UK Suddi
The news is by your side.

ಮುಧೋಳ ನಾಯಿ ಬಗ್ಗೆ ನಿಮಗೆಷ್ಟು ಗೊತ್ತು?

ಶಿವಾಜಿ ಸೈನ್ಯದಲ್ಲಿತ್ತು ಅಂದ್ಮೇಲೆ ಕೇಳಬೇಕಾ?
ಮನುಷ್ಯನಿಗೂ ನಾಯಿಗೂ ಅನಾದಿಕಾಲದಿಂದಲೂ ನಂಟು ತಪ್ಪಿದ್ದಲ್ಲ. ನಾಯಿಗಳು ಮನುಷ್ಯರನ್ನು ಅರ್ಥ ಮಾಡಿಕೊಳ್ಳುವ ರೀತಿ ಬೇರೆ ಯಾವ ಪ್ರಾಣಿಯೂ ಮಾಡ್ಕೊಳಲ್ಲ. ನಾಯಿ ತನಗೆ ಊಟ ಹಾಕಿದ ಒಡೆಯನಿಗೆ ಎಂದಿಗೂ ಮೊಸ ಮಾಡಲ್ಲ, ನಿಯತ್ತು ತಪ್ಪಲ್ಲ. ಮನೇಲಿ ಒಂದು ನಾಯಿ ಇದ್ರೆ ಮನೆ ಕಾಯತ್ತೆ, ಚಿಕ್ಕ ಮಕ್ಕಳಿಗೆ ಆಟಕ್ಕೆ ಜೊತೆ ಆಗತ್ತೆ, ಚಿಕ್ಕ ಚಿಕ್ಕ ಕೆಲಸ ಮಾಡ್ಕೊಡತ್ತೆ. ಪ್ರೀತಿಯಿಂದ ಕುಟುಂಬದಲ್ಲಿ ಒಂದಾಗಿ ತನ್ನ ಜೀವನ ಪೂರ್ತಿ ಬದುಕತ್ತೆ. ಇಂಥಾ ಒಂದು ನಾಯಿಯ ತಳಿ “ಮುಧೋಳ” ನಾಯಿ. ತೀಕ್ಷ್ಣ ಕಣ್ಣು, ಚಿರತೆ ವೇಗ, ತೆಳುವಾದ ಚಪ್ಪಟೆ ತಲೆ, ಅಗಲವಾದ ಕಾಲು, ತೆಳ್ಳನೆ ದೇಹ, ಬಿಳಿ ಮತ್ತು ಕಂದು ಬಣ್ಣಗಳಲ್ಲಿ ಕಂಡು ಬರುವ ಮುಧೋಳ ನಾಯಿಯ ಚರಿತ್ರೆ ಇಲ್ಲಿದೆ.
1. ಕ್ರಿ.ಪೂ. 500 ರಲ್ಲೇ ಮುಧೋಳ್ ನಾಯಿ ನಮ್ಮ ಕರ್ನಾಟಕದವರಿಗೆ ಪರಿಚಯವಾಗಿತ್ತು.
ಮಧ್ಯ ಏಶಿಯ ಹಾಗೂ ಅರೇಬಿಯದಿಂದ ಈ ನಾಯಿ ಭಾರತಕ್ಕೆ ಬಂದಿತ್ತು.

2. ಬಾಗಲಕೋಟೇಲಿರೋ ಮುಧೋಳ್ ಜಿಲ್ಲೇಲಿ ಈ ನಾಯೀನ ಹೆಚ್ಚಾಗಿ ಸಾಕ್ತಾ ಇದ್ದಿದ್ದ್ರಿಂದ ಇದಕ್ಕೆ ‘ಮುಧೋಳ್’ ನಾಯಿ ಅಂತ ಹೆಸ್ರು ಬಂತು.
ಈ ನಾಯಿನ “ಕ್ಯಾರವಾನ್” ಅಂತ ಕರೀತಿದ್ರು ಬ್ರಿಟೀಷರು.

