UK Suddi
The news is by your side.

ಕ್ರಾಂತಿ ಕಿಡಿ ಹಚ್ಚಿದ ಸಾವರ್ಕರ್

ಈ ದೇಶ ಕಂಡ ಅಪರೂಪದ ಇತಿಹಾಸಕಾರ, ಕವಿ, ತತ್ತ್ವಶಾಸ್ತ್ರಜ್ಞ, ಕ್ರಾಂತಿಕಾರಿ ವೀರ್ ಸಾವರ್ಕರ್ ಚಿಂತನೆಗಳು ಅಮರ. ಅಖಂಡ ಏಕತೆ ಮತ್ತು ರಾಷ್ಟ್ರೀಯ ಸಮಾನತೆಯನ್ನು ಪುನರುತ್ಧಾನಗೊಳಿಸಿದ ಅವರ ನಡೆ, ನುಡಿ ಸಾರ್ವಕಾಲಿಕ ಮಾದರಿ.

ಅದು 1901ರ ಜನವರಿ. ಇಂಗ್ಲೆಂಡಿನ ವಿಕ್ಟೋರಿಯಾ ರಾಣಿ ನಿಧನರಾದ ಸಮಯ. ಭಾರತದ ಎಲ್ಲ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಂತಾಪ ಸಭೆ ನಡೆಸಲು ಬ್ರಿಟಿಷ್ ಸರ್ಕಾರ ಆದೇಶಿಸಿತ್ತು. ಮಹಾರಾಷ್ಟ್ರದಲ್ಲಿ ಕೆಲವು ಕ್ರಾಂತಿಕಾರಿ ಹೋರಾಟಗಾರರು ಹುಟ್ಟುಹಾಕಿದ್ದ ‘ಮಿತ್ರ ಮೇಳ’ ಎನ್ನುವ ಸಂಘಟನೆಗೂ ಈ ಆದೇಶ ಬಂದಿತ್ತು. ವಿಧಿಯಿಲ್ಲದೆ ಸಂಘಟನೆ ಸಂತಾಪ ಸಭೆ ಏರ್ಪಡಿಸಿತ್ತು. ಆದರೆ, ಆ ಸಂಘಟನೆಯಲ್ಲಿದ್ದ ಬಾಲಕನೊಬ್ಬ ಸಭೆಯನ್ನು ವಿರೋಧಿಸಿದ. ಬ್ರಿಟಿಷ್ ರಾಣಿಯಾಗಲೀ ಅಥವಾ ರಾಜನಾಗಲೀ ಮೃತಪಟ್ಟಾಗ ಭಾರತೀಯರಾದ ನಾವೇಕೆ ಸಂತಾಪ ಸಭೆ ಏರ್ಪಡಿಸಬೇಕು? ಎನ್ನುವುದು ಆತನ ವಾದ.

