UK Suddi
The news is by your side.

ಆಲಮಟ್ಟಿ ಹಿನ್ನೀರಿನಲ್ಲಿ ಬಂದ ಅತಿಥಿ ರಾಜಹಂಸ

31Almatti3_0(1)ನಿಡಗುಂದಿ: ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣೆ ಬತ್ತಿದೆ, ಹಿನ್ನೀರು ಇದೇ ಮೊದಲ ಬಾರಿಗೆ ಡೆಡ್‌ ಸ್ಟೋರೇಜ್‌ ಮಟ್ಟಕ್ಕಿಂತಲೂ ಕಡಿಮೆಯಾಗಿದೆ. ಬಿಸಿಲಿಗೆ ಹೊರಹೋಗಲು ಜನತೆ ಪರದಾಡುತ್ತಿದ್ದಾರೆ, ಆದರೆ ಈ ಅಪರೂಪದ ಹಕ್ಕಿಗಳಿಗೆ ಬಿಸಿಲಿನ ಬೇಗೆ ತಾಕಿಲ್ಲ.

ಹೌದು.. ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಮರೆಯಾಗಿದ್ದ ಬಹು ಅಪರೂಪದ ಬೇರೆ ದೇಶಗಳಿಂದ ವಲಸೆ ಬಂದಿರುವ ರಾಜಹಂಸ (ಲೆಸ್ಸರ್‌ ಫ್ಲೆಮಿಂಗ್‌ ಬರ್ಡ್ಸ್‌) ಪಕ್ಷಿಗಳ ಹಿಂಡು ಕಳೆದ ನಾಲ್ಕೈದು ದಿನಗಳಿಂದ ಮತ್ತೆ ಆಲಮಟ್ಟಿಯ ಹಿನ್ನೀರಿನಲ್ಲಿ ಕಂಡು ಬರುತ್ತಿವೆ.

ಆಲಮಟ್ಟಿಯ ಹಿನ್ನೀರಿನಲ್ಲಿ ನೀರು ಕಡಿಮೆಯಾಗುತ್ತಾ ಬಂದಂತೆಲ್ಲಾ ಹಳೆ ಆಲಮಟ್ಟಿ, ಪಾರ್ವತಿ ಕಟ್ಟಾ ಸೇತುವೆಯ ಬಳಿಯ ನೀರಿನಲ್ಲಿ ಈ ರೀತಿಯ ಪಕ್ಷಿಗಳು ಕಂಡು ಬರುತ್ತಿದ್ದವು. ಆದರೆ ಅಲ್ಲಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಜಾಕವೆಲ್‌ ನಿರ್ಮಾಣ ಕಾರ್ಯ, ಮಣ್ಣು ಹಾಗೂ ಕಲ್ಲು ಗಣಿಗಾರಿಕೆಯ ಕಾರಣ ಕಳೆದ ಮೂರು ವರ್ಷಗಳಿಂದ ಫ್ಲೆಮಿಂಗ್‌ ಬರ್ಡ್‌ ಸೇರಿದಂತೆ ಬಹುತೇಕ ಪಕ್ಷಿಗಳು ಇಲ್ಲಿಂದ ಬೇರೆಡೆ ವಲಸೆ ಹೋಗಿದ್ದವು.
ಆದರೆ ಈಗ ಅದೇ ಪಾರ್ವತಿ ಕಟ್ಟಾ ಸೇತುವೆಯ ಬಳಿ ಕೃಷ್ಣೆಯ ಹಿನ್ನೀರಿನಲ್ಲಿ ಇಂತಹ ಕಡು ಬಿಸಿಲಿನಲ್ಲಿಯೂ ನೂರಾರು ಸಂಖ್ಯೆಯ ರಾಜಹಂಸ ಪಕ್ಷಿ ಗಳ ಹಿಂಡೇ ಕಂಡು ಬರುತ್ತಿರುವುದು ವಿಶೇಷವಾಗಿದೆ.

ಸದ್ಯ ಮುಧೋಳದಲ್ಲಿರುವ, ವಲಯ ಅರಣ್ಯಾಧಿಕಾರಿ ಎಸ್.ಎಂ. ಖಣದಾಳಿ, ಈ ಭಾಗಕ್ಕೆ ಬರುವ ಅಪರೂಪದ ಪಕ್ಷಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಈ ಭಾಗದ ಪಕ್ಷಿ ಪ್ರೇಮಿಗಳಿಗೆ ಪರಿಚಯಿಸಿದ್ದರು.  ಅವರೇ. ಇಲ್ಲಿ 70 ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳನ್ನು ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿದವರು ಖಣದಾಳಿ. ಅದರಲ್ಲಿ ಲೆಸ್ಸರ್‌ ಫ್ಲೆಮಿಂಗ್‌ ಮಾತ್ರ ಬಹು ಅಪರೂಪದ ಮತ್ತು ಬಹು ದೂರದ ಪಕ್ಷಿ ಎನ್ನುವುದು ಅವರ ಅಭಿಪ್ರಾಯವಾಗಿದೆ.

ನೋಡಲು ಹರಸಾಹಸ!: ಆಕರ್ಷಕ ಮೈಬಣ್ಣದಿಂದ ಕೂಡಿದ ಈ ರಾಜ ಹಂಸ ಪಕ್ಷಿಗಳನ್ನು ನೋಡಿದರೆ ಎಂಥವರ ಹೃನ್ಮನ ತಣಿಯುತ್ತವೆ.
ಈ ಹಕ್ಕಿಗಳು ಹಾರುವಾಗ ರೆಕ್ಕೆ ಬಿಚ್ಚಿದಾಗ, ರೆಕ್ಕೆಯ ಕೆಳಗಿನ ಗುಲಾಬಿ ವರ್ಣ ಮಾತ್ರ ಸಾಕಷ್ಟು ಆಕರ್ಷಕವಾಗಿತ್ತು. ಉದ್ದವಾದ ತೆಳುವಾದ ಕುತ್ತಿಗೆಯೂ ಅದಕ್ಕೆ ಆಕರ್ಷಣೀಯ. ಸುಮಾರು 80 ಸಂಖ್ಯೆಯಷ್ಟಿದ್ದ ಈ ರಾಜಹಂಸಗಳನ್ನು ಕಣ್ತುಂಬಿಕೊಳ್ಳುವುದು, ಸಾಧ್ಯವಾದರೆ ಕ್ಯಾಮೆರಾ ಮಸೂರದಲ್ಲಿ ಸೆರೆ ಹಿಡಿಯುವುದು ಮನಕ್ಕೆ ಮುದ ನೀಡುತ್ತದೆ.

Comments