UK Suddi
The news is by your side.

ಕೂಡಗಿ: ಈ ತಿಂಗಳಲ್ಲಿ ಪರೀಕ್ಷಾರ್ಥ ವಿದ್ಯುತ್‌ ಉತ್ಪಾದನೆ

ಕೂಡಗಿ (ವಿಜಯಪುರ): ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ) ಇಲ್ಲಿ ನಿರ್ಮಿಸಿರುವ ಸೂಪರ್‌ ಥರ್ಮಲ್‌ ವಿದ್ಯುತ್‌ ಸ್ಥಾವರದ 800 ಮೆಗಾವಾಟ್‌ ಸಾಮರ್ಥ್ಯದ 1ನೇ ಘಟಕ ಈ ತಿಂಗಳಲ್ಲೇ ಪರೀಕ್ಷಾರ್ಥವಾಗಿ ವಿದ್ಯುತ್‌ ಉತ್ಪಾದಿಸಲು ಸಜ್ಜಾಗಿದೆ. ರಾತ್ರಿ ಹಗಲೆನ್ನದೆ ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಮತ್ತು 250ಕ್ಕೂ ಹೆಚ್ಚು ತಜ್ಞರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ.

ಬಾಯ್ಲರ್‌, ಟರ್ಬೈನ್‌, ಸ್ವಿಚ್‌ಯಾರ್ಡ್‌ ಸೇರಿದಂತೆ ವಿವಿಧ ಕಾರ್ಯಗಳು  ಬಹುಪಾಲು ಪೂರ್ಣಗೊಂಡಿವೆ. ‘ತಲಾ 800 ಮೆಗಾವಾಟ್‌ ಸಾಮರ್ಥ್ಯದ ಮೂರು ಘಟಕಗಳು (2,400 ಮೆಗಾವಾಟ್‌) ಮೊದಲ ಹಂತದಲ್ಲಿ ತಲೆ ಎತ್ತಲಿವೆ. ಒಂದನೇ ಘಟಕದ ಬಾಯ್ಲರ್‌, ಟರ್ಬೈನ್‌ ಮತ್ತು ಕೊಳವೆ ಸ್ವಚ್ಛತೆ ಕೆಲಸ ನಡೆಯುತ್ತಿದೆ. ಇದಕ್ಕೆ ಒತ್ತಡದ ಗಾಳಿ ಮತ್ತು ಆವಿ ಬಳಸುತ್ತಿದ್ದೇವೆ.

ಇನ್ನೂ ಒಂದು ವಾರ ಈ ಕೆಲಸ ನಡೆಯುತ್ತದೆ. ನಂತರ ಡೀಸೆಲ್‌ ಬಳಸಿ ಮೊದಲು ಪರೀಕ್ಷಾರ್ಥವಾಗಿ ವಿದ್ಯುತ್‌ ಉತ್ಪಾದನೆ ಮಾಡುತ್ತೇವೆ’ ಎಂದು ಸ್ಥಾವರಕ್ಕೆ ಭೇಟಿ ನೀಡಿದ್ದ ವರದಿಗಾರರ ತಂಡಕ್ಕೆ ಎನ್‌ಟಿಪಿಸಿಯ ಪ್ರಾದೇಶಿಕ ಕಾರ್ಯನಿರ್ವಾಹಕ ನಿರ್ದೇಶಕ (ಪಶ್ಚಿಮ–1) ಸುಭಾಸಿಸ್‌ ಘೋಷ್‌ ವಿವರಿಸಿದರು.

‘ಇದರ ಬಳಿಕವೂ ರಾಜ್ಯ ತನ್ನ ಪಾಲಿನ ವಿದ್ಯುತ್‌ ಪಡೆಯಲು ಕನಿಷ್ಠ ಸೆಪ್ಟೆಂಬರ್‌ ತಿಂಗಳವರೆಗೆ ಕಾಯಬೇಕಾಗುತ್ತದೆ. ನಿರಂತರ ವಿದ್ಯುತ್‌ ಉತ್ಪಾದನೆಗೆ ಬೇಕಾಗುವ ಕಲ್ಲಿದ್ದಲು ಸರಬರಾಜು, ನೀರು ಇತ್ಯಾದಿ ಮೂಲಸೌಲಭ್ಯಗಳನ್ನು ಹೊಂದಿಸಿಕೊಳ್ಳಲು ಸಮಯ ಬೇಕಾಗುತ್ತದೆ’ ಎಂದು ಅವರು ಹೇಳಿದರು.

‘ಕೂಡಗಿ ನಿಲ್ದಾಣದಿಂದ ಸ್ಥಾವರಕ್ಕೆ ಸಂಪರ್ಕ ಕಲ್ಪಿಸುವ ಜೋಡಿ ರೈಲ್ವೆ ಮಾರ್ಗಕ್ಕೆ ಇನ್ನೂ ಜಮೀನು ಹಸ್ತಾಂತರ ಆಗಿಲ್ಲ. ಈ ವಿಷಯದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಮಧ್ಯಪ್ರವೇಶಿಸಿ, ಈ ತಿಂಗಳ ಒಳಗೆ ಜಮೀನು ಹಸ್ತಾಂತರಕ್ಕೆ ಕೆಐಎಡಿಬಿಗೆ ಸೂಚಿಸಿದ್ದಾರೆ’ ಎಂದರು.

‘ಪೂರ್ಣ ಪ್ರಮಾಣದ ವಿದ್ಯುತ್‌ ಉತ್ಪಾದನೆ ಆರಂಭವಾದರೆ ದಿನಕ್ಕೆ ಕನಿಷ್ಠ 8 ರಿಂದ 9 ರೈಲುಗಳಲ್ಲಿ ಕಲ್ಲಿದ್ದಲು ಕೂಡಗಿಗೆ ಬರಬೇಕಾಗುತ್ತದೆ. ಇದಕ್ಕೆ ಯಾರ್ಡ್‌ನಲ್ಲಿ ಜೋಡಿ ರೈಲ್ವೆ ಮಾರ್ಗದ ಅಗತ್ಯ ಇದೆ. ಹೀಗಾಗಿ ರೈಲು ಮಾರ್ಗ ನಿರ್ಮಾಣದ ನಂತರವೇ ಉತ್ಪಾದನೆ’ ಎಂದು ಅವರು ವಿವರಿಸಿದರು.
ರಾಜ್ಯಕ್ಕೆ 400 ಮೆಗಾವಾಟ್‌: ಸೆಪ್ಟೆಂಬರ್‌ ವೇಳೆಗೆ ಎಲ್ಲ ಸಮಸ್ಯೆಗಳು ಬಗೆಹರಿದು 1ನೇ ಘಟಕ ಪೂರ್ಣವಾಗಿ ಕಾರ್ಯಾರಂಭ ಮಾಡುವ ವಿಶ್ವಾಸ ಇದೆ.

For North Karnataka News visit www.uksuddi.in

Comments