UK Suddi
The news is by your side.

ಬ್ರಾಹ್ಮಣರನ್ನು ನಿಂದಿಸುವುದು ಒಂದು ಫ್ಯಾಶನ್ ಆಗಿದೆ

download-142

ಬ್ರಾಹ್ಮಣರನ್ನು ಮನಸ್ಸಿಗೆ ಬಂದಂತೆ ತೆಗಳುವುದು ಹಾಗೂ ಅವರ ತೇಜೋವಧೆ ಮಾಡುವುದು ಇದೆಲ್ಲ ಇಂದಿನ ದಿನದಲ್ಲಿ ಒಂದು ಹುಚ್ಚು ಫ್ಯಾಶನ್ ಆಗಿದೆ. ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳಬೇಕಿದ್ದರೆ ಕೆಲವು ನಿಯಮಗಳು ಇವೆಯಂತೆ. ಅವುಗಳಲ್ಲಿ ಮೊದಲನೆಯದು ಬ್ರಾಹ್ಮಣರನ್ನು ನಿಂದಿಸಬೇಕು ಮತ್ತು ನಾಸ್ತಿಕತೆಯನ್ನು ಹಬ್ಬಿಸಬೇಕು. ಬುಡಮೇಲು ಮಾಡುವ ಕೃತ್ಯದಲ್ಲಿ ತೊಡಗಿಕೊಂಡವರು ಇಂದಿನ ತಥಾಕಥಿತ ಬುದ್ಧಿಜೀವಿಗಳು ಮಾತ್ರವಲ್ಲ ಇದಕ್ಕೆ ಒಂದು ಪರಂಪರೆ ಇದೆ.

ಪ್ರಾಚೀನ ಕಾಲದಲ್ಲಿ ‘ಚಾರ್ವಾಕರು’ ಎಂಬ ಹೆಸರನ್ನು ಹೊತ್ತವರು ಇದ್ದರು. ಇವರು ಒಮ್ಮೆಲೇ ಪ್ರಸಿದ್ಧರಾಗಬೇಕೆಂದು ಬ್ರಾಹ್ಮಣರನ್ನು ನಿಂದಿಸಿದರು. ಆದರೆ ಬ್ರಾಹ್ಮಣರಿಗೆ ಏನೂ ಆಗಲಿಲ್ಲ. ಚಾರ್ವಾಕರು ಮಾತ್ರ ಹೇಳಹೆಸರಿಲ್ಲದಂತೆ ಹೋದರು. ಚಾರ್ವಾಕ ದರ್ಶನಕ್ಕೆ ಮಹತ್ವ ಸಿಗಲಿಲ್ಲ. ಇಂದೂ ಕೆಲವರು ಚಾರ್ವಾಕರ ಅನುಯಾಯಿಗಳಿದ್ದಾರೆ. ಇವರಿಗೆ ಸಂಸ್ಕೃತ, ವೇದ, ಉಪನಿಷತ್ತು, ಭಗವದ್ಗೀತೆ ಮೊದಲಾದ ವಿಷಯಗಳಲ್ಲಿ ಸಾಕಷ್ಟು ಜ್ಞಾನವಿಲ್ಲ. ಆದರೆ ಈ ಗ್ರಂಥಗಳನ್ನು ನಿಂದಿಸಿದರೆ ಏನಾದರೂ ‘ಕಾಂಟ್ರವರ್ಸಿ’ ಸೃಷ್ಟಿಸಬಹುದೆಂದು ಗೊತ್ತಿದೆ. ನಿಜವಾಗಿ ಬುದ್ಧಿಜೀವಿಗಳಲ್ಲಿ ಬುದ್ಧಿ ಇದೆ.

