UK Suddi
The news is by your side.

ಸಿಂಧೂ ನಾಗರಿಕತೆ ಅವನತಿಗೆ ಹವಾಮಾನ ವೈಪರೀತ್ಯ ಕಾರಣ?

image

ಸಿಂಧೂ ಕಣಿವೆ ನಾಗರಿಕತೆಯು ನಾವಂದುಕೊಂಡದ್ದಕ್ಕಿಂತಲೂ ಹಳೆಯದು. ಹವಾಮಾನ ವೈಪರೀತ್ಯ 3 ಸಾವಿರ ವರ್ಷಗಳ ಹಿಂದೆ ಅದರ ಅವನತಿಗೆ ಕಾರಣವಿರಬಹುದು ಎಂದು ಐಐಟಿ ಖರಗ್‌ಪುರ ಹಾಗೂ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ತಜ್ಞರು ಪ್ರತಿಪಾದಿಸಿದ್ದಾರೆ. ತತ್ಸಬಂಧ ಅವರು ಬರೆದ ಸಂಶೋಧನಾ ಲೇಖನವನ್ನು ಪ್ರತಿಷ್ಠಿತ ‘ನೇಚರ್’ ಜರ್ನಲ್ ಮೇ 25ರಂದು ಪ್ರಕಟಿಸಿದೆ. ಈ ಕುರಿತ ವಿವರ ಇಲ್ಲಿದೆ.

ಪ್ರಾಚೀನ ಕಾಲದಲ್ಲಿ ಜನಜೀವನ ನದಿಗಳ ತಟದಲ್ಲಿ ಬೆಳೆದುಬಂದ ಕಾರಣ ನದಿಗಳನ್ನು ‘ನಾಗರಿಕತೆಗಳ ತೊಟ್ಟಿಲು’ ಎಂದೇ ಕರೆಯಲಾಗುತ್ತದೆ. ಇಂಥ ನಾಗರಿಕತೆಗಳ ಇತಿಹಾಸಕ್ಕೆ ಇದೀಗ ಭಾರಿ ತಿರುವು ಸಿಕ್ಕಿದೆ. ಸಿಂಧೂ ನದಿತಟದ ನಾಗರಿಕತೆಯನ್ನು ಇದುವರೆಗೂ ಬ್ರಿಟಿಷ್ ಇತಿಹಾಸ ತಜ್ಞರು ನಡೆಸಿದ ಉತ್ಖನನ ಆಧರಿಸಿ ತಿಳಿದುಕೊಳ್ಳಲಾಗುತ್ತಿತ್ತು. ಇದೀಗ ಭಾರತೀಯರದ್ದೇ ಆದ ತಂಡ (ಐಐಟಿ ಖಗರ್‌ಗಪುರ ಹಾಗೂ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ತಜ್ಞರ ತಂಡ)ವೊಂದು ಹರಿಯಾಣದ ಭಿಢಾನ ಮತ್ತು ರಾಖಿಗಢಿ ಎಂಬ ಎರಡು ಕಡೆ ಉತ್ಖನನ ನಡೆಸಿ ಸಂಶೋಧನಾ ಪ್ರಬಂಧ(Oxygen isotope in archaeological bioapatites
from India: Implications to climate change and decline of
Bronze Age Harappan Civilization ವನ್ನೂ ಪ್ರಕಟಿಸಿದೆ. ಭಾರತದ ಲೋಥಲ್, ಧೊಲಾವಿರಾ ಮತ್ತು ಕಾಲಿಬಂಗನ್ ಹಾಗೂ ಪಾಕಿಸ್ತಾನದ ಹರಪ್ಪಾ, ಮೊಹೆಂಜದಾರೋಗಳು ಸಿಂಧೂ ನದಿ ತಟದ ನಾಗರಿಕತೆಯ ಪ್ರಸಿದ್ಧ ಉತ್ಖನನ ಸ್ಥಳಗಳು. ಭಾರತೀಯ ತಜ್ಞರ ತಂಡ ಇವಕ್ಕೆ ಹೊರತಾದ ತಾಣಗಳನ್ನು ಆಯ್ಕೆ ಮಾಡಿಕೊಂಡು ನಡೆಸಿದ ಸಂಶೋಧನೆಯಲ್ಲಿ ಸಿಂಧೂ ತಟದ ನಾಗರಿಕತೆಯ ಕಾಲಮಾನ ಇನ್ನೂ ಹಳೆಯದು ಹಾಗೂ ಅದರ ಅವನತಿಗೆ ಹವಾಮಾನ ವೈಪರೀತ್ಯ ಕಾರಣವಿರಬಹುದೆಂಬ ಅಂಶ ಕಂಡುಬಂದಿದೆ. ಹೀಗಾಗಿ ಇದು ಇತಿಹಾಸಪ್ರಿಯರ ಹಾಗೂ ಪರಿಸರ ಪ್ರೇಮಿಗಳ ಗಮನಸೆಳೆದಿದೆ.

