UK Suddi
The news is by your side.

ಬಂಪರ್‌ ಲಾಭದ ಜರ್ಬೆರಾ ಹೂವು ಕೃಷಿ

image

ಕಲಬುರ್ಗಿ: ತಾಲ್ಲೂಕಿನ ಕಪನೂರದಲ್ಲಿ ರೈತ ಸೈಯ್ಯದ್ ರಿಯಾಜುದ್ದಿನ್ ಭುಟ್ಟೊ ಅವರು ನೈಸರ್ಗಿಕ ನೆರಳು ಪರದೆ (ಪಾಲಿ ಹೌಸ್) ಘಟಕದಲ್ಲಿ ಜರ್ಬೆರಾ ಹೂವುಗಳನ್ನು ಬೆಳೆದು ತಿಂಗಳಿಗೆ ₹50 ಸಾವಿರ ಲಾಭ ಪಡೆಯುತ್ತಿದ್ದಾರೆ!

ಭುಟ್ಟೊ 20 ಗುಂಟೆಯಲ್ಲಿ ಜರ್ಬೆರಾ ಹೂವು ಬೆಳೆದಿದ್ದಾರೆ. ಜಿಲ್ಲೆಯಲ್ಲಿ ಜರ್ಬೆರಾ ಬೆಳೆದಿರುವ ಮೊದಲ ರೈತ ಇವರಾಗಿದ್ದಾರೆ. ಆರಂಭದಲ್ಲಿ 10 ಗುಂಟೆಯಲ್ಲಿ ಜರ್ಬೆರಾ ಬೆಳೆಯಲು ಕಮಲಾಪುರ ದಿಂದ ಮಣ್ಣು ತಂದು ಬೆಡ್ ಸಿಸ್ಟಂ ಆಧರಿಸಿ ಕೃಷಿ ಮಾಡಿದ್ದರು.

ಇದಕ್ಕಾಗಿ ಪುಣೆಯಿಂದ 600 ಸಸಿಗಳನ್ನು ತಂದು ಕಳೆದ ಆಗಸ್ಟ್‌ನಲ್ಲಿ ನಾಟಿ ಮಾಡಿದ್ದರು. ಮೂರು ತಿಂಗಳಲ್ಲಿ ವೈವಿಧ್ಯ ವರ್ಣಗಳ ಹೂವುಗಳು ಕಟಾವಿಗೆ ಸಿದ್ಧವಾದವು. ಪ್ರತಿ ತಿಂಗಳು ಸರಾಸರಿ 30 ಸಾವಿರ ಹೂವುಗಳನ್ನು ಕಟಾವು ಮಾಡಿ ಮಾರಾಟ ಮಾಡುತ್ತಿದ್ದಾರೆ.

ಇದರಿಂದ ಹೂವುಗಳ ಬೆಳೆಯುವು ದಕ್ಕೆ ಮಾಡಿದ ವೆಚ್ಚ ಕಳೆದು ಪ್ರತಿ ತಿಂಗಳು ₹50 ಸಾವಿರ ಲಾಭ ಪಡೆಯುತ್ತಿದ್ದಾರೆ. ಹೊಸದಾಗಿ 10 ಗುಂಟೆಯಲ್ಲಿ ಕೆಎಫ್ ಜೈವಿಕ ತಂತ್ರಜ್ಞಾನ ಆಧರಿಸಿ ಜರ್ಬೆರಾ ಸಸಿಗಳನ್ನು ಬೆಳೆಸುತ್ತಿದ್ದಾರೆ.

‘ಬೆಡ್ ಸಿಸ್ಟಂ ಹೂವು ಕೃಷಿಗೆ ನಿರ್ವಹಣಾ ವೆಚ್ಚ ಮತ್ತು ಕೀಟ ಬಾಧೆ ಹೆಚ್ಚು ತಗಲುವ ಸಂಭವವಿರುತ್ತದೆ. ಆದರೆ ಇಳುವರಿ ಪ್ರಮಾಣ ಹೆಚ್ಚು ಬರುತ್ತದೆ. ಕೆಎಫ್ ಜೈವಿಕ ತಂತ್ರಜ್ಞಾನದ ಪಾಲಿಹೌಸ್‌ ಘಟಕದಲ್ಲಿ ಮಳೆನೀರು ಬೀಳುವುದೆ ಇಲ್ಲ. ಹೀಗಾಗಿ ಕೀಟಬಾಧೆ ತಗುಲುವುದಿಲ್ಲ’ ಎಂದು ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಡಿ.ಮಂಜುನಾಥ ಹೇಳಿದರು.