ಒಮ್ಮೆ ಇದೇ ಬಾಲಕ ಮಹಾರಾಷ್ಟ್ರದ ತ್ರಯಂಬಕೇಶ್ವರಕ್ಕೆ ಕಾರ್ಯನಿಮಿತ್ತ ತೆರಳಿದ್ದ. ಆ ಪುಟ್ಟ ಊರಿನಲ್ಲಿ ಎಲ್ಲೆಡೆ ಬಣ್ಣಬಣ್ಣದ ತಳಿರು-ತೋರಣಗಳ ನಡುವೆ ಕೆಲವು ಫಲಕಗಳು ರಾರಾಜಿಸುತ್ತಿದ್ದವು. ಪರಿಶೀಲಿಸಿದಾಗ ಬ್ರಿಟನ್ನಲ್ಲಿ ಎಡ್ವರ್ಡ್-7 ರಾಜಕುಮಾರನ ಪಟ್ಟಾಭಿಷೇಕದ ಸಂಭ್ರಮಾಚರಣೆ ಎನ್ನುವುದು ತಿಳಿಯಿತು. ಅಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಭಾಷಣಕಾರ ಸರ್ಕಾರಿ ನೌಕರಿಯಲ್ಲಿದ್ದ ಭಾರತೀಯ ಪ್ರಜೆ. ಆತ ‘ರಾಜಾ ಎಡ್ವರ್ಡ್ ಇದೀಗ ಬ್ರಿಟಿಷ್ ಅಧಿಪತಿಯಾಗುತ್ತಿದ್ದಾನೆ. ನಾವೆಲ್ಲರೂ ಇದನ್ನು ಸಮ್ಮತಿಸಿ ಸ್ವಾಗತಿಸೋಣ. ಇದು ಸಂಭ್ರಮದ ಕ್ಷಣ. ರಾಜನು ನಮ್ಮ ತಂದೆಯಿದ್ದಂತೆ..’ ಎಂದು ಭಾಷಣ ಮಾಡುತ್ತಿದ್ದ. ಬಾಲಕನ ರಕ್ತ ಕುದಿಯತೊಡಗಿತು. ಅಲ್ಲಿದ್ದ ಎಡ್ವರ್ಡ್ ಪಟ್ಟಾಭಿಷೇಕದ ಫಲಕಗಳ ಪಕ್ಕದಲ್ಲಿ ಬಾಲಕ ಮತ್ತವನ ಮಿತ್ರರು ಅಹೋರಾತ್ರಿ ಶ್ರಮಿಸಿ ಅನೇಕ ಫಲಕಗಳನ್ನು ಸಿದ್ಧಗೊಳಿಸಿ ಅಂಟಿಸಿದ್ದರು. ಅದು ಹೀಗಿತ್ತು ‘ನಿಮ್ಮ ದೇಶವನ್ನು ಗುಲಾಮಗಿರಿಗೆ ತಳ್ಳಿದ ಬ್ರಿಟಿಷ್ ರಾಜನ ಪಟ್ಟಾಭಿಷೇಕದ ಸಂಭ್ರಮ ನಿಮಗೇಕೆ? ಎಡ್ವರ್ಡ್ ನಿಮ್ಮ ತಂದೆಯಾದರೆ ತಾಯಿ ಗತಿಯೇನು? ಮೂರ್ಖರಂತೆ ಬ್ರಿಟಿಷರ ದಾಸರಾಗಬೇಡಿ, ಗುಲಾಮಗಿರಿಯಿಂದ ಹೊರಬನ್ನಿ…’

ಈ ದಿಟ್ಟ ಬಾಲಕನೇ ವಿನಾಯಕ ದಾಮೋದರ ಸಾವರ್ಕರ್. ಎಂಟನೇ ವಯಸ್ಸಿನಲ್ಲಿಯೇ ಮಹಾರಾಷ್ಟ್ರದ ನಾಸಿಕ್ನಲ್ಲಿ ‘ಮಿತ್ರ ಮೇಳ’ ಎಂಬ ಕ್ರಾಂತಿಕಾರಿ ಸಂಘಟನೆ ಹುಟ್ಟುಹಾಕಿ, ಎಲ್ಲರನ್ನೂ ರಾಷ್ಟ್ರೀಯ ಚಿಂತನೆಯ ರೂವಾರಿಗಳನ್ನಾಗಿಸಿದರು. 1883ರ ಮೇ 28ರಂದು ಮಹಾರಾಷ್ಟ್ರದ ನಾಸಿಕ್ ಬಳಿಯ ಭಾಗುರಲ್ಲಿ ಯಶೋದಾ ಮತ್ತು ದಾಮೋದರ ಸಾವರ್ಕರ್ ಕಿರಿಯ ಪುತ್ರರಾಗಿ ಜನಿಸಿದರು. ಸ್ವಾತಂತ್ರ್ಯಾಂದೋಲನದಲ್ಲಿ ತಮ್ಮ ಚಿಂತನೆ ಮತ್ತು ನಡೆಗಳಿಂದ ಹೊಸ ಕ್ರಾಂತಿಯನ್ನುಂಟು ಮಾಡಿದರು.