3. ಮುಧೋಳದ ರಾಜ ಮಾಲೋಜಿರಾವ್ ಘೋರ್ಪಡೆ ಈ ನಾಯಿ ತಳಿ ನಶಿಸಿ ಹೋಗ್ದೆ ಇರೋಹಂಗೆ ಮಾಡಿದರು
ಹಲಗಲಿ ಬೇಡರು ತಮ್ಮ ಬೇಟೆಗಾಗಿ ಈ ನಾಯಿಯನ್ನು ಇಟ್ಟುಕೊಂಡಿದ್ದರು. ರಾಜ ಇದನ್ನು ನೋಡಿ ತನ್ನ ಆಸ್ತಿ ಕಾಯೋಕ್ಕೆ ನೇಮಿಸಿಕೊಂಡಿದ್ದ.

4. ಅದೇ ಘೋರ್ಪಡೆ 1900ರಲ್ಲಿ ಇಂಗ್ಲೆಂಡ್ ದೊರೆ ಐದನೇ ಜಾರ್ಜ್ಗೆ ಒಂದು ಜೊತೆ ಮುಧೋಳ್ ನಾಯಿ ಉಡುಗೊರೆಯಾಗಿ ಕೊಟ್ಟಿದ್ದರಂತೆ
ಇದರಿಂದ ಈ ನಾಯಿಯ ತಳಿ ಹೆಚ್ಚು ಪ್ರಸಿದ್ದಿಗೆ ಬಂತು.

5. ಈಗಲೂ ಮುಧೋಳದಲ್ಲಿ ಸುಮಾರು 750 ಕುಟುಂಬಗಳು ಈ ನಾಯೀನ ಸಾಕಿ, ಸಲಹಿ ಮಾರಾಟ ಮಾಡ್ತಿದಾರೆ
ಈ ನಾಯಿಗೆ ಬಾರಿ ಬೇಡಿಕೆ ಇದೆ.

6. ಓಡೋದ್ರಲ್ಲಿ ಮುಧೋಳ್ ನಾಯೀನ ಯಾರೂ ಮೀರ್ಸಕ್ಕೆ ಆಗಲ್ಲ.
ಇದರ ಮುಂದೆ ಮಿಕ್ಕ ತಳಿಯ ನಾಯಿಗಳು ಸೋತು ಸುಣ್ಣವಾಗತ್ತೆ.

7. ಅಪಾರ್ಟ್ಮೆಂಟ್-ಗಿಪಾರ್ಟ್ಮೆಂಟಲ್ಲಿ ಇದನ್ನ ಸುಮ್ನೆ ಒಂದು ಕಡೆ ಕಟ್ಟಿ ಹಾಕಿದ್ರೆ ಸಪ್ಪೆಯಾಗ್ಬಿಡತ್ತೆ.
ಸಕತ್ತಾಗಿ ವಾಕಿಂಗ್ ಮಾಡಿಸ್ಬೇಕು. ನಮ್ಗೂ ಸಕತ್ ವ್ಯಾಯಾಮ ಮಾಡ್ಸತ್ತೆ.

8. ಮುಧೋಳ್ ನಾಯಿಯ ಸ್ವಾಮಿನಿಷ್ಠೆ ಬೇರೆ ಎಲ್ಲಾ ನಾಯಿಗಳನ್ನು ಮೀರ್ಸತ್ತೆ.
ಅದನ್ನು ದಯೆ, ಪ್ರೀತಿ, ಕರುಣೆಯಿಂದ ಸಾಕಿದರೆ ಮಾತ್ರ. ಇಲ್ಲಾ ಅಂದ್ರೆ ಅದು ಕೋಪ ಮಾಡ್ಕೊಳತ್ತೆ. ಮತ್ತೆ ಕಾಲ ಕಳೆದಂತೆ ಅದರ ಮನಸ್ಸು ಮುದುಡಿಹೋಗಿ ಖಿನ್ನತೆಗೆ ಒಳಗಾಗತ್ತೆ.

9. ಮುಧೋಳ್ ನಾಯಿಗೆ ಸಾಕಿದೋರು ಬಿಟ್ಟು ಬೇರೆ ಯಾರಾದ್ರೂ ಮುಟ್ಟಿದ್ರೆ ಇಷ್ಟ ಆಗಲ್ಲ.
ಹಾರಿ ಪರ್ಚತ್ತೆ. ಇಲ್ಲಾ ಅಂದ್ರೆ ಬೊಗಳತ್ತೆ.

