ಜಮ್ಮುಕಾಶ್ಮೀರ ಗುಂಡಿನ ಚಕಮಕಿ; ಮತ್ತೊಬ್ಬ ವೀರ ಕನ್ನಡಿಗ ಹುತಾತ್ಮ
ವಿಜಯಪುರ: ಜಮ್ಮುಕಾಶ್ಮೀರದ ಕುಪ್ವಾರದಲ್ಲಿ ನಿನ್ನೆ ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಜಿಲ್ಲೆಯ ಯೋಧ ಹುತಾತ್ಮನಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ಸಹದೇವ ಮಾರುತಿ ಮೋರೆ(26)ಹುತಾತ್ಮ ಸೈನಿಕರಾಗಿದ್ದಾರೆ. ನಿನ್ನೆ ತಡರಾತ್ರಿ ಜಮ್ಮುಕಾಶ್ಮೀರದ ಕುಪ್ವಾರದ ಚೌಕಿಬಾಲ್ ನಲ್ಲಿನ ಮನೆಯೊಂದರಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯುವ ವಿಶೇಷ ಕಾರ್ಯಾಚರಣೆಯಲ್ಲಿ ವೈರಿಗಳ ಗುಂಡು ತಗುಲಿ ಸಾವಿಗೀಡಾಗಿದ್ದು, ಈ ಬಗ್ಗೆ ಸೇನಾಧಿಕಾರಿಗಳು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಹಾಗೂ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಕಳೆದ ಮೂರು ತಿಂಗಳ ಹಿಂದಷ್ಟೇ ಯೋಧ ಸಹದೇವ ಮಾರುತಿ ಮೋರೆರಿಗೆ ನಿಶ್ಚಿತಾರ್ಥವಾಗಿತ್ತು.
ಇಂದು ಮಧ್ಯಾಹ್ನ ವೇಳೆಗೆ ಹುತಾತ್ಮ ಯೋಧನ ಪಾರ್ಥಿವ ಶರೀರ ತವರಿಗೆ ಬರುವ ನಿರೀಕ್ಷೆ ಇದೆ.