ಉತ್ತರ ಕರ್ನಾಟಕ ಸುದ್ದಿ ಓದುಗರಿಗೆ ಯುಗಾದಿ ಹಬ್ಬದ ಶುಭಾಶಯಗಳು
ಅಭ್ಯಂಜನ ಮಾಡಿ, ಹೊಸಬಟ್ಟೆ ತೊಟ್ಟು, ಬೇವು ಬೆಲ್ಲ ತಿಂದು, ಹೋಳಿಗೆ ಊಟ ಮಾಡಿ ಸಂಭ್ರಮಿಸುವ ವರ್ಷಾವಧಿ ಹಬ್ಬವೇ ಯುಗಾದಿ… ಈ ಬಾರಿ ಏಪ್ರಿಲ್ 8 ರಂದು ವರ್ಷದ ಮೊದಲ ಹಬ್ಬ
*ಟಿ.ಎಂ.ಸತೀಶ್
ಯುಗಾದಿ ಹೆಸರೇ ಹೇಳುವಂತೆ ಯುಗದ ಆದಿ.ಯುಗಾದಿ ಅಥವಾ ಉಗಾದಿ ಎಂದರೆ ಸೃಷ್ಟಿಯ ಆರಂಭ ಅಥವಾ ಹೊಸ ಸಂವತ್ಸರ ಎಂದು ಹಿರಿಯರು ಹೇಳುತ್ತಾರೆ. ಸೃಷ್ಟಿಕರ್ತನಾದ ಬ್ರಹ್ಮದೇವನು ಈ ದಿನದಿಂದಲೇ ತನ್ನ ಸೃಷ್ಟಿ ಕ್ರಿಯೆ ಆರಂಭಿಸಿದ್ದು ಎನ್ನುವ ಅಂಶವೂ ಯುಗಾದಿಯ ಆಚರಣೆಯೊಂದಿಗೆ ಸೇರಿಕೊಂಡಿದೆ.
ಯುಗಾದಿ ಅತಿ ದೊಡ್ಡ ಹಬ್ಬ. ಗುಜರಾತ್- ರಾಜಸ್ಥಾನದ ಕೆಲವು ಭಾಗಗಳನ್ನು ಹೊರತುಪಡಿಸಿ ಇತರ ಕಡೆಗಳಲ್ಲಿ ಚೈತ್ರಮಾಸದಿಂದ ಹಿಂದೂ ಸಂವತ್ಸರದ ಹೊಸವರ್ಷಾಚರಣೆ ನಡೆದು ಬಂದಿದೆ. ಉತ್ತರ ಕನ್ನಡ- ದಕ್ಷಿಣ ಕನ್ನಡದ ಕೆಲವು ಭಾಗ, ಕೇರಳ, ತಮಿಳುನಾಡುಗಳಲ್ಲಿ ಸೌರಮಾನದ ರೀತ್ಯ ಯುಗಾದಿ ಆಚರಿಸುತ್ತಾರೆ.
ಚಾಂದ್ರಮಾನ ಯುಗಾದಿಯನ್ನು ಚಂದ್ರಾಚಾರದಿಂದಲೂ,ಸೌರಮಾನ ಯುಗಾದಿಯನ್ನು ಸೂರ್ಯ ಭಗವಾನನು ಮೇಷ ರಾಶಿಯನ್ನು ಪ್ರವೇಶಿಸುವ ದಿನದಿಂದ ಆಚರಿಸುತ್ತಾರೆ. ಬಾರ್ಹಸ್ಪತ್ಯಮಾನ ಎಂಬ ಆಚರಣೆಯೂ ಭಾರತದಲ್ಲಿ ಚಾಲ್ತಿಯಲ್ಲಿದೆ.
ಹಿಂದೂಗಳು ಯುಗಾದಿಯ ದಿನದಂದು ಎಣ್ಣೆ (ತೈಲ) ಒತ್ತಿಕೊಂಡು ಸ್ನಾನ ಮಾಡುತ್ತಾರೆ. ದೇವರ ಪೂಜೆ ಮಾಡುತ್ತಾರೆ. ಹೊಸ ಬಟ್ಟೆ ತೊಟ್ಟು ದೇವಾಲಯಗಳಿಗೆ ಹೋಗಿ ಬರುತ್ತಾರೆ.
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ,
ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳಭಕ್ಷಣಂ
ಎಂಬ ಶ್ಲೋಕ ಹೇಳುತ್ತಾ ತಾವೂ ಬೇವು – ಬೆಲ್ಲ ತಿಂದು ಇತರರಿಗೂ ನೀಡುತ್ತಾರೆ. (ಸೂರ್ಯನ ತಾಪ ಹೆಚ್ಚಿರುವ ಈ ಕಾಲದಲ್ಲಿ ಬೇವು ಬೆಲ್ಲ ತಿನ್ನುವುದರಿಂದ ಶರೀರ ವಜ್ರಕಾಯವಾಗುತ್ತದೆ ಎಂಬುದು ನಂಬಿಕೆ.) ಮಧ್ಯಾಹ್ನ ಒಬ್ಬಟ್ಟು, ಮಾವಿನ ಕಾಯಿ ಚಿತ್ರಾನ್ನ ಮಾಡಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಸಂತಸ ಹಂಚಿಕೊಳ್ಳುತ್ತಾರೆ.