10. ಮುಧೋಳ್ ನಾಯಿ 13 ರಿಂದ 14 ವರ್ಷ ಬದುಕಿರತ್ತೆ.
ಹುಟ್ಟಿದ 18 ತಿಂಗಳಲ್ಲಿ ಅದರ ಪೂರ್ತಿ ಮೈಕಟ್ಟು ಳೆಯತ್ತೆ. ಸುಮಾರು 1.8 ಅಡಿಯಿಂದ 2.3 ಅಡಿ ಉದ್ದ ಬೆಳೆಯತ್ತೆ.

11. ಮುಧೋಳ್ ನಾಯೀನ ಚೆನ್ನಾಗಿ ಸಾಕ್ಬೇಕು ಅಂದ್ರೆ ತಿಂಗಳಿಗೆ 2000-4500 ರೂಪಾಯಿ ಖರ್ಚಾಗತ್ತೆ.
ಅದಕ್ಕೆ ಸ್ಪೆಶಲ್ ಆಗಿ ಏನೂ ಹಾಕ್ಬೇಕಾಗಿಲ್ಲ. ನಾವು ತಿನ್ನೋ ರೊಟ್ಟಿ, ಅನ್ನ, ಹಾಲು ಹಾಕಿದ್ರೂ 25 ರಿಂದ 50 ಕೇಜಿ ತೂಕ ಬೆಳೆಯತ್ತೆ.

12. ಮುಧೋಳ್ ನಾಯಿ ಗ್ರೇಹೌಂಡ್ ಅನ್ನೋ ಹೆಸರಿನ ಇನ್ನೊಂದು ನಾಯೀನ ತುಂಬಾ ಹೋಲತ್ತೆ.
ಗ್ರೇಹೌಂಡ್ ನಾಯಿ ಎಲ್ಲರ ಜೊತೆ ಸ್ನೇಹದಿಂದ ನಡ್ಕೊಳತ್ತೆ.

13. ಮುಧೋಳ್ ನಾಯಿಗೆ ಸಾಮಾನ್ಯವಾಗಿ ಯಾವ ಅರೋಗ್ಯದ ಸಮಸ್ಯೆನೂ ಬರೋಲ್ಲ.
ಭಾರತದ ಯಾವುದೇ ಮೂಲೆಯ ಹವಾಮಾನಕ್ಕೆ ಹೊಂದಿಕೊಳ್ಲತ್ತೆ.

14. ಮುಧೋಳ್ ನಾಯಿ ಕಣ್ ದೃಷ್ಟಿಯಿಂದ ಎಂಥಾ ಚಿಕ್ಕ ಪ್ರಾಣಿನೂ ತಪ್ಪಿಸಿಕೊಳಕ್ಕೆ ಆಗಲ್ಲ.
ಮೊಲ, ಇಲಿ, ಹಾವು ಯಾವುದೇ ಇರ್ಲಿ ತನ್ನ ಹಿಂದೆ ಇದ್ರೂ ಕೂಡ ಈ ನಾಯಿಗೆ ಕಾಣ್ಸತ್ತಂತೆ. ಅದಕ್ಕೆ ಮುಧೋಳ್ ನಾಯಿಗೆ 270 ಡಿಗ್ರೀ ದೃಷ್ಟಿ ಇದೆ ಅಂತ ಹೇಳ್ತಾರೆ. ಇದಕೆಲ್ಲಾ ಕಾರಣ ಅದರ ಉದ್ದನೆಯ ಮುಖದಲ್ಲಿ ಕಣ್ಣು ಇರುವ ಜಾಗ.

15. ಮುಧೋಳ್ ನಾಯಿ ಏನಾದರೂ ಹುಡುಕಬೇಕಾದ್ರೆ ಕಣ್ಣಿಂದ ನೋಡಿ ಹುಡುಕತ್ತೆ, ಮೂಸಿಕೊಂಡಲ್ಲ.
ಇದರ ಕಣ್ಣು ಬಹಳ ಚುರುಕು.