ಎಷ್ಟು ಪುರಾತನ?: ಉತ್ಖನನ ಸ್ಥಳದಲ್ಲಿ ಸಿಕ್ಕಿದ ಮಡಕೆ ಚೂರು ಮತ್ತು ಇತರೆ ವಸ್ತುಗಳ ಪ್ರಕಾರ ಸಿಂಧೂ ನಾಗರಿಕತೆಯು ಕನಿಷ್ಠ 8,000 ವರ್ಷಗಳಷ್ಟು ಹಳೆಯದು. ಇದುವರೆಗೆ ಈ ನಾಗರಿಕತೆ 5,500 ವರ್ಷಗಳಷ್ಟು ಹಳೆಯದು ಎಂಬ ಗ್ರಹಿಕೆಯಿತ್ತು. ಈ ಸಂಶೋಧನೆ ಪ್ರಕಾರ ಇದು ಈಜಿಪ್ಟಿನ ನಾಗರಿಕತೆ(ಈಗಿನಿಂದ 7000-3000 ವರ್ಷಗಳಷ್ಟು) ಹಾಗೂ ಮೆಸೊಪೊಟಾಮಿಯ (ಈಗಿನಿಂದ 6500-3100 ವರ್ಷಗಳಷ್ಟು) ನಾಗರಿಕತೆಗಿಂತಲೂ ಹಳೆಯದು. ಹರಪ್ಪ ನಾಗರಿಕತೆಗೆ ಪೂರ್ವದ(ಇದಕ್ಕಿಂತಲೂ ಕನಿಷ್ಠ 1,000 ವರ್ಷ ಹಳೆಯ) ಸಾಕ್ಷ್ಯಗಳೂ ಸಂಶೋಧಕರಿಗೆ ಸಿಕ್ಕಿವೆ.