ಹೊಸ ಪದ್ಧತಿ ಆಧರಿಸಿದ ಕೃಷಿಗಾಗಿ ಒಟ್ಟು  7,200 ಹೂಕುಂಡಗಳಲ್ಲಿ ತೆಂಗಿನ ತ್ಯಾಜ್ಯ  ಮಣ್ಣಿನಲ್ಲಿ ಜರ್ಬೆರಾ ಸಸಿಗಳನ್ನು ಬೆಳೆಸಿದ್ದಾರೆ. ಹೂವು ಬಿಡುವುದಕ್ಕೆ ಇನ್ನೂ ಎರಡು ತಿಂಗಳು ಕಾಯಬೇಕಿದೆ. ಒಂದು ಜರ್ಬೆರಾ ಸಸಿಯು ಮೂರು ವರ್ಷಗಳವರೆಗೆ ಹೂವುಗಳನ್ನು ಕೊಡುತ್ತದೆ.

ರೈತನಿಗೆ ಪ್ರೋತ್ಸಾಹ: ಜರ್ಬೆರಾ ಹೂವು ಕೃಷಿಯನ್ನು ರಿಯಾಜುದ್ದಿನ್ ಭುಟ್ಟೊ ಸವಾಲಾಗಿ ಸ್ವೀಕರಿಸಿದ್ದಾರೆ. ಜೇವರ್ಗಿಯ ರೈತ ಪ್ರವೀಣ ಮತ್ತು ಆಳಂದ ತಾಲ್ಲೂಕಿನ ಮೋಘಾ(ಕೆ) ಗ್ರಾಮದ ಪ್ರಗತಿಪರ ರೈತ ವಿ.ಡಿ.ಪಾಟೀಲ, ಕೈಸರ್ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾ ರಿಗಳು ಪ್ರೋತ್ಸಾಹ ಮತ್ತು ತಾಂತ್ರಿಕ ಸಲಹೆಯನ್ನು ಅವರು ಪಡೆಯುತ್ತಿದ್ದಾರೆ.

ಪ್ರಾರಂಭದಲ್ಲಿ ಅಗತ್ಯ ಮಣ್ಣು ಹಾಗೂ ಇತರೆ ಪರಿಕರಗಳನ್ನು ಸಂಗ್ರಹಿಸಿ ಕೊಳ್ಳುವ ಸಮಸ್ಯೆಗಳು ಅವರಿಗೆ ಎದುರಾಗಿದ್ದವು. ಕೊಳವೆಬಾವಿಯಲ್ಲಿ ಬರೀ ಮೂರು ಇಂಚು ನೀರು ಲಭ್ಯತೆ ಇತ್ತು. ಹನಿ ನೀರಾವರಿ ಪದ್ಧತಿ ಅಳವಡಿಸಿ ಕೊಂಡು ಜರ್ಬೆರಾ ಬೆಳೆದಿದ್ದಾರೆ.

‘ವರ್ಷ ಪೂರ್ತಿ ಜರ್ಬೆರಾ ಹೂಗಳು ಬೆಳೆಯುತ್ತವೆ. ಮದುವೆ ಋತುವಿನಲ್ಲಿ ಇವುಗಳ ಮಾರಾಟ ಹೇರಳವಾಗಿ ರುತ್ತದೆ. ಒಂದು ಹೂವು ಕನಿಷ್ಠ ₹2, ಗರಿಷ್ಠ 20ರ ವರೆಗೂ ಮಾರಾಟ ವಾಗುತ್ತದೆ. ಪ್ರಾರಂಭದಲ್ಲಿ ಹೈದರಾಬಾ ದ್‌ನಲ್ಲಿ ಮಾರಾಟ ಮಾಡುತ್ತಿದ್ದೆ. ಈಗ ಸ್ಥಳೀಯವಾಗಿಯೂ ಮಾರಾಟ ಮಾಡಲಾಗುತ್ತಿದೆ. ಇದಕ್ಕಾಗಿ ಪ್ಯಾಕಿಂಗ್ ಘಟಕ ಸಹ ಸ್ಥಾಪಿಸಲಾಗಿದೆ. ಒಂದು ಬಾಕ್ಸ್‌ನಲ್ಲಿ 150 ರಿಂದ 400 ಜರ್ಬೆರಾ ಹೂಗಳನ್ನಿಟ್ಟು ಮಾರಾಟಕ್ಕೆ ಕಳುಹಿಸ ಲಾಗುತ್ತದೆ’ ಎಂದು ಭುಟ್ಟೊ ವಿವರಿಸಿದರು.

ಸುದ್ದಿ ಕೃಪೆ. ಪ್ರಜಾವಾಣಿ

Comments