16. ಮುಧೋಳ್ ನಾಯಿ ಛತ್ರಪತಿ ಶಿವಾಜಿ ಸೈನ್ಯದಲ್ಲಿ ಇರ್ತಾ ಇತ್ತು
ಅದಕ್ಕೆ ಆಗ ‘ಸಮರವೀರ’ ಅಂತಿದ್ರು.

17. ಹೆಮ್ಮೆ ಸುದ್ದಿ ಏನಂದ್ರೆ… ಭಾರತದ ಸೇನೆ ಕೂಡ ಮುಧೋಳ್ ನಾಯಿನ ತನ್ನ ಪಡೆಗೆ ಸೇರಿಸಿಕೊಂಡಿದೆ.
ಶಿವಾಜಿ ಸೈನ್ಯದಿಂದ ಇವತ್ತಿನ ಪ್ರಜಾಪ್ರಭುತ್ವದ ಸೈನ್ಯೆಗೆ ಬಂದಿದೆ!

18. ಮುಧೋಳ್ ನಾಯೀನ ಸೇನೆಗೆ ಸೇರ್ಸೋ ಐಡಿಯಾ ಕೊಟ್ಟಿದ್ದು ಕೇಂದ್ರ ಪಶುಸಂಗೋಪನೆ ಇಲಾಖೆ ಆಯುಕ್ತ, ಕನ್ನಡಿಗರಾದ ಡಾ. ಸುರೇಶ್ ಹೊನ್ನಪ್ಪಗೊಳ್ ಅವರು.

19. ಫಾರಿನ್ ನಾಯಿಗಳ ಜೊತೆ ದೇಸಿ ನಾಯಿ ಇದೇ ಮೊದಲ ಸಲ ಭಾರತದ ರಕ್ಷಣೆಗೆ ಸೆಲೆಕ್ಟ್ ಆಗಿರೋದು!