ಉತ್ಖನನ ನಡೆದ ಬಗೆ: ಸಿಂಧೂ ನಾಗರಿಕತೆಯು ಭಾರತದ ಇತರೆಡೆಯೂ ಅಸ್ತಿತ್ವದಲ್ಲಿತ್ತು ಎಂಬುದನ್ನು ದೃಢೀಕರಿಸುವ ನಿಟ್ಟಿನಲ್ಲಿ ಭಾರತೀಯ ತಜ್ಞರ ತಂಡ ಕೆಲಸ ಮಾಡಿತ್ತು. ಹೀಗಾಗಿಯೇ ಅವರು ಈಗಾಗಲೇ ಪ್ರಸಿದ್ಧವಾಗಿರುವ ಉತ್ಖನನ ಸ್ಥಳಗಳನ್ನು ಬಿಟ್ಟು ಹರಿಯಾಣದ ಭಿಢಾನದಲ್ಲಿ ಉತ್ಖನನ ಆರಂಭಿಸಿದರು. ಪರಿಣಾಮ ಹೊಸ ಹೊಸ ಸಾಕ್ಷ್ಯಗಳು ಲಭಿಸಿದವು. ಪ್ರಮುಖವಾಗಿ- ಪಶುಗಳ ಅಸ್ಥಿಗಳು, ಹಲ್ಲುಗಳು, ವಿಶೇಷವಾಗಿ ದನ, ಮೇಕೆ, ಜಿಂಕೆ ಮುಂತಾದವುಗಳ ಕೊಂಬುಗಳ ಅವಶೇಷ, ಹುಲ್ಲೆ ಚರ್ಮದ ಚೂರುಗಳು ಸಿಕ್ಕವು. ಅವುಗಳನ್ನು ಸಿ14(ರೇಡಿಯೋ ಕಾರ್ಬನ್ ಡೇಟಿಂಗ್) ಪರೀಕ್ಷೆಗೊಳಪಡಿಸಿ ವಿಶ್ಲೇಷಿಸಿದಾಗ ಅದು ಎಷ್ಟು ಪುರಾತನವಾದುದು ಮತ್ತು ಯಾವ ಹವಾಮಾನದಲ್ಲಿ ಆ ನಾಗರಿಕತೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುದನ್ನು ಊಹಿಸಲಾಯಿತು ಎಂದು ಸಂಶೋಧನಾ ತಂಡದ ಸದಸ್ಯರು ತಿಳಿಸಿದ್ದಾರೆ.

ಸಂಶೋಧನಾ ವಿಧಾನ

ಉತ್ಖನನ ಸ್ಥಳದಲ್ಲಿ ಸಿಕ್ಕ ವಸ್ತುಗಳ ಪುರಾತತ್ವ ತಿಳಿಯುವುದಕ್ಕಾಗಿ ಅವುಗಳನ್ನು ಸಿ14 ಪರೀಕ್ಷೆ ಒಳಪಡಿಸಲಾಗಿದೆ ಹಾಗೂ ‘ಆಪ್ಟಿಕಲಿ ಸ್ಟಿಮುಲೇಟೆಡ್ ಲುಮಿನಸೆನ್ಸ್’ ತಂತ್ರಜ್ಞಾನವನ್ನು ಬಳಸಲಾಗಿದೆ. ಒಡೆದ ಮಡಕೆ ಚೂರುಗಳು ಹರಪ್ಪ ನಾಗರಿಕತೆ ಪ್ರವರ್ಧಮಾನಕ್ಕೆ ಬರುವುದಕ್ಕೂ ಹಿಂದಿನ ಅಂದರೆ ಸುಮಾರು 6,000 ವರ್ಷಗಳಷ್ಟು ಹಳೆಯದು ಎಂಬುದು ಮನವರಿಕೆಯಾಯಿತು. ಅಷ್ಟೇ ಅಲ್ಲ, ಆ ಕಾಲದ ಸಾಂಸ್ಕೃತಿಕ ಮಟ್ಟ ಹರಪ್ಪ ನಾಗರಿಕತೆಯ ಪೂರ್ವದ ಹಕ್ರಾ ಹಂತ ಅಂದರೆ ಸುಮಾರು 8,000 ವರ್ಷಗಳಷ್ಟು ಹಳೆಯದು ಎಂಬುದು ವೇದ್ಯವಾಯಿತು ಎಂದು ವರದಿ ತಿಳಿಸಿದೆ.

