅವರು ಕಳೆದ ನಾಲ್ಕು ವರ್ಷಗಳಿಂದ ನೆಲೆಸಿರುವುದರಿಂದ, ಈ ದೇಶದ ಬಗ್ಗೆ ತಕ್ಕಮಟ್ಟಿಗೆ ತಿಳಿದುಕೊಂಡಿದ್ದಾರೆ. ತಮ್ಮ ತಾಯ್ನಾಡಿನ ಬಗ್ಗೆ ಎಲ್ಲರಿಗೂ ಅಭಿಮಾನವಿರುವುದು ಸಹಜ. ಆದರೆ ಈ ಆಸಾಮಿಗೆ ಅದು ಒಂದು ತೂಕ ಜಾಸ್ತಿ. ಜಗತ್ತಿನಲ್ಲಿ ಇಸ್ರೇಲಿಗಿಂತ ಮಿಗಿಲಾದ ದೇಶ ಮತ್ತೊಂದಿಲ್ಲ ಎಂಬುದು ಅವರ ಸ್ವಯಂಘೋಷಿತ ಪರಾಕಾಷ್ಠೆ.

ಮೊನ್ನೆ ಭೇಟಿಯಾದಾಗ, ನಮ್ಮ ಮಾತುಕತೆ ಭಯೋತ್ಪಾದನೆ, ಅಸಹಿಷ್ಣುತೆ… ಮುಂತಾದವುಗಳ ಸುತ್ತ ಹರಿಯತೊಡಗಿದಾಗ, ‘ಭಾರತದಂಥ ಸಹಿಷ್ಣುವಾದಿ

(ಠಿಟ್ಝಛ್ಟಿದ್ದಾಠಿ) ದೇಶ ಜಗತ್ತಿನಲ್ಲಿ ಮತ್ತೊಂದಿಲ್ಲ. ಅದೇಕೆ ಈ ದೇಶದಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಯುತ್ತಿದೆಯೋ ಗೊತ್ತಾಗುತ್ತಿಲ್ಲ’ ಎಂದರು. ‘ನೀವು ಹೇಗೆ ಹೇಳ್ತೀರಾ ಭಾರತ ಸಹಿಷ್ಣು ದೇಶ ಎಂದು? ಬುದ್ಧಿಜೀವಿಗಳು, ಪ್ರತಿಪಕ್ಷಗಳು ಬೊಬ್ಬೆ ಹೊಡೆಯುವುದನ್ನು ನೀವು ಕೇಳಿಸಿಕೊಂಡಿಲ್ಲವಾ?’ ಎಂದು ಕೇಳಿದೆ.

ಇದಕ್ಕೆ ಅವರು ಹೇಳಿದರು- ‘ಅತಿಯಾದ ಸ್ವಾತಂತ್ರ್ಯ, ಮುಕ್ತ ವಾತಾವರಣ ಸಿಕ್ಕಾಗ ಜನ ಹೀಗೆ ಮಾತಾಡ್ತಾರೆ. ಚೀನಾದಲ್ಲಿ ಹೀಗೆ ಹುಯಿಲೆಬ್ಬಿಸಿದ್ದಿದ್ದರೆ, ಗುಂಡು ಹೊಡೆದು ಸಾಯಿಸುತ್ತಿದ್ದರು. ಸೌದಿ ಅರೇಬಿಯಾದಲ್ಲಿ ಮನದ ಮಾತನ್ನು ಹೇಳುವ ಗಂಡೆದೆ ಯಾರಿಗಿದೆ? ಧರ್ಮದ ವಿರುದ್ಧ ಮಾತಾಡುವವರನ್ನು ಅಲ್ಲಿ ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕುತ್ತಾರೆ. ಭಾರತದಲ್ಲಿ ಮಾತ್ರ ಧರ್ಮ, ಧರ್ಮಗುರು, ದೇವರು ಸೇರಿದಂತೆ ಯಾರನ್ನು ಬೇಕಾದರೂ ಮನಸೋ ಇಚ್ಛೆ ನಿಂದಿಸಬಹುದು. ಕೆಟ್ಟದಾಗಿ ಚಿತ್ರಿಸಿ ಪುಸ್ತಕ ಬರೆಯಬಹುದು, ಸಿನಿಮಾ ಮಾಡಬಹುದು. ‘ಪಿಕೆ’ಯಂಥ ಸಿನಿಮಾವನ್ನು ಆಮೀರ್ ಖಾನ್ ಪಾಕಿಸ್ತಾನದಲ್ಲಿ ಮಾಡಲಿ ನೋಡೋಣ? ಅವರು ಕೇಳಿದಷ್ಟು ಹಣ ಕೊಟ್ಟರೆ, ಅವರು ಅಂಥ ಸಿನಿಮಾ ಮಾಡ್ತಾರಾ? ಸಾಧ್ಯವೇ ಇಲ್ಲ. ಅಂಥವರೂ ಸಹ ಈ ದೇಶ ಜ್ಞಿಠಿಟ್ಝಛ್ಟಿದ್ದಾಠಿ ಅಂತಾರೆ. ಈ ದೇಶದ ಮಹಾನ್ ಗ್ರಂಥ ‘ಭಗವದ್ಗೀತೆ’ಯನ್ನು ಸುಡಬೇಕು ಎಂದು ಕರೆಕೊಡ್ತಾರೆ. ಅಂಥವರು ವಿಚಾರವಾದಿಗಳು ಎಂದು ಕರೆಯಿಸಿಕೊಳ್ಳುತ್ತಾರೆ.

