ಕಡಿಮೆ ಅಂಕ, ಅನುತ್ತೀರ್ಣ: 6 ವಿದ್ಯಾರ್ಥಿಗಳು ಆತ್ಮಹತ್ಯೆ
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಡಿಮೆ ಅಂಕ, ಅನುತ್ತೀರ್ಣರಾದ ಮೂವರು ವಿದ್ಯಾರ್ಥಿನಿಯರೂ ಸೇರಿದಂತೆ ರಾಜ್ಯದಲ್ಲಿ ಆರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಡಗು ಜಿಲ್ಲೆ ಗೋಣಿಕೊಪ್ಪಲಿನ ಬಿ.ಶೆಟ್ಟಿಗೇರಿ ಗ್ರಾಮದ ಕೆ.ಎಸ್.ರಾಜಪ್ಪ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಕೊಡಿಯಾಲದ ಕೆ.ಆರ್.ವಂದನಾ (17) ಹಾಗೂ ಚಾಮರಾಜನಗರದ ರಾಮಸಮುದ್ರ ಬಡಾವಣೆಯ ಪವಿತ್ರಾ (18) ಆತ್ಮಹತ್ಯೆ ಮಾಡಿಕೊಂಡವರು.
ಕಡೇಮಾಡ ನಂದ ಸೋಮಯ್ಯ ಹಾಗೂ ರೀನಾ ದಂಪತಿ ಪುತ್ರ ರಾಜಪ್ಪ ಅರ್ಥಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಾರೆ.
ವಂದನಾ ಗಣಿತ ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ಆಕೆಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಪವಿತ್ರಾ ಮಧ್ಯಾಹ್ನ ವೆಬ್ಸೈಟ್ನಲ್ಲಿ ಫಲಿತಾಂಶ ನೋಡಿ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ತಾಲ್ಲೂಕಿನ ಆರ್ಯಾಳ ಗ್ರಾಮದ ವಿದ್ಯಾರ್ಥಿನಿ ಮಹಾಲಕ್ಷ್ಮಿ ಶಿವನಾಗಯ್ಯಸ್ವಾಮಿ(18) ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ಬಾಲಕಿಯರ ಎಂಎನ್ಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದಳು. ಫಲಿತಾಂಶದಿಂದ ನಿರಾಶೆಗೊಂಡು ಮನೆಯಲ್ಲಿಯೇ ಬೆಂಕಿ ಹಚ್ಚಿಕೊಂಡಿದ್ದಳು. ಪಾಲಕರು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು ಎಂದು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಮಾಳೇನಹಳ್ಳಿ ಗ್ರಾಮದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಬೇಸರಗೊಂಡ ವಿದ್ಯಾರ್ಥಿನಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಎಸ್.ಪಿ.ತನುಜಾ ಆತ್ಮಹತ್ಯೆ ಮಾಡಿಕೊಂಡವಳು. ಶಿವಮೊಗ್ಗ ಡಿವಿಎಸ್ ಸಂಯುಕ್ತ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಆಕೆಗೆ ಶೇ 68 ಅಂಕಗಳು ಬಂದಿದ್ದವು. ಇದರಿಂದ ಚಿಂತೆಗೆ ಒಳಗಾಗಿದ್ದಳು ಎಂದು ತಂದೆ ತೋಟಪ್ಪ ಪೊಲೀಸರಿಗೆ ತಿಳಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲಬುರ್ಗಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿನಿ ಕೋಮಲಾ ರಾಜಶೇಖರ ನಂದಗಿರಿ(18) ನೇಣಿಗೆ ಶರಣಾಗಿದ್ದಾಳೆ. ಇಲ್ಲಿನ ಮುಕ್ತಾಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದಳು. ಗಣಿತ ಹಾಗೂ ಜೀವಶಾಸ್ತ್ರ ವಿಷಯದಲ್ಲಿ ಕೋಮಲಾ ಅನುತ್ತೀರ್ಣಗೊಂಡಿದ್ದರಿಂದ ಮನನೊಂದು ಆಳಂದ ರಸ್ತೆಯ ದೇವಿನಗರದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ರಾಘವೇಂದ್ರ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ವಿದ್ಯಾರ್ಥಿನಿ ಯತ್ನ: ಬೆಳಗಾವಿಯ ಗಜಾನನ ನಗರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದಕ್ಕೆ ಬೇಸರಗೊಂಡ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಈ ಬಗ್ಗೆ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.