ಸಿಂಧೂ ನಾಗರಿಕತೆಯು ಈಜಿಪ್ಟ್‌ನ ನಾಗರಿಕತೆಗಿಂತಲೂ ಹಳೆಯದು ಎಂದ ಸಂಶೋಧಕರು

ಸಂಶೋಧನಾ ತಂಡದಲ್ಲಿದ್ದವರು

ಅನಿಂದ್ಯಾ ಸರ್ಕಾರ್- ಐಐಟಿ ಖರಗ್‌ಪುರ, ಆರತಿ ದೇಶಪಾಂಡೆ ಮುಖರ್ಜಿ ಮತ್ತು ವಿ.ಎಸ್. ಶಿಂಧೆ – ಡೆಕ್ಕನ್ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆ ಪುಣೆ, ಎಂ.ಕೆ.ಬೆರಾ – ಫಿಸಿಕಲ್ ರೀಸರ್ಚ್ ಲ್ಯಾಬ್ ನವರಂಗಪುರ, ಅಹಮದಾಬಾದ್, ಬಿ.ದಾಸ್ – ಬೀರಬಲ್ ಸಾಹ್ನಿ ಪಲಾಯೋಸೈನ್ಸ್ ಸಂಸ್ಥೆ ಲಖನೌ, ನವೀನ್ ಜುಯಲ್ ಮತ್ತು ಆರ್.ಡಿ.ದೇಶಪಾಂಡೆ – ಎಎಸ್‌ಐ, ನಾಗಪುರ, ಎಲ್.ಎಸ್.ರಾವ್(ಈಗಿಲ್ಲ).

ಸಿಂಧೂ ನದಿ ನಾಗರಿಕತೆ 8000 ವರ್ಷಗಳಷ್ಟು ಹಳೆಯದ್ದು ಎಂಬುದು ಈಗಾಗಲೇ ಸಾಬೀತಾಗಿರುವ ವಿಷಯ. ಆಗಿನ ಕಾಲದ ಜನ ಹವಾಮಾನ ವೈಪರೀತ್ಯ ಅದರಲ್ಲೂ ವಿಪರೀತ ಮಳೆ ಹಾಗೂ ಬರವನ್ನು ಎದುರಿಸಿದ್ದರು. ಉಚ್ಛ್ರಾಯ ಸ್ಥಿತಿ ತಲುಪಿದ್ದ ನಾಗರಿಕತೆ, ಕೊನೆಗೆ ಬರದಿಂದಾಗಿ ಹಂತ ಹಂತವಾಗಿ ಅವನತಿ ಹೊಂದಿತು. ಬದಲಾದ ಹವಾಮಾನಕ್ಕೆ ತಕ್ಕಂತೆ ಬದುಕುಕಟ್ಟಿಕೊಳ್ಳಲು ಅವರು ಪ್ರಯತ್ನಿಸಿದ್ದರು ಎಂಬ ಅಂಶ ನೇಚರ್ ಜರ್ನಲ್‌ನಲ್ಲಿ ಪ್ರಕಟವಾಗಿದೆ ಈ ನಿಟ್ಟಿನಲ್ಲಿ ಸಂಶೋಧನಾ ಪ್ರಬಂಧ ಮಹತ್ವ ಪಡೆದುಕೊಳ್ಳುತ್ತದೆ.

