UK Suddi
The news is by your side.

ಫಲಿತಾಂಶ ಹೆಚ್ಚಳಕ್ಕೆ ಟಾನಿಕ್ ‘ಪ್ರಶ್ನೆ ಭಂಡಾರ

ಪರೀಕ್ಷೆ ಸಮೀಪಿಸಿದಂತೆ ವಿದ್ಯಾರ್ಥಿಗಳಲ್ಲಿ ಉದ್ವೇಗ ಹೆಚ್ಚುವುದು ಸಾಮಾನ್ಯ. ಈ ಉದ್ವೇಗ ಶಮನಕ್ಕೆ ಅತ್ಯುತ್ತಮ ಮದ್ದಾಗಿ ‘ಪ್ರಶ್ನೆ ಭಂಡಾರ ಪರಾಮರ್ಶೆ’ ಕೈಗೊಳ್ಳಬಹುದು. ತನ್ಮೂಲಕ ಆಯಾ ವಿಷಯಕ್ಕೆ ಸಂಬಂಧಿಸಿ ಪರೀಕ್ಷೆಯಲ್ಲಿ ಎದುರಾಗಬಹುದಾದ ಸಂಭವನೀಯ ಪ್ರಶ್ನೆಗಳು ಯಾವು ಎಂದು ಊಹಿಸಬಹುದು. ಆ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಿಸಬೇಕು ಎಂಬುದನ್ನೂ ರೂಢಿಸಿಕೊಳ್ಳಬಹುದು.

‘ಪ್ರಶ್ನೆ ಭಂಡಾರ’ ಎಂದರೆ, ಆಯಾ ತರಗತಿ ಹಾಗೂ ವಿಷಯಗಳಿಗೆ ಅನುಗುಣವಾಗಿ ಸಿದ್ಧಪಡಿಸಿದ ಘಟಕ, ಮಾಸಿಕ, ಅರ್ಧವಾರ್ಷಿಕ, ಪೂರ್ವಸಿದ್ಧತೆ, ಸರಣಿ, ಮಾದರಿ ಹಾಗೂ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಸಂಗ್ರಹ. ಇದು ವಿದ್ಯಾರ್ಥಿ ಅಥವಾ ಶಿಕ್ಷಕರು ಸಿದ್ಧಪಡಿಸಿರುವ ಬಿಡಿ– ಬಿಡಿಯಾದ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಆಗಿರಬಹುದು. ಇಲ್ಲವೇ, ಯಾವುದಾದರೊಂದು ಪ್ರಕಾಶನ ಪ್ರಕಟಿಸಿದ ಪುಸ್ತಕ ರೂಪದಲ್ಲಿರಬಹುದು. ಅಥವಾ ಪತ್ರಿಕೆಗಳಲ್ಲಿ ಪ್ರಕಟವಾದ ‘ಕಟ್ ಅಂಡ್ ಕೀಪ್’ ಮಾದರಿಯ ಸಂಗ್ರಹವಾಗಿರಬಹುದು.

‘ಸಿದ್ಧತೆ ಹಾಗೂ ರೂಢಿ’ ನಿಯಮ
ಕಲಿಕೆ ಸಂಬಂಧಿಸಿ ಶಿಕ್ಷಣತಜ್ಞ ಥಾರ್ನಡೈಕ್ ಮಂಡಿಸಿರುವ ‘ಸಿದ್ಧತೆ ಹಾಗೂ ರೂಢಿ ನಿಯಮ’ಕ್ಕೆ (*aw of Preperation & Practice) ಅನುಗುಣವಾಗಿ ಪರೀಕ್ಷಾ ಸಮಯದಲ್ಲಿ ನಿತ್ಯದ ಅಧ್ಯಯನದ ಜತೆ ‘ಪ್ರಶ್ನೆ ಪತ್ರಿಕೆ’ ಪರಾಮರ್ಶೆ ನಡೆಸುವುದು ಅಗತ್ಯ. ಇದರಿಂದ ಪರೀಕ್ಷೆಗೆ ಅಗತ್ಯವಿರುವ ಸಿದ್ಧತೆ ಹಾಗೂ ರೂಢಿ ಮಾಡಿಕೊಂಡಂತಾಗುತ್ತದೆ. ಅಗತ್ಯವಿರುವ ಸಿದ್ಧತೆ ಹಾಗೂ ರೂಢಿ ಮಾಡಿಕೊಳ್ಳುವುದರಿಂದ ‘ಪರೀಕ್ಷಾ ಭಯ’ದಿಂದ ಹೊರಬರಬಹುದು. ಅಲ್ಲದೇ, ಪರೀಕ್ಷೆ ಎದುರಿಸುವ, ಪ್ರಶ್ನೆಗಳಿಗೆ ಉತ್ತರಿಸುವ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬಹುದು.