1857ರ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಭಾರತದೆಲ್ಲೆಡೆ ಹರಡಿ ಅನೇಕರ ಬಲಿದಾನವಾಗಿತ್ತು. ಚಾಪೇಕರ್ ಸಹೋದರರು ಮತ್ತು ಜಸ್ಟೀಸ್ ರಾನಡೆಯವರನ್ನು ಆಂಗ್ಲರು ನಿರ್ದಾಕ್ಷಿಣ್ಯವಾಗಿ ಗಲ್ಲಿಗೇರಿಸಿದ್ದನ್ನು ಕಣ್ಣಾರೆ ಕಂಡ ಸಾವರ್ಕರ್, ಅಂದೇ ಬ್ರಿಟಿಷ್ ಸಾಮ್ರಾಜ್ಯವನ್ನು ಅಂತ್ಯಗೊಳಿಸುವ ಪಣ ತೊಟ್ಟಿದ್ದರು. ಬಳಿಕ ಹಂತಹಂತವಾಗಿ ಯುವಕರನ್ನು ಸಂಘಟಿಸಿದರು. 1904ರಲ್ಲಿ ಈ ಸಂಘಟನೆಯನ್ನು ‘ಅಭಿನವ ಭಾರತ’ ಎನ್ನುವ ಹೊಸ ರೂಪದಲ್ಲಿ ಇನ್ನಷ್ಟು ಸಕ್ರಿಯಗೊಳಿಸಿದರು. ಅವರಿಗೆ ಅಣ್ಣ ಬಾಬಾ ಸಾವರ್ಕರ್ ಬೆಂಬಲವೂ ಇತ್ತು. ಬಂಗಾಳ ವಿಭಜನೆ ಘೊಷಣೆಯಾದಾಗ ಸ್ವದೇಶಿ ಕ್ರಾಂತಿಯೂ ತೀವ್ರವಾಯಿತು.

ಗುರುಗಳಾದ ಲೋಕಮಾನ್ಯ ತಿಲಕರ ಮಾರ್ಗದರ್ಶನದಲ್ಲಿ ಸಾವರ್ಕರ್ ವೈಚಾರಿಕ ಚಿಂತನೆಗಳು ಇನ್ನಷ್ಟು ದೃಢವಾಯಿತು. ಆದರೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅವರನ್ನು ಇಂಗ್ಲೆಂಡಿಗೆ ಕಳುಹಿಸಲಾಯಿತು. ಇಂಗ್ಲೆಂಡ್ನಲ್ಲಿ ವಾಸವಾಗಿದ್ದ ಆರ್ಯ ಸಮಾಜದ ಮುಖ್ಯ ವಕ್ತಾರರಲ್ಲೊಬ್ಬರಾದ ಪಂಡಿತ್ ಶ್ಯಾಂಜೀ ಕೃಷ್ಣ ವರ್ವ ತಮ್ಮ ಗುರು ತಿಲಕರ ಆದೇಶದಂತೆ ಸಾವರ್ಕರ್ ವಾಸಕ್ಕಾಗಿ ‘ಇಂಡಿಯಾ ಹೌಸ್’ನಲ್ಲಿ ಏರ್ಪಾಡು ಮಾಡಿದರು.

ಇಂಡಿಯಾ ಹೌಸ್ನಲ್ಲಿದ್ದ ಅನೇಕ ಭಾರತೀಯ ಯುವಕರು ವಿಲಾಸಿ ಜೀವನ ನಡೆಸುತ್ತಿದ್ದುದ್ದನ್ನು ಕಂಡ ಸಾವರ್ಕರ್, ತಮ್ಮ ವಿಚಾರಧಾರೆಗಳಿಂದ ಅವರನ್ನು ಪರಿವರ್ತಿಸತೊಡಗಿದರು. ಇತ್ತ ಭಾರತದಲ್ಲಿ ಸಾವರ್ಕರ್ ಅಣ್ಣ ಹಾಗೂ ಸ್ನೇಹಿತರು ಅಭಿನವ ಭಾರತದ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿದರು.