| ಡಾ.ಮಾಲಿನಿ ಅಡಿಗ

ಇತಿಹಾಸ ರೀಸರ್ಚ್ ಸ್ಕಾಲರ್

ವಿವಿಧ ಹಂತದ ಪರೀಕ್ಷೆ…

ಸಂಶೋಧಕರು ನಡೆಸಿರುವ ಆಕ್ಸಿಜನ್ ಐಸೋಟೋಪ್ ಪರೀಕ್ಷೆಗಳ ಪ್ರಕಾರ ಹೌದು. ಅವರ ವರದಿಯಲ್ಲಿ ಉಲ್ಲೇಖವಾಗಿರುವಂತೆ, ಉತ್ಖನನ ಸ್ಥಳದಲ್ಲಿ ಸಿಕ್ಕ ಪಶುಗಳ ಹಲ್ಲು ಮತ್ತು ಎಲುಬುಗಳ ಫೋಸ್ಟೇನ ಅಳಿದುಳಿದ ಅಂಶಗಳಲ್ಲಿರುವ ಆಕ್ಸಿಜನ್ ಐಸೋಟೋಪ್‌ಗಳನ್ನು ಪರೀಕ್ಷೆಗೊಳಪಡಿಸಿದಾಗ ಹವಾಮಾನದ ಸ್ಥಿತಿಗತಿಯ ವಿನ್ಯಾಸದ ವಿವರವನ್ನು ಅದು ಬಹಿರಂಗಪಡಿಸಿತು. ಸಸ್ತನಿಗಳ ಎಲುಬು ಮತ್ತು ಹಲ್ಲುಗಳಲ್ಲಿ ಪುರಾತನ ವಾಯುಮಂಡಲದ ಸ್ಥಿತಿಯನ್ನು ಅವಲಂಬಿಸಿದ ನೀರು ಹಾಗೂ ಅಂದು ಬಿದ್ದ ಮುಂಗಾರು ಮಳೆಯ ಪ್ರಮಾಣವೂ ಸಂಕೇತವಾಗಿ ದಾಖಲಾಗಿದೆ. ಹರಪ್ಪ ಪೂರ್ವದ ಮನುಷ್ಯರು ವಾತಾವರಣ ಪೂರಕವಾಗಿದ್ದಾಗ ಘಗ್ಗರ್-ಹಕ್ರಾ ನದಿ ತಟದಲ್ಲಿ ನೆಲೆನಿಂತು ಕೃಷಿ ಮಾಡುತ್ತಿದ್ದರು. ಈಗಿನಿಂದ 9000-7000 ವರ್ಷಗಳ ನಡುವಿನ ಅವಧಿಯಲ್ಲಿ ಮುಂಗಾರು ತೀವ್ರವಾಗಿತ್ತು. ಪರಿಣಾಮ ನದಿಯಲ್ಲಿ ವಿಪರೀತ ಪ್ರವಾಹ ಉಕ್ಕಿ ಆ ನಾಗರಿಕತೆಯ ನಾಡು ನಾಶವಾಗಿರಬಹುದು. ವಿಶೇಷ ಅಂದರೆ ಈಗಿನಿಂದ 7000 ವರ್ಷದ ಬಳಿಕ ಮುಂಗಾರು ದುರ್ಬಲವಾಗಿದ್ದು, ನಾಗರಿಕತೆ ಹಾಗೆಯೇ ಉಳಿದುಕೊಂಡಿತ್ತು. ಹವಾಮಾನ ಬದಲಾವಣೆಗೆ ತಕ್ಕಂತೆ ಒಗ್ಗಿಕೊಂಡು ಬದುಕುವುದಕ್ಕೂ ಸಿಂಧೂ ಕಣಿವೆ ಜನ ಕಲಿತುಕೊಂಡರು. ಕೃಷಿ ವಿಧಾನದಲ್ಲೂ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡರು. ಗೋಧಿ, ಬಾರ್ಲಿ, ಭತ್ತ ಬೆಳೆದರು. ಆದರೆ, ಕೊನೆಕೊನೆಗೆ ಹರಪ್ಪ ನಾಗರಿಕತೆಯ ಉಚ್ಛ್ರಾಯ ಸ್ಥಿತಿಯಲ್ಲಿ ಮನೆಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯ ಸಂಸ್ಕರಣೆ, ಸಂಗ್ರಹ ಶುರುವಾದ ಪರಿಣಾಮ ಶ್ರಮಿಕರಿಗೆ ಆಹಾರ ಸಿಗದೇ ಹೋಯಿತು. ಹಿಂಸಾಚಾರ ಭುಗಿಲೆದ್ದು ನಗರ ಅವನತಿ ಕಂಡಿತು.