ಪತ್ರಿಕೆಗಳು ಅಂಥವರನ್ನು mಟಜ್ಟಛಿooಜಿqಛಿ ಠಿeಜ್ಞಿhಛ್ಟಿ ಎಂದು ಪ್ರಶಂಸಿಸುತ್ತವೆ. ಇಂಥ ವಿಚಿತ್ರಗಳು ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ. ಅರಬ್ ದೇಶಗಳಲ್ಲಿ ಷರಿಯಾ ವಿರುದ್ಧ, ಧರ್ಮಗುರುವಿನ ವಿರುದ್ಧ, ಮಾತಾಡಿದರೆ ಕಲ್ಲು ಹೊಡೆದು ಸಾಯಿಸುತ್ತಾರೆ. ಆದರೆ ನಿಮ್ಮ ದೇಶದಲ್ಲಿ ಧರ್ಮನಿಂದಕರನ್ನು ಬುದ್ಧಿಜೀವಿಗಳೆಂದು ಗೌರವಿಸುತ್ತೀರಿ. ಇದಕ್ಕಿಂತ ಸಹಿಷ್ಣುತೆ ಯಾವುದಿದೆ? ಧರ್ಮ, ದೇವರನ್ನು ಪ್ರಶ್ನಿಸುವ, ನಿಂದಿಸುವ ಪರಮ ಕಮ್ಯುನಿಸ್ಟ್ ರಾಷ್ಟ್ರವಾದ ಚೀನಾದಲ್ಲಿ ಸಹ ಇಂಥ ವಾತಾವರಣವಿಲ್ಲ. ಅಲ್ಲಿನ ಸರಕಾರವನ್ನು ಟೀಕಿಸಿ ಒಂದು ಸಾಲು ಬರೆದು ಜೀರ್ಣಿಸಿಕೊಂಡ ಪತ್ರಕರ್ತನಿದ್ದಾನಾ? ವಿದೇಶಿ ಪತ್ರಕರ್ತರು ಬರೆಯುವ ವರದಿಗಳ ಮೇಲೆ ಕಣ್ಗಾವಲು ಇಡಲಾಗುತ್ತದೆ. ಚೀನಾ ಸರಕಾರದ ವಿರುದ್ಧ ಬರೆಯುವವರನ್ನು ದೇಶದಿಂದ ಹೊರಹಾಕಲಾಗುತ್ತದೆ. ಆದರೆ ಭಾರತದಲ್ಲಿ ಸ್ವೇಚ್ಛಾಚಾರ ಎನಿಸುವಂಥ ಸ್ವಾತಂತ್ರ್ಯವಿದೆ. ಆದರೂ ಈ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಅಂತಾರಲ್ಲ, ನನಗೆ ಅರ್ಥವಾಗುತ್ತಿಲ್ಲ.’ ‘ನನಗೂ ಅರ್ಥವಾಗುತ್ತಿಲ್ಲ’ ಎಂದಷ್ಟೇ ಹೇಳಿದೆ. ಇಬ್ಬರ ಮಧ್ಯೆ ಕ್ಷಣ ಹೊತ್ತು ಮೌನ ನೆಲೆಸಿತ್ತು.

ನಾವು ಭೇಟಿ ಮಾಡಿದ ಎರಡು ದಿನಗಳ ಹಿಂದಷ್ಟೇ ಪಠಾಣಕೋಟ್ ವಾಯುನೆಲೆಯ ಮೇಲೆ ಪಾಕ್ ಉಗ್ರಗಾಮಿಗಳು ದಾಳಿ ನಡೆಸಿದ್ದರು.

‘ಪಠಾಣಕೋಟ್ ದಾಳಿ ಮಾಡಿದ್ದು ಯಾರು, ಯಾವ ದೇಶದ ಪ್ರಚೋದನೆಯಿಂದ ಈ ದಾಳಿ ನಡೆದಿದೆಯೆಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಭಾರತ ಸುಮ್ಮನಿದೆ. ಭಾರತ ಸರಕಾರದ ಉತ್ತರ ಬಹಳ ಟ್ಝb ಆಗಿದೆ. ಈ ಘಟನೆ ನಡೆಯುವ ಒಂದು ವಾರದ ಹಿಂದೆ ನಿಮ್ಮ ಪ್ರಧಾನಿ ಸ್ನೇಹಯಾಚಿಸಿ ಪಾಕಿಸ್ತಾನಕ್ಕೆ ಹೋಗಿಬಂದರು. ಅದಕ್ಕೆ ಪಾಕಿಸ್ತಾನ ಈ ರೀತಿ ಉತ್ತರ ಕೊಟ್ಟಿದೆ. ಸ್ನೇಹಹಸ್ತ ಚಾಚಿ ಬಂದವರ ಕೈ ಕತ್ತರಿಸುವ ಬುದ್ಧಿಯಿದು. ಇವನ್ನೆಲ್ಲ ಭಾರತ ಸರಕಾರ ಸುಮ್ಮನೆ ಸಹಿಸಿಕೊಂಡಿದೆ. ಭಾರತ ಅದ್ಹೇಗೆ ಅಸಹಿಷ್ಣು ದೇಶವೋ ಗೊತ್ತಾಗುವುದಿಲ್ಲ’ ಅಂದರು.

