UK Suddi
The news is by your side.

ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ 230 ಕೋಟಿ ರೂ

ರಾಯಚೂರು ಕರ್ನಾಟಕ ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿರುವ ಕೃಷ್ಣಾನದಿ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿ ಕಾರ್ಯ ಜೂ. 10ಕ್ಕೆ ಆರಂಭವಾಗಲಿದೆ. ಇದರಿಂದಾಗಿ ಒಂದು ತಿಂಗಳಿಗೂ ಅಧಿಕ ಕಾಲ ಕರ್ನಾಟಕ-ತೆಲಂಗಾಣದ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿವೆ.ರಾಯಚೂರಿನಿಂದ ಹೈದರಾಬಾದ್‌ಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಶಿಥಿಲಗೊಂಡಿದೆ. ತಜ್ಞರ ಪ್ರಕಾರ ಸೇತುವೆಯ ಜೀವಿತಾವಧಿ ಮುಗಿದಿದ್ದು, ಸಂಚರಿಸುವುದು ಅಪಾಯ. ಅಷ್ಟೇ ಅಲ್ಲ ಭಾರಿ ಸರಕು ವಾಹನಗಳು, ಬೂದಿ ಲಾರಿಗಳಿಗೂ ಇದೇ ಮುಖ್ಯ ಮಾರ್ಗ. ಈ ಸೇತುವೆ ದುರಸ್ತಿ ಸೇರಿ ಪರ್ಯಾಯ ಸೇತುವೆ ನಿರ್ಮಾಣಕ್ಕೆ ಜಿಲ್ಲಾಡಳಿತದ ಮೇಲೆ ಸಾಕಷ್ಟು ಒತ್ತಡವಿತ್ತು. ಮುಂದಾಗುವ ಅಪಾಯದ ಮುನ್ಸೂಚನೆ ಅರಿತ ಜಿಲ್ಲಾಡಳಿತ ಈಗ ಸೇತುವೆ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ.

ಯಾವಾಗ ಆರಂಭ

ಈಗಾಗಲೇ ಸೇತುವೆ ಕೆಳಭಾಗದ ಪಿಲ್ಲರ್‌ಗಳು ಹಾನಿಗೊಳಗಾಗಿದ್ದು, ಅವುಗಳ ದುರಸ್ತಿ ಕಾರ್ಯ ನಡೆದಿದೆ. ನದಿಯಲ್ಲಿ ನೀರಿಲ್ಲದ ಕಾರಣ ಮೂರ‍್ನಾಲ್ಕು ತಿಂಗಳಿಂದ ಈ ಕಾರ್ಯ ಸದ್ದಿಲ್ಲದೇ ಸಾಗಿದೆ. ಈಗ ಮುಂಗಾರು ಆರಂಭವಾಗುತ್ತಿದ್ದು, ನದಿಗೆ ನೀರು ಬರುವ ಸಾಧ್ಯತೆಗಳಿವೆ. ಜೂ. 10ರಿಂದ ದುರಸ್ತಿ ಕಾರ್ಯ ಶುರುವಾಗಲಿದ್ದು, ಉಭಯ ರಾಜ್ಯಗಳ ಸಂಪರ್ಕ ಕಡಿತಗೊಳ್ಳುವುದು ನಿಶ್ಚಿತ. ಈ ಕುರಿತು ಜಿಲ್ಲಾಡಳಿತ ತೆಲಂಗಾಣ ಸರಕಾರ ದೊಂದಿಗೆ ಮಾತುಕತೆ ನಡೆಸಿದೆ. ಸೇತುವೆ ಪಕ್ಕದಲ್ಲಿ ಮಾತ್ರವಲ್ಲದೇ, ಯಾತ್ರೆ ಆರಂಭಗೊಳ್ಳುವಲ್ಲಿಂದ ದುರಸ್ತಿ ಕಾರ್ಯದ ಬಗ್ಗೆ ಸೂಚನಾ ಫಲಕ ಅಳವಡಿಸಲು ಚಿಂತನೆ ನಡೆಸಲಾಗಿದೆ. ಈ ಜವಾವ್ದಾರಿಯನ್ನು ಹೆದ್ದಾರಿ ಪ್ರಾಧಿಕಾರ ನಿರ್ವಹಿಸಲಿದೆ. ಇನ್ನೂ ರಾಜ್ಯದಲ್ಲೂ ಈ ಬಗ್ಗೆ ಸೂಕ್ತ ಮಾಹಿತಿ ನೀಡಲಿದ್ದು, ಪ್ರಯಾಣಿಕರಿಗೆ ಜಿಲ್ಲಾಡಳಿತ ಪರ್ಯಾಯ ಮಾರ್ಗದ ಬಗ್ಗೆ ತಿಳಿಸಲಿದೆ.

ಪ್ರಯಾಣಿಕರಿಗೆ ತೊಂದರೆ

ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾದ್ದರಿಂದ, ವಾಹನಗಳು ಈ ರಸ್ತೆ ಮೂಲಕವೇ ಓಡಾಡುತ್ತಿವೆ. ಈಗ ಒಂದು ತಿಂಗಳಿಗೂ ಅಧಿಕ ಕಾಲ ಸಂಪರ್ಕ ಕಡಿತಗೊಂಡಲ್ಲಿ ಓಡಾಡಕ್ಕೆ ತೀವ್ರ ತೊಂದರೆಯಾಗಲಿದೆ. ಸುಮಾರು 100ಕ್ಕೂ ಅಧಿಕ ಕಿಮೀ ಸುತ್ತುವರಿದು ತೆರಳಬೇಕಾಗುತ್ತದೆ.

ಹೊಸ ಸೇತುವೆ ಪ್ರಸ್ತಾವನೆ

ನೂತನ ಸೇತುವೆ ನಿರ್ಮಾಣಕ್ಕೆ 230 ಕೋಟಿ ರು. ಕ್ರಿಯಾ ಯೋಜನೆ ರೂಪಿಸಿರುವ ಜಿಲ್ಲಾಡಳಿತ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಶೇ. 70ರಷ್ಟು ಸರಕಾರ ಮಟ್ಟದ ಕೆಲಸ ಮುಗಿದಿದ್ದು, ಶೀಘ್ರದಲ್ಲೇ ಈಗಿರುವ ಸೇತುವೆ ಎಡಭಾಗದಲ್ಲಿ ತೂಗುಸೇತುವೆ ನಿರ್ಮಾಣ ಕಾರ್ಯ ಶುರುವಾಗುವ ಸಾಧ್ಯತೆಗಳಿವೆ.

Comments