ಉತ್ಖನನದಲ್ಲಿ ಕಂಡಿದ್ದು…

ಸಿಂಧೂ ನಾಗರಿಕತೆಯು ಈಗ ಕಳೆದು ಹೋಗಿದೆ ಎನ್ನಲಾಗುವ ಸರಸ್ವತಿ ನದಿ ಅಥವಾ ಘಗ್ಗರ್-ಹಕ್ರಾ ನದಿತಟದುದ್ದಕ್ಕೂ ಪಸರಿಸಿತ್ತು ಎಂಬ ನಂಬಿಕೆ ಈ ಸಂಶೋಧಕರದ್ದು. ಅವರು ಹೇಳುವಂತೆ, ಇದುವರೆಗೆ ಬ್ರಿಟಿಷ್ ಉತ್ಖನನ ಅಧರಿಸಿ ನಮ್ಮ ಅಧ್ಯಯನ ನಡೆಸುತ್ತಿದ್ದೆವು. ಹೀಗಾಗಿ ಆಳವಾದ ಅಧ್ಯಯನ ಸಾಧ್ಯವಾಗಿರಲಿಲ್ಲ. ಉತ್ಖನನ ಸ್ಥಳಗಳಲ್ಲಿ ಗಮನಿಸಿದಾಗ ಅಲ್ಲಿನ ಸಾಂಸ್ಕೃತಿಕ ಮಟ್ಟ ಸಿಂಧೂ ಕಣಿವೆಯ ನಾಗರಿಕತೆಗೆ ಪೂರ್ವದ ಹಂತ(ಈಗಿನಿಂದ 9000-8000 ವರ್ಷಗಳಷ್ಟು)ದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಈ ನಾಗರಿಕತೆಯನ್ನು ಹರಪ್ಪನ್ ನಾಗರಿಕತೆಯ ಆರಂಭಿಕ ಘಟ್ಟ(ಈಗಿನಿಂದ 8000-7000 ವರ್ಷಗಳಷ್ಟು)ದಿಂದ ಹಿಡಿದು ಹರಪ್ಪ ನಾಗರಿಕತೆಯ ಉಚ್ಛ್ರಾಯ ಸ್ಥಿತಿ ತನಕ ವಿಂಗಡಿಸಬಹುದಾಗಿದೆ. ಈ ನಾಗರಿಕತೆಯ ಆರಂಭಿಕ ಘಟ್ಟದಲ್ಲಿ ದನಗಾಹಿಗಳು, ಕುರಿಗಾಹಿಗಳು ಹಾಗೂ ಪುರಾತನ ಗ್ರಾಮೀಣ ಕೃಷಿ ಸಮುದಾಯದ ಚಿತ್ರಣ ಕಾಣಬಹುದು. ಅದುವೆ ಉಚ್ಛ್ರಾಯ ಸ್ಥಿತಿಯ ನಾಗರಿಕತೆಯ ಹಂತದಲ್ಲಿ ಸುಸಜ್ಜಿತ ನಗರಗಳೊಂದಿಗೆ ಗರಿಷ್ಠ ಮಟ್ಟದ ನಗರೀಕರಣ ಆಗಿರುವುದನ್ನು ಗಮನಿಸಬಹುದು. ಇಲ್ಲಿನವರಿಗೆ ಅರೇಬಿಯಾ ಮತ್ತು ಮೆಸೊಪೊಟಾಮಿಯಾದ ಜನರ ಜೊತೆಗೆ ವ್ಯಾಪಾರ ವಹಿವಾಟಿನ ಬಾಂಧವ್ಯವೂ ಇತ್ತು. ಹರಪ್ಪನ್ ನಾಗರಿಕತೆಯ ಕೊನೆಯ ಹಂತದಲ್ಲಿ ನಗರಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ನಗರಗಳ ಅವನತಿ, ಜನಸಂಖ್ಯೆ ಕುಸಿತ, ಪಾಳುಬಿದ್ದ ಕಟ್ಟಡಗಳು, ಹರಪ್ಪನ್ ಕಾಲದ ಸಾಹಿತ್ಯನಾಶ ಎಲ್ಲವೂ ನಡೆದಿತ್ತು.

source: Vijayavani

Comments