‘ಈ ಪ್ರಶ್ನೆಗಳನ್ನೆಲ್ಲ ನೀವು ನನ್ನ ಮುಂದೆ ಕೇಳಿದರೆ ಪ್ರಯೋಜನವೇನು? ರಾಜದೀಪ ಸರದೇಸಾಯಿ, ಬರ್ಖಾ ದತ್ ಅವರಂಥ ಪತ್ರಕರ್ತರಿಗೆ, ನಯನತಾರಾ ಸೈಗಲ್, ಅಶೋಕ ವಾಜಪೇಯಿ ಅವರಂಥ ಬುದ್ಧಿಜೀವಿಗಳಿಗೆ ಈ ಪ್ರಶ್ನೆ ಹಾಕಬೇಕಿತ್ತು. ನಿಮ್ಮ ನೀರಿಳಿಸುತ್ತಿದ್ದರು ಗೊತ್ತಾ?’ ಎಂದು ಕಿಚಾಯಿಸಿದೆ.

‘ಪಾಕಿಸ್ತಾನ, ಅಲ್ಲಿನ ಕಾನೂನು, ಅಲ್ಲಿನ ಧರ್ಮ, ಮಹಿಳಾ ಶೋಷಣೆ, ಜೀವನ ವಿಧಾನ…ಮುಂತಾದವುಗಳಲ್ಲೂ ಅಸಂಖ್ಯ ನ್ಯೂನತೆಗಳಿವೆ ತಾನೆ? ಈ ಎಲ್ಲ ಮಹಾನುಭಾವರನ್ನು ವಿಮಾನಭತ್ತೆ ಕೊಟ್ಟು ಆ ದೇಶಕ್ಕೆ ಕಳಿಸಿಕೊಡೋಣ. ಅಲ್ಲಿ ಹೋಗಿ ಅವರು ಅಲ್ಲಿನ ಧರ್ಮ, ಕಾನೂನನ್ನು ಟೀಕಿಸಲಿ. ಆಗ ನಾನು ಇವರ ತಾಕತ್ತನ್ನು ಮೆಚ್ಚುತ್ತೇನೆ. ಭಾರತದಲ್ಲಿ ಅಸಹಿಷ್ಣುತೆಯಿದೆಂಬುದನ್ನು ಒಪ್ಪಿಕೊಳ್ಳಬಹುದು.’ ಎಂದರು.

ಅದಕ್ಕೆ ನಾನು, ‘ಖಂಡಿತವಾಗಿಯೂ ಇವರೆಲ್ಲ ಪಾಕಿಸ್ತಾನಕ್ಕೆ ಹೋಗಿ ಹೇಳುತ್ತಿದ್ದರೇನೋ? ಆದರೆ ಆ ದೇಶ ಇವರಿಗೆ ವೀಸಾವನ್ನೇ ಕೊಡುವುದಿಲ್ಲ’ ಎಂದೆ. ಅವರು ಜೋರಾಗಿ ನಕ್ಕರು. (ನಮ್ಮ ಈ ಮಾತುಕತೆ ನಡೆಯುವಾಗ ನಟ ಅನುಪಮ್ ಖೇರ್‌ಗೆ ಪಾಕ್ ವೀಸಾ ನಿರಾಕರಿಸಿರಲಿಲ್ಲ.)