ಲಾಲಾ ಹರದಯಾಳ ಎನ್ನುವ ಉತ್ಸಾಹಿ ಕ್ರಾಂತಿಕಾರಿ ಯುವಕ ಸಾವರ್ಕರರನ್ನು ಇಂಡಿಯಾ ಹೌಸ್ನಲ್ಲಿ ಜೊತೆಗೂಡಿದ. ಅವರೊಂದಿಗೆ ಸಾಕಷ್ಟು ಯುವಕರು ಸೇರತೊಡಗಿದರು. ಅವರ ‘ಅಖಂಡ ಭಾರತ ಪರಿಕಲ್ಪನೆ’ ಮತ್ತು ‘ಸ್ವರಾಜ್ಯ’ ಘೊಷಣೆ ಎಲ್ಲೆಡೆ ಪ್ರತಿಧ್ವನಿಸತೊಡಗಿತು. ಅಷ್ಟೇ ಅಲ್ಲ, ಇಂಗ್ಲೆಂಡಿನಲ್ಲಿ ‘ವಂದೇ ಮಾತರಂ’ ಗೀತೆಯೂ ಕೇಳಿಬರತೊಡಗಿತು. ಸಾವರ್ಕರ್ ಬರಹವೂ ಅತ್ಯುನ್ನತವಾಗಿತ್ತು. ಜೋಸೆಫ್ ಮಜ್ಜಿನಿ ಕುರಿತ ಅವರ ಮೊದಲ ಪುಸ್ತಕ 1906ರಲ್ಲಿ ಪ್ರಕಟವಾಯಿತು.

ಇಂಗ್ಲೆಂಡಿನಲ್ಲಿದ್ದ ಐರ್ಲೆಂಡ್ ಮತ್ತು ರಷ್ಯಾದ ನಿಹಿಲಿಸ್ಟ್ ಕ್ರಾಂತಿಕಾರಿಗಳೂ ಸಾವರ್ಕರರಿಂದ ಪ್ರಭಾವಿತರಾಗಿದ್ದರು. ಇದೇ ಸಮಯದಲ್ಲಿ ಭಾರತದಲ್ಲಿ 1857ರ ಸ್ವಾತಂತ್ರ್ಯ ಸಂಗ್ರಾಮದ 50 ವರ್ಷದ ಸಿದ್ಧತೆಯಲ್ಲಿ ಅಭಿನವ ಭಾರತ ತೊಡಗಿತ್ತು. ಅತ್ತ ಇಂಗ್ಲೆಂಡಿನಲ್ಲೂ ಸಾವರ್ಕರ್ ಈ ಸಂಭ್ರಮಾಚರಣೆಗೆ ಸಿದ್ಧತೆ ಮಾಡತೊಡಗಿದರು. ಅಲ್ಲಿ ಸಾವಿರಾರು ಯುವಕರು ಉತ್ಸಾಹದಿಂದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ನಿರ್ಭಯವಾಗಿ ವಂದೇ ಮಾತರಂ ಘೊಷಿಸಿದರು. ಬ್ರಿಟಿಷರೇ ಸಾವರ್ಕರರ ಸಂಘಟನಾ ಚಾತುರ್ಯಕ್ಕೆ ಬೆರಗಾದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕುರಿತು 1908ರಲ್ಲಿ ಸಾವರ್ಕರ್ ಬರೆದ ‘ಇಂಡಿಯನ್ ವಾರ್ ಆಫ್ ಇಂಡಿಪೆಂಡನ್ಸ್’ ಪುಸ್ತಕ ಬಿಡುಗಡೆಗೆ ಸಿದ್ಧವಾಯಿತು. ಈ ಪುಸ್ತಕವನ್ನು ನಿರ್ಬಂಧಿಸಲು ಬ್ರಿಟಿಷರು ನಿರ್ಧರಿಸಿದರು. ಆದರೆ ಅದಾಗಲೇ ಪುಸ್ತಕದ ನೂರಾರು ಪ್ರತಿಗಳು ಜನರ ಕೈಸೇರಿತ್ತು.

