UK Suddi
The news is by your side.

ಸನ್ ರೈಸರ್ಸ ಗೆ IPL ಚಾಂಪಿಯನ್ ಪಟ್ಟ

 

image

ಭಾನುವಾರ ರಾತ್ರಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ  ಚಾಂಪಿಯನ್ ಆಗಿ ಉದಯಿಸಿತು.

ಡೇವಿಡ್ ವಾರ್ನರ್ ಪ್ರಖರ ನಾಯಕತ್ವದ ಮುಂದೆ ತವರಿನ ಅಂಗಳದಲ್ಲಿ ಪ್ರಶಸ್ತಿ ಗೆದ್ದು  ಮೆರೆಯುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಕನಸು ಕರಗಿತು. 

ಐಪಿಎಲ್ 9ನೇ ಆವೃತ್ತಿಯ ಫೈನಲ್‌ನಲ್ಲಿ ಬೆನ್ ಕಟಿಂಗ್ ಅವರ ಆಲ್‌ರೌಂಡ್ ಆಟದಿಂದ 8 ರನ್‌ಗಳ ಅಂತರದಿಂದ ಗೆದ್ದ ಸನ್‌ರೈಸರ್ಸ್ ತಂಡದ ಸಂಭ್ರಮ ಮುಗಿಲುಮುಟ್ಟಿತು.  ಡೇವಿಡ್ ವಾರ್ನರ್ ಅವರ ಯೋಜನಾಬದ್ಧ ಮತ್ತು ಯಾವುದೇ ಹಂತದಲ್ಲಿಯೂ ಕೈಚೆಲ್ಲದ ಛಲದ ನಾಯಕತ್ವಕ್ಕೆ  ಮೊಟ್ಟಮೊದಲ ಪ್ರಶಸ್ತಿ ಒಲಿಯಿತು.

ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್  20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 208 ರನ್ ಗಳಿಸಿತು. ಉತ್ತರವಾಗಿ  ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 200 ರನ್ ಹೊಡೆಯಿತು.  2009,  2011 ರಲ್ಲಿಯೂ ರನ್ನರ್ಸ್ ಅಪ್ ಆಗಿದ್ದ  ಬೆಂಗಳೂರು ತಂಡವು ಮೂರನೇ ಬಾರಿ ಫೈನಲ್ ತಲುಪಿತ್ತು. 

2013ರಲ್ಲಿ ಐಪಿಎಲ್ ಪ್ರವೇಶಿಸಿದ್ದ ಸನ್‌ರೈಸರ್ಸ್ ತಂಡ  ಮೊದಲ ಸಲ ಫೈನಲ್ ತಲುಪಿ ಮಿರಿಮಿರಿ ಮಿಂಚುವ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ವಾರ್ನರ್ ಬಳಗವು ಲೀಗ್ ಹಂತದಲ್ಲಿ ತನ್ನ ಮೊದಲ ಪಂದ್ಯವನ್ನು ಇಲ್ಲಿಯೇ ಆಡಿ ಸೋತಿತ್ತು.  ಒಟ್ಟು ಎಂಟು ಪಂದ್ಯಗಳನ್ನು ಗೆದ್ದು ಮೂರನೇ ಸ್ಥಾನ ಪಡೆದಿದ್ದ ಸನ್‌ರೈಸರ್ಸ್ ಎಲಿಮಿನೇಟರ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ ಮತ್ತು ಎರಡನೇ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಸನ್‌ರೈಸರ್ಸ್ ಜಯಿಸಿದ ನಂತರ ಬಾನೆತ್ತರಕ್ಕೆ ಹಾರಿದ ಸಿಡಿಮದ್ದುಗಳ ಸದ್ದು ಮತ್ತು ಹೊಗೆಯಲ್ಲಿ  ಆರ್‌ಸಿಬಿ ಅಭಿಮಾನಿಗಳ ಕಣ್ಣೀರು, ನಿರಾಸೆಗಳು ಸೇರಿಹೋದವು.

Comments