ಮುಂದೆ ಸಾಗಿ ಅಚ್ಚರಿ ಮೂಡಿಸಿದ ರಥ
ಕಲಬುರಗಿ: ಸುಮಾರು 10 ಟನ್ಗಿಂತ ಭಾರದ ರಥವೊಂದು ತನ್ನಷ್ಟಕ್ಕೆ ತಾನೇ ಮುಂದೆ ಸಾಗಿರುವ ಸಂಗತಿ ಕೆಸರಟಗಿ ಹತ್ತಿರದ ಸಾಧು ಶಿವಲಿಂಗೇಶ್ವರ ದೇಗುಲದ ಹತ್ತಿರ ನಡೆದಿದೆ ಎನ್ನಲಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ರಥ ನೆಲಕ್ಕುರುಳಿದೆ ಎಂದೂ ಹೇಳಲಾಗುತ್ತಿದೆ. 50ರಿಂದ 60 ಜನ ಎಳೆದರೂ ಮುಂದೆ ಹೋಗದ ರಥ ಅದ್ಹೇಗೆ ಚಲಿಸಿತು ಎನ್ನುವುದು ಕುತೂಹಲಕ್ಕೆ ಕಾರಣವಾಗಿದ್ದು, ಪವಾಡ ಎಂದು ಗ್ರಾಮಸ್ಥರು ಬಣ್ಣಿಸುತ್ತಿದ್ದಾರೆ.
ಭಾನುವಾರ ನಸುಕಿನ ಜಾವ ಮಂದಿರದ ಅರ್ಚಕರು ಪೂಜೆಗೆ ಬಂದಾಗ ರಥ ಸ್ಥಳಬಿಟ್ಟು ದೂರದಲ್ಲಿ ಹೋಗಿ ಬಿದ್ದಿರುವುದು ನೋಡಿ ಕೆಸರಟಗಿ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದರು. ರಥ ನಿಲ್ಲಿಸಿದ ಜಾಗದಿಂದ 20 ಅಡಿ ದೂರ ಹೋಗಿದ್ದು ಕಂಡು ಬಂದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.
ತೇರು ಎತ್ತರದ ಪ್ರದೇಶದಲ್ಲಿ ನೇರವಾಗಿ ಸಾಗಿ 4 ಅಡಿ ಎತ್ತರದ ದಿನ್ನೆ ಏರಿ ಇಳಿದು ನೆಲಕ್ಕುರುಳಿದೆ. ರಥದ ಚಕ್ರಗಳ ಗುರುತು ಕಂಡು ಬಂದಿವೆ. ಪಕ್ಕದ ಇಟಗಾ ಗ್ರಾಮದಲ್ಲಿ ಸಾಧು ಶಿವಲಿಂಗೇಶ್ವರರ ಸಮಾಧಿ ಇದೆ. ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಇಲ್ಲಿ ಎರಡು ವರ್ಷದ ಹಿಂದೆಯಷ್ಟೆ ಮಂದಿರ ನಿರ್ವಿುಸಲಾಗಿತ್ತು. ಏ.30ರಂದು ನಡೆದ ಜಾತ್ರೆಯಲ್ಲಿ ನೂರಾರು ಭಕ್ತರು ಸೇರಿ ತೇರು ಎಳೆದಿದ್ದರು.
-ವಿಜಯವಾಣಿ ನ್ಯೂಸ್