‘ನಾನು ನಿಮಗೆ ಇದಕ್ಕಿಂತ ಗಂಭೀರ ವಿಷಯವನ್ನು ಹೇಳಬೇಕು’ ಎಂದು ಒಂದು ಕ್ಷಣ ಮಾತು ನಿಲ್ಲಿಸಿದರು ಇಸ್ರೇಲಿ ಸ್ನೇಹಿತರು. ನಾನು ಅವರ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನಿಟ್ಟೆ. ಅದಕ್ಕೆ ಅವರು, ‘ಈ ಜಗತ್ತಿನಲ್ಲಿ ಭಯೋತ್ಪಾದಕ ಸಮಸ್ಯೆಗೆ ಅತಿ ಹೆಚ್ಚು ಬೆಲೆ ತೆತ್ತ ದೇಶವೆಂದರೆ ಭಾರತ. ಇಸ್ರೇಲ್ ಸಹ ಪಡಬಾರದ ಕಷ್ಟ ಅನುಭವಿಸಿದೆ. ಆದರೆ ಭಾರತದ ಅನುಭವದ ಮುಂದೆ ನಮ್ಮದೇನೂ ಅಲ್ಲ. ಭಾರತಕ್ಕೂ- ಇಸ್ರೇಲ್‌ಗೂ ಇರುವ ವ್ಯತ್ಯಾಸ ಅಂದ್ರೆ, ನಮ್ಮ ದೇಶದ ಮೇಲೆ ಯಾರೇ ದಾಳಿ ಮಾಡಲಿ, ನಾವು ಪ್ರತೀಕಾರ ತೆಗೆದುಕೊಳ್ಳದೇ ಹೋಗುವುದಿಲ್ಲ. ನಮ್ಮ ದೇಶದ ಮೇಲೆ ಬಾಂಬ್ ಅಲ್ಲ, ಕಲ್ಲನ್ನು ಎಸೆದರೂ, ಪ್ರತ್ಯುತ್ತರ ಕೊಡದೇ ಬಿಡುವುದಿಲ್ಲ. ನಮ್ಮ ಮೇಲೆ ಎಸೆದವನು ಎಲ್ಲಿಯೇ ಇರಲಿ, ಅವನ ಹುಟ್ಟಡಗಿಸದೇ ಹೋಗುವುದಿಲ್ಲ. ಅದಕ್ಕಾಗಿ ಪ್ರಾಣ ಹೋದರೂ ಸರಿಯೇ, ಮುಯ್ಯಿ ತೀರಿಸಿಕೊಳ್ಳದೇ ಬಿಡುವುದಿಲ್ಲ. ಈ ವಿಷಯದಲ್ಲಿ ರಾಜಿಗೆ ನಾವು ತಯಾರಿಲ್ಲ. ನಮ್ಮ ತಂಟೆಗೆ ಬಂದ ಯಾರನ್ನೂ ಸದೆಬಡಿಯದೇ ಬಿಟ್ಟ ನಿದರ್ಶನವೇ ಇಲ್ಲ. ಆದರೆ ನೀವಿದ್ದೀರಲ್ಲ ಭಾರತೀಯರು, ನಿಮ್ಮ ದೇಶದ ಮೇಲೆ ಎಷ್ಟೆಲ್ಲ ಭಯೋತ್ಪಾದಕ ದಾಳಿಗಳಾದವು. ಆ ದಾಳಿಗಳಿಗೆಲ್ಲ ಯಾರು ಕಾರಣವೆಂಬುದು ಗೊತ್ತಿದ್ದರೂ, ಸುಮ್ಮನೆ ಕೈಕಟ್ಟಿ ಬಾಯಿಮುಚ್ಚಿ ಕುಳಿತಿದ್ದೀರಿ. ಪ್ರತಿ ಭಯೋತ್ಪಾದಕ ದಾಳಿಯಾದಾಗಲೂ ನಿಮ್ಮ ಪ್ರಧಾನಮಂತ್ರಿ‘ನಮ್ಮ ಸಹನೆಯನ್ನು ಪರೀಕ್ಷಿಸಬೇಡಿ’ ಎಂದು ಹೇಳುವುದು ಭಲೇ ಜೋಕು. ಕೈಲಾಗದವರು ಮಾತ್ರ ಅಂಥ ಹೇಳಿಕೆ ನೀಡಬಲ್ಲರು. ನಿಮ್ಮಂತೆ ನಾವೂ ಹಾಗೆ ಹೇಳುತ್ತಾ ಕುಳಿತಿದ್ದಿದ್ದರೆ, ಇಂದು ಇಸ್ರೇಲ್ ಎಂಬ ದೇಶ ಭೂಪಟದ ಮೇಲೆಯೇ ಇರುತ್ತಿರಲಿಲ್ಲ, ಗೊತ್ತಿರಲಿ. ಆದರೂ ಭಾರತ ಅಸಹಿಷ್ಣು ದೇಶ ಅಂತ ಭಾರತೀಯರೇ ಹೇಳ್ತಾರಲ್ಲ, ಅದು ದುರ್ದೈವ’ ಎಂದರು.

ಈ ಮಾತುಗಳಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ.

