UK Suddi
The news is by your side.

ಕೃಷ್ಣಾ ನದಿಗೆ ಒಂದು ಟಿಎಂಸಿ ನೀರು ಬಿಡಲು ಒಪ್ಪಿಗೆ

ತೆಲಂಗಾಣ ಕಾಂಗ್ರೆಸ್ ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಎದುರಾಗಿರುವ ಸಂಕಷ್ಟವನ್ನು ನೆರೆ ರಾಜ್ಯಗಳೊಂದಿಗೆ ಹಂಚಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು, ತೆಲಂಗಾಣದ ಮೆಹಬೂಬ್‌ನಗರ ಭಾಗದಲ್ಲಿ ನೀರಿನ ತೀವ್ರ ಅಭಾವ ನೀಗಿಸಲು ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಒಂದು ಟಿಎಂಸಿ ನೀರು ಹರಿಸಲು ಒಪ್ಪಿದೆ.

ಈ ಸಂಬಂಧ ತೆಲಂಗಾಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್‌ಕುಮಾರ್ ರೆಡ್ಡಿ ನೇತೃತ್ವದ ನಿಯೋಗ ಮಂಗಳವಾರ ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಭೇಟಿ ಮಾಡಿ ಮಾಡಿದ ಮನವಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದರು. ರಾಜ್ಯದಲ್ಲಿ ನೀರಿನ ಕೊರತೆ ತೀವ್ರವಾಗಿದ್ದರೂ ಮಾನವೀಯ ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ ಜುರಾಲಾ ಅಣೆಕಟ್ಟೆಗೆ ಒಂದು ಟಿಎಂಸಿ ನೀರು ಹರಿಸುವುದಾಗಿ ಭರವಸೆ ನೀಡಿದರು.

ತೆಲಂಗಾಣ ವಿರೋಧಪಕ್ಷದ ನಾಯಕ ಜನಾರೆಡ್ಡಿ, ಶಬ್ಬೀರ್ ಅಲಿ ಹಾಗೂ ಅಲ್ಲಿನ ಕಾಂಗ್ರೆಸ್ ಮುಖಂಡರನ್ನು ಒಳಗೊಂಡ ನಿಯೋಗ ಮೂರು ಟಿಎಂಸಿ ನೀರಿಗೆ ಮನವಿ ಸಲ್ಲಿಸಿತ್ತಾದರೂ, ಒಂದು ಟಿಎಂಸಿ ನೀರು ಹರಿಸುವ ಸಿದ್ದರಾಮಯ್ಯ ಅವರ ಭರವಸೆಗೆ ತೃಪ್ತಿ ವ್ಯಕ್ತಪಡಿಸಿತು ಹಾಗೂ ಈ ಸ್ಪಂದನೆಗಾಗಿ ಅಭಿನಂದಿಸಿತು. ರಾಜೋಳಿ ಬಂಡ ತಿರುವು ಯೋಜನೆ ಕುರಿತೂ ತೆಲಂಗಾಣ ನಿಯೋಗ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿತು. ಈ ಯೋಜನೆ ಪೂರ್ಣಗೊಳ್ಳುವುದರಿಂದ ಮೆಹಬೂಬ್‌ನಗರ ಜಿಲ್ಲೆಯ ಅಲಂಪುರ್ ಭಾಗದ 84 ಸಾವಿರಕ್ಕೂ ಅಧಿಕ ಎಕರೆ ಬರಪೀಡಿತ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂಬ ಕುರಿತು ನೆರೆರಾಜ್ಯದ ನಿಯೋಗ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಿತು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಉಪಸ್ಥಿತರಿದ್ದರು.
ಕೃಷ್ಣಾ ನದಿಗೆ ನೀರು ಬಿಡುವಂತೆ ಒತ್ತಾಯಿಸಿ ತೆಲಂಗಾಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್‌ಕುಮಾರ್ ರೆಡ್ಡಿ ನೇತೃತ್ವದ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.

Comments