UK Suddi
The news is by your side.

ಅಧಿಕ ಕ್ಷೀರಕ್ಕೆ ನೆಮ್ಮದಿಯ ನೆಲಹಾಸು

image

ಒಪ್ಪೊತ್ತಿಗೆ ಹತ್ತಾರು ಲೀಟರ್ ಹಾಲಿಂಡುವ ಮಿಶ್ರತಳಿ ಹಸುಗಳನ್ನು ಸಾಕಿದ ಹೈನುಗಾರರು ಹಾಲಿನ ಇಳುವರಿ ಕಾಪಾಡಿಕೊಳ್ಳುವಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಅಧಿಕ ಕ್ಷೀರಕ್ಕಾಗಿ ಶಿಫಾರಸು ಪ್ರಮಾಣದಲ್ಲಿ ಉತ್ತಮ ಮೇವು ಮತ್ತು ಪಶು ಆಹಾರ ನೀಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದ್ದು, ಸೂಕ್ತ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು.

ಕೊಟ್ಟಿಗೆಯಲ್ಲಿ ಒದಗಿಸುವ ನೆಲಹಾಸು ಮತ್ತು ಸ್ಥಳಾವಕಾಶ ದನಗಳ ಸಹಜ ಶಾರೀರಿಕ ಕ್ರಿಯೆಯಾದ ‘ಮೆಲುಕು ಹಾಕುವಿಕೆ’ ಮೇಲೆ ಪರೋಕ್ಷವಾಗಿ ಪರಿಣಾಮ ಬೀರಿ, ಅವುಗಳ ಆರೋಗ್ಯ ನಿರ್ಧರಿಸುತ್ತದೆ. ಹಾಲಿನ ಇಳುವರಿ ಮತ್ತದರ ಗುಣಮಟ್ಟವೂ ಈ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

ರೂಢಿಗತ ಪದ್ಧತಿಯಂತೆ, ರೈತರು ಬೆಣಚು ಕಲ್ಲಿನ ಇಲ್ಲವೇ ಕಾಂಕ್ರೀಟ್‌ನ ನೆಲಹಾಸನ್ನು ಬಳಸುತ್ತಾರೆ. ಇವು ತಮ್ಮ ಗಟ್ಟಿತನದೊಟ್ಟಿಗೆ ಒರಟಾಗೂ ಇದ್ದರೆ, ಹಸು ಪ್ರತಿ ಬಾರಿ ಕೂತೇಳುವಾಗಲೂ ತೊಂದರೆ ಅನುಭವಿಸುತ್ತದೆ. ಸ್ಥಳಾವಕಾಶ ಕಡಿಮೆ ಇದ್ದರಂತೂ ತೊಂದರೆ ಮತ್ತಷ್ಟು ಉಲ್ಬಣಿಸುತ್ತದೆ.

ಹೈನು ದನಗಳ ಆರಾಮ, ಆರೋಗ್ಯ
ಹಸು ಕುಳಿತುಕೊಳ್ಳುವಾಗ ತನ್ನ ದೇಹತೂಕದ ಮೂರರಲ್ಲಿ ಎರಡು ಭಾಗವನ್ನು ಮುಂಗಾಲುಗಳ ಮೇಲೆ ಹಾಕಿ, ಮಂಡಿಯನ್ನು ಸುಮಾರು ಒಂದಡಿ ಎತ್ತರದಿಂದ ಥಟ್ಟನೆ ನೆಲಕ್ಕೆ ಊರಿ, ನಂತರ ಹಿಂಗಾಲುಗಳನ್ನು ಮಡಚಿ ವಿಶ್ರಮಿಸುತ್ತದೆ.

ವಿಶ್ರಮಿಸುವಾಗ, ತಿಂದು ಈಗಾಗಲೇ ಹೊಟ್ಟೆ ಸೇರಿ ಅರೆಜೀರ್ಣವಾಗಿದ್ದ ಮೇವನ್ನು ಮತ್ತೊಮ್ಮೆ ಬಾಯಿಗೆ ತಂದು ಮೆಲುಕು ಹಾಕುತ್ತದೆ. ಮೇವನ್ನು ಚೆನ್ನಾಗಿ ಜಿಗಿದು ಅಧಿಕ ಲಾಲಾರಸದೊಡನೆ ಪುನಃ ನುಂಗುತ್ತದೆ. ಇದು ಮೆಲುಕು ಹಾಕುವ ಎಲ್ಲಾ ಪ್ರಾಣಿಗಳ ಸಹಜ ಶಾರೀರಿಕ ಕ್ರಿಯೆ.