ಭಾರತಕ್ಕೆ ಹೋಲಿಸಿದರೆ ಇಸ್ರೇಲ್ ಇಲಿಮರಿ, ಪುಟಗೋಸಿ. ಭಾರತ ಗಡಿಯಾಚೆ ಹಾಗೂ ಗಡಿಯೊಳಗೆ ಯಾವ ಯಾವ ಸಮಸ್ಯೆಗಳನ್ನು ಎದುರಿಸುತ್ತಿದೆಯೋ ಅವೆಲ್ಲವುಗಳನ್ನು ಇಸ್ರೇಲ್ ಸಹ ಎದುರಿಸುತ್ತಿದೆ. ಹಾಗೆ ನೋಡಿದರೆ ಇಬ್ಬರೂ ಸಮಾನ ದುಃಖಿಗಳು.ಇಸ್ರೇಲನ್ನು ಇಲಿಮರಿ ಆಂತ ಯಾಕೆ ಹೇಳಿದೆ ಅಂದ್ರೆ, ಒಂದು ದಿನದಲ್ಲಿ ಇಡೀ ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಯನ್ನು ತಲುಪಬಹುದು. ಉತ್ತರದಿಂದ ದಕ್ಷಿಣಕ್ಕೆ ಸುಮಾರು 475 ಕಿ.ಮೀ. ಅಷ್ಟೆ. ಬೆಂಗಳೂರಿನಿಂದ ಧಾರವಾಡಕ್ಕೋ, ಕೊಪ್ಪಳಕ್ಕೋ ಹೋದಷ್ಟು ದೂರ. ಪೂರ್ವದಿಂದ ಪಶ್ಚಿಮಕ್ಕೆ ಅತಿ ಹೆಚ್ಚು ಅಂತರವೆಂದರೆ 85 ಕಿ.ಮೀ. ಕೆಲವೆಡೆ ಈ ಅಂತರ ಇಪ್ಪತ್ತು ಕಿ.ಮೀ ಕೂಡಾ ಇದೆ. ಇಸ್ರೇಲ್‌ನ ಶೇ.60ರಷ್ಟು ಭೂಪ್ರದೇಶ ಶುದ್ಧ ಮರುಭೂಮಿ. ಬೆಂಗಳೂರಿನಲ್ಲಿ ಒಂದು ತಾಸಿನಲ್ಲಿ ಗರಿಷ್ಠ ಎಷ್ಟು ಮಳೆ ಬೀಳುವುದೋ, ಅಷ್ಟು ಮಳೆ ಇಸ್ರೇಲ್‌ನಲ್ಲಿ ಒಂದು ವರ್ಷದಲ್ಲಿ ಬೀಳುತ್ತದೆ. ಸಾವಿರ ಅಡಿ ಆಳಕ್ಕೆ ಹೋದರೂ ಬೊಗಸೆ ನೀರು ಸಿಗುವುದಿಲ್ಲ. ಇನ್ನು ನೀರು ಸಿಕ್ಕಿತೆನ್ನಿ, ಅದು ಉಪ್ಪುಪ್ಪು! ಮಣ್ಣಿನಲ್ಲಿ -ಲವತ್ತತೆ ಎಂಬುದೇ ಇಲ್ಲ. ಹೀಗಾಗಿ ಅಲ್ಲಿನ ಮಣ್ಣಿಗೆ ವಾಸನೆ ಸಹಾ ಇಲ್ಲ. (ಇಂಥ ದೇಶ, ಕೃಷಿಯಲ್ಲಿ ವಿಶ್ವಕ್ಕೇ ನಂಬರ್ ಒನ್ ಆಗಿರುವುದು, ಜಗತ್ತಿಗೆ ಕೃಷಿ ಪಾಠ ಹೇಳುವುದು ಬೇರೆ ಕತೆ).

ಇನ್ನು ಇಸ್ರೇಲ್ ಭೌಗೋಳಿಕವಾಗಿ ಎಂಥ ಅಪಾಯಕಾರಿ, ಸಂದಿಗ್ಧ ಹಾಗೂ ಆಯಕಟ್ಟಿನ ಸ್ಥಿತಿಯಲ್ಲಿದೆ ಅಂದ್ರೆ ಅದು ಒಂದು ದೇಶವಾಗಿ ಇನ್ನೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿರುವುದೇ ಒಂದು ಅದ್ಭುತ, ಅಚ್ಚರಿಯೆನ್ನಿಸುತ್ತದೆ. ಉತ್ತರದಲ್ಲಿ ಲೆಬನಾನ್, ಈಶಾನ್ಯದಲ್ಲಿ ಸಿರಿಯಾ, ಪೂರ್ವದಲ್ಲಿ ಜೋರ್ಡಾನ್, ಆಗ್ನೇಯದಲ್ಲಿ ಸೌದಿ ಅರೇಬಿಯಾ, ನೈರುತ್ಯದಲ್ಲಿ ಈಜಿಪ್ತ್ ದೇಶಗಳು ಇಸ್ರೇಲ್‌ನ ಗಡಿಯನ್ನು ಹಂಚಿಕೊಂಡಿವೆ. ಇನ್ನು ಇಸ್ರೇಲ್‌ನೊಳಗೇ ಪ್ಯಾಲಸ್ತೈನ್ ಬೇರೆ. ಸುತ್ತಲೂ ಪರಮವೈರಿ ದೇಶಗಳು. ಇಷ್ಟೂ ಸಾಲದೆಂಬಂತೆ ದೇಶದೊಳಗೊಬ್ಬ ಬ್ರಹ್ಮರಾಕ್ಷಸ! ಇನ್ನು ವೈರಿಗಳಿಗೆ ಸಹಾಯ ಮಾಡಲು ಇರಾಕ್, ಕುವೈತ್, ಅರ್ಮೇನಿಯಾ, ಅಜರಬೈಜನ್ ದೇಶಗಳು. ಆ ಎಲ್ಲ ದೇಶಗಳು ಬಕಪಕ್ಷಿಯಂತೆ ಇಸ್ರೇಲನ್ನು ನುಂಗಿ ನೊಣೆಯಲು ಸದಾ ಹೊಂಚುಹಾಕಿ ಕುಳಿತಿವೆ. ಒಂದು ಕ್ಷಣ ಯಾಮಾರಿದರೂ ಸಂಚಕಾರ ತಪ್ಪಿದ್ದಲ್ಲ. ಈ ಎಲ್ಲ ಇಸ್ಲಾಮಿಕ್ ದೇಶಗಳ ಮಧ್ಯೆ ಇಸ್ರೇಲ್ ಒಂದೇ ಯಹೂದಿ ದೇಶ. ಇಸ್ರೇಲ್ ರಾಜಧಾನಿ ಜೆರುಸಲೆಮ್ ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿಯರಿಗೆ ಪವಿತ್ರ ಕ್ಷೇತ್ರ. ಇದರ ಮೇಲೆ ಪ್ರಭುತ್ವ ಸಾಧಿಸಲು ಎಲ್ಲ ದೇಶಗಳ ಪೈಪೋಟಿ.