ಸ್ಪರ್ಧೆ ಎದುರಿಸಲು ಸಿದ್ಧತೆ
ಇಂದಿನದು ‘ಕಾಂಪಿಟೇಷನ್ ಕಾಲ’ ಎಲ್ಲೇ ಹೋದರೂ ಪ್ರತಿ ಹಂತದಲ್ಲೂ ಸ್ಪರ್ಧೆ. ಅದು ಶಿಕ್ಷಣವಿರಲಿ, ಉದ್ಯೋಗ ಪಡೆಯುವುದಿರಲಿ, ವೇತನ ನಿರ್ಧರಣೆ ಇರಲಿ, ಪಡೆದ ಉದ್ಯೋಗದಲ್ಲಿ ಉನ್ನತಿ ಹೊಂದುವುದಿರಲಿ ನೀವು ಗಳಿಸಿದ ‘ಅಂಕ’ಗಳೇ ನಿರ್ಣಾಯಕ. ನಿಮ್ಮ ಅಂಕಗಳಿಕೆ ಉತ್ತಮವಾಗಿದ್ದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇಲ್ಲದಿದ್ದರೆ, ನೀವು ಸ್ಪರ್ಧೆಯಲ್ಲಿ ವಿಫಲರಾಗುವ ಸಾಧ್ಯತೆಯೇ ಹೆಚ್ಚು. ಇದು ತಾರ್ಕಿಕವಾಗಿ ಅಷ್ಟು ಒಳ್ಳೆಯದಲ್ಲದಿದ್ದರೂ ಇಂದಿನ ಅಗತ್ಯ. ಸಮಕಾಲೀನ ಪ್ರಪಂಚದಲ್ಲಿ ನೀವು ಯಶಸ್ಸು ಗಳಿಸಲು ಜಾಸ್ತಿ ಅಂಕ ಗಳಿಸುವುದು ಅಗತ್ಯ. ಈ ನಿಟ್ಟಿನಲ್ಲಿ ‘ಪ್ರಶ್ನೆ ಭಂಡಾರ’ ಆರಂಭಿಕ ಹಂತದಿಂದಲೇ ವಿದ್ಯಾರ್ಥಿಗಳನ್ನು ಸ್ಪರ್ಧೆ ಎದುರಿಸಲು ಮಾನಸಿಕವಾಗಿ ಸಿದ್ಧಗೊಳಿಸುತ್ತದೆ. 10 ಹಾಗೂ 12ನೇ ತರಗತಿಯ ನಿರ್ಣಾಯಕ ಪರೀಕ್ಷೆ ಎದುರಿಸಲು ಸಿದ್ಧತೆ ಒದಗಿಸುತ್ತವೆ.

ಮೌಲ್ಯಮಾಪನ ಪ್ರಕ್ರಿಯೆಗೆ ಪೂರಕ
ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ‘ಪ್ರಶ್ನೆಗಳೇ’ ಪರೀಕ್ಷಾ ಸಾಧನಗಳು. ಹೀಗಾಗಿ, ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳ ಸ್ವರೂಪ ಹೇಗಿರುತ್ತದೆ ಎಂಬ ಅರಿವು ಮೂಡಿಸುವುದು ಅನಿವಾರ್ಯ. ಪ್ರಶ್ನೆಗಳ ಪರಾಮರ್ಶೆಯಿಂದ ಮಕ್ಕಳಲ್ಲಿ ಪರೀಕ್ಷಾ ಭಯ’ ಕಡಿಮೆಯಾಗಿ, ಗ್ರಹಿಕೆಯ ಪ್ರಮಾಣ, ಉತ್ತರಿಸುವ ಸಾಮರ್ಥ್ಯ, ಅಭಿವ್ಯಕ್ತಿ ಕೌಶಲ ಹಾಗೂ ಜ್ಞಾನದ ಹರವು ಹೆಚ್ಚುತ್ತದೆ.

