UK Suddi
The news is by your side.

ವೀರ ಯೋಧ ಹನುಮಂತಪ್ಪ ಕೊಪ್ಪದ್ ಅಮರ

ನವದೆಹಲಿ: ಫೆಬ್ರುವರಿ 3ರಂದು ಸಿಯಾಚಿನ್​ನಲ್ಲಿ ಸಂಭವಿಸಿದ ಹಿಮಪ್ರವಾಹಕ್ಕೆ ಸಿಲುಕಿ, 6 ದಿನಗಳ ಬಳಿಕ ಜೀವಂತ ಪತ್ತೆಯಾಗಿದ್ದ ಧಾರವಾಡದ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರು ಇಂದು ಬೆಳಗ್ಗೆ 11.45ಕ್ಕೆ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂದು ಸೇನಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಳೆದ ವಾರ ಫೆ.3ರಂದು 19,500 ಅಡಿ ಎತ್ತರದ ಸಿಯಾಚಿನ್ ನೀರ್ಗಲ್ಲ ಪ್ರದೇಶದಲ್ಲಿ ಸಂಭವಿಸಿದ ಹಿಮಪ್ರವಾಹದಲ್ಲಿ ಕೊಪ್ಪದ್ ಮತ್ತು ಇತರ 9 ಮಂದಿ ಯೋಧರು ಸಿಕ್ಕಿಹಾಕಿಕೊಂಡು ಹಿಮರಾಶಿಯಡಿಯಲ್ಲಿ ಹೂತುಹೋಗಿದ್ದರು. ಆದರೆ ಸೋಮವಾರ ಜೀವಂತ ಸ್ಥಿತಿಯಲ್ಲಿ ಕೊಪ್ಪದ್ ಪತ್ತೆಯಾಗಿದ್ದು, ತಕ್ಷಣವೇ ಅವರನ್ನು ದೆಹಲಿಯ ಸೇನಾ ಆಸ್ಪತ್ರೆಗೆ ವಿಮಾನ ಮೂಲಕ ಒಯ್ದು ಪ್ರಾಣ ಉಳಿಸಲು ಶತ ಪ್ರಯತ್ನ ನಡೆಸಲಾಗುತ್ತಿತ್ತು.

ಆದರೆ ದೇಹಸ್ಥಿತಿ ವಿಷಮಿಸಿದ ಪರಿಣಾಮವಾಗಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದ ಕೊಪ್ಪದ್ ಅವರು ದೀರ್ಘಕಾಲೀನ ಪ್ರಜ್ಞಾಹೀನತೆಗೆ ಜಾರಿದ್ದಾರೆ ಎಂದು ಬೆಳಗ್ಗೆ ಆಸ್ಪತ್ರೆ ಮೂಲಗಳು ತಿಳಿಸಿದವು. ಸ್ವಲ್ಪ ಹೊತ್ತಿನ ಬಳಿಕ ಸೇನಾ ಅಧಿಕಾರಿಗಳು ಕೊಪ್ಪದ್ ಅವರ ಪ್ರಾಣ ಉಳಿಸಿಕೊಳ್ಳಲಾಗಲಿಲ್ಲ ಎಂಬ ವಿಷಾದಕರ ಮಾಹಿತಿಯನ್ನು ಮಾದ್ಯಮಗಳಿಗೆ ತಿಳಿಸಿದ್ದಾರೆ.

For North Karnataka News visit www.uksuddi.in

Comments