image

ಮೆಲುಕು ಹಾಕುವ ಪ್ರಕ್ರಿಯೆ ದನದ ಆರೋಗ್ಯಕ್ಕೂ, ಅಧಿಕ ಹಾಲಿನ ಇಳುವರಿಗೂ ಅತ್ಯವಶ್ಯಕ. ಆರೋಗ್ಯವಂತ ಹರೆಯದ ಹಸುವೊಂದು ದಿನವೊಂದರಲ್ಲಿ 14–16 ಬಾರಿ ಕೂತೇಳುತ್ತದೆ. ಅಂದರೆ ವರ್ಷಕ್ಕೆ ಐದರಿಂದ ಆರು ಸಾವಿರ ಬಾರಿ. ಪ್ರತಿಬಾರಿ ಕುಳಿತಾಗಲೂ 45–60 ನಿಮಿಷಗಳವರೆಗೆ ವಿಶ್ರಮಿಸಿ ಮೇಲೇಳುತ್ತದೆ.

ಈ ವಿಶ್ರಮಿಸುವ ಅವಧಿಯ ಅರ್ಧಕ್ಕೂ ಹೆಚ್ಚು ಸಮಯವನ್ನು (ದಿನದಲ್ಲಿ ಸುಮಾರು 7-10 ಗಂಟೆ) ಮೆಲುಕು ಹಾಕಲು ಬಳಸಿಕೊಳ್ಳುತ್ತದೆ. ಹಾಗೊಂದು ವೇಳೆ ಈ ಮೆಲುಕುಹಾಕುವ ಅವಧಿ ಕಡಿತಗೊಂಡರೆ, ಅದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಿ, ಹಾಲಿನ ಇಳುವರಿಯ ಕುಂಠಿತಕ್ಕೆ ಕಾರಣವಾಗುತ್ತದೆ.

ಕುಳಿತು ವಿಶ್ರಮಿಸುವ ಹಸುವಿಗೆ ಇತರೆ ಅನುಕೂಲಗಳೂ ಉಂಟು. ಈ ಅವಧಿಯಲ್ಲಿ ಗೊರಸುಗಳಿಗೂ ವಿರಾಮ ಸಿಕ್ಕು, ಅವು ಒದ್ದೆಯಾಗಿದ್ದಲ್ಲಿ ಒಣಗಲು ಅನುವು ಮಾಡಿಕೊಟ್ಟಂತಾಗುತ್ತದೆ.

ಅಲ್ಲದೆ ಕೆಚ್ಚಲಿಗೆ ಪೂರೈಕೆಯಾಗುವ ರಕ್ತದ ಪ್ರಮಾಣ ಶೇ30ರಷ್ಟು ಹೆಚ್ಚಿ, ಹಾಲಿನ ಉತ್ಪಾದನೆಗೂ ಸಹಕಾರಿ. ಗರ್ಭಧರಿಸಿದ ಹಸುವಾದರೆ, ಕೂತು ವಿಶ್ರಮಿಸುವಾಗ ಗರ್ಭಕೋಶಕ್ಕೆ ಹೆಚ್ಚಿನ ರಕ್ತ ಪೂರೈಕೆಯಾಗಿ, ಭ್ರೂಣದ ಬೆಳವಣಿಗೆ ಸುಲಲಿತವಾಗಿರುತ್ತದೆ. ಮಿರಮಿಸುವ ಅವಧಿ ಕಡಿತಗೊಂಡಂತೆ ಭ್ರೂಣದ ಬೆಳವಣಿಗೆಯೂ ಕುಂಠಿತಗೊಳ್ಳುತ್ತದೆ.

ವಿರಮಿಸುವ ಅವಧಿ ಕಡಿತಗೊಂಡರೆ ಉಂಟಾಗುವ ತೊಂದರೆಗಳು:
ಒಂದು ವೇಳೆ ನೆಲಹಾಸು ಮೃದುವಾಗಿರದೆ, ಗಟ್ಟಿಯಾಗಿ ಒರಟಾಗಿದ್ದರೆ, ಪ್ರತಿಬಾರಿ ಕೂರುವಾಗಲು ಮಂಡಿಗೆ ಪೆಟ್ಟಾಗಿ ಹಸು ನೋವು ಅನುಭವಿಸುತ್ತದೆ. ಇದು ಹೀಗೇ ಮುಂದುವರಿದರೆ ಮಂಡಿಯ ಉರಿಯೂತವಾಗಿ, ಕುಳಿತು ವಿಶ್ರಮಿಸಲೂ ಹಸು ಚಿಂತಿಸುತ್ತದೆ.