ವಿವಿಧ ಮಾದರಿಯ ಪ್ರಶ್ನೆಗಳ ಅರಿವು
ಪ್ರತಿ ಪ್ರಮಾಣೀಕೃತ ಪ್ರಶ್ನೆ ಪತ್ರಿಕೆ ‘ನೀಲನಕ್ಷೆ’ ಆಧರಿತವಾಗಿ ರಚಿತವಾಗಿರುತ್ತದೆ. ಬೋಧನೆ– ಕಲಿಕಾ ಪ್ರಕ್ರಿಯೆಯ ಉದ್ದೇಶಗಳಾದ ಜ್ಞಾನ, ತಿಳಿವಳಿಕೆ, ಅನ್ವಯ, ಕೌಶಲಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಶ್ನೆಗಳ ಸ್ವರೂಪ ಹಾಗೂ ಕಠಿಣತೆಯ ಮಟ್ಟ ಅಲ್ಲದೆ, ಅಧ್ಯಾಯವಾರು ಪ್ರಾಧಾನ್ಯತೆಗೆ ಅನುಗುಣವಾಗಿ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗಿರುತ್ತದೆ. ಈ ನಿಟ್ಟಿನಲ್ಲಿ ಆಯಾ ಉದ್ದೇಶಗಳ ವಲಯದಲ್ಲಿ ಕೇಳಬಹುದಾದ ವಸ್ತುನಿಷ್ಠ, ಬಹುಆಯ್ಕೆ, ಸಂಕ್ಷಿಪ್ತ ಉತ್ತರ ಹಾಗೂ ಸವಿವರ ಉತ್ತರ ಮಾದರಿಯ ಪ್ರಶ್ನೆಗಳು ಹೇಗಿರುತ್ತವೆ? ಎಂದು ಅರಿತುಕೊಳ್ಳಲು ‘ಪ್ರಶ್ನೆ ಭಂಡಾರ’ ಪರಾಮರ್ಶೆ ಅಗತ್ಯ.

ಶಿಕ್ಷಕರಿಗೂ ಅನುಕೂಲ
ಉತ್ತಮ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಶಿಕ್ಷಕರಿಗೂ ಪ್ರಶ್ನೆ ಭಂಡಾರ ಮಾರ್ಗದರ್ಶಕವಾಗಿದೆ. ಯಾವ ಮಾದರಿಯ ಪ್ರಶ್ನೆಗಳನ್ನು ಕೇಳಬೇಕು, ಪ್ರಶ್ನೆಗಳ ಸ್ವರೂಪ ಹೇಗಿರಬೇಕು, ಕಠಿಣತೆಯ ಮಟ್ಟ ಎಷ್ಟಿರಬೇಕು ಎಂಬುದನ್ನು ಅರಿಯಲು ಇದು ಸಹಕಾರಿ. ಅಲ್ಲದೆ, ಬೋಧನೆ– ಕಲಿಕೆ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ವಿಕಾಸದ ಮಟ್ಟ ಅರಿಯಲು, ಮೌಲ್ಯಮಾಪನ ವ್ಯವಸ್ಥೆಯನ್ನು ಉತ್ತಮಪಡಿಸಲು ಪ್ರಶ್ನೆ ಭಂಡಾರ  ಮಾರ್ಗದರ್ಶಿಸುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆ  ಪ್ರಶ್ನೆ ಭಂಡಾರ
ಶಾಲಾ– ಕಾಲೇಜುಗಳ ಪರೀಕ್ಷೆಗಳಲ್ಲಿ ಮಾತ್ರವಲ್ಲದೇ, ಶಿಕ್ಷಣೋತ್ತರ ತರಬೇತಿ ಹಾಗೂ ಉದ್ಯೋಗ ಗಿಟ್ಟಿಸಿಕೊಳ್ಳಲು ಕೂಡ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಈಗ ಅನಿವಾರ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿ, ಹೊರತರುವ ಬಹುತೇಕ ವಾರ, ಪಾಕ್ಷಿಕ ಹಾಗೂ ಮಾಸಪತ್ರಿಕೆಗಳಲ್ಲಿ ಅಧ್ಯಯನ ಸಾಮಗ್ರಿಯ ಭಾಗವನ್ನಾಗಿ ಹಳೆಯ ಹಾಗೂ ಪ್ರಶ್ನೆಪತ್ರಿಕೆಗಳನ್ನೇ ನೀಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವೊಮ್ಮೆ ಪ್ರಶ್ನೆಗಳ ‘ವಿಶೇಷ ಕೈಪಿಡಿ’ಯನ್ನೂ ನೀಡಲಾಗುತ್ತದೆ. ಇದೂ ಕೂಡ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಭಂಡಾರವೇ.

ಈ ಅಂಶಗಳತ್ತ ಗಮನ ಅಗತ್ಯ
*ಪ್ರಶ್ನೆಪತ್ರಿಕೆ ಪರಾಮರ್ಶೆಯೊಂದೇ ಅಂತಿಮವಲ್ಲ. ಪಠ್ಯಪುಸ್ತಕದ ಓದು, ಇತರ ಸಿದ್ಧತೆಗೆ ಪೂರಕವಾಗಿ ಪ್ರಶ್ನೆ ಭಂಡಾರವಿರಬೇಕು.
*‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಎಂಬಂತೆ ವಿದ್ಯಾರ್ಥಿಗಳು ಪ್ರಶ್ನೆ ಭಂಡಾರ ಒಂದನ್ನೇ ನೆಚ್ಚಿಕೊಂಡು ಪಠ್ಯಪುಸ್ತಕ ಓದುವಿಕೆಯಲ್ಲಿ ಆಸಕ್ತಿ ಕಳೆದುಕೊಂಡು ‘ಆಲಸಿ’ಗಳಾಗಬಾರದು.
*ಪ್ರಶ್ನೆ ಭಂಡಾರದಲ್ಲಿರುವ ವ್ಯಾಕರಣ ಹಾಗೂ ಶಾಬ್ದಿಕ ದೋಷಗಳಿಂದ ವಿದ್ಯಾರ್ಥಿಗಳು ಅಂಕ ಕಳೆದುಕೊಳ್ಳುವಂತಾಗಬಾರದು
*ಪ್ರಶ್ನೆಗಳು ಸಕಾರಾತ್ಮಕ ಧೋರಣೆಯನ್ನು ಬಿಂಬಿಸಬೇಕು. ನಕಾರಾತ್ಮಕ ಧೋರಣೆ ಹೊಂದಿರಬಾರದು.
*ಪ್ರಶ್ನೆಗಳು ಸ್ಪಷ್ಟವಾಗಿದ್ದು, ಸ್ಪಷ್ಟ, ನಿಖರ ಉತ್ತರ ಬಯಸುವಂತಿರಬೇಕು. ಒಂದು ಪ್ರಶ್ನೆಗೆ ಒಂದಕ್ಕಿಂತ ಹೆಚ್ಚಿನ ಉತ್ತರ ಬರುವಂತಿರಬಾರದು.

