UK Suddi
The news is by your side.

ಮಹಾದಾಯಿ ವಿವಾದ: ಸರ್ವ ಪಕ್ಷ ಸಭೆ ವಿಫಲ

ಮಹಾದಾಯಿ ವಿವಾದ ಬಗೆಹರಿಸುವ ಸಂಬಂಧ ರಾಜ್ಯ ಸರ್ಕಾರ ಶನಿವಾರ ಕರೆದಿದ್ದ ಸರ್ವ ಪಕ್ಷ ಸಭೆ ಒಮ್ಮತದ ನಿರ್ಣಯಕ್ಕೆ ಬರಲು ವಿಫಲವಾಯಿತು.

ಆದರೆ, ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರ ಜತೆ ಮಾತನಾಡಿ, ‘ವಿಧಾನಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಮತ್ತೊಮ್ಮೆ ಪ್ರಧಾನಿಯವರನ್ನು ಭೇಟಿ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು’ ಎಂದು ಹೇಳಿದರು.

ಬಿಜೆಪಿ ಮುಖಂಡರು ಸಭೆ ಮುಗಿಯುವುದಕ್ಕೂ ಮುನ್ನವೇ ಅಲ್ಲಿಂದ ಹೊರನಡೆದ ಕಾರಣ ಗೊಂದಲ ಸೃಷ್ಟಿಯಾಯಿತು. ಸಭೆಯಲ್ಲಿದ್ದ ರೈತ ಮುಖಂಡರು, ಬಿಜೆಪಿ ನಾಯಕರ ಕ್ರಮ ಖಂಡಿಸಿ ಧಿಕ್ಕಾರ ಕೂಗಿದರು.  ಅವರು ಹೊರ ಹೋಗದಂತೆ ಬಾಗಿಲು ಬಳಿ ಅಡ್ಡ ನಿಂತರು. ಆಗ ಮತ್ತೊಂದು ಬಾಗಿಲ ಮೂಲಕ ಬಿಜೆಪಿ ಮುಖಂಡರು ಹೊರ ನಡೆದರು. ಸಮ್ಮೇಳನ ಸಭಾಂಗಣದ ಮುಂದೆ ರೈತರು ಧರಣಿ ನಡೆಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನಸಭೆಯ ನಿರ್ಣಯಕ್ಕೆ ಹೆಚ್ಚಿನ ಮಹತ್ವ ಇದೆ. ಅದರಿಂದ ಹಿಂದೆ ಸರಿಯುವುದಕ್ಕೂ ಆಗುವುದಿಲ್ಲ. ಆ ಪ್ರಕಾರ ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯಿಸಲು ಮತ್ತೊಮ್ಮೆ ಭೇಟಿಗೆ ಸಮಯ ಕೇಳಲಾಗುವುದು. ಕೇಂದ್ರ ಸಚಿವರು, ಬಿಜೆಪಿ ಸಂಸದರು ಇದಕ್ಕೆ ಸಹಕರಿಸಬೇಕು’ ಎಂದು ಮುಖ್ಯಮಂತ್ರಿ ಸಭೆಯಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತಕುಮಾರ್‌, ಬಿಜೆಪಿ ಮುಖಂಡರಾದ ಪ್ರಹ್ಲಾದ ಜೋಶಿ, ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್‌ ಸೇರಿದಂತೆ ಇತರರು ಮಾತನಾಡಿ, ‘ಈ ಹಿಂದೆ ಪ್ರಧಾನಿ ಕೊಟ್ಟ ಸಲಹೆಯಂತೆ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರತಿಪಕ್ಷಗಳ ಮುಖಂಡರಿಗೆ ಪತ್ರ ಬರೆದು, ಅವರನ್ನು ಮನವೊಲಿಸುವ ಪ್ರಯತ್ನ ಮಾಡಿ. ಸೌಹಾರ್ದ ವಾತಾವರಣ ಸೃಷ್ಟಿಯಾದ ಬಳಿಕ ಪ್ರಧಾನಿಯವರನ್ನು ಭೇಟಿ ಮಾಡೋಣ’ ಎನ್ನುವ ಸಲಹೆ ನೀಡಿದರು ಎಂದು ಗೊತ್ತಾಗಿದೆ. ಇದಕ್ಕೆ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಆಕ್ಷೇಪ ಎತ್ತಿದರು ಎನ್ನಲಾಗಿದೆ.