ಕೂತು ಮಿಶ್ರಮಿಸುವ ಸುಖಕ್ಕಿಂತ ಕೂರುವಾಗಿನ ನೋವು ಅಧಿಕವೆನ್ನಿಸಿದಾಗ ಹಸು ಕೂರುವುದನ್ನು ಮುಂದೂಡುತ್ತದೆ ಅಥವಾ ನಿಂತೇ ಕಾಲ ತಳ್ಳುತ್ತದೆ. ಹಸುವೊಂದು ಕುಳಿತುಕೊಳ್ಳಲು 5 ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡದ್ದೇ ಆದಲ್ಲಿ, ತಕ್ಷಣ ನೆಲಹಾಸಿನ ಗುಣಮಟ್ಟ ಪರೀಕ್ಷಿಸಿ ಮಂಡಿಯ ಆರೋಗ್ಯವನ್ನು ಗಮನಿಸಬೇಕಾದ್ದು ಜಾಣ ಹೈನುಗಾರನ ಲಕ್ಷಣ.

ಹೀಗೆ ಗಟ್ಟಿ ನೆಲಹಾಸಿನ ಮೇಲೆ ನಿಲ್ಲುವ ಅವಧಿ ಹೆಚ್ಚಾದಂತೆ ಗೊರಸುಗಳ ಮೇಲಿನ ಒತ್ತಡವೂ ಹೆಚ್ಚುತ್ತದೆ. ನಿಂತ ನೆಲ ಸ್ವಚ್ಛವಾಗಿರದೆ ಸೆಗಣಿ, ಗಂಜಲ ಇತ್ಯಾದಿಗಳಿಂದ ಹಸಿಯಾಗಿದ್ದರೆ, ಗೊರಸುಗಳು ಮೆದುವಾಗಿ, ಸುಲಭವಾಗಿ ಸೋಂಕಿಗೆ ಒಳಗಾಗುತ್ತವೆ. ಇದು ಕುಂಟುವಿಕೆಗೆ ಕಾರಣವಾಗುತ್ತದೆ. ಹೀಗೆ ಹೆಚ್ಚಿದ ಒತ್ತಡದಿಂದ ದೇಹದಲ್ಲಿ ‘ಕಾರ್ಟಿಕೋ ಸ್ಟಿರಾಯ್ಡ್’ಗಳೆಂಬ ಹಾರ್ಮೋನ್‌ಗಳು ಸ್ರವಿಸುತ್ತವೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಕುಸಿಯುತ್ತದೆ. ಜೊತೆಗೆ ಹಾಲು ಉತ್ಪಾದನೆಯ ಕುಸಿತಕ್ಕೂ ಈ ಹಾರ್ಮೋನ್‌ಗಳು ಕಾರಣವಾಗುತ್ತವೆ.

ಸೂಕ್ತ ಸ್ಥಳಾವಕಾಶ: ಕುಳಿತಲ್ಲಿಂದ ಏಳುವಾಗಲೂ, ದನ ಮುಂಗಾಲು ಮಂಡಿಯ ಮೇಲೆ ತನ್ನ ದೇಹದ ಭಾರವನ್ನೆಲ್ಲಾ ಹಾಕಿ, ತಲೆಯನ್ನು ಮುಂದಕ್ಕೆ ಜೀಕುತ್ತಾ, ಹಿಂಗಾಲುಗಳ ಮೇಲೆ ನಿಂತು, ನಂತರ ಮುಂಗಾಲುಗಳನ್ನು ನೇರವಾಗಿಸುತ್ತದೆ. ಈ ಸಮಯದಲ್ಲೂ ನೆಲಹಾಸು ಮೃದುವಾಗಿದ್ದರೆ ಹಸುವಿಗೆ ಆರಾಮ. ಇಲ್ಲವಾದಲ್ಲಿ ಹಸು ನೋವಿನ ಭಯಕ್ಕೆ ಮೇಲೇಳುವುದನ್ನು ಮುಂದೂಡುತ್ತದೆ. ಇದರಿಂದ ಮೇವು ತಿನ್ನುವ ಅವಧಿ ಕಡಿತಗೊಂಡು, ಹಾಲಿನ ಇಳುವರಿ ಮೇಲೆ ಮತ್ತೊಮ್ಮೆ ವ್ಯತಿರಿಕ್ತ ಪರಿಣಾಮವಾಗುತ್ತದೆ.