ಮುಧೋಳ ಬೇಟೆನಾಯಿಗಳ ಬಾಹ್ಯ ಲಕ್ಷಣಗಳು
ಬಾಹ್ಯ ನೋಟ: ಹೊರ ನೋಟಕ್ಕೆ ಮುಧೋಳ ಬೇಟೆನಾಯಿಗಳು ಪ್ರಮಾಣಬದ್ಧವಾಗಿ, ತೆಳ್ಳಗೆ ಉದ್ದಕ್ಕೆ ಇದ್ದು, ಅತ್ಯಂತ ಬಲಿಷ್ಠವಾದ ಸ್ನಾಯುಗಳನ್ನು ಹೊಂದಿರುತ್ತವೆ. ಓಟಕ್ಕೆ ಅನುಕೂಲವಾಗುವಂತೆ ನೀಳ ಕಾಲುಗಳು ಹಾಗೂ ದೈಹಿಕ ಅಂಗರಚನೆ ಇರುತ್ತದೆ.
ತಲೆ: ದೇಹದ ಹೋಲಿಕೆಯಲ್ಲಿ ತಲೆ ಸಣ್ಣದಿದ್ದು, ಉದ್ದ ಮತ್ತು ತೆಳುವಾಗಿರುತ್ತದೆ. ಎರಡು ಕಿವಿಗಳ ಅಂತರದಲ್ಲಿ ಮಾಧ್ಯಮವಾಗಿ ಅಗಲವಾದ ತಲೆಬುರುಡೆ ಇರುತ್ತದೆ. 
ಬಾಯಿ: ಉದ್ದ, ಚೂಪಾದ, ಗಟ್ಟಿಯಾದ ಒಸಡುಗಳಿಂದ ಕೂಡಿದ ಬಾಯಿ ಇದೆ. 
ಕಣ್ಣು: ತೀಕ್ಷ್ಣವಿದ್ದು ಸಾಮಾನ್ಯವಾಗಿ ಕಂದು ಬಣ್ಣ ಹೊಂದಿರುತ್ತದೆ. 
ಕಿವಿ: ತೆಳು ಮಧ್ಯಮ ಗಾತ್ರದ ತ್ರಿಕೋಣ ಆಕಾರವಾಗಿದ್ದು ಸ್ವಲ್ಪ ಮೇಲೆ ಇರುತ್ತದೆ.
ಕುತ್ತಿಗೆ: ಬಲಿಷ್ಠವಾದ ಸ್ನಾಯುಗಳಿಂದ ಕೂಡಿದ ಉದ್ದವಾದ ಕುತ್ತಿಗೆ ಇರುತ್ತದೆ.
ದೇಹ: ಬಲಿಷ್ಠವಾದ ಸ್ನಾಯುಗಳಿಂದ ಕೂಡಿದ್ದು, ಎದೆಯ ಮುಂಭಾಗ ಉದ್ದ ಹಾಗೂ ಆಳವಾಗಿರುತ್ತದೆ. ಎದೆಯಗೂಡು ಈ ತಳಿಯ ವೈಶಿಷ್ಠತೆಯಾಗಿದ್ದು ಅಗಲವಾಗಿರುತ್ತದೆ. ಹೊಟ್ಟೆಯ ಭಾಗ ತೆಳುವಾಗಿದ್ದು, ಬೆನ್ನಿನ ಹಿಂದಿನ ಭಾಗ ಅಗಲವಾಗಿ ಇರುತ್ತದೆ. ಬೆನ್ನಿನ ಎಲುಬುಗಳು ಅಗಲವಾಗಿದ್ದು, ಸಾಧಾರಣವಾಗಿ ಬಾಗಿರುತ್ತವೆ.
ಕಾಲು ಹಾಗೂ ಪಾದ: ಮುಂಗಾಲು ನೇರ ಹಾಗೂ ಉದ್ದವಾಗಿ ಇರುತ್ತವೆ. ಪಾದಗಳು ಉದ್ದವಾಗಿ ಇದ್ದು, ಭಾರಿ ಗಟ್ಟಿಯಾದ ತಳಪಾದ ಹೊಂದಿರುತ್ತವೆ.
ಬಾಲ: ಉದ್ದ, ನೇರವಾದ ಹಾಗೂ ಮೂಲದಲ್ಲಿ ದಪ್ಪವಾಗಿ ಇದ್ದು, ತುದಿಯ ಕಡೆಗೆ ತೆಳುವಾಗುತ್ತ ಸ್ವಲ್ಪ ಬಾಗಿರುತ್ತದೆ.
ಮೇಲುಚರ್ಮ: ಮೇಲುಚರ್ಮ ಮೃದುವಾಗಿ, ಅತಿ ಸಣ್ಣ ಕೂದಲುಗಳಿಂದ ಕೂಡಿದ್ದು ನಯವಾಗಿ ಇರುತ್ತದೆ.
ಬಣ್ಣ: ಬಿಳಿ, ಕಪ್ಪು, ಕಂದು, ಬೂದು ಹಾಗೂ ಮಿಶ್ರ ಬಣ್ಣಗಳಿರುತ್ತವೆ.
ಎತ್ತರ: ಹೆಣ್ಣು 23 ರಿಂದ 25 ಇಂಚು, ಗಂಡು 26 ರಿಂದ 28 ಇಂಚು ಇರುತ್ತದೆ.
ತೂಕ: 22 ಕೆ.ಜಿಯಿಂದ 28 ಕೆ.ಜಿಗಳವರೆಗೆ ಇರುತ್ತದೆ.
ನಿಲ್ಲುವಿಕೆ ಹಾಗೂ ಓಡುವಿಕೆ: ಈ ತಳಿಯ ಓಡುವಿಕೆಯು ಅತಿ ವೈಶಿಷ್ಠತೆಯಿಂದ ಕೂಡಿದ್ದು, ಓಡುವುದಕ್ಕಿಂತ ಹಾರುತ್ತಿರುವ ಹಾಗೆ ಕಾಣುತ್ತದೆ.

ನಮ್ಮ ಉತ್ತರ ಕರ್ನಾಟಕದ ಈ ನಾಯಿ ಎಂಥದ್ದು ಅಂತ ಗೊತ್ತಾಯ್ತಾ? ಅದರ ಮಹಿಮೆ ಎಂಥದ್ದು ಅಂತ ಅರಿವಾಯ್ತಾ? ಎದೆ ತಟ್ಟಿ ಎಲ್ಲರಿಗೂ ಹೇಳ್ಕೊಳಿ!

-ನಮ್ಮ ಮುಧೋಳ

Comments