UK Suddi
The news is by your side.

ಶೌಚಾಲಯ ಮಾದರಿಗಳ ಪರಿಸರ ವನ

ರಾಯಚೂರಿನ ಹೊರವಲಯದ ಯಕ್ಲಾಸಪುರ ರಸ್ತೆಯಲ್ಲಿರುವ ಘನತ್ಯಾಜ್ಯ ನಿರ್ವಹಣೆ ಘಟಕಕ್ಕೆ ಭೇಟಿ ನೀಡಲು ಒಂದು ಸಕಾರಣವಿದೆ.
ಅದೆಂದರೆ ಪರಿಸರ ವನ. ಹಾಗಂತ ಅದು ಗಿಡಮರಗಳಿಂದ ಕೂಡಿದ ಉದ್ಯಾನ ಎಂದು ಭಾವಿಸಿದರೆ ತಪ್ಪಾದೀತು. ಇದು ಹನ್ನೊಂದು ರೀತಿಯ ಶೌಚಾಲಯಗಳ ಮಾದರಿಗಳನ್ನು ಒಳಗೊಂಡಿರುವ ವಿನೂತನವಾದ ಪರಿಸರ ವನ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಇರುವುದು ವಿಶೇಷ. ಇಲ್ಲಿ ಜನರಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಜೊತೆಗೆ ಸರ್ಕಾರದಿಂದ ಸಿಗುವ ಸಹಾಯಧನ ಹಾಗೂ ಶೌಚಾಲಯ ನಿರ್ಮಾಣಕ್ಕೆ ತಗಲುವ ವೆಚ್ಚದ ಬಗ್ಗೆಯೂ ಮಾಹಿತಿ ಒದಗಿಸಲಾಗುತ್ತದೆ. ₹12 ಸಾವಿರದಿಂದ ₹25 ಸಾವಿರ ವೆಚ್ಚದಲ್ಲಿ ನಿರ್ಮಿಸಿಕೊಳ್ಳಬಹುದಾದ ಮಣ್ಣಿನ ಇಟ್ಟಿಗೆ ಶೌಚಾಲಯ ಮಾದರಿ, ಸಿಮೆಂಟ್‌ ಇಟ್ಟಿಗೆ, ಫೈಬರ್‌, ನೀರಿನ ಟ್ಯಾಂಕನ್ನು ಮರು ವಿನ್ಯಾಸಮಾಡಿ ಶೌಚಾಲಯ ಮಾಡಿದ ಬಗೆ ವಿನೂತನ ಮಾದರಿ. ಅಂಗನವಾಡಿ, ಶಾಲೆಗಳಿಗೆ ಸರಿಹೊಂದುವಂಥ ಸಮುದಾಯ ಶೌಚಾಲಯಗಳನ್ನೂ ನಿರ್ಮಾಣ ಮಾಡಲಾಗಿದೆ. ಇವೆಲ್ಲವೂ ಪರಿಸರ ಸ್ನೇಹಿ ಎಂಬುದು ಹೆಗ್ಗಳಿಕೆ.

ಇಲ್ಲಿ ಬರೀ ಶೌಚಾಲಯವೇ ಇವೆ ಎಂದು ಮುಖ ಕಿವುಚಬೇಡಿ. ಪರಿಸರ ಸ್ನೇಹಿ ಅಡುಗೆ ಮತ್ತು ಸ್ನಾನದ ಒಲೆಗಳೂ ಇಲ್ಲಿವೆ. ಮಳೆನೀರು ಸಂಗ್ರಹಣೆ ಮಾಡುವ ಮಾದರಿಯೂ ಇಲ್ಲುಂಟು. ಪರಿಸರ ಸ್ನೇಹಿ ಶೌಚಾಲಯ ನಿರ್ಮಾಣಕ್ಕೆ ₹25 ಸಾವಿರದವರಗೆ ವೆಚ್ಚವಾಗಲಿದ್ದು, ಗ್ರಾಮೀಣ ಜನರು ಇದಕ್ಕೆ  ಹೂಡಿದ ಬಂಡವಾಳವನ್ನು  ಗೊಬ್ಬರ ಉತ್ಪಾದನೆ ಮೂಲಕ ವಾಪಸು ಪಡೆಯಬಹುದು. ಬಯಲು ಶೌಚಾಲಯ ಮುಕ್ತವನ್ನಾಗಿ ಮಾಡಲು ಮತ್ತು ಶೌಚಾಲಯ ಹೊಂದುವ ಅಗತ್ಯವನ್ನು ಮನವರಿಕೆ ಮಾಡಿಕೊಡಲು ಗ್ರಾಮ ಪಂಚಾಯಿತಿ ಸದಸ್ಯರು, ಶಿಕ್ಷಕರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ಇಲ್ಲಿಗೆ ಕರೆಸಿ ಮಾದರಿ ಶೌಚಾಲಯಗಳ ವಿವರವನ್ನು ಸ್ವಾಮಿ ವಿವೇಕಾನಂದ ಯೂಥ್‌ ಮೂವ್‌ಮೆಂಟ್‌ ಮಾಡುತ್ತಿದೆ.

ಈಗಾಗಲೇ ಪರಿಸರ ವನಕ್ಕೆ ಸುಮಾರು ನಾಲ್ಕೈದು ಸಾವಿರ ಜನರು ಭೇಟಿ ನೀಡಿದ್ದು, ಎರಡು ಸಾವಿರಕ್ಕೂ ಅಧಿಕ ಜನರು ಶೌಚಾಲಯ ನಿರ್ಮಿಸಿಕೊಳ್ಳಲು ಮುಂದೆ ಬಂದಿದ್ದಾರೆ ಎನ್ನುತ್ತಾರೆ ಸ್ವಾಮಿ ವಿವೇಕಾನಂದ ಯೂಥ್‌ ಮೂವ್‌ಮೆಂಟ್‌ ಅಧಿಕಾರಿಗಳು. ‘ಪರಿಸರ ಸ್ನೇಹಿ ಶೌಚಾಲಯಗಳನ್ನು ತಮಿಳುನಾಡಿನಲ್ಲಿ ಯಶಸ್ವಿಯಾಗಿ ಬಳಕೆ ಮಾಡಲಾಗುತ್ತಿದೆ. ಶೌಚ ಮಾಡಿದ ಜನರಿಗೆ ಹಣ ನೀಡಲಾಗುತ್ತಿದೆ. ಇದು ಗೊಬ್ಬರದ ಉದ್ಯಮವಾಗಿದೆ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದ ಯೂಥ್‌ ಮೂವ್‌ಮೆಂಟ್‌ನ ಸಹಾಯಕ ನಿರ್ದೇಶಕ ಅಫ್ರೋಜ್‌.

Comments