ಕುಳಿತಲ್ಲಿಂದ ಮೇಲೇಳುವಾಗ ದನವು ತಲೆಯನ್ನು ಒಂದಡಿಯಷ್ಟು ಮುಂದೆ ಜೀಕುತ್ತದೆ. ಮುಂಬದಿಯಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದಿದ್ದರೆ ಅದರ ತಲೆ ಅಥವ ಕೊಂಬು ಗೋದಲಿಗೆ ತಾಗುವ ಸಂಭವವಿರುತ್ತದೆ. ಈ ಭಯವೂ ದನ ಮೇಲೇಳುವ ಪ್ರಕ್ರಿಯೆಯನ್ನು ಮುಂದೂಡಲು ಪ್ರೇರೇಪಿಸುತ್ತದೆ. ಈ ಕಾರಣಗಳಿಗಾಗಿ ಹೈನು ದನಗಳಿಗೆ ಒದಗಿಸುವ ಸ್ಥಳಾವಕಾಶ ಕನಿಷ್ಠ ಎಂಟಡಿ ಉದ್ದ ಮತ್ತು ಐದಡಿ ಅಗಲದ್ದಾಗಿರಬೇಕು.  ಈ ಸ್ಥಳಾವಕಾಶ ಕೂತೇಳುವ ಪ್ರಕ್ರಿಯೆಯನ್ನು ಆರಾಮವಾಗಿಸುವುದಲ್ಲದೆ, ಕುಳಿತ ಅವಧಿಯಲ್ಲಿ ಹಸುವು ನಾಲ್ಕೂ ಕಾಲುಗಳನ್ನು ಚಾಚಿ ವಿರಮಿಸಲೂ ಅನುಕೂಲಕರ.

ಸಮಸ್ಯೆಗೆ ನಿವಾರಣೋಪಾಯಗಳು: ಗಟ್ಟಿ ನೆಲಹಾಸು ಮತ್ತು ಅದರಿಂದಾಗುವ ಹಾಲಿನ ಇಳುವರಿ ಹಾಗು ಗುಣಮಟ್ಟದ ಇಳಿಕೆಯ ಸಮಸ್ಯೆಗೆ ಎರಡು ಪ್ರಮುಖ ಪರಿಹಾರೋಪಾಯಗಳಿವೆ.

ಒಂದು, ದನಗಳನ್ನು ಸದಾ ಕೊಟ್ಟಿಗೆಯಲ್ಲೇ ಕಟ್ಟದೆ, ಹಾಲಿಂಡಿ ಮೇವು ನೀಡಿದ ಬಳಿಕ ಕೊಟ್ಟಿಗೆ ಪಕ್ಕದ ವಿಶಾಲ ಜಾಗವೊಂದರಲ್ಲಿ ಸ್ವಚ್ಛಂದವಾಗಿ ತಿರುಗಲು ಬಿಡುವುದು.

ನೆಲವು ಮರಳು ಅಥವ ಮಣ್ಣಿನದ್ದಾಗಿರಲಿ. ಈ ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಇದ್ದು, ಬೇಲಿಯಿಂದ ಭದ್ರಪಡಿಸಿರಲಿ. ಇದನ್ನು ಬಂಧ ಮುಕ್ತ ಪದ್ಧತಿ ಎನ್ನುತ್ತೇವೆ. ಇಲ್ಲಿ ಹಸುಗಳು ತಮಗೆ ಸರಿಯನಿಸಿದ ಸ್ಥಳದಲ್ಲಿ ಅಗತ್ಯಕ್ಕನುಗುಣವಾಗಿ ವಿರಮಿಸುತ್ತವೆ. ಇದರಿಂದ ಅವುಗಳ ಆರೋಗ್ಯ ಹೆಚ್ಚಿ, ಹಾಲು ಅಧಿಕವಾಗುತ್ತದೆ.

ಬಂಧ ಮುಕ್ತ ಪದ್ಧತಿಗೆ ಅಗತ್ಯ ಜಾಗದ ಲಭ್ಯತೆ ಇಲ್ಲದೆ, ಕೊಟ್ಟಿಗೆಯಲ್ಲೇ ಸದಾ ಕಟ್ಟಿರಬೇಕಾದಲ್ಲಿ ‘ರಬ್ಬರ್ ಮ್ಯಾಟ್’ (ಇವುಗಳನ್ನು ‘ಕೌ ಮ್ಯಾಟ್’ ಎನ್ನುವುದುಂಟು) ಗಳನ್ನು ನೆಲಹಾಸಾಗಿ ಬಳಸಿಕೊಳ್ಳುವುದು ಸೂಕ್ತ.

ಇವುಗಳ ಸ್ವಚ್ಛತೆ ಸುಲಭ ಹಾಗು ಹಸುಗಳೂ ಆರಾಮವಾಗಿ ಕೂತೇಳಲು ಅನುವು ಮಾಡಿಕೊಟ್ಟಂತಾಗುತ್ತದೆ. ಇದರಿಂದ ದೈನಂದಿನ ಚಟುವಟಿಕೆಗಳೂ ಅನಿರ್ಬಂಧಿತವಾಗಿ ಸಾಗಿ, ಆರೋಗ್ಯ ಹೆಚ್ಚುತ್ತದೆ. ಅಧಿಕ ಹಾಲೂ ಅನಾಯಾಸವಾಗಿ ದೊರೆಯುತ್ತದೆ.

(ಲೇಖಕರು ಬಳ್ಳಾರಿ ಜಿಲ್ಲೆಯ ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕರು)
ಕೃಪೆ ಪ್ರಜಾವಾಣಿ

Comments