ಮನೆಯಲ್ಲೇ ಪಡಿತರ ಚೀಟಿ ಪ್ರಿಂಟ್ ಮಾಡಿ
ಪಡಿತರ ಚೀಟಿ ಮಾಡಿಸಲು ಇನ್ನು ನಾಗರಿಕ ಸೇವಾ ಕೇಂದ್ರಗಳ ಮುಂದೆ ಸರದಿ ಸಾಲಿನಲ್ಲಿ ಕಾಯಬೇಕಿಲ್ಲ; ಆಹಾರ ಇಲಾಖೆ ಕಚೇರಿಗೆ ಅಲೆಯಬೇಕಿಲ್ಲ. ಕಂಪ್ಯೂಟರ್ ಮತ್ತು ಪ್ರಿಂಟರ್ ಇದ್ದರೆ, ಮನೆಯಲ್ಲೇ ಮುದ್ರಿಸಿಕೊಳ್ಳಬಹುದು!
ಮನೆಯಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪಡಿತರ ಚೀಟಿ ಪಡೆಯುವ ತಂತ್ರಾಂಶವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಭಿವೃದ್ಧಿಪಡಿಸಿದೆ.
‘ಬಡತನ ರೇಖೆಗಿಂತ ಮೇಲಿನ ಕುಟುಂಬಗಳ (ಎಪಿಎಲ್) ಕಾರ್ಡ್ ವಿತರಣೆಗೆ ಶೀಘ್ರದಲ್ಲೆ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಬಳಿಕ ಬಿಪಿಎಲ್ ಕಾರ್ಡ್ ಪಡೆಯಲು ಕೂಡಾ ಈ ವ್ಯವಸ್ಥೆಯನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ.
ನ್ಯಾಷನಲ್ ಇನ್ಫರ್ಮೆಟಿಕ್ ಸೆಂಟರ್ (ಎನ್.ಐ.ಸಿ.) ಈ ತಂತ್ರಾಂಶವನ್ನು ರೂಪಿಸಿದೆ. ಹೀಗೆ ಪಡಿತರ ಚೀಟಿ ಮಾಡಿಸಿಕೊಳ್ಳಲು ಮೊಬೈಲ್ ಮತ್ತು ಆಧಾರ್ ಸಂಖ್ಯೆ ಇದ್ದರೆ ಸಾಕು’ ಎಂದು ಇಲಾಖೆಯ ಕಾರ್ಯದರ್ಶಿ ಹರ್ಷ ಗುಪ್ತ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರೂ ಪಡಿತರ ಚೀಟಿ ಸಿಕ್ಕಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಬಂದ ಕಾರಣ ಈ ವ್ಯವಸ್ಥೆ ಅಳವಡಿಸಲು ಇಲಾಖೆ ಮುಂದಾಗಿದೆ’ ಎಂದೂ ಅವರು ಹೇಳಿದರು.
ಏನಿದು ವ್ಯವಸ್ಥೆ?: ಅರ್ಜಿದಾರರು ಆನ್ಲೈನ್ ತಂತ್ರಾಂಶ ತೆರೆದು ತಮ್ಮ ಮೊಬೈಲ್ ಮತ್ತು ಆಧಾರ್ ಸಂಖ್ಯೆ ಭರ್ತಿ ಮಾಡಿದ ತಕ್ಷಣ ‘ಒನ್ ಟೈಮ್ ಪಾಸ್ವರ್ಡ್’ (ಓಟಿಪಿ) ಸಂಖ್ಯೆ ಮೊಬೈಲ್ಗೆ ರವಾನೆಯಾಗುತ್ತದೆ. ಆ ಸಂಖ್ಯೆಯನ್ನು ತುಂಬಿ ಪಡಿತರ ಚೀಟಿಯ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್ನಲ್ಲಿರುವ ಭಾವಚಿತ್ರ ಮತ್ತು ವಿಳಾಸ ಆ ಅರ್ಜಿಯಲ್ಲೇ ಇರುತ್ತದೆ.
ವಿಳಾಸ ತಿದ್ದುಪಡಿಗೂ ಅವಕಾಶ: ‘ವಿಳಾಸ ಬದಲಾಗಿದ್ದರೆ ತಿದ್ದುಪಡಿಗೆ ಅವಕಾಶ ಇದೆ. ಕುಟುಂಬ ಸದಸ್ಯರ ಮಾಹಿತಿ ಮತ್ತು ಆಧಾರ್ ಸಂಖ್ಯೆಯನ್ನೂ ಅರ್ಜಿಯಲ್ಲಿ ಭರ್ತಿ ಮಾಡಬೇಕು. ವಾಸಿಸುವ ವ್ಯಾಪ್ತಿಯ ಪಿನ್ ಕೋಡ್ ತುಂಬುವುದರಿಂದ ಆ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳ ಪಟ್ಟಿ ಕಂಪ್ಯೂಟರ್ ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ.
ಅರ್ಜಿದಾರರು ಅಂಗಡಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕೊನೆಗೆ ಸ್ವಯಂಚಾಲಿತವಾಗಿ ಪಡಿತರ ಚೀಟಿ ಸಿದ್ಧಗೊಳ್ಳುತ್ತದೆ. ಪ್ರಿಂಟರ್ ಸಹಾಯದಿಂದ ಅದನ್ನು ಮುದ್ರಿಸಿಕೊಳ್ಳಬಹುದು’ ಎಂದು ಹರ್ಷ ಗುಪ್ತ ಅವರು ವಿವರಿಸಿದರು.
‘ಮನೆಯಲ್ಲೆ ಪಡಿತರ ಚೀಟಿ ಮುದ್ರಿಸಿಕೊಂಡ ಬಿಪಿಎಲ್ ಕುಟುಂಬಗಳಿಗೆ ಮೂರು ತಿಂಗಳು ಆಹಾರ ಧಾನ್ಯಗಳನ್ನು ವಿತರಿಸಲಾಗುವುದು. ಈ ಅವಧಿಯಲ್ಲಿ ಕಾರ್ಡ್ದಾರರ ಮನೆಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಆದಾಯಕ್ಕೆ ಸಂಬಂಧಿಸಿದಂತೆ ನೀಡಿದ ಮಾಹಿತಿ ಸರಿಯಿದೆಯೇ ಎಂದು ಪರಿಶೀಲಿಸಲಿದ್ದಾರೆ. ತಪ್ಪು ಮಾಹಿತಿ ನೀಡಿದ್ದರೆ ಕಾರ್ಡ್ನ್ನು ತಕ್ಷಣ ರದ್ದುಪಡಿಸಲಾಗುವುದು’ ಎಂದು ವಿವರಿಸಿದರು.
‘ಈಗಾಗಲೇ ಪಡಿತರ ಚೀಟಿ ಇರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಮುಂದಾದರೆ ಆಧಾರ್ ಸಂಖ್ಯೆ ನೀಡಿದರೆ, ಈ ಹಿಂದೆ ಎಲ್ಲಿ, ಯಾವಾಗ ಕಾರ್ಡ್ ಪಡೆದುಕೊಂಡಿದ್ದರು ಎಂಬ ಮಾಹಿತಿ ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಹೊಸ ಕಾರ್ಡ್ ತುಂಬಲು ಅರ್ಜಿ ನಮೂನೆ ತೆರೆದುಕೊಳ್ಳವುದೇ ಇಲ್ಲ’ ಎಂದು ಅವರು ವಿವರಿಸಿದರು.