ಇತ್ತ ಸಾವರ್ಕರ್ ಅಣ್ಣನನ್ನು ಬ್ರಿಟಿಷರು ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬಂಧಿಸಿ ದಂಡನೆ ನೀಡಿದ್ದರು. ಅಭಿನವ ಭಾರತದಲ್ಲಿದ್ದ ಕ್ರಾಂತಿಕಾರಿಗಳನ್ನು ಬಂಧಿಸಿ ಸೆರೆಯಲ್ಲಿಟ್ಟು ಹಿಂಸಿಸಲಾಗಿತ್ತು. ಈ ಕೃತ್ಯಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂಡಿಯಾ ಹೌಸ್ನಲ್ಲಿದ್ದ ಮತ್ತೊಬ್ಬ ಕ್ರಾಂತಿಕಾರಿ ಮದನ್ಲಾಲ್ ಧಿಂಗ್ರಾ ಬ್ರಿಟಿಷ್ ಅಧಿಕಾರಿ ಲಾರ್ಡ್ ಕರ್ಜನ್ನನ್ನು ಹತ್ಯೆಗೈದ. ಆತನನ್ನು ಬಂಧಿಸಿ, ಮರಣದಂಡನೆ ವಿಧಿಸಲಾಯಿತು.

ಈ ಎಲ್ಲ ಘಟನೆಗಳಿಂದ ಸಾವರ್ಕರ್ ಇನ್ನಷ್ಟು ಸಿಡಿದೆದ್ದರು. ಅವರನ್ನು ಭಾರತಕ್ಕೆ ಕರೆತರಲು ಬ್ರಿಟಿಷ್ ಸರ್ಕಾರಕ್ಕೆ ಆದೇಶಿಸಲಾಯಿತು. 1910 ಜುಲೈ 8ರ ಹಡಗಿನಲ್ಲಿ ಪಯಣಿಸುತ್ತಿದ್ದಾಗ ಸಾವರ್ಕರ್ ಸಮುದ್ರಕ್ಕೆ ಜಿಗಿದು ಈಜಿ ಫ್ರಾನ್ಸಿನ ಮಾರ್ಸೆಲೀಸ್ ಬಂದರು ಸೇರಿದರು. ದುರದೃಷ್ಟವಶಾತ್ ಅಲ್ಲಿ ಮತ್ತೆ ಬ್ರಿಟಿಷರು ಅವರನ್ನು ಬಂಧಿಸಿ, ಮುಂಬೈನ ಯೆರವಡಾ ಜೈಲಿನಲ್ಲಿರಿಸಿದರು.

ನಾಸಿಕ್ನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಆರೋಪದಡಿಯಲ್ಲಿ 1911ರ ಜುಲೈ 4ರಂದು 27 ವರ್ಷದ ಸಾವರ್ಕರ್ಗೆ ಅಂಡಮಾನ್ನಲ್ಲಿ 50 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಲಾಯಿತು. ತೀರ್ಪು ಆಲಿಸಿದ ಸಾವರ್ಕರ್ ‘50 ವರ್ಷಗಳು ನನ್ನನ್ನು ಕಾರಾಗೃಹದಲ್ಲಿರಿಸಲು ಬ್ರಿಟಿಷರು ಭಾರತದಲ್ಲಿದ್ದರೆ ತಾನೇ?’ ಎಂದು ನಕ್ಕು ನುಡಿದಿದ್ದರು. ಸೆರೆಯಲ್ಲಿ ಅವರನ್ನು ನಾನಾ ರೀತಿಯಲ್ಲಿ ಶಿಕ್ಷಿಸಲಾಯಿತು.