ಆಚರಣೆ : ಗೌರಿ, ಗಣೇಶ, ದೀಪಾವಳಿ ಮತ್ತಿತರ ಹಬ್ಬಗಳಿಗಿರುವಂತೆ ಯುಗಾದಿಯಂದು ಹೆಚ್ಚಿನ ವಿಶೇಷ ಆಚರಣೆಗಳಿಲ್ಲವಾದರೂ, ಸಾಮಾನ್ಯ ಜನರು ಆ ದಿನ ಉಷಾಕಾಲದಲ್ಲಿ ಪರಮಾತ್ಮನ ಸ್ಮರಿಸುತ್ತಾ ಹಾಸಿಗೆಯಿಂದೆದ್ದು,ನಿತ್ಯಕರ್ಮ ಮುಗಿಸಿ, ಮನೆಯ ಮುಖ್ಯದ್ವಾರ ಹಾಗೂ ದೇವರ ಮನೆಯ ದ್ವಾರವನ್ನು ಮಾವಿನ ತಳಿರು ತೋರಣದಿಂದ ಅಲಂಕರಿಸಿ, ಮನೆಯ ಮುಂದೆ ಬಣ್ಣಬಣ್ಣದ ರಂಗೋಲಿ ಹಾಕಿ, ಅಭ್ಯಂಜನಸ್ನಾನ ಮಾಡಿ, ದೇವತಾರ್ಚನೆ ಮಾಡಿ, ಬೇವು ಬೆಲ್ಲ ತಿಂದು, ಹೊಸಬಟ್ಟೆ ತೊಟ್ಟು, ಪರಸ್ಪರ ಶುಭಾಶಯ ಕೋರಿ, ದೇವಾಲಯಗಳಿಗೆ ಹೋಗಿ ಬಂದು, ಸಿಹಿಯೂಟ ಮಾಡುವಲ್ಲಿಗೆ ಯುಗಾದಿ ಹಬ್ಬ ಮುಗಿದಂತೆ.
ಆದರೆ, ಹಳ್ಳಿಗಳಲ್ಲಿ ಹಾಗೂಇನ್ನೂ ಸಂಪ್ರದಾಯ – ಆಚರಣೆ ಉಳಿಸಿಕೊಂಡಿರುವ ಅಗ್ರಹಾರಗಳಲ್ಲಿ, ಪುರೋಹಿತರು,ಪಂಡಿತರು ಯುಗಾದಿಯಂದು ಸ್ನಾನ ಸಂಧ್ಯಾದಿ ಮುಗಿದ ಬಳಿಕ, ಕುಲದೇವರನ್ನೂ, ಪಂಚಾಗವನ್ನೂ ಪೂಜಿಸಿ, ಅಗಲ ಬಾಯಿಯ ಪಾತ್ರೆಯಲ್ಲಿ ತುಪ್ಪ ಹಾಕಿ ಮನೆಮಂದಿಯೆಲ್ಲ ಅದರಲ್ಲಿ ಮುಖ ನೋಡಿಕೊಳ್ಳುತ್ತಾರೆ. ಆನಂತರ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾರೆ. (ಹೀಗೆ ಮಾಡುವುದರಿಂದ ಸರ್ವದೋಷ ಪರಿಹಾರ ಆಗತ್ತೆ ಎಂಬುದು ನಂಬಿಕೆ.) ಸಂಜೆ ಊರಿನ ಅರಳಿ ಕಟ್ಟೆಯಲ್ಲಿ ಸೇರಿ, ಪಂಡಿತರು ಊರಿನ ಜನಕ್ಕೆ ಪಂಚಾಂಗ ಓದಿ ಹೇಳುತ್ತಾರೆ. ವರ್ಷಫಲ ಕೇಳುವ ಸಂಪ್ರದಾಯ ಹಳ್ಳಿಗಳ ಕಡೆ ಇನ್ನೂ ಜೀವಂತವಾಗಿದೆ.
ಕಾಲ ದೇಶ ಪರಿಸರಕ್ಕನುಗುಣವಾಗಿ ಕರ್ನಾಟಕದ ಕೆಲವು ಭಾಗಗಳಲ್ಲಿ ಯುಗಾದಿಯ ದಿನ ಜೂಜಾಡುವುದೂ ಒಂದು ಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. ಯುಗಾದಿಯ ಮಾರನೇ ದಿನವನ್ನು ವರ್ಷತೊಡಕು ಎಂದೂ ಆಚರಿಸುತ್ತಾರೆ. ಅಂದು ಮಾಂಸಾಹಾರಿಗಳು ಕಡ್ಡಾಯವಾಗಿ ಮಾಂಸದ ಊಟ ಮಾಡುತ್ತಾರೆ. ಮದ್ಯ ಸೇವನೆಯೂ ಈ ವರ್ಷತೊಡಗಿನ ಆಚರಣೆಯ ಭಾಗಗಳಲ್ಲೊಂದು.