1948ರಲ್ಲಿ, ಇಸ್ರೇಲ್ ಸ್ವತಂತ್ರ ದೇಶವೆಂದು ಅಸ್ತಿತ್ವ ಪಡೆದಾಗ ಅದರ ಜನಸಂಖ್ಯೆ 6.50 ಲಕ್ಷ. ಇಸ್ರೇಲ್‌ನ್ನು ಸುತ್ತುವರಿದಿರುವ ಐದು ಅರಬ್ ದೇಶಗಳ ಜನಸಂಖ್ಯೆ ಸುಮಾರು ಮೂವತ್ತು ದಶಲಕ್ಷ. 2015ರಲ್ಲಿ ಇಸ್ರೇಲ್ ಜನಸಂಖ್ಯೆ ಎಂಟು ದಶಲಕ್ಷ ತಲುಪಿದೆ. ಆ ಪೈಕಿ ಶೇ. 80ರಷ್ಟು ಯಹೂದಿಗಳು. ಉಳಿದ ಶೇ.20ರಷ್ಟು ಮಂದಿ ಅರಬ್‌ಗಳು. ಈ ಅವಧಿಯಲ್ಲಿ ಇಸ್ರೇಲನ್ನು ಸುತ್ತುವರಿದಿರುವ ಐದು ಅರಬ್ ದೇಶಗಳ ಜನಸಂಖ್ಯೆ 140 ದಶಲಕ್ಷ. ಅಂದರೆ ಇಸ್ರೇಲ್ ಹಾಗೂ ಅದನ್ನು ಆವರಿಸಿರುವ ಅರಬ್ ದೇಶಗಳ ಜನಸಂಖ್ಯೆ ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಗಮನಿಸಬಹುದು. ಈಜಿಪ್ತ್ ಹಾಗೂ ಜೋರ್ಡಾನ್, ಇಸ್ರೇಲ್ ಜತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಅವುಗಳನ್ನು ನೆಚ್ಚಿಕೊಂಡು ಸುಮ್ಮನೆ ಕೂರುವಂತಿಲ್ಲ. ನೆರೆಹೊರೆ ದೇಶಗಳ ಒತ್ತಡ ಜಾಸ್ತಿಯಾದರೆ, ಶಾಂತಿ ಒಪ್ಪಂದಗಳೆಲ್ಲ ಕಾಗದಕ್ಕೆ ಸಮಾನ ಎಂಬುದು ಇಸ್ರೇಲಿಗೂ ಗೊತ್ತು. ಸುಮಾರು 75 ದಶಲಕ್ಷ ಜನಸಂಖ್ಯೆ ಹೊಂದಿರುವ ಇರಾನಿನ ಮೂಲಭೂತ ಇಸ್ಲಾಮಿಕ್ ನಾಯಕರಂತೂ ಇಸ್ರೇಲನ್ನು ಸರ್ವನಾಶ ಮಾಡಬೇಕೆಂಬ ಶಪಥಗೈದಿದ್ದಾರೆ. ಈ ಎಲ್ಲ ವೈರಿ ದೇಶಗಳನ್ನು ಬಗಲಲ್ಲಿ ಕಟ್ಟಿಕೊಂಡು ಕಳೆದ ಏಳು ದಶಕಗಳಿಂದ ನಿತ್ಯವೂ ಸೆಣಸುತ್ತಿರುವ ಇಸ್ರೇಲ್ ಒಂದು ರಾತ್ರಿಯೂ ಸುಖನಿದ್ದೆ ಮಾಡಿದ್ದಿಲ್ಲ. ಈ ಎಲ್ಲ ದೇಶಗಳೂ ಪ್ಯಾಲಸ್ತೀನಿಯರಿಗೆ, ಹಮಾಸ್ ಉಗ್ರ ಸಂಘಟನೆಗೆ ವ್ಯಾಪಕ ಪ್ರಮಾಣದಲ್ಲಿ ಶಸಾಸಗಳನ್ನು ಪೂರೈಸುತ್ತವೆ. ಪ್ಯಾಲಸ್ತೈನ್ ರಾಜಧಾನಿ ರಮಲ್ಲಾ ಹಾಗೂ ಇಸ್ರೇಲ್‌ನ ಟೆಲ್‌ಅವಿವ್ ನಗರದ ನಡುವೆ ರಾಕೆಟ್ ದಾಳಿ ಆಗಾಗ ನಡೆಯುತ್ತಲೇ ಇರುತ್ತವೆ. ಈ ಐದೂ ವೈರಿ ದೇಶಗಳು ಒಮ್ಮೆಗೆ ಎಗರಿ ಬಂದರೆ ಇಸ್ರೇಲ್‌ನ್ನು ಮುಗಿಸುವುದು ಅದ್ಯಾವ ಮಹಾ? ಆದರೆ ಇಸ್ರೇಲ್ ಹಾಕಿದ ಪಟ್ಟಿಗೆ, ಆ ವೈರಿ ದೇಶಗಳಿಗೆ ಕೂದಲು ಕಿತ್ತುಕೊಳ್ಳಲು ಸಹ ಆಗಿಲ್ಲ. ಹಾಗಂತ ಕಿರಿಕಿರಿ ತಪ್ಪಿದ್ದಲ್ಲ. ಈ ಐದು ದೇಶಗಳ ಪೈಕಿ, ಯಾವುದೇ ದೇಶ ತುಸು ಕಾಲು ಕೆರೆದರೂ ಸಾಕು, ಇಸ್ರೇಲ್ ತೊಡೆತಟ್ಟಿ ನಿಂತಿರುತ್ತದೆ. ಸಣ್ಣಪುಟ್ಟ ಜಗಳಗಳು ಬಾಂಬ್, ಕ್ಷಿಪಣಿ ದಾಳಿಯಲ್ಲಿ ಕೊನೆಗೊಳ್ಳುತ್ತವೆ. ಏನೇ ಆಗಲಿ, ಇಸ್ರೇಲ್ ಛಾನ್ಸ್ ತೆಗೆದುಕೊಳ್ಳುವುದಿಲ್ಲ. ಕಳೆದ ವರ್ಷ ಹಮಾಸ್ ಹಾಗೂ ಇಸ್ರೇಲಿ ಸೇನೆಗಳ ನಡುವೆ ಸತತ ಆರು ತಿಂಗಳ ಕಾಲ ಘರ್ಷಣೆ ನಡೆಯಿತು. ಪ್ರತೀಕಾರ ತೆಗೆದುಕೊಳ್ಳುವ ಯಾವ ಅವಕಾಶವನ್ನೂ ಇಸ್ರೇಲ್ ತಪ್ಪಿಸಿಕೊಳ್ಳಲಿಲ್ಲ.