ಆದರೆ ಈ ಬುದ್ಧಿ ವಿಕಾರವಾಗಿದೆ. ಯಾಕೆಂದರೆ ಅವರ ಬುದ್ಧಿಗೆ ಉತ್ತಮ ಸಂಸ್ಕಾರದ ಹಿನ್ನೆಲೆ ಇಲ್ಲ. ಇನ್ನು ಕೆಲವರು ಯಾರನ್ನೋ ಮೆಚ್ಚಿಸಲಿಕ್ಕಾಗಿ ಬ್ರಾಹ್ಮಣರನ್ನು ತೆಗಳುತ್ತಾರೆ. ಇದು ‘ಬೇಳೆ ಬೇಯಿಸಿಕೊಳ್ಳುವ ರೀತಿ’. ಬ್ರಾಹ್ಮಣರನ್ನು ನಿಂದಿಸುವಾಗ ಬುದ್ಧಿಜೀವಿಗಳಿಗೆ ಇರುವ ಭರವಸೆ ಎಂದರೆ ಅವರು ಎಷ್ಟು ನಿಂದಿಸಿದರೂ ಏನೂ ಮಾಡುವುದಿಲ್ಲ. ನಮ್ಮ ಜೀವಕ್ಕಂತೂ ಅಪಾಯವಿಲ್ಲ ಎನ್ನುವುದೇ ಆಗಿದೆ. ಬ್ರಾಹ್ಮಣರು ಇಂದಿನ ದಿನದಲ್ಲಿ ಅಲ್ಪಸಂಖ್ಯಾತರು. ಅವರಲ್ಲಿ ಒಗ್ಗಟ್ಟಿನ ಅಭಾವವಿದೆ. ಬ್ರಾಹ್ಮಣ ದ್ವೇಷಕ್ಕೆ ಬುದ್ಧಿಜೀವಿಗಳಿಗೆ ಇರುವ ಎರಡು ಪ್ಲಸ್ ಪಾಯಿಂಟ್ ಇದಾಗಿದೆ. ಸರಕಾರದ ಧೋರಣೆಯನ್ನು ನೋಡಿ ಬ್ರಾಹ್ಮಣರನ್ನು ಟೀಕಿಸುವ ವ್ಯವಹಾರದವರೂ ಇದ್ದಾರೆ. ಇತ್ತೀಚೆಗೆ ಬ್ರಾಹ್ಮಣರ ನಿಂದೆಗೆ ಪ್ರತಿಯಾಗಿ ಅಭಿಪ್ರಾಯಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದು ಬುದ್ಧಿಜೀವಿಗಳ ನಿದ್ದೆಗೆಡಿಸಿದೆ ಎಂಬುದಂತೂ ಸತ್ಯ.

ಬ್ರಾಹ್ಮಣರಲ್ಲಿ ಜಾಗೃತಿ ಉಂಟಾಗುತ್ತಿದೆ. ಅವರೂ ಸಹ ಎದುರೇಟು ಕೊಡಬಲ್ಲರು ಎನ್ನುವುದು ಅವರಿಗೆ ಅರ್ಥವಾಗಿದೆ. ಸೋಮಯಾಗದ ನಿಜವಾದ ವಿಷಯವನ್ನು ತಿಳಿದವರು ಈ ಪ್ರಕಾರ ಮಾತನಾಡುವುದಿಲ್ಲ. ಬುದ್ಧಿಜೀವಿಗಳಿಗೆ ಸೋಮಯಾಗ ಒಂದು ನೆಪಕ್ಕೆ ಮಾತ್ರ. ಬ್ರಾಹ್ಮಣರ ಮೇಲೆ ಗೂಬೆ ಕೂರಿಸಲು ಒಂದು ಕಾರಣ ಬೇಕಿತ್ತು ಅಷ್ಟೆ. ತಿಳಿಯದೇ ಇರುವ ವಿಷಯದಲ್ಲಿ ಮಹಾಪಂಡಿತರಂತೆ ಮಾತನಾಡಿ ತಮ್ಮ ಬಂಡವಾಳವನ್ನು ಹರಾಜು ಹಾಕಿಕೊಂಡಿದ್ದಾರೆ ಅಷ್ಟೆ.  ಇಂತಹ ಬುದ್ಧಿಜೀವಿಗಳ ಹುನ್ನಾರ ಬಹುಕಾಲ ನಡೆಯುವುದಿಲ್ಲ. ಯಾಕೆಂದರೆ ಬ್ರಾಹ್ಮಣರಲ್ಲಿ ಅದರಲ್ಲಿಯೂ ವಿಶೇಷವಾಗಿ ಬ್ರಾಹ್ಮಣ ಯುವಕರಲ್ಲಿ ಜಾಗೃತಿ ಉಂಟಾಗಿದೆ.

ಪ್ರೊ. ವಿಷ್ಣು ಜೋಶಿ

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)

Comments