‘ಚಿಕ್ಕೋಡಿ ಮಾದರಿ’
ಇತ್ತೀಚೆಗಿನ ಕೆಲ ವರ್ಷಗಳ ಎಸ್ಎಸ್ಎಲ್‌ಸಿ ಫಲಿತಾಂಶ ಗಮನಿಸಿದರೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದು ಸರಾಸರಿ ಉತ್ತಮ ಫಲಿತಾಂಶ ಪಡೆದಿದೆ. ಇಲ್ಲಿ ನಡೆಸಿರುವ ವಿಶಿಷ್ಟ ಪ್ರಯೋಗ ‘ಚಿಕ್ಕೋಡಿ ಮಾದರಿ’ಎಂದು ಮೆಚ್ಚುಗೆ ಪಡೆದಿದೆ. ಈಚೆಗೆ ರಾಜ್ಯದ ಇತರ ಕೆಲ ಜಿಲ್ಲೆಗಳಲ್ಲೂ ಈ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ.

‘ಈ ಮಾದರಿಯಲ್ಲಿ ತಲಾ 20 ವಸ್ತುನಿಷ್ಠ ಪ್ರಶ್ನೆಗಳುಳ್ಳ ಪ್ರಶ್ನಾ ಕಾರ್ಡ್‌ ಆಧರಿಸಿ, 6 ವಿದ್ಯಾರ್ಥಿಗಳ ಗುಂಪು ಭಾನುವಾರ ಹೊರತುಪಡಿಸಿ ಉಳಿದ 6 ದಿನ ಶಾಲಾ ಅವಧಿಯ ನಂತರ 45 ನಿಮಿಷಗಳ ಗುಂಪು ಚರ್ಚೆಯಲ್ಲಿ ತೊಡಗುತ್ತದೆ. ಎಸ್ಎಸ್ಎಲ್‌ಸಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನು ವಿವಿಧ ಹೆಸರಿನ ಗುಂಪುಗಳಲ್ಲಿ ವಿಭಜಿಸಲಾಗುತ್ತದೆ. ಆ ಗುಂಪಿಗೆ ಒಬ್ಬ ನಾಯಕನನ್ನು ನೇಮಿಸಲಾಗಿರುತ್ತದೆ. ಪ್ರತಿದಿನ ಶಾಲಾ ಅವಧಿಯ ನಂತರ ಮಕ್ಕಳು ತಮ್ಮ ಗುಂಪಿನ ಸದಸ್ಯರೊಂದಿಗೆ ಶಾಲಾ ಮೈದಾನ, ತರಗತಿ, ಚಾವಣಿ, ಉದ್ಯಾನ ಹೀಗೆ ಸ್ಥಳಾವಕಾಶವಿದ್ದಲ್ಲಿ ಒಂದೆಡೆ ಸೇರುತ್ತಾರೆ. ಕಾರ್ಡ್‌ನಲ್ಲಿ ಇರುವ 20 ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕಂಡುಕೊಂಡು ಚರ್ಚಿಸುತ್ತಾರೆ.

ಚರ್ಚೆಯ ವೇಳೆ ಗುಂಪಿನಲ್ಲಿರುವ ಆರೂ ವಿದ್ಯಾರ್ಥಿಗಳು 20 ಪ್ರಶ್ನೆಗಳ ಉತ್ತರವನ್ನು ಪುನರಾವರ್ತಿಸುವುದು ಕಡ್ಡಾಯ. ಪ್ರತಿಸಲದ ಪುನರಾರ್ವತನೆಯಿಂದ ವಿಷಯವು ಮನನವಾಗುತ್ತದೆ. ಈ ವಿಧಾನದಲ್ಲಿ ದಿನಕ್ಕೆ ಒಂದರಂತೆ ಶಾಲಾ ಪಠ್ಯಕ್ರಮದ ಆರೂ ವಿಷಯಗಳನ್ನು ಆರು ದಿನ ‘ರೊಟೇಟ್’ ಮಾಡುವುದರಿಂದ ಎಲ್ಲ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ನಿಯಮಿತ ತಯಾರಿಯ ಮೂಲಕ ಪರೀಕ್ಷೆಗೆ ಸನ್ನದ್ಧರಾಗುತ್ತಾರೆ’ ಎಂಬುದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಗಜಾನನ ಮನ್ನಿಕೇರಿ ಅವರ ಅಭಿಮತ.

– ಚನ್ನಬಸಪ್ಪ ರೊಟ್ಟಿ

For North Karnataka News visit www.uksuddi.in

Comments