ಮಾತೃಭೂಮಿ ರಕ್ಷಣೆಗಾಗಿ ತೊಟ್ಟ ಸಂಕಲ್ಪವನ್ನು ಮರೆಯದೆ, ಆ ಬಗ್ಗೆ ಹತಾಶೆ ವ್ಯಕ್ತಪಡಿಸದೆ ಸಾವರ್ಕರ್ ತನ್ನನ್ನು ಬಿಡುಗಡೆಗೊಳಿಸುವಂತೆ ನಾಲ್ಕು ಬಾರಿ ಬ್ರಿಟಿಷರಿಗೆ ಕ್ಷಮಾ ಅರ್ಜಿ ಸಲ್ಲಿಸಿದರು. 1921ರಲ್ಲಿ ಅವರನ್ನು ರತ್ನಾಗಿರಿ ಕಾರಾಗೃಹಕ್ಕೆ ಸಾಗಿಸಲಾಯಿತು. ಅಲ್ಲಿಂದ ಮತ್ತೆ ಯೆರವಡಾ ಜೈಲಿಗೆ ಸಾಗಿಸಲಾಯಿತು. ಅವರ ಚಟುವಟಿಕೆಗಳಿಗೆ ತೀವ್ರ ನಿರ್ಬಂಧ ವಿಧಿಸಿ 1924ರ ಜನವರಿ 6ರಂದು ಬಿಡುಗಡೆಗೊಳಿಸಲಾಯಿತು.

ಮುಂದೆ ರತ್ನಗಿರಿ ಮಹಾಸಭೆಯ ರೂವಾರಿಗಳಾದ ಸಾವರ್ಕರ್ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದರು. ‘ಹಿಂದು ಮಹಾಸಭೆ’ಯ ನೇತಾರರಾಗಿ ಸಾವಿರಾರು ಚಿಂತಕರಿಗೆ ಮಾರ್ಗದರ್ಶನ ನೀಡಿದರು. 1940ರಲ್ಲಿ ಭಾರತವನ್ನು ವಿಭಜಿಸುವ ಲಾಹೋರ್ ಸಭೆಯ ನಿರ್ಧಾರವನ್ನು ಖಂಡಿಸಿದರು. 1948ರಲ್ಲಿ ಗಾಂಧೀಜಿ ನಿಧನದ ನಂತರ ಅವರನ್ನು ಬಂಧಿಸಿ, ಬಿಡುಗಡೆಗೊಳಿಸಲಾಯಿತು. ಆತ್ಮಾರ್ಪಣೆ ಮಾಡಿಕೊಳ್ಳುವ ಸಲ್ಲೇಖನವ್ರತ ಕೈಗೊಂಡು 1966ರ ಫೆಬ್ರವರಿ 26ರಂದು ನಿಧನ ಹೊಂದಿದರು. ಈ ದೇಶ ಕಂಡ ಅಪರೂಪದ ಇತಿಹಾಸಕಾರ, ಕವಿ, ತತ್ತ್ವಶಾಸ್ತ್ರಜ್ಞ, ರಾಜಕೀಯ ಮುತ್ಸದ್ದಿ, ಕ್ರಾಂತಿಕಾರಿ ವೀರ್ ಸಾವರ್ಕರ್ ಚಿಂತನೆಗಳು ಇತಿಹಾಸದ ಪುಟಗಳಲ್ಲಿ ಇಂದಿಗೂ ಅಮರ. ಅಖಂಡ ಏಕತೆ ಮತ್ತು ರಾಷ್ಟ್ರೀಯ ಸಮಾನತೆಯನ್ನು ಪುನರುತ್ಧಾನಗೊಳಿಸಿದ ಅವರ ನಡೆ, ನುಡಿ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾದರಿ. ಅವರು ರಚಿಸಿದ ‘ಇಂಡಿಯನ್ ವಾರ್ ಆಫ್ ಇಂಡಿಪೆಂಡನ್ಸ್’, ‘ಕಾಲಾಪಾನಿ’, ‘ಹಿಂದುತ್ವ’ ಮೊದಲಾದ ಪುಸ್ತಕಗಳು ಮುಂದೆ ಭಗತ್ ಸಿಂಗ್, ಲಾಲಾ ಹರದಯಾಳ್ ಮತ್ತು ಸುಭಾಷ್ಚಂದ್ರ ಬೋಸ್ ಮೇಲೆ ಅಪಾರ ಪರಿಣಾಮ ಬೀರಿತು.

ಮಯೂರಲಕ್ಷ್ಮೀ

(ಲೇಖಕರು ಉಪನ್ಯಾಸಕಿ)

Comments