ಅಸುಂಡಿ: ಸ್ಪೋಟಕ ಬಳಸಿ ಬೃಹತ್ ಚೆಕ್ಡ್ಯಾಂ ಧ್ವಂಸ

ಗದಗ: ತಾಲೂಕಿನ ಅಸುಂಡಿ ಗ್ರಾಮದ ಬಳಿ ಈಚಲ ಹಳ್ಳಕ್ಕೆ ಅಡ್ಡಲಾಗಿ ನಿರ್ವಿುಸಲಾಗಿದ್ದ ಬೃಹತ್ ಚೆಕ್ಡ್ಯಾಂ ಅನ್ನು ಕಿಡಿಗೇಡಿಗಳು ಸ್ಪೋಟಕ ಬಳಸಿ ಧ್ವಂಸಗೊಳಿಸಿರುವ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದೆ.
ಬುಧವಾರ ರಾತ್ರಿಯೇ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದ್ದು, ಚೆಕ್ಡ್ಯಾಂ ಮೇಲ್ಭಾಗದಲ್ಲಿ ಡ್ರಿಲ್ ಮೂಲಕ ರಂಧ್ರ ಕೊರೆದು ಸ್ಪೋಟಕ ವಸ್ತುಗಳನ್ನು ಬಳಸಿ ಧ್ವಂಸಗೊಳಿಸಲಾಗಿದೆ. ಚೆಕ್ಡ್ಯಾಂ ನಲ್ಲಿ ಸುಮಾರು 4ರಿಂದ 5 ಅಡಿ ನೀರು ಸಂಗ್ರಹವಾಗಿತ್ತು. ಸ್ಪೋಟದಿಂದಾಗಿ 2ರಿಂದ 3 ಅಡಿ ನೀರು ಹಳ್ಳದಲ್ಲಿ ಹರಿದು ಹೋಗಿದೆ. ಜೀವಜಲಕ್ಕೆ ಆಧಾರವಾಗಿದ್ದ ಚೆಕ್ಡ್ಯಾಂ ಒಡೆದು ಹಾಕಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಪೋಟದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಜತೆಗೆ ಶೀಘ್ರ ಚೆಕ್ಡ್ಯಾಂ ಮರು ನಿರ್ವಿುಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆ, ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ತಿಳಿಸಿದ್ದರೂ ಯಾರೂ ಇತ್ತ ಕಡೆಗೆ ಮುಖ ಮಾಡಿಲ್ಲ ಎಂಬುದು ಜನರ ಆರೋಪ. ಶುಕ್ರವಾರ ಮಧಾಹ್ನ ಡಿಎಸ್ಪಿ ವಿಜಯಕುಮಾರ ಟಿ., ಸಿಪಿಐ ಸೋಮಶೇಖರ ಜುಟ್ಟಲ, ಪೊಲೀಸ್ ಶ್ವಾನ ದಳ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಆದರೆ, ಶುಕ್ರವಾರ ಸಂಜೆವರೆಗೂ ಈ ಕುರಿತು ಪ್ರಕರಣ ದಾಖಲಾಗಿಲ್ಲ. ತನಿಖೆ ಮುಂದುವರಿದಿದೆ.
ನೀರಿಗೆ ಆಧಾರವಾಗಿದ್ದ ಡ್ಯಾಂ: 2012ರಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಈಚಲ ಹಳ್ಳದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ ಚೆಕ್ಡ್ಯಾಂ ನಿರ್ವಿುಸಲಾಗಿತ್ತು. ಇದರಲ್ಲಿ ಒಂದು ಕಿ.ಮೀ.ಗೂ ಹೆಚ್ಚು ಪ್ರದೇಶದಲ್ಲಿ ನೀರು ನಿಲ್ಲುತ್ತಿತ್ತು. ಜಿಲ್ಲೆಯಲ್ಲಿ ಬರ ಇದ್ದರೂ ಡ್ಯಾಮ್ಲ್ಲಿ ನೀರು ಬತ್ತಿರಲಿಲ್ಲ. ಹಾಗಾಗಿ ಅಸುಂಡಿ, ಬಿಂಕದಕಟ್ಟಿ, ಮಲ್ಲಸಮುದ್ರ, ಹುಲಕೋಟಿ ಗ್ರಾಮಕ್ಕೆ ಈ ನೀರೇ ಆಧಾರವಾಗಿತ್ತು ಎಂದು ಅಸುಂಡಿ ಗ್ರಾಪಂ ಅಧ್ಯಕ್ಷ ಬಸವರಾಜ ಗದಗಿನ ಹೇಳಿದರು.