1976ರಲ್ಲಿ ನಡೆದ ‘ಆಪರೇಶನ್ ಥಂಡರ್‌ಬೋಲ್ಟ್’ ಅಥವಾ ಎಂಟಬ್ಬೆ ಕಾರ‍್ಯಾಚರಣೆಯನ್ನು ಮರೆಯುವಂತೆಯೇ ಇಲ್ಲ. ಜೂನ್ 27, 1976ರಂದು ಪ್ಯಾಲಸ್ತೈನ್‌ನ ಇಬ್ಬರು ಉಗ್ರಗಾಮಿಗಳು ಟೆಲ್ ಅವೀವ್‌ನಿಂದ ಪ್ಯಾರಿಸ್‌ಗೆ ಹೊರಟ, 248 ಪ್ರಯಾಣಿಕರಿದ್ದ ಏರ್-ನ್ಸ್ ವಿಮಾನವನ್ನು ಉಗಾಂಡದ ಎಂಟಬ್ಬೆಗೆ ಅಪಹರಿಸಿಕೊಂಡು ಹೋದರು. ಇಸ್ರೇಲ್‌ನ ಸೆರೆಮನೆಯಲ್ಲಿರುವ 40 ಮಂದಿ ಪ್ಯಾಲಸ್ತೀನಿ ಉಗ್ರಗಾಮಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಈ ಅಪಹರಣ ನಡೆಯಿತು. ಉಗಾಂಡದ ಸರಕಾರ ಈ ಅಪಹರಣಕಾರರಿಗೆ ಬೆಂಬಲ ನೀಡಿತು. ಅಲ್ಲಿನ ಸರ್ವಾಧಿಕಾರಿ ಇದಿ ಅಮಿನ್ ಅಪಹರಣಕಾರರನ್ನು ಸ್ವತಃ ಸ್ವಾಗತಿಸಿದ. ಈ ಒತ್ತೆಯಾಳುಗಳ ಪೈಕಿ 94 ಮಂದಿ ಇಸ್ರೇಲಿಗಳಿದ್ದರು. ಉಳಿದ ಪ್ರಯಾಣಿಕರನ್ನು ಬಿಡುಗಡೆ ಮಾಡಿ, ಇಸ್ರೇಲಿಗಳನ್ನು ಮಾತ್ರ ಬಂಧನದಲ್ಲಿರಿಸಿಕೊಳ್ಳಲಾಯಿತು. ಬಂಧಿತ ಉಗ್ರಗಾಮಿಗಳನ್ನು ಬಿಡುಗಡೆ ಮಾಡದಿದ್ದರೆ, ಒತ್ತೆಯಾಳುಗಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಲಾಯಿತು.

ಇದಾಗಿ ಒಂದು ವಾರದಲ್ಲಿ ಇಸ್ರೇಲ್ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರಲು ಕಾರ‍್ಯಾಚರಣೆ ರೂಪಿಸಿತು. ಇಸ್ರೇಲ್‌ನಿಂದ ಸುಮಾರು 2500 ಮೈಲಿ ದೂರದಲ್ಲಿರುವ ಉಗಾಂಡಕ್ಕೆ ನೂರು ಮಂದಿ ಕಮಾಂಡೋಗಳುಳ್ಳ ಇಸ್ರೇಲ್‌ನ ಟ್ರಾನ್ಸ್

ಪೋರ್ಟ್ ವಿಮಾನ ನೆಗೆಯಿತು. ಅತ್ಯಂತ ಜಾಗರೂಕತೆಯಿಂದ ನಡೆಸಿದ ಈ ಕಾರ‍್ಯಾಚರಣೆ ತೊಂಬತ್ತು ನಿಮಿಷಗಳಲ್ಲಿ ಮುಗಿದು ಹೋಯಿತು. ಎಲ್ಲ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಚಾವ್ ಮಾಡಲಾಯಿತು. ಆಪರೇಶನ್‌ನ ನೇತೃತ್ವ ವಹಿಸಿದ್ದ ಕಮಾಂಡರ್ ಮಾತ್ರ ಸತ್ತ. ಐವರು ಗಾಯಗೊಂಡರು. ಇಸ್ರೇಲಿ ಕಮಾಂಡೋಗಳು ಎಲ್ಲ ಅಪಹರಣಕಾರರು ಹಾಗೂ ಉಗಾಂಡದ 45 ಸೈನಿಕರನ್ನು ಸಾಯಿಸಿದರು. ನಾಲ್ಕು ಸಾವಿರ ಕಿಮೀ ದೂರದ ಬೇರೆ ದೇಶಕ್ಕೆ ಹೋಗಿ ಅಲ್ಲಿ ತಮ್ಮ ದೇಶದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬಂದ ಇಸ್ರೇಲಿಗಳ ಸಾಹಸಕಥನ ನಲವತ್ತು ವರ್ಷಗಳ ನಂತರ ಇಂದಿಗೂ ಮೈನವಿರೇಳಿಸುವಂಥದ್ದು.

ಇದಾದ ನಂತರ ಇಸ್ರೇಲಿನಲ್ಲಿ ಹರಿದ ರಕ್ತದ ಓಕುಳಿಗಳೆಷ್ಟೋ? ಆದರೆ ಇಂದಿಗೂ ಇಸ್ರೇಲ್ ಜಪ್ಪಯ್ಯ ಅಂದಿಲ್ಲ. ಆದರೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಭಾರತದ ಮೇಲೆ ಸುಮಾರು 70 ಬಾರಿ ಉಗ್ರರ ದಾಳಿಗಳಾದವು. ದೇಶದ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್‌ಭವನದ ಮೇಲೆಯೇ ಭಯೋತ್ಪಾದಕರು ದಾಳಿ ಮಾಡಿದರು. ಅದರ ನೇತೃತ್ವ ವಹಿಸಿದ್ದ ಭಯೋತ್ಪಾದಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕೋ ಬೇಡವೋ ಎಂದು ಚರ್ಚಿಸಿದ ದೇಶದ್ರೋಹಿಗಳನ್ನು, ಹೇಡಿಗಳನ್ನು ಸಹಿಸಿಕೊಂಡವರು ನಾವು. ಅಂಥವರಿಗೆ ಕ್ಷಮಾದಾನ ನೀಡಬೇಕೆಂದು ವಾದಿಸಿದ ದೇಶ ನಮ್ಮದು. ಭಾರತದ ಮೇಲೆ ಇನ್ನೂ ಹತ್ತಾರು ಭಯೋತ್ಪಾದಕರ ದಾಳಿಗಳಾದರೂ ನಾವು ಈ ಜನ್ಮದಲ್ಲಿ ಪಾಠ ಕಲಿಯುವುದಿಲ್ಲ. ನಮ್ಮ ಸಹನೆಯ ಪಾತ್ರೆ ಈ ಯುಗದಲ್ಲಿ ತುಂಬುವ ಲಕ್ಷಣ ಕಾಣುತ್ತಿಲ್ಲ.

ಆದರೂ ನಮ್ಮದು ಅಸಹಿಷ್ಣು ದೇಶ!?

For North Karnataka News visit www.uksuddi.in

Comments