‘ಪ್ರಧಾನಿ ಸಭೆ ಕರೆದರೆ ಎಲ್ಲರೂ ಬರುತ್ತಾರೆ. ಮೊದಲು ಮುಖ್ಯಮಂತ್ರಿಗಳ ಸಭೆ ಕರೆಯಲು ಪ್ರಧಾನಿ ಮೇಲೆ ಒತ್ತಡ ಹಾಕಿ’ ಎಂದು ಸಿದ್ದರಾಮಯ್ಯನವರು ಬಿಜೆಪಿ ಮುಖಂಡರನ್ನು ಕೋರಿದರು.

ಚಕಮಕಿ:  ಈ ವಿಷಯದಲ್ಲೇ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ತಾವು ಮಾತನಾಡುವುದಕ್ಕೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅಡ್ಡಿಪಡಿಸಿದರೆಂದು ಆರೋಪಿಸಿ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಬಿ.ಆರ್‌.ಯಾವಗಲ್‌ ಅವರು, ‘ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ’ ಎಂದು ಹೇಳಿದ್ದಕ್ಕೆ ಬಸವರಾಜ ಬೊಮ್ಮಾಯಿ ಆಕ್ಷೇಪ ಎತ್ತಿದರು. ‘ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ಸಿಗರು. ಹಿಂದೊಮ್ಮೆ ಮುಖ್ಯಮಂತ್ರಿಯವರು ಹುಬ್ಬಳ್ಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ನ್ಯಾಯಮಂಡಳಿಯಲ್ಲಿ ವಿವಾದ ಇದ್ದಾಗ ಪ್ರಧಾನಿ ಮಧ್ಯಪ್ರವೇಶಿಸುವುದು ಕಷ್ಟ ಎಂದಿದ್ದರು. ಆದರೆ, ಮುಖ್ಯಮಂತ್ರಿ ಕೂಡ ಈಗ ರಾಜಕಾರಣದ ಸಲುವಾಗಿ ಸತ್ಯ ಮರೆಮಾಚುತ್ತಿದ್ದಾರೆ’ ಎಂದು ಬೊಮ್ಮಾಯಿ ಟೀಕಿಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲೂ ಸಭೆಯಲ್ಲಿ ಗದ್ದಲ ಉಂಟಾಯಿತು ಎಂದು ಗೊತ್ತಾಗಿದೆ.

ಸೋನಿಯಾಗೆ ಒತ್ತಾಯ: ಪ್ರಧಾನಿ ಮಧ್ಯಪ್ರವೇಶಕ್ಕೆ ಮುಖ್ಯಮಂತ್ರಿ, ರೈತ ಮುಖಂಡರು, ಅಲ್ಲಿ ಸೇರಿದ ಸ್ವಾಮೀಜಿಗಳು ಒತ್ತಾಯ ಮಾಡುತ್ತಿದ್ದಾಗ ಸಂಸದ ಬಿ.ಎಸ್‌.ಯಡಿಯೂರಪ್ಪ ಅವರು, ‘ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಕೂಡ ಮಧ್ಯಪ್ರವೇಶ ಮಾಡಬೇಕು’ ಎನ್ನುವ ಸಲಹೆ ನೀಡಿದರು ಎನ್ನಲಾಗಿದೆ.

ಹೀಗೆ ಸಭೆಯಲ್ಲಿ ಪರ– ವಿರೋಧದ ಮಾತುಗಳೇ ಹೆಚ್ಚಾದ ಕಾರಣ ಗೊಂದಲ ಉಂಟಾಯಿತು. ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಗೊತ್ತಾಗಲಿಲ್ಲ.
ಅಂತಿಮವಾಗಿ ಮುಖ್ಯಮಂತ್ರಿಯವರು, ‘ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯವನ್ನೇ ಇಲ್ಲೂ ಕೈಗೊಳ್ಳೋಣ’ ಎಂದು ಹೇಳಿದರು. ಆ ಸಂದರ್ಭದಲ್ಲಿ ಶೆಟ್ಟರ್‌ ಅವರು ‘ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ನಾವು ಕ್ರಿಯಾಲೋಪ ಎತ್ತಿದ್ದೆವು. ಆಗ ಮಾತನಾಡಲು ಬಿಡಲೇ ಇಲ್ಲ’ ಎಂದು ತಕರಾರು ತೆಗೆದರು. ಹೀಗೆ ಮಾತಿಗೆ ಮಾತು ಬೆಳೆಯುತ್ತಿದ್ದಾಗಲೇ ಬಿಜೆಪಿ ಮುಖಂಡರು ಸಭೆಯಿಂದ ಹೊರಬಂದರು.

For North Karnataka News visit